ಶಾಸಕ ಅಶೋಕ್ ಖೇಣಿ ಮನೆಗೆ ಆಕಸ್ಮಿಕ ಬೆಂಕಿ

7

ಶಾಸಕ ಅಶೋಕ್ ಖೇಣಿ ಮನೆಗೆ ಆಕಸ್ಮಿಕ ಬೆಂಕಿ

Published:
Updated:
ಶಾಸಕ ಅಶೋಕ್ ಖೇಣಿ ಮನೆಗೆ ಆಕಸ್ಮಿಕ ಬೆಂಕಿ

ಬೀದರ್: ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಅಶೋಕ ಖೇಣಿ ಅವರ ಮನೆಗೆ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಶುಕ್ರವಾರ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ.

ನಗರದ ರಾಂಪುರೆ ಕಾಲೊನಿಯಲ್ಲಿರುವ ಮನೆಯ ನೆಲಮಹಡಿಯಲ್ಲಿ ಶಾಸಕ ಖೇಣಿ ಅವರು ಕಾರ್ಯಕರ್ತರ ಜತೆ ಜರ್ಚೆ ನಡೆಸುತ್ತಿದ್ದ ಸಂದರ್ಭ ಮೊದಲ ಮಹಡಿಯ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಾಸಕರೊಂದಿಗೆ ಕಾರ್ಯಕರ್ತರು ಹಾಗೂ ಸಿಬ್ಬಂದಿ ತಕ್ಷಣ ಮನೆಯಿಂದ ಹೊರಗೆ ಓಡಿ ಬಂದರು.

ಅಷ್ಟರಲ್ಲಿ ಕೊಣೆಯೊಳಗೆ ದಟ್ಟ ಹೊಗೆ ಆವರಿಸಿಕೊಂಡಿತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಅರ್ಧ ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ಆರಿಸಿದರು.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮುಜಮಿಲ್ ಪಟೇಲ್, ಅಗ್ನಿಶಾಮಕ ಠಾಣಾಧಿಕಾರಿ ಅಬ್ದುಲ್ ರಶೀದ್ ಖಾನ್ ಅವರ ನೇತೃತ್ವದಲ್ಲಿ ನಡೆದ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಶೇಕ್ ಚಾಂದ್, ಅಮರ, ರೋಶನ್, ಸಂಜೀವಕುಮಾರ ತಹಸೀನ್ ಅಲಿ, ಅಶೋಕ್ ಪಾಲ್ಗೊಂಡಿದ್ದರು.

ಸಾರ್ವಜನಿಕರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಬೆಂಕಿ ನಂದಿಸಲು ನೆರವಾದರು. ‘ಬೆಂಕಿ ತಗುಲಿದ್ದರಿಂದ ಸುಮಾರು ₹25 ಲಕ್ಷ ನಷ್ಟವಾಗಿದೆ ಎಂದು ಶಾಸಕ ಅಶೋಕ್ ಖೇಣಿ ಹೇಳಿದರು.

ಆರು ಹವಾನಿಯಂತ್ರಿತ ಯಂತ್ರಗಳು, ಕಂಪ್ಯೂಟರ್, ಟಿವಿ, ಸೋಫಾ ಮತ್ತಿತರ ಸಾಮಗ್ರಿಗಳು ಅಗ್ನಿಗೆ ಅಹುತಿಯಾಗಿವೆ’ ಎಂದು  ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಂಗಳೂರಿನಿಂದ ಬೀದರ್‌ಗೆ ಶುಕ್ರವಾರ ಬಂದಿದ್ದೆ.

ನೆಲಮಹಡಿಯಲ್ಲಿ ಕಾರ್ಯಕರ್ತರ ಜೊತೆಗೆ ಚರ್ಚೆ ನಡೆಸುತ್ತಿದ್ದ ಸಂದರ್ಭ ವಿದ್ಯುತ್‌ ಹೋಯಿತು. 10 ನಿಮಿಷದಲ್ಲಿ ಮೊದಲ ಮಹಡಿಯಲ್ಲಿದ್ದ ಸಿಬ್ಬಂದಿ ಕೆಳಗೆ ಓಡಿ ಬಂದರು’ ಎಂದು ಹೇಳಿದರು.

‘ತಿಂಗಳಿಂದ ಮನೆಯಲ್ಲಿ ವೊಲ್ಟೇಜ್ ಹೆಚ್ಚು ಕಡಿಮೆ ಆಗುತ್ತಿದೆ. ತಿಂಗಳ ಹಿಂದೆ 5 ಹವಾನಿಯಂತ್ರಿತ ಯಂತ್ರಗಳು ಸುಟ್ಟಿದ್ದವು. ವಾರದ ಹಿಂದೆ ಐದು ಹೊಸ ಹವಾನಿಯಂತ್ರಿತ ಯಂತ್ರ ಹಾಕಲಾಗಿತ್ತು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry