ನಂಗಲಿಯಲ್ಲಿ ಹೊಯ್ಸಳ ಶೈಲಿ ದೇಗುಲ ಶೀಘ್ರ

7
ಅಂದಾಜು 400 ಕೋಟಿ ವೆಚ್ಚ l ಶ್ರೀ ಕಲ್ಯಾಣ ವೆಂಕಟೇಶ್ವರ ಹೊಯ್ಸಳ ಆರ್ಟ್‌ ಫೌಂಡೇಷನ್‌ನಿಂದ ನಿರ್ಮಾಣ

ನಂಗಲಿಯಲ್ಲಿ ಹೊಯ್ಸಳ ಶೈಲಿ ದೇಗುಲ ಶೀಘ್ರ

Published:
Updated:
ನಂಗಲಿಯಲ್ಲಿ ಹೊಯ್ಸಳ ಶೈಲಿ ದೇಗುಲ ಶೀಘ್ರ

ಕೋಲಾರ: ಹೊಯ್ಸಳ ಸಾಮ್ರಾಜ್ಯದ ಹೆಬ್ಬಾಗಿಲು ಎಂದೇ ಗುರುತಿಸಿಕೊಂಡಿದ್ದ ಜಿಲ್ಲೆಯ ಗಡಿ ಭಾಗದ ನಂಗಲಿ ಸಮೀಪದ ಎನ್‌.ವೆಂಕಟಾಪುರ ಗ್ರಾಮದಲ್ಲಿ ಹೊಯ್ಸಳ ಶೈಲಿಯ ಶ್ರೀ ಕಲ್ಯಾಣ ವೆಂಕಟೇಶ್ವರ ದೇವಾಲಯ ನಿರ್ಮಿಸಲಾಗುತ್ತಿದೆ.

ಹೊಯ್ಸಳರು ನಂಗಲಿಯನ್ನು ಈ ಹಿಂದೆ ‘ನಂಗಲಿ ಗೊಂಡ’ ಎಂದು ಕರೆಯುತ್ತಿದ್ದರು. ಹೊಯ್ಸಳ ಸ್ರಾಮ್ರಾಜ್ಯದ ರಾಜ ವಿಷ್ಣುವರ್ಧನ ಸುಮಾರು 900 ವರ್ಷಗಳ ಹಿಂದೆ ರಾಜ್ಯದ ವಿವಿಧೆಡೆ ಹೊಯ್ಸಳ ಶೈಲಿಯಲ್ಲಿ ದೇವಸ್ಥಾನಗಳನ್ನು ನಿರ್ಮಿಸಿದ್ದ. ಆ ನಂತರ ಬಹುತೇಕ ಕಡೆ ದ್ರಾವಿಡ ಶೈಲಿಯ ದೇವಸ್ಥಾನಗಳು ನಿರ್ಮಾಣವಾದವು.

ರಾಜ್ಯದಲ್ಲಿ ಹೊಯ್ಸಳ ಶೈಲಿಯ ದೇವಸ್ಥಾನಗಳ ಸಂಖ್ಯೆ ಬೆರಳೆಣಿಕೆಯಷ್ಟಿದ್ದು, ಶ್ರೀ ಕಲ್ಯಾಣ ವೆಂಕಟೇಶ್ವರ ಹೊಯ್ಸಳ ಆರ್ಟ್‌ ಫೌಂಡೇಷನ್‌ ವೆಂಕಟಾಪುರದಲ್ಲಿ ನಿರ್ಮಿಸುತ್ತಿರುವ ದೇವಸ್ಥಾನ ಹೆಚ್ಚು ಮಹತ್ವ ಪಡೆದಿದೆ. ಬೇಲೂರಿನ ಚನ್ನಕೇಶವ ದೇವಾಲಯಕ್ಕಿಂತಲೂ ದೊಡ್ಡದಾಗಿ ನಿರ್ಮಿಸಲಾಗುತ್ತಿರುವ ಈ ದೇವಾಲಯಕ್ಕೆ ಮೈಸೂರು ಸಂಸ್ಥಾನದ ರಾಜವಂಶಸ್ಥ ಯದುವೀರ ಕೃಷ್ಣರಾಜ ಒಡೆಯರ್‌ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದ್ದಾರೆ.

ದೇವಸ್ಥಾನಕ್ಕೆ ಸುಮಾರು 400 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ನಿರ್ಮಾಣ ಕಾರ್ಯ 20 ವರ್ಷ ಹಿಡಿಯಲಿದೆ. ಸಿಮೆಂಟ್‌ ಬಳಸದೆ ಸಂಪೂರ್ಣವಾಗಿ ಕಲ್ಲುಗಳಿಂದಲೇ ದೇವಸ್ಥಾನ ಕಟ್ಟುತ್ತಿರುವುದು ವಿಶೇಷವಾಗಿದೆ.

ಅಡಿಪಾಯಕ್ಕೆ 7,000 ಕಲ್ಲುಗಳನ್ನು ಬಳಸಲಾಗುತ್ತಿದ್ದು, ಪ್ರತಿ ಕಲ್ಲು ಸುಮಾರು 15 ಟನ್‌ ತೂಕವಿದೆ. ಇನ್ನು ಗರ್ಭಗುಡಿ, ನವರಂಗ, ಸಭಾಮಂಟಪ ಹಾಗೂ ಧ್ವಜಸ್ತಂಭಕ್ಕೆ ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆಯಿಂದ ಬಳಪದ ಕಲ್ಲು ತರಿಸಲಾಗುತ್ತಿದೆ.

ಹಣಕಾಸಿನ ಸವಾಲು: ದೇವಸ್ಥಾನ ನಿರ್ಮಾಣಕ್ಕೆ ಹಣಕಾಸು ಹೊಂದಿಸುವುದೇ ದೊಡ್ಡ ಸವಾಲಾಗಿದ್ದು, ಪ್ರತಿಷ್ಠಾನವು ಜಿಲ್ಲೆ ವ್ಯಾಪ್ತಿಯ ಪ್ರತಿ ಕುಟುಂಬ

ದಿಂದ ದೇಣಿಗೆಯಾಗಿ ₹ 108 ಸಂಗ್ರಹಿಸಲು ಮುಂದಾಗಿದೆ. ದೇವಸ್ಥಾನಕ್ಕೆ ಬಳಸುತ್ತಿರುವ ಪ್ರತಿ ಕಲ್ಲಿಗೆ ಸುಮಾರು ₹ 15 ಸಾವಿರ ಬೆಲೆ ಇದ್ದು, ದಾನಿಗಳು ಈಗಾಗಲೇ 1,000 ಕಲ್ಲುಗಳನ್ನು ಕೊಟ್ಟಿದ್ದಾರೆ. ಆರ್ಥಿಕ ಸಂಪನ್ಮೂಲದ ಕ್ರೋಡೀಕರಣಕ್ಕಾಗಿ ಪ್ರತಿಷ್ಠಾನವು ಫೇಸ್‌ಬುಕ್‌ ಖಾತೆ ತೆರೆದಿದ್ದು, ಹೆಚ್ಚಿನ ದಾನಿಗಳು ಯೋಜನೆಗೆ ಕೈಜೋಡಿಸುವ ನಿರೀಕ್ಷೆ ಇದೆ.

‘ಜಿಲ್ಲೆಯಲ್ಲಿ 15 ಲಕ್ಷ ಜನಸಂಖ್ಯೆ ಇದ್ದು, ಇದರಲ್ಲಿ ಅರ್ಧದಷ್ಟು ಜನ ದೇಣಿಗೆ ಕೊಟ್ಟರೂ ದೇವಸ್ಥಾನ ನಿರ್ಮಾಣಕ್ಕೆ ಅಗತ್ಯವಿರುವಷ್ಟು ಹಣ ಸಂಗ್ರಹವಾಗುತ್ತದೆ. ಜಿಲ್ಲೆಯಲ್ಲಿ ವರ್ಷವಿಡೀ ದೇಣಿಗೆ ಸಂಗ್ರಹಿಸಲಾಗುತ್ತದೆ. ಬಳಿಕ ಹಣದ ಅಗತ್ಯ ನೋಡಿಕೊಂಡು ಬೇರೆ ಜಿಲ್ಲೆಗಳಲ್ಲಿ ದೇಣಿಗೆ ಪಡೆಯುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ’ ಎಂದು ಶ್ರೀ ಕಲ್ಯಾಣ ವೆಂಕಟೇಶ್ವರ ಹೊಯ್ಸಳ ಆರ್ಟ್‌ ಫೌಂಡೇಷನ್‌ ಖಜಾಂಚಿ ಅರವಿಂದ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಇಂಗ್ಲೆಂಡ್‌ ವಾಸ್ತುಶಿಲ್ಪಿ: ಹೊಯ್ಸಳರ ಶಿಲ್ಪಕಲೆ ಕುರಿತು ಹೆಚ್ಚಿನ ಅಧ್ಯಯನ ಹಾಗೂ ಸಂಶೋಧನೆ ನಡೆಸಿರುವ ಇಂಗ್ಲೆಂಡ್‌ನ ವಾಸ್ತುಶಿಲ್ಪಿ ಪ್ರೊ.ಆ್ಯಡಂ ಹಾರ್ಡಿ ದೇವಸ್ಥಾನದ ಮುಖ್ಯ ವಿನ್ಯಾಸಕಾರರಾಗಿದ್ದಾರೆ. ಬೇಲೂರಿನ ಶ್ರೀವತ್ಸ ಎಸ್‌.ವಠಿ ಅವರು ಪ್ರಧಾನ ಸಲಹೆಗಾರರಾಗಿ, ಧಾರ್ಮಿಕ ಮಾರ್ಗ

ದರ್ಶಕ ರಾಘವೇಂದ್ರ ಶರ್ಮ, ಶಿಲ್ಪಿಗಳಾದ ಕಾರ್ಕಳದ ಗುಣವಂತೇಶ್ವರ ಭಟ್‌, ಬೆಂಗಳೂರಿನ ಜಿ.ಎಲ್‌.ಭಟ್‌, ಹೊಸಕೋಟೆಯ ಪ್ರಧಾನ ಸ್ಥಪತಿ ಶಂಕರ್‌, ವಿನ್ಯಾಸಕಿ ಯಶಸ್ವಿನಿ ಶರ್ಮ ದೇವಾಲಯ ನಿರ್ಮಾಣ ಸಮಿತಿಯಲ್ಲಿದ್ದಾರೆ.

150 ಶಿಲ್ಪಿಗಳು: ಹೊಯ್ಸಳರ ವಾಸ್ತುಶಿಲ್ಪವು ಜನಮಾನಸದಿಂದ ದೂರವಾಗಿದ್ದು, 14ನೇ ಶತಮಾನದ ನಂತರ ಹೆಚ್ಚು ಚಾಲ್ತಿಯಲ್ಲಿ ಇಲ್ಲ. ಹೊಯ್ಸಳ ಶಿಲ್ಪಕಲೆ ತಿಳಿದಿರುವ 150 ಶಿಲ್ಪಿಗಳನ್ನು ಗುರುತಿಸಲಾಗಿದೆ. ಇವರಿಂದ ಕೆತ್ತನೆ ಕೆಲಸಗಾರರಿಗೆ ತರಬೇತಿ ಕೊಡಿಸುವ ಪ್ರಯತ್ನ ನಡೆದಿದೆ. ಜತೆಗೆ ಬೇಲೂರಿನ ಚನ್ನಕೇಶವ ದೇವಾಲಯದಲ್ಲಿ ತರಬೇತಿ ಕಾರ್ಯಾಗಾರ ನಡೆಸಲು ಉದ್ದೇಶಿಸಲಾಗಿದೆ.

***

ದೇವಸ್ಥಾನದಲ್ಲಿ ಕಲಾಶಾಲೆ, ನೃತ್ಯ ಶಾಲೆ ಮತ್ತು ಆಗಮ ಶಾಲೆ ಇರುತ್ತವೆ. ಹೊಯ್ಸಳ ಶೈಲಿಯನ್ನು ಪುನರ್ ನಿರ್ಮಿಸುತ್ತಾ ಆ ಶೈಲಿಗೆ ಜೀವ ತುಂಬಲಾಗುತ್ತದೆ

ಶ್ರೀವತ್ಸ ಟಿ.ವಟಿ,  ದೇವಸ್ಥಾನದ ಪ್ರಧಾನ ಸಲಹೆಗಾರ

ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ವೆಂಕಟಾಪುರ ಗ್ರಾಮದಲ್ಲಿ ಹೊಯ್ಸಳ ಶೈಲಿಯ ಶ್ರೀ ಕಲ್ಯಾಣ ವೆಂಕಟೇಶ್ವರ ದೇವಾಲಯ ನಿರ್ಮಾಣಕ್ಕೆ ಕಲ್ಲುಗಳನ್ನು ಜೋಡಿಸಿರುವುದು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry