ಮಾಮೂಲಿಯಲ್ಲ, ಕಲಬುರ್ಗಿಯ ಮಾಮು ಮಾಲ್ಪುರಿ

7

ಮಾಮೂಲಿಯಲ್ಲ, ಕಲಬುರ್ಗಿಯ ಮಾಮು ಮಾಲ್ಪುರಿ

Published:
Updated:
ಮಾಮೂಲಿಯಲ್ಲ, ಕಲಬುರ್ಗಿಯ ಮಾಮು ಮಾಲ್ಪುರಿ

ಮಾಮು ಮಾಲ್ಪುರಿ, ತೇರಾ ಜವಾಬ್ ನಹೀ....

ಚಾಹೇ ಜಾವೊ ಜಪಾನ್, ಅರಬಸ್ತಾನ್

ಘೂಮ್ ಆವೊ ಪಾಕಿಸ್ತಾನ, ಹಿಂದೂಸ್ತಾನ,

ದುನಿಯಾ ಮೇ ನಹೀ ಮಿಲೇಗಿ ಆಪಕೋ

ಗುಲಬರ್ಗಾ ಮಾಮು ಮಾಲ್ಪುರಿ ಜೈಸಾ ಪಕ್ವಾನ್...

ಬೆಂಗಳೂರು ಅಥವಾ ದೇಶದ ಯಾವುದೇ ಭಾಗದಿಂದ ಬೆಚ್ಚನೆಯ ಬಿಸಿಲಿನ ಕಲಬುರ್ಗಿಗೆ ಬಂದು ಹಾಗೆಯೇ ಗಡಿಬಿಡಿಯಲ್ಲಿ ಮರಳಿದರೆ, ನಿಮ್ಮ ಪ್ರವಾಸ ಅಪೂರ್ಣವೆಂದೇ ಅರ್ಥ. ಬುದ್ಧ ವಿಹಾರ, ಖಾಜಾ ಬಂದೆನವಾಜ್ ದರ್ಗಾ  ನೋಡಿ, ಕಡಕ್ ರೊಟ್ಟಿ-ಎಣ್ಣಿಗಾಯಿ ಪಲ್ಲೆ ಭರ್ಜರಿ ಊಟ ಮಾಡಿದರೂ, ‘ನೀವು ಪೂರಾ ಊರು ನೋಡಿಲ್ಲ ಬಿಡ್ರಿ’ ಎಂಬ ಖಂಡತುಂಡದ ಮಾತು ಸೋಜಿಗ ಮೂಡಿಸುತ್ತೆ. ‘ಈ ಪಾಟಿ ರೊಕ್ಕ ಖರ್ಚು ಮಾಡಿ, ಬಿಸಿಲಾಗ್ ಹೈರಾಣ ಆಗಿ ಬಕ್ಕಳ ತಿರುಗಾಡಿದರೂ ಹಿಂಗಂತೀರಲ್ರಿ’ ಎಂದರೆ, ಅವರು ಕೇಳೋದು ಒಂದೇ ಪ್ರಶ್ನೆ: ಮಾಮು ಮಾಲ್ಪುರಿ ತಿಂದಿರೇನು? ತಂದಿರೇನು?

ಮಾಮು ಮಾಲ್ಪುರಿ ಎಂದರೆ ಸಾಮಾನ್ಯವಾದುದ್ದಲ್ಲ. ಈ ಭಾಗದ ಜನರ ಅಚ್ಚುಮೆಚ್ಚಿನ ಸ್ವಾದಿಷ್ಟ ತಿಂಡಿ. ಎಷ್ಟೇ ಚಳಿ, ಬಿಸಿಲು ಅಥವಾ ಮಳೆಯಿರಲಿ, ಎರಡು ಅಥವಾ ಮೂರು ಮಾಮು ಮಾಲ್ಪುರಿ ತಿನ್ನದೇ ಜನರು ಒಂದು ದಿನವೂ ಕಳೆಯುವುದಿಲ್ಲ. ಸುಡು ಬಿಸಿಲಿನಲ್ಲಿ ಚಹಾ ಸೇವನೆ ಎಷ್ಟು ಇಷ್ಟವೊ, ಮಾಲ್ಪುರಿ ಮೇಲೆಯೂ ಅಷ್ಟೇ ಪ್ರೀತಿ. ಗೆಳೆಯರೊಂದಿಗೆ ಹರಟುವಾಗ ಅಥವಾ ಸಿಹಿ ಪದಾರ್ಥ ತಿನ್ನಬೇಕೆಂದು ಅನ್ನಿಸಿದಾಗಲೆಲ್ಲ, ಸೂಪರ್ ಮಾರ್ಕೆಟ್‌ನಲ್ಲಿ ಇರುವ ಮಾಮು ಅಂಗಡಿ ಎದುರು ಅವರು ಹಾಜರ್‌. ಒಂದು ಮಾಲ್ಪುರಿ ಸವಿದಾಗಲೇ, ಅವರಿಗೆ ಸಮಾಧಾನ ಪ್ರಾಪ್ತಿ!

50 ವರ್ಷಗಳಿಂದ ಜನರ ‘ಸವಿ ಮಿಡಿತ’ ಅರಿತುಕೊಂಡಿರುವ ಮಾಮು ಕುಟುಂಬದವರು ಮಾಲ್ಪುರಿಯ ಸವಿ ಅಥವಾ ಆಕಾರದಲ್ಲಿ ಒಂಚೂರೂ ಹೆಚ್ಚು–ಕಡಿಮೆ ಮಾಡಿಲ್ಲ. ಅದು ಸಿದ್ಧವಾಗಿ ಬರುತ್ತಿದ್ದಂತೆ ಬಿಸಿಬಿಸಿಯಾಗಿ ವಿತರಿಸುವ ಅವರಿಗೆ ಗ್ರಾಹಕರ ಸಂತೃಪ್ತಿಯೇ ಮುಖ್ಯ. ಮಾಮು ಕುಟುಂಬದ ಮೇಲೆ ಅಷ್ಟೇ ಪ್ರೀತಿ, ಅಕ್ಕರೆ ಹೊಂದಿರುವ ಜನರು ಕೂಡ ಬೇರೆಡೆ ಸಿದ್ಧವಾಗುವ ಮಾಲ್ಪುರಿಯತ್ತ ಕಣ್ಣು ಕೂಡ ಹಾಯಿಸುವುದಿಲ್ಲ. ಕೂರಲು ಅಥವಾ ನಿಲ್ಲಲು ಜಾಗ ಇರದಿದ್ದರೂ ಚಿಂತೆಯಿಲ್ಲ, ಮಾಮುವಿನ ಪುಟ್ಟ ಅಂಗಡಿ ಎದುರು ಮಾಲ್ಪುರಿ ಸವಿದಾಗಲೇ ಸಂತೃಪ್ತಿ.

ಮಾಮು ಮಾಲ್ಪುರಿ ಎಂಬ ಹೆಸರಿನ ಹಿಂದೆ ಆಸಕ್ತಿದಾಯಕ ಕತೆಯಿದೆ. ಸಾಮಾನ್ಯ ಸಿಹಿ ತಿಂಡಿಗಳು ಸಾಲದು, ಹೊಸತೇನೊ ಸಿದ್ಧಪಡಿಸಬೇಕು ಎಂದು ಎಂದು ಮಾಮು ಯೋಚಿಸಿದರಂತೆ. ಖೋವಾ, ಮೈದಾ, ಸಕ್ಕರೆ ಮತ್ತು ತುಪ್ಪ ಎಲ್ಲಾ ಸೇರಿಸಿ ತಿಂಡಿ ಸಿದ್ಧಪಡಿಸಿದಾಗ, ರೂಪುಗೊಂಡಿದ್ದೇ ಮಾಲ್ಪುರಿ. ನಿಧಾನಕ್ಕೆ ಅದರ ರುಚಿಯ ಖ್ಯಾತಿ ಪಸರಿಸಿದಂತೆಲ್ಲ, ಮಾಮು ಮಾಲ್ಪುರಿ ಎಂಬ ಹೆಸರು ಬಂತು. ಆಪ್ತರು, ಸ್ನೇಹಿತರು ಅಥವಾ ಸಂಬಂಧಿಕರು ಯಾರೇ ಬಂದರೂ ಈ ಭಾಗದ ಜನರು ಅವರನ್ನು ಮಾಮು ಮಾಲ್ಪುರಿ ಅಂಗಡಿ ಬಳಿ ಸುತ್ತು ಹಾಕಿಸಿ, ತಿನ್ನಿಸದೇ ವಾಪಸ್ ಕಳಿಸುವುದಿಲ್ಲ.

‘ನಮ್ಮ ತಂದೆ ಮಾಮು ಅವರು ಮೊದಲ ಸಲ ಮಾಲ್ಪುರಿ ಸಿದ್ಧಪಡಿಸಿ, ಗ್ರಾಹಕರ ಮುಂದಿಟ್ಟಾಗ ಈ ಪರಿ ಪ್ರಸಿದ್ಧಿ ಗಳಿಸುತ್ತದೆಂದು ನಿರೀಕ್ಷಿಸಿರಲಿಲ್ಲ. ಕಲಬುರ್ಗಿಯ ಕೆಲ ಕಡೆ ಅಲ್ಲದೇ ಈಗ ಸೌದಿ ಅರೇಬಿಯಾದಲ್ಲೂ ಮಾಲ್ಪುರಿ ಸಿಗ್ತಾ ಇದೆ’ ಎಂದು ಹೆಮ್ಮೆಯಿಂದ ಹೇಳುವ ಅಬ್ದುಲ್ ಸಲೀಂ ಎಲ್ಲರೊಂದಿಗೆ ಪ್ರೀತಿಯಿಂದ ಮಾತನಾಡುತ್ತಾರೆ. ಆಪ್ತರು ತಮ್ಮ ಮನೆಗೆ ಬಂದರೇನೊ ಎಂಬಂತೆ ಅಕ್ಕರೆ ತೋರುತ್ತಾರೆ. ಒಂದು ಮಾಲ್ಪುರಿ ದರ ₹30, ಒಟ್ಟು 250 ಗ್ರಾಂ ಮಾಲ್ಪುರಿ ದರ ₹ 60.  ಅದರ ರುಚಿಗೆ ಎಷ್ಟು ಹಣ ಕೊಟ್ಟರೂ ಸಾಲದು ಎನ್ನುವಂತೆ ಅಭಿಮಾನಿಗಳು ಅಂಗಡಿ ಎದುರು ಸಾಲು ನಿಲ್ಲುತ್ತಾರೆ.

ಮಾಮು ಮಾಲ್ಪುರಿ ಹುಡುಕಿಕೊಂಡು ಹೋಗಲು ಹೆಚ್ಚು ಪ್ರಯಾಸ ಪಡಬೇಕಿಲ್ಲ. ಬಸ್ ನಿಲ್ದಾಣ ಅಥವಾ ರೈಲು ನಿಲ್ದಾಣದಲ್ಲಿ ಇಳಿದ ಕೂಡಲೇ ಕೈ ಬೀಸಿ ಕರೆಯುವ ಆಟೋರಿಕ್ಷಾ ಚಾಲಕರಿಗೆ ಹೇಳಿದರೆ ಸಾಕು, ನೇರವಾಗಿ ಸೂಪರ್ ಮಾರ್ಕೆಟ್‌ಗೆ ಕರೆದೊಯ್ಯುತ್ತಾರೆ. ಅಲ್ಲಿ ಯಾವುದೇ ಮೂಲೆಯಲ್ಲಿ ನಿಂತು, ಯಾರನ್ನೇ ಕೇಳಿದರೂ ಮಾಮು ಮಾಲ್ಪುರಿ ಅಂಗಡಿ ತೋರಿಸುತ್ತಾರೆ. ಬಿಡುವು ಇದ್ದವರಂತೂ ‘ಬರ್ರಿ....ಬರ್ರಿ...ನಮ್ಮದೇ ಅಂಗಡಿ. ನಿಮ್ಮ ಜೊತೆ ನಾನೂ ಒಂದು ಮಾಲ್ಪುರಿ ತಿಂತೀನಿ’ ಎನ್ನುತ್ತ ಖುಷಿಯಿಂದ ಕರೆದೊಯ್ಯುತ್ತಾರೆ.

ಹೇಳಿ, ನೀವು ಯಾವಾಗ ಕಲಬುರ್ಗಿಗೆ ಬರುತ್ತೀರಿ? ಮಾಮಾ ಮಾಲ್ಪುರಿ ಸವಿಯಲು ಯಾವಾಗ ಹೋಗೋಣ?

**

ಮಾಮು ಮಾಲ್ಪುರಿ

ಕರಿಗಡುಬು ಮತ್ತು ಕರಚಿಕಾಯಿ ಎರಡರ ಹೈಬ್ರೀಡ್‌ ತಳಿಯಂತೆ ಕಾಣುತ್ತದೆ ಮಾಲ್‌ಪುರಿ. ಆದರೆ ಇದರೊಳಗೆ ಬೆಳಗಾವಿ ಕುಂದಾ, ನಿಜಾಮಿ ಕಲಾಕಂದ್‌ ಎರಡನ್ನೂ ನೆನಪಿಸುವ ಇವೆರಡರ ಮೂಲರೂಪ ಖೋವಾ ಹೂರಣವಾಗಿರುತ್ತದೆ. ಜೊತೆಗೊಂದಿಷ್ಟು ಜೇನಹನಿಯಂಥ ಪಾಕ. ಮೊದಲ ತುತ್ತಿನಲ್ಲಿಯೇ ಜವೆಗೋಧಿಯ ಘಮ ಮತ್ತು ಮಂದಹಾಲಿನ ಖೋವಾದ ಸ್ವಾದ ಕಣ್ಮುಚ್ಚುವಂತೆ ಮಾಡುತ್ತದೆ. ಕಣ್ಮುಚ್ಚಿಕೊಂಡೇ ಮಾಲ್‌ಪುರಿ ಆಸ್ವಾದಿಸಬೇಕು. ಆಗಲೇ ವಸಡಿನ ಮೂಲೆಯವರೆಗೂ ಈ ಸವಿಯು ಹರಡಿಕೊಳ್ಳುವುದು. ಒಂದು ತಿಂದು ಮುಗಿಸುವುದರಲ್ಲಿ ಹೊಟ್ಟೆತುಂಬಿದ ಅನುಭವವಾಗುತ್ತದೆ. ಆದರೆ ಮನಃತೃಪ್ತಿಯಾಗುವುದಿಲ್ಲ. ಹಾಗಾಗೇ ಇಲ್ಲಿ ‘ಪೇಟ್‌ ಭರಾ, ಪರ್‌ ಮನ್‌ ನಹಿ ಭರಾ’ ಎಂದು ಹೇಳುತ್ತ ಇನ್ನೊಂದಕ್ಕೂ ಬೇಡಿಕೆಯಿಡುವುದು ಕಂಡುಬರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry