ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗಾಲದಲ್ಲೂ ಗುಳೆ ತಡೆದ ಅನ್ನಭಾಗ್ಯ

Last Updated 17 ಜೂನ್ 2017, 10:38 IST
ಅಕ್ಷರ ಗಾತ್ರ

ದಾವಣಗೆರೆ: ‘ಅನ್ನಭಾಗ್ಯ’ ಯೋಜನೆಯಿಂದಾಗಿ ರಾಜ್ಯದ ಜನರು ಹೊಟ್ಟೆ ತುಂಬಾ ಊಟ ಮಾಡುತ್ತಿದ್ದಾರೆ. ಭೀಕರ ಬರಗಾಲದಲ್ಲೂ ಯಾರೂ ಗುಳೆ ಹೋಗುತ್ತಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶಾಸಕ ಶಾಮನೂರು ಶಿವಶಂಕರಪ್ಪ ಅವರ 87ನೇ ಜನ್ಮ ದಿನಾಚರಣೆ ಅಂಗವಾಗಿ ಶಾಮನೂರು ಶಿವಶಂಕರಪ್ಪ ಅಭಿಮಾನಿ ಬಳಗವು ನಗರದ ಹೊಂಡದ ಸರ್ಕಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ 6ನೇ ವರ್ಷದ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಬಡವರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಹಿಂದುಳಿದ ಸಮುದಾಯದ ಜನರಿಗೂ ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ಸಮಾನತೆ ದೊರೆತಾಗ ಮಾತ್ರ  ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಎಂದರ್ಥ’ ಎಂದು ಅಭಿಪ್ರಾಯಪಟ್ಟರು.

‘ಯಾರು ಕೋಮುವಾದ ಬೆಂಬಲಿಸುತ್ತಾರೊ ಹಾಗೂ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಾರೊ ಅವರು ಬಸವಣ್ಣನವರಿಗೆ ಅಪಚಾರ ಮಾಡಿದಂತೆ. ಸಮಾಜದಲ್ಲಿ ಮೌಢ್ಯ ಹಾಗೂ ಗೊಡ್ಡು ಸಂಪ್ರದಾಯಗಳಿಗೆ ಅವಕಾಶವಿಲ್ಲ’ ಎಂದು ಹೇಳಿದರು.

ಬಸವಣ್ಣನವರ ಹೆಸರು ಹೇಳಿದರೆ ಸಾಲದು. ಅವರ ಆದರ್ಶಗಳನ್ನು ಅನುಸರಿಸಿದಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ. ಸರ್ಕಾರಿ ಕಚೇರಿಗಳಲ್ಲಿ ಮಹಾತ್ಮ ಗಾಂಧಿ, ಅಂಬೇಡ್ಕರ್‌ ಭಾವಚಿತ್ರಗಳೊಂದಿಗೆ ಬಸವಣ್ಣನವರ ಭಾವಚಿತ್ರವನ್ನೂ ಹಾಕಲಾಗುತ್ತಿದೆ. ಬಸವಣ್ಣನವರು ಒಂದು ಜಾತಿಗೆ ಸೀಮಿವಾಗಿಲ್ಲ. ಅವರು ವಿಶ್ವಕ್ಕೇ ಗುರುವಿದ್ದಂತೆ. ಎಲ್ಲರೂ ಒಂದೇ ಎನ್ನುವ ಭಾವನೆ ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಇಲ್ಲಿನ ವಿರಕ್ತಮಠದಲ್ಲಿ 1913ರಲ್ಲಿ ಆರಂಭವಾದ ಬಸವ ಜಯಂತಿ ಕಾರ್ಯಕ್ರಮವನ್ನು ಇಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ. ವೀರಶೈವ ಧರ್ಮವು ಎಲ್ಲರನ್ನು ಒಳಗೊಂಡ ಮನುಕುಲ ಧರ್ಮವಾಗಬೇಕಿದೆ’ ಎಂದರು.

ಮೇಳೈಸಿದ ಸಂಭ್ರಮ: ಶಾಮನೂರು ಶಿವಶಂಕರಪ್ಪ ಅವರು ಸಂಭ್ರಮದಿಂದ 87ನೇ ಜನ್ಮ ದಿನಾಚರಣೆ ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಸಮಯದಲ್ಲಿ 87 ಜೋಡಿಗಳ ಸಾಮೂಹಿಕ ವಿವಾಹವೂ ಸಡಗರಿಂದ ನಡೆಯುತ್ತಿದೆ. ಸಂಭ್ರಮ–ಸಡಗರ ಎರಡೂ ಇಲ್ಲಿ ಮೇಳೈಸಿವೆ. ಜನರ ಪ್ರೀತಿಯಿಂದ ಮಾತ್ರ ಇದು ಸಾಧ್ಯ ಎಂದರು.

‘ಬೆಂಗಳೂರಿನಲ್ಲಿ ಈಚೆಗೆ ನಡೆದ ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯಕ್ರಮದಲ್ಲಿ ಕೆಲವರು ‘ಶಿವಶಂಕರಪ್ಪ ಅವರನ್ನು ವಯೋವೃದ್ಧರು ಎಂದು ಕರೆದರು. ಇದನ್ನು ಅಲ್ಲಗಳೆದ ಶಿವಶಂಕರಪ್ಪ, ‘ನಾನು ವಯೋವೃದ್ಧನಲ್ಲ. ವಯಸ್ಕ’ ಎಂದು ಹೇಳಿದರು. ಈ ರೀತಿಯ ಉತ್ಸಾಹ ಎಲ್ಲರಲ್ಲಿಯೂ ಬರಬೇಕು. ಶಿವಶಂಕರಪ್ಪ ಅವರು ಕನಿಷ್ಠ 125 ವರ್ಷ ಆರೋಗ್ಯವಾಗಿ ಬದುಕಲಿ’ ಎಂದು ಹಾರೈಸುತ್ತೇನೆ’ ಎಂದು ಹೇಳಿದರು.

ಬಾಪೂಜಿ ಶಿಕ್ಷಣ ಸಂಸ್ಥೆ ಕಟ್ಟುವುದು ಅಷ್ಟು ಸುಲಭವಲ್ಲ. ಅದೊಂದು ಶ್ರಮದ ಕೆಲಸ. ಈ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ವಿಶ್ವದೆಲ್ಲೆಡೆ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರ ಶ್ರೇಯಸ್ಸು ಶಿವಶಂಕರಪ್ಪ ಅವರಿಗೆ ಸಲ್ಲುತ್ತದೆ ಎಂದರು.

‘ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್‌ನಲ್ಲಿ ₹ 12 ಕೋಟಿ ಠೇವಣಿಯಿಟ್ಟು, ಅದರ ಬಡ್ಡಿಯಿಂದ ಸಮಾಜ ಸೇವೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಸಮಾಜದಿಂದ ನಾನೇನು ಪಡೆದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾನೇನು ಕೊಟ್ಟೆ ಎನ್ನುವುದು ಮುಖ್ಯ’ ಎಂದು ಹೇಳಿದರು.

‘ಜನರ ಆಶೀರ್ವಾದವಿದ್ದಾಗ ಮಾತ್ರ ಯಾವುದೇ ಅಧಿಕಾರ ಸಿಗಲು ಸಾಧ್ಯ. ನಾನು ವಕೀಲನಾಗಿದ್ದು ನಮ್ಮ ಮನೆಯ ಹಣದಿಂದಲ್ಲ. ಅದೇ ರೀತಿ ರಾಜ್ಯದ 6.50 ಕೋಟಿ ಜನರ ಆಶೀರ್ವಾದದಿಂದ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ’ ಎಂದು ಹೇಳಿದರು.

ಸುಖಕರ ಜೀವನ ನಡೆಸಲು ಒಂದು ಅಥವಾ ಎರಡು ಮಕ್ಕಳನ್ನು ಹೊಂದಬೇಕು ಎಂದು ನೂತನ ದಂಪತಿಗಳಿಗೆ ಮುಖ್ಯಮಂತ್ರಿ ಕಿವಿಮಾತು ಹೇಳಿದರು. ಇದೇ ಸಮಯದಲ್ಲಿ ಶಾಮನೂರು ಶಿವಶಂಕರಪ್ಪ ಅಭಿಮಾನಿ ಬಳಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಳ್ಳಿ ಗದೆ ಹಾಗೂ ಬೆಳ್ಳಿ ಖಡ್ಗ ನೀಡಿ ಗೌರವಿಸಲಾಯಿತು. ಶಾಮನೂರು ಶಿವಶಂಕರಪ್ಪ ಮತ್ತು ಶಾಸಕ ಅಂಬರೀಶ್‌ ಅವರಿಗೂ ಬೆಳ್ಳಿ ಗದೆ ನೀಡಿ ಗೌರವಿಸಲಾಯಿತು.

ಶಾಮನೂರು ಶಿವಶಂಕರಪ್ಪ ಅವರು ಕೇಕ್‌ ಕತ್ತರಿಸುವ ಮೂಲಕ 87ನೇ ಜನ್ಮದಿನ ಆಚರಿಸಿಕೊಂಡರು. ಲೋಕೋಪಯೋಗಿ ಸಚಿವ ಎಚ್‌.ಸಿ.ಮಹಾದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ವಿಧಾನ ಪರಿಷತ್‌ ಸದಸ್ಯ ಕೆ.ಅಬ್ದುಲ್‌ ಜಬ್ಬಾರ್‌, ‘ದೂಡಾ’ ಅಧ್ಯಕ್ಷ ಜಿ.ರಾಮಚಂದ್ರಪ್ಪ, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ, ನಟ ಪ್ರೇಮ್‌, ಮೇಯರ್‌ ಅನಿತಾ ಬಾಯಿ, ಉಪ ಮೇಯರ್‌ ಮಂಜಮ್ಮ, ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಎಸ್‌. ಗುಳೇದ, ಡಿ.ಬಸವರಾಜ್‌, ಶಾಮನೂರು ಶಿವಶಂಕರಪ್ಪ ಅಭಿಮಾನಿ ಬಳಗದ ಬಿ.ವೀರಣ್ಣ, ಪಾಲಿಕೆ ಸದಸ್ಯೆ ಲಕ್ಷ್ಮೀದೇವಿ, ಅವರೂ ಇದ್ದರು.

‘ಕೇಂದ್ರ ಸರ್ಕಾರಕ್ಕೆ ಶಿಫಾರಸು’
ವೀರಶೈವ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಅವರು, ಸಮುದಾಯದ ಮಠಾಧೀಶರ ಹಾಗೂ ಮುಖಂಡರ ಸಭೆ ಕರೆದು ಚರ್ಚೆ ನಡೆಸಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಸೂಚಿಸಿದರು.

ಜಾತಿರಹಿತ ಸಮಾಜ ನಿರ್ಮಾಣವಾಗಬೇಕು ಎಂದು ಕನಸು ಕಂಡಿದ್ದ ಬಸವಣ್ಣನವರು 850 ವರ್ಷಗಳ ಹಿಂದೆಯೇ ಅಂತರ್ಜಾತಿ ವಿವಾಹ ಪದ್ಧತಿಯನ್ನು ಜಾರಿಗೆ ತಂದಿದ್ದರು. ಈ ರೀತಿಯ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹಗಳು ಹೆಚ್ಚು ನಡೆಯಬೇಕು ಎಂದು ಹೇಳಿದರು.

87 ಜೋಡಿಗಳ ವಿವಾಹ
ಶಾಮನೂರು ಶಿವಶಂಕರಪ್ಪ ಅಭಿಮಾನಿಗಳ ಬಳಗ ಆಯೋಜಿಸಿದ್ದ ಆರನೇ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 87 ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟವು. ಇದರಲ್ಲಿ ಒಂದು ಅಂಗವಿಕಲ ಜೋಡಿಯೂ ಇತ್ತು.

‘ಇನ್ನೂ ಕ್ರಿಯಾಶೀಲರಾಗಿ’
ದಾವಣಗೆರೆ ನಗರವು ವಿದೇಶದಂತೆ ಕಾಣುತ್ತಿದೆ. ಅಭಿವೃದ್ಧಿಗೆ ಶ್ರಮಿಸಿದ ಸಚಿವ ಮಲ್ಲಿಕಾರ್ಜುನ ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ. ಅವರು ಇನ್ನೂ ಹೆಚ್ಚು ಕ್ರಿಯಾಶೀಲರಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

* * 

ಬೇರೆಯವರ ಮನೆಯಲ್ಲಿ ಊಟ ಮಾಡಿದಾಗ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಲ್ಲ. ಎಲ್ಲರನ್ನೂ ಒಂದೇ ಎಂದು ಭಾವಿಸಿದಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ.
ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT