ಎನ್‌ಜಿಟಿ ವಿಚಾರಣೆಗೆ ಹೈಕೋರ್ಟ್ ತಡೆ

7
ಬೆಳ್ಳಂದೂರು ಕೆರೆ ಸ್ವಚ್ಛಗೊಳಿಸುವ ಪ್ರಕರಣ

ಎನ್‌ಜಿಟಿ ವಿಚಾರಣೆಗೆ ಹೈಕೋರ್ಟ್ ತಡೆ

Published:
Updated:
ಎನ್‌ಜಿಟಿ ವಿಚಾರಣೆಗೆ ಹೈಕೋರ್ಟ್ ತಡೆ

ಬೆಂಗಳೂರು: ಬೆಳ್ಳಂದೂರು ಕೆರೆ ಸ್ವಚ್ಛಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ  ದೆಹಲಿಯಲ್ಲಿರುವ ಹಸಿರು ನ್ಯಾಯಮಂಡಳಿ ಪ್ರಧಾನ ಪೀಠದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.



ಇದರಿಂದಾಗಿ ಬೆಳ್ಳಂದೂರು ಕೆರೆ ಜಲಾಯನ ಪ್ರದೇಶದಲ್ಲಿರುವ ಕೈಗಾರಿಕೆ, ವಾಣಿಜ್ಯ ಚಟುಟಿಕೆಗಳಿಗೆ ತಾತ್ಕಾಲಿಕ ನಿರಾಳ ದೊರೆತಂತಾಗಿದೆ.



ಎನ್‌ಜಟಿ ಆದೇಶ ಪ್ರಶ್ನಿಸಿ ಹುಳಿಮಾವು ಗ್ರಾಮದಲ್ಲಿರುವ ಮೆಸರ್ಸ್‌ ಶಶಿ ಡಿಸ್ಟಿಲ್ಲರೀಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿದೆ.

‘ದೆಹಲಿಯಲ್ಲಿರುವ ಎನ್‌ಜಿಟಿ ಪ್ರಧಾನ ಪೀಠಕ್ಕೆ ಕರ್ನಾಟಕದ ಪ್ರಕರಣಗಳನ್ನು ವಿಚಾರಣೆ ನಡೆಸುವ ಅಧಿಕಾರ ವ್ಯಾಪ್ತಿ ಇಲ್ಲ. ಕರ್ನಾಟಕದ ಪ್ರಕರಣಗಳನ್ನು ಏನಿದ್ದರೂ ಚೆನ್ನೈನಲ್ಲಿರುವ ದಕ್ಷಿಣ ಪೀಠವೇ ವಿಚಾರಣೆ ನಡೆಸಬೇಕು’ ಎಂಬುದು ಅರ್ಜಿದಾರರ ವಾದ.



‘ಕೇಂದ್ರ ಪರಿಸರ ಸಚಿವಾಲಯ 2011ರಲ್ಲಿ ಹೊರಡಿಸಿರುವ ಅಧಿಸೂಚನೆ ಅನುಸಾರ ಹಸಿರು ಪೀಠಗಳ ವಿಚಾರಣಾ ವ್ಯಾಪ್ತಿಯನ್ನು ಸ್ಪಷ್ಟವಾಗಿ ವರ್ಗೀಕರಣ ಮಾಡಲಾಗಿದೆ. ಆದ್ದರಿಂದ ದೆಹಲಿ ಪ್ರಧಾನ ಪೀಠ ನೀಡಿರುವ ಆದೇಶ ಎನ್‌ಜಿಟಿ ಕಾಯ್ದೆ–2010ರ ಕಲಂ 4  (3)ರ ಉಲ್ಲಂಘನೆಯಾಗಿದೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.



ಕೆಎಸ್‌ಪಿಸಿಬಿ ನೋಟಿಸ್‌ ಪ್ರಶ್ನೆ: ‘ಬೆಳ್ಳಂದೂರು ಕೆರೆ ಜಲಾನಯನ ಪ್ರದೇಶದಲ್ಲಿ  ಕೈಗಾರಿಕೆ ಹಾಗೂ ವಾಣಿಜ್ಯ ಚಟುವಟಿಕೆ ಹೆಚ್ಚಾಗಿವೆ. ಇದರಿಂದ ಕೆರೆ ಮಲಿನವಾಗಿದೆ’ ಎಂದು ದೂರಿ ರಾಜ್ಯಸಭಾ ಸದಸ್ಯ ಡಿ.ಕುಪೇಂದ್ರ ರೆಡ್ಡಿ ಎನ್‌ಜಿಟಿ ಮೊರೆ ಹೋಗಿದ್ದರು.



ಈ ಅರ್ಜಿ ಜತೆಗೆ ಸ್ವಯಂ ಪ್ರೇರಿತ ದೂರನ್ನೂ ವಿಚಾರಣೆ ನಡೆಸಿದ್ದ ಪ್ರಧಾನ ಪೀಠವು 2017ರ ಏಪ್ರಿಲ್‌ 19ರಂದು ಆದೇಶ ನೀಡಿತ್ತು.



‘ಬೆಳ್ಳಂದೂರು ಕೆರೆಯ ಜಲಾನಯನ ಪ್ರದೇಶದಲ್ಲಿರವ ವಾಣಿಜ್ಯ ಮತ್ತು ಕೈಗಾರಿಕಾ ಚಟುವಟಿಕೆ ಸ್ಥಗಿತಗೊಳಿಸಲು ಎಲ್ಲ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ  ನಿರ್ದೇಶಿಸಿತ್ತು. ಈ ಆದೇಶದ ಅನುಸಾರ ಕ್ರಮಕ್ಕೆ ಮುಂದಾದ ಕೆಎಸ್‌ಪಿಸಿಬಿ ಕೆರೆ ಜಲಾನಯನ ಪ್ರದೇಶದ ಕೈಗಾರಿಕೆಗಳನ್ನು ಮುಚ್ಚಲು ಮುಂದಾಗಿತ್ತು. ಇದರ ಅನುಸಾರವೇ ಮೆಸರ್ಸ್‌ ಶಶಿ ಡಿಸ್ಟಿಲ್ಲರೀಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಗೆ ನೋಟಿಸ್ ನೀಡಿತ್ತು.



ಇದಕ್ಕೆ ಕಂಪೆನಿ, ‘ನಾವು  ಈ ಪ್ರದೇಶದಲ್ಲಿ 24 ವರ್ಷಗಳಿಂದ ಡಿಸ್ಟಿಲ್ಲರಿ ನಡೆಸುತ್ತಿದ್ದೇವೆ. ನಮ್ಮ ಡಿಸ್ಟಿಲ್ಲರಿಯ ತ್ಯಾಜ್ಯವನ್ನು ಶುದ್ಧೀಕರಿಸಲು ಪ್ರತ್ಯೇಕ ಘಟಕ ಇದೆ. ಅಂತೆಯೇ  ನಾವು ತ್ಯಾಜ್ಯವನ್ನು ಬೆಳ್ಳಂದೂರು ಕೆರೆಗೆ ಹರಿಯಬಿಡುವುದಿಲ್ಲ’ ಎಂದು ಸ್ಪಷ್ಟನೆ ನೀಡಿತ್ತು.



‘ನಮ್ಮ ಸ್ಪಷ್ಟನೆ ಅನುಸಾರ ಕೆಎಸ್‌ಪಿಸಿಬಿ ಪರಿಶೀಲನೆ ನಡೆಸಿತ್ತು. ಈ ವೇಳೆ ಯಾವುದೇ ಲೋಪ ಕಂಡು ಬಂದಿರಲಿಲ್ಲ. ಆದರೂ ನಮ್ಮ ಡಿಸ್ಟಿಲ್ಲರಿ ಮುಚ್ಚುವಂತೆ ಸೂಚಿಸಿರುವುದು ಕಾನೂನು ಬಾಹಿರ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.



ಅರ್ಜಿ ವಾಪಸ್‌ ಪಡೆದ ಮಾಲಿನ್ಯ ನಿಯಂತ್ರಣ ಮಂಡಳಿ

ನವದೆಹಲಿ: ಬೆಂಗಳೂರು ನಗರದ ಬೆಳ್ಳಂದೂರು ಕೆರೆಗೆ ಅಪಾಯಕಾರಿ ತ್ಯಾಜ್ಯ ಹರಿಸದ ಕೈಗಾರಿಕೆಗಳಿಗೆ ಮತ್ತೆ ಕಾರ್ಯನಿರ್ವಹಿಸಲು ಅವಕಾಶ ನೀಡುವ ಕುರಿತು ಸ್ಪಷ್ಟನೆ ಕೋರಿ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಮುಂದೆ ಸಲ್ಲಿಸಿದ್ದ ಅರ್ಜಿಯನ್ನು  ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ವಾಪಸ್‌ ಪಡೆದಿದೆ.

ಬೆಳ್ಳಂದೂರು ಕೆರೆ ಮಾಲಿನ್ಯ ಕುರಿತ ವಿಚಾರಣೆಗೆ ಕರ್ನಾಟಕ ಹೈಕೋರ್ಟ್‌ ತಡೆಯಾಜ್ಞೆ ನೀಡಿರುವುದರಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ಮಂಡಳಿ ತಿಳಿಸಿದೆ. ಬೆಳ್ಳಂದೂರು ಕೆರೆ ಸುತ್ತಮುತ್ತಲಿನ ಎಲ್ಲ ಕೈಗಾರಿಕೆಗಳನ್ನು ಮುಚ್ಚುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಎನ್‌ಜಿಟಿ ಸೂಚಿಸಿತ್ತು. ಆದರೆ, ಈ ಬಗ್ಗೆ ಗೊಂದಲ ಮೂಡಿತ್ತು. ಕೆರೆಗೆ ಯಾವುದೇ ರೀತಿಯ ತ್ಯಾಜ್ಯ ಹರಿಸದ ಕೈಗಾರಿಕೆಗಳಿಗೆ ಅವಕಾಶ ನೀಡಬೇಕೇ ಅಥವಾ ಬೇಡವೇ ಎನ್ನುವ ಕುರಿತು ಸ್ಪಷ್ಟನೆ ನೀಡುವಂತೆ ಕೋರಿ ಎನ್‌ಜಿಟಿ ಮುಂದೆ ಅರ್ಜಿ ಸಲ್ಲಿಸಲಾಗಿತ್ತು.



ಅರ್ಜಿದಾರ  ಕಂಪೆನಿಗೆ ಮಾತ್ರ ಆದೇಶ ಸೀಮಿತ

ಎನ್‌ಜಿಟಿ ಆದೇಶದ ಮೇರೆಗೆ ಶಶಿ ಡಿಸ್ಟಿಲ್ಲರೀಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿ ಮುಚ್ಚಲು ಕೆಎಸ್‌ಪಿಸಿಬಿ ನೀಡಿದ ನೋಟಿಸ್‌ಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಈ ಆದೇಶವು ಅರ್ಜಿದಾರ ಕಂಪೆನಿಗೆ ಮಾತ್ರವೇ ಅನ್ವಯಿಸುತ್ತದೆ.

ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಬೆಂಗಳೂರು ಜಲಮಂಡಳಿ, ಕೆಎಸ್‌ಪಿಸಿಬಿ, ಬೆಸ್ಕಾಂ ಉಪ ವಿಭಾಗದ ಸಹಾಯಕ ಎಂಜಿನಿಯರ್ ಮತ್ತು ಬಿಬಿಎಂಪಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry