ಮೇವು ಖರೀದಿಯಲ್ಲಿ ₹ 22 ಕೋಟಿ ಲೂಟಿ

7
ಉಪಲೋಕಾಯುಕ್ತರ ಅಡಿ ವರದಿಯಲ್ಲಿ ದೃಢ

ಮೇವು ಖರೀದಿಯಲ್ಲಿ ₹ 22 ಕೋಟಿ ಲೂಟಿ

Published:
Updated:
ಮೇವು ಖರೀದಿಯಲ್ಲಿ ₹ 22 ಕೋಟಿ ಲೂಟಿ

ಬೆಂಗಳೂರು: ಬರ ಪರಿಸ್ಥಿತಿ ಕಾರಣಕ್ಕೆ ತೆರೆದಿರುವ ಗೋಶಾಲೆಗಳಿಗೆ ಮೇವು ಖರೀದಿಸುವ  ವ್ಯವಹಾರದಲ್ಲಿ   ತುಮಕೂರು ಜಿಲ್ಲೆ ಒಂದರಲ್ಲೇ   ₹ 22 ಕೋಟಿ ದುರ್ಬಳಕೆ ಆಗಿರುವುದು ಉಪಲೋಕಾಯುಕ್ತರು ನಡೆಸಿದ ತನಿಖೆಯಿಂದ ದೃಢಪಟ್ಟಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಒಟ್ಟು 127 ಅಧಿಕಾರಿಗಳಿಗೆ ನೋಟಿಸ್‌ ನೀಡಲಾಗಿದೆ.139 ತಾಲ್ಲೂಕುಗಳಲ್ಲಿ ತೀವ್ರ ಬರಗಾಲ ಇದ್ದುದರಿಂದ ಮೇವು ಲಭ್ಯತೆ ಖಚಿತಪಡಿಸುವಂತೆ ಸರ್ಕಾರ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿತ್ತು.  2016–17ರ ಡಿಸೆಂಬರ್‌ ಮತ್ತು ಫೆಬ್ರುವರಿಯಲ್ಲಿ ಗೋಶಾಲೆಗಳನ್ನು ನಿರ್ಮಿಸಲು ಮತ್ತು  ಮೇವು ಖರೀದಿಸಿ ವಿತರಿಸಲು ಅನುದಾನ ಬಿಡುಗಡೆ ಮಾಡಿತ್ತು.ಉಪಲೋಕಾಯುಕ್ತ ನ್ಯಾ. ಸುಭಾಷ್ ಬಿ. ಅಡಿ ಅವರು ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ಗೋಶಾಲೆಗಳಿಗೆ ದಿಢೀರ್‌ ಭೇಟಿ ನೀಡಿದ ಸಂದರ್ಭದಲ್ಲಿ ಮೇವು ಖರೀದಿಯಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿರುವುದು ಪತ್ತೆಯಾಗಿದೆ.‘ಮೇವು ಖರೀದಿಸಿರುವ ರಸೀದಿಗಳಿಗೂ, ದಾಸ್ತಾನು ನಿರ್ವಹಣೆ ಪುಸ್ತಕದಲ್ಲಿರುವ ಮಾಹಿತಿಗೂ ವ್ಯತ್ಯಾಸ ಕಂಡು ಬಂದಿದೆ. ಏಳು ತಾಲ್ಲೂಕುಗಳ ಗೋಶಾಲೆಗಳ ನಿರ್ವಹಣೆಗೆ ಬಿಡುಗಡೆ ಮಾಡಿದ್ದ ₹ 33.96 ಲಕ್ಷ ಅಕ್ರಮ ನಡೆದಿದೆ. ಅದೇ ರೀತಿ ಮೇವು ಖರೀದಿಯಲ್ಲೂ ₹ 21.98 ಕೋಟಿ ದುರ್ಬಳಕೆ ಆಗಿದೆ’ ಎಂದು ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.‘ಮೇವು ಖರೀದಿ ಮತ್ತು ಗೋಶಾಲೆಗಳ ನಿರ್ವಹಣೆಗೆ ಸರ್ಕಾರ ರಚಿಸಿದ ಮಾರ್ಗಸೂಚಿಗಳನ್ನು ಅಧಿಕಾರಿಗಳು ಪಾಲಿಸಿಲ್ಲ. ಗೋಶಾಲೆಗಳಲ್ಲಿ  ವೈಜ್ಞಾನಿಕವಾಗಿ ತೂಕ ಮಾಡುವ ಯಂತ್ರಗಳನ್ನು ಅಳವಡಿಸಿಲ್ಲ. ಕೆಲವೆಡೆ ತೂಕ ಮಾಡದೆ ಮೇವು ವಿತರಿಸಲಾಗಿದೆ. ಗೋಶಾಲೆಗಳಲ್ಲಿ ಉಳಿಯುವ ರೈತರಿಗೆ ಶೌಚಾಲಯ ಸೇರಿ ಯಾವುದೇ ಸೌಲಭ್ಯ ಒದಗಿಸಿಲ್ಲ’ ಎಂದು ವರದಿಯಲ್ಲಿ ತಿಳಿಸಿದ್ದಾರೆ.‘ನಾನು ತುಮಕೂರು ಜಿಲ್ಲೆಯ  ಗೋಶಾಲೆಗಳಿಗೆ ಮಾತ್ರ ಭೇಟಿ ನೀಡಿದ್ದು, ಹಣ ದುರ್ಬಳಕೆ ಮಾಡಿರುವ ಅಧಿಕಾರಿಗಳಿಗೆ ನೋಟಿಸ್‌ ನೀಡಿದ್ದೇನೆ’ ಎಂದು ಸುಭಾಷ್ ಅಡಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry