ಎಲ್ಲಾ ವರ್ಗದವರಿಗೂ ಗುಣಮಟ್ಟದ ಆರೋಗ್ಯ ಸೇವೆ ಲಭಿಸಬೇಕು: ಪ್ರಣವ್‌ ಮುಖರ್ಜಿ

7
ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಿಲಾನ್ಯಾಸ

ಎಲ್ಲಾ ವರ್ಗದವರಿಗೂ ಗುಣಮಟ್ಟದ ಆರೋಗ್ಯ ಸೇವೆ ಲಭಿಸಬೇಕು: ಪ್ರಣವ್‌ ಮುಖರ್ಜಿ

Published:
Updated:
ಎಲ್ಲಾ ವರ್ಗದವರಿಗೂ ಗುಣಮಟ್ಟದ ಆರೋಗ್ಯ ಸೇವೆ ಲಭಿಸಬೇಕು: ಪ್ರಣವ್‌ ಮುಖರ್ಜಿ

ಉಡುಪಿ: ‘ಗುಣಮಟ್ಟದ ಆರೋಗ್ಯ ಸೇವೆ ಗ್ರಾಮೀಣ ಭಾಗವೂ ಸೇರಿದಂತೆ ದೇಶದ ಎಲ್ಲ ಜನರಿಗೆ ಸಿಗಬೇಕು’ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೇಳಿದರು.

ಬಿಆರ್‌ಎಸ್‌ ಆರೋಗ್ಯ ಮತ್ತು ಸಂಶೋಧನಾ ಕೇಂದ್ರ ಉಡುಪಿಯಲ್ಲಿ ನಿರ್ಮಾಣ ಮಾಡುತ್ತಿರುವ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭಾನುವಾರ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

‘ಸದೃಢ ದೇಹ ಮತ್ತು ಮನಸ್ಸಿನ ಪ್ರಜೆಗಳು ಇದ್ದಾಗ ಮಾತ್ರ ಬಲಯುತ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ. ಆದ್ದರಿಂದ, ಜನರಿಗೆ ಸೂಪರ್ ಸ್ಪೆಷಾಲಿಟಿ ಆರೋಗ್ಯ ಸೇವೆಗಳು ಸಿಗಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಆಗುತ್ತಿದ್ದು, ಪ್ರತಿಯೊಬ್ಬರಿಗೂ ಇದರ ಲಾಭ ದೊರಕಬೇಕು’ ಎಂದರು.

‘ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ನಗರ ಪ್ರದೇಶಗಳಲ್ಲಿ 1,000 ಜನರಿಗೆ ಒಬ್ಬ ವೈದ್ಯ ಇದ್ದರೆ, ಭಾರತದಲ್ಲಿ 1,700 ಜನರಿಗೆ ಒಬ್ಬ ವೈದ್ಯರಿದ್ದಾರೆ. ಗ್ರಾಮೀಣ ಭಾಗದಲ್ಲಿ ಇದಕ್ಕಿಂತ ಕಡಿಮೆ ಇರಬಹುದು. ಆದ್ದರಿಂದ ವೈದ್ಯರ ಸಂಖ್ಯೆ ಹಾಗೂ ಮೂಲ ಸೌಕರ್ಯಗಳೂ ಸಹ ಗಣನೀಯವಾಗಿ ಹೆಚ್ಚಳವಾಗಬೇಕು. ಆಧುನಿಕ ತಂತ್ರಜ್ಞಾನ, ಸಾಧನ ಹಾಗೂ ಉತ್ತಮ ವೈದ್ಯರಿದ್ದಾಗ ಈ ಕ್ಷೇತ್ರದಲ್ಲಿ ಅದ್ಭುತಗಳನ್ನು ಸಾಧಿಸಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

‘ಸಮಾಜಕ್ಕಾಗಿ ಕೆಲಸ ಮಾಡಿದ ಹಾಜಿ ಅಬ್ದುಲ್ಲಾ ಅವರ ಹೆಸರಿನಲ್ಲಿ ಬಿ.ಆರ್. ಶೆಟ್ಟಿ ಅವರು ಸೂಪರ್ ಸ್ಪೆಷಾಲಿಟಿ ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಉತ್ತಮ ಆರಂಭವಾಗಿದ್ದು, ಈ ಭಾಗದ ಜನರಿಗೆ ಗುಣಮಟ್ಟದ ಚಿಕಿತ್ಸೆ ಲಭ್ಯವಾಗಲಿ. 1978ರಲ್ಲಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಇಂದಿರಾಗಾಂಧಿ ಅವರು ಸ್ಪರ್ಧಿಸಿದ್ದಾಗ ಈ ಭಾಗಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿತ್ತು. ಶ್ರೀಕೃಷ್ಣನ ದೇವಸ್ಥಾನ ಸೇರಿದಂತೆ ಹಲವು ಪ್ರಖ್ಯಾತ ಧಾರ್ಮಿಕ ಕ್ಷೇತ್ರಗಳು ಇಲ್ಲಿವೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry