14 ವರ್ಷದ ಬಳಿಕ ಮುಕ್ತಾಯದತ್ತ ಕಾಮಗಾರಿ

7

14 ವರ್ಷದ ಬಳಿಕ ಮುಕ್ತಾಯದತ್ತ ಕಾಮಗಾರಿ

Published:
Updated:
14 ವರ್ಷದ ಬಳಿಕ ಮುಕ್ತಾಯದತ್ತ ಕಾಮಗಾರಿ

ಹಿರಿಯೂರು: ತಾಲ್ಲೂಕಿನ ಉಡುವಳ್ಳಿ ಕೆರೆಗೆ ಕತ್ತೆಹೊಳೆಯಿಂದ ₹ 7.40 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಪೂರಕ ನಾಲೆ ಕಾಮಗಾರಿ ಭರದಿಂದ ಸಾಗಿದ್ದು, ಶುಕ್ರವಾರ ಶಾಸಕ ಡಿ. ಸುಧಾಕರ್ ಅವರು ಕಾಮಗಾರಿ ಪರಿಶೀಲನೆ ನಡೆಸಿದರು.

1975ರಲ್ಲಿ ತಾಲ್ಲೂಕಿನ ಹಾಲು ಮಾದೇನಹಳ್ಳಿ ಸಮೀಪವಿರುವ ಕತ್ತೆಹೊಳೆ ಎಂಬಲ್ಲಿ ನಿರ್ಮಿಸಿರುವ ಸಣ್ಣಕೆರೆಯಿಂದ ಉಡುವಳ್ಳಿ ಕೆರೆಗೆ ಪೂರಕ ನಾಲೆ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿತ್ತು. ಇದಾದ 28 ವರ್ಷಗಳ ನಂತರ ₹ 2 ಕೋಟಿ ಅಂದಾಜು ವೆಚ್ಚದ ಪೂರಕ ನಾಲೆ ಕಾಮಗಾರಿಗೆ 2003 ರಂದು ಅಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯಾಗಿದ್ದ ಸೌಭಾಗ್ಯ ಬಸವರಾಜನ್ (14 ವರ್ಷದ ನಂತರ ಈಗ ಮತ್ತೆ ಅವರೇ ಅಧ್ಯಕ್ಷರು) ಗುದ್ದಲಿ ಪೂಜೆ ನೆರವೇರಿಸಿದ್ದರು.

ಅರಣ್ಯ ಇಲಾಖೆ ನಿರಾಕ್ಷೇಪಣಾ ಪತ್ರ ದೊರೆಯುವಲ್ಲಿ ಆದ ವಿಳಂಬ, ಮೊದಲ ಗುತ್ತಿಗೆದಾರ ಕಾಮಗಾರಿ ಸ್ಥಗಿತಗೊಳಿಸಿ ಹೋದ ಕಾರಣ ಕಾಮಗಾರಿ ಅರ್ಧಕ್ಕೆ ನಿಂತು ಹೋಗಿತ್ತು ಎಂದು ಶಾಸಕರು ಸುದ್ದಿಗಾರರಿಗೆ ತಿಳಿಸಿದರು. 

ನಾಲೆ ಪೂರ್ಣಗೊಂಡಲ್ಲಿ ಸೋಮೇರಹಳ್ಳಿ, ಸೋಮೇರಹಳ್ಳಿ ತಾಂಡಾ, ಹುಲುಗಲಕುಂಟೆ, ಪರಮೇನಹಳ್ಳಿ, ಚಳಮಡು, ಗಾಂಧಿನಗರ, ಇದ್ದಲನಾಗೇನಹಳ್ಳಿಗಳ ಜಮೀನುಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿ, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ಕೆರೆ ವ್ಯಾಪ್ತಿಯ 25 ಕಿ.ಮೀ. ವಿಸ್ತೀರ್ಣದಲ್ಲಿ  ಅಂತರ್ಜಲ ವೃದ್ಧಿಸಿ,  ಸಾವಿರಾರು ಎಕರೆಗೆ ನೀರು ಉಣಿಸಬಹುದಾದ ಈ ಯೋಜನೆಗೆ ಮರುಜೀವ ಕೊಡಲು ನಡೆಸಿದ ಸತತ ಪ್ರಯತ್ನದ ಫಲವಾಗಿ ಯೋಜನೆಗೆ ಇದ್ದ ಎಲ್ಲ ಅಡ್ಡಿಗಳು ನಿವಾರಣೆಯಾದವು.

ಪರಿಷ್ಕೃತ ಅಂದಾಜಿನಂತೆ ₹ 7.40 ಕೋಟಿಗೆ ಸಚಿವ ಸಂಪುಟ ಹಾಗೂ ಆರ್ಥಿಕ ಇಲಾಖೆಯ ಅನುಮೋದನೆ ದೊರೆಯಿತು. 7 ಕಿ.ಮೀ. ಉದ್ದದ ನಾಲೆ ಕಾಮಗಾರಿಯಲ್ಲಿ ಈಗಾಗಲೇ 5 ಕಿ.ಮೀ. ನಾಲೆ ನಿರ್ಮಾಣವಾಗಿದ್ದು, ಉಳಿದ 2 ಕಿ.ಮೀ. ಕಾಮಗಾರಿ ಆಗಸ್ಟ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.

ಉಡುವಳ್ಳಿ ಕೆರೆಯಲ್ಲಿ ಐದಾರು ಅಡಿ ಹೂಳು ತುಂಬಿದ್ದು, ನಾಲೆ ಕಾಮಗಾರಿ ಮುಗಿಯುವುದರ ಒಳಗೆ ಹೂಳು ತೆಗೆಸಬೇಕು ಎಂದು ಕೆಪಿಸಿಸಿ ಸದಸ್ಯ ಅಮೃತೇಶ್ವರ ಸ್ವಾಮಿ ಶಾಸಕರಿಗೆ ಮನವಿ ಮಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಆರ್. ನಾಗೇಂದ್ರನಾಯ್ಕ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಮತಾ ಮಂಜುನಾಥಗೌಡ, ಖಾದಿ ರಮೇಶ್, ದಿಂಡಾವರ ಮಹೇಶ್, ಬಾಲರಾಜು, ಪಿ.ಎಂ. ತಿಮ್ಮಯ್ಯ, ಜಿ.ಎಂ. ಉಮೇಶ್, ಅಬ್ದುಲ್ ರೆಹಮಾನ್ (ಷಮ್ಮು), ರಮೇಶ್, ಜಗದೀಶ್ವರಸ್ವಾಮಿ ಉಪಸ್ಥಿತರಿದ್ದರು.

ಮುಖ್ಯಾಂಶಗಳು (ಇಸವಿ )

1975 ಕತ್ತೆಹೊಳೆ ಕೆರೆ ನಿರ್ಮಾಣ

1994 ಉಡುವಳ್ಳಿ ಕೆರೆ ಪೂರಕ ನಾಲೆಗೆ ರೂಪುರೇಷೆ ಸಿದ್ಧ

1999 ಕಾಮಗಾರಿಗೆ ಎರಡನೇ ಬಾರಿ ಅನುಮೋದನೆ

2003 ಸೌಭಾಗ್ಯ ಬಸವರಾಜನ್ ಅವರಿಂದ ಗುದ್ದಲಿ ಪೂಜೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry