ಖುಷಿ ಖುಷಿಯಲಿ

7

ಖುಷಿ ಖುಷಿಯಲಿ

Published:
Updated:
ಖುಷಿ ಖುಷಿಯಲಿ

ಖುಷಿಗೆ ನಟಿಯಾಗುವುದು ಬದುಕಿನ ಗುರಿಯಾಗಿತ್ತು. ರೂಪದರ್ಶಿ ಮತ್ತು ರಂಗ ತರಬೇತಿ ಮೂಲಕ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿರುವ ಜಾಣೆ. ಮಾಡೆಲಿಂಗ್‌ ಕ್ಷೇತ್ರಕ್ಕೆ ಅಡಿಯಿಟ್ಟ ಆರೇ ತಿಂಗಳಿನಲ್ಲಿ ‘ರಾಕಿಂಗ್ ಇವೆಂಟ್‌–2017’ ರೂಪದರ್ಶಿ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.

‘ಚಿಕ್ಕವಳಿದ್ದಾಗ ಅತಿ ಎನ್ನುವಷ್ಟು ಟಿ.ವಿ ನೋಡುತ್ತಿದ್ದೆ. ಆಗ ಅಪ್ಪ, ‘ನೀನು ಬರೀ ಟಿ.ವಿ ಮುಂದೆ ಕೂರುವುದಲ್ಲ. ನೀನೂ ಟಿ.ವಿಯಲ್ಲಿ ಬರುವಂತಾಗಬೇಕು’ ಎಂದು ಛೇಡಿಸುತ್ತಿದ್ದರು. ಆಗಲೇ ನಟಿಯಾಗಬೇಕು ಎಂಬ ಆಸೆ ಚಿಗುರಿತು’ ಎಂದು ಬಾಲ್ಯದ ಆಸೆಯನ್ನು ವಿವರಿಸುತ್ತಾರೆ ಖುಷಿ.

ಆದರೆ ಯಾರ ಪರಿಚಯವೂ ಇಲ್ಲದೆ ಸಿನಿಮಾದ ನಂಟು ಬೆಳೆಸುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿತ್ತಂತೆ ‘ಡಿಪ್ಲೊಮಾ ಓದುತ್ತಿದ್ದಾಗ  ಸ್ನೇಹಿತರ ಜೊತೆಗೆ ನಾಟಕ ನೋಡಲು ಹೋಗಿದ್ದೆ.  ಹೆಗ್ಗೋಡಿನ ನೀನಾಸಂ ತಂಡದ ನಾಟಕವದು. ಅಲ್ಲಿಂದ ಬಂದ ನಂತರ ಸ್ನೇಹಿತರು ಹೆಗ್ಗೋಡಿಗೆ ಹೋಗಿ ನಟನೆಯ ತರಬೇತಿ ಪಡೆಯುವಂತೆ ತಿಳಿಸಿದರು’ ಎಂದು ಸ್ನೇಹಿತರ ನೆರವನ್ನು ನೆನಯುತ್ತಾರೆ.

‘ಹೆಗ್ಗೋಡಿನಲ್ಲಿ ತರಬೇತಿ ಪಡೆಯುವ ನಿರ್ಧಾರ ಮಾಡುವ ಹೊತ್ತಿಗೆ ಅಲ್ಲಿ ಆಡಿಷನ್‌ ಮುಗಿದುಬಿಟ್ಟಿತ್ತು. ಆದರೆ  ಕೆ.ವಿ ಕೃಷ್ಣಮೂರ್ತಿ ಅವರು ನಡೆಸುತ್ತಿದ್ದ ಕಿನ್ನರ ಮೇಳದಲ್ಲಿ ಕಲಿಯುವ ಅವಕಾಶ ದೊರಕಿತು. ಅಲ್ಲಿ  ಒಂದು ವರ್ಷ ತರಬೇತಿ ಪಡೆದೆ. ಮತ್ತೆ ಸಾಣೇಹಳ್ಳಿಯಲ್ಲಿ ಒಂದು ವರ್ಷ ರಂಗ ತರಬೇತಿಯನ್ನೂ ಪಡೆದೆ. ಇಲ್ಲಿವರೆಗೆ 26 ನಾಟಕಗಳಲ್ಲಿ ಅಭಿನಯಿಸಿದ್ದೇನೆ’ ಎಂದು ರಂಗಭೂಮಿಯ ಹಿನ್ನೆಲೆಯ ವರದಿ ಒಪ್ಪಿಸುತ್ತಾರೆ.

ಪೊಲೀಸ್‌ ಆಗಬೇಕೆಂಬುದು ಖುಷಿಯ  ಆಸೆ. ಇದೀಗ ‘ಸ್ಫೂರ್ತಿ’ ಸಿನಿಮಾದಲ್ಲಿ ಪೊಲೀಸ್‌ ಪಾತ್ರಕ್ಕೆ ಬಣ್ಣ ಹಚ್ಚಿರುವುದು ಅವರಿಗೆ ಖುಷಿ ನೀಡಿದೆಯಂತೆ.

ಮಾಡೆಲಿಂಗ್‌ ಮತ್ತು ನಟನೆ ಯಾವುದು ನಿಮ್ಮ ಆಯ್ಕೆ ಎಂದು ಕೇಳಿದರೆ, ‘ಮಾಡೆಲಿಂಗ್‌ ಪ್ಯಾಶನ್‌. ಅದರಲ್ಲಿ ಸೌಂದರ್ಯ ಪ್ರದರ್ಶಿಸಬಹುದು. ಅದು ಬಾಹ್ಯ ಸೌಂದರ್ಯದ ಪ್ರದರ್ಶನವಾದರೆ, ನಟನೆ ಪ್ರತಿಭೆಯ ಅನಾವರಣ’ ಎಂದು ವ್ಯಾಖ್ಯಾನಿಸುತ್ತಾರೆ. ದರ್ಶನ್‌ ಇವರ ನೆಚ್ಚಿನ ನಟ. ರಾಧಿಕಾ ಪಂಡಿತ್‌ ನಟನೆ ಇವರಿಗೆ ಇಷ್ಟ. 

ಸಾಮಾನ್ಯವಾಗಿ ನಟನಾ ಕ್ಷೇತ್ರ ಪ್ರವೇಶಿಸಲು ಬಯಸುವವರಿಗೆ ಮನೆಯ ವಿರೋಧ ವ್ಯಕ್ತವಾಗುತ್ತದೆ. ಆದರೆ ಇವರು ಈ ವಿಷಯದಲ್ಲಿ ಅದೃಷ್ಟವಂತೆ. ‘ಮನೆಯವರ ಬೆಂಬಲವಿರುವುದರಿಂದಲೇ ಪ್ರತಿಭೆಯ ಮುಕ್ತ ಅನಾವರಣ ಸಾಧ್ಯವಾಗಿದೆ’ ಎನ್ನುತ್ತಾರೆ ಇವರು.

ಖುಷಿ, ನೃತ್ಯ ಪ್ರಿಯೆ. ಪ್ರತಿದಿನ ಎರಡು ಗಂಟೆ ನೃತ್ಯಕ್ಕೆ ಮೀಸಲು. ಬೆಳಿಗ್ಗೆ ಎದ್ದ ಕೂಡಲೇ ಯೋಗ, ನಂತರ ಒಂದು ಗಂಟೆ ಜಿಮ್‌ನಲ್ಲಿ ವ್ಯಾಯಾಮ. ಜಂಕ್‌ಫುಡ್‌ ಇಷ್ಟವಿಲ್ಲ. ಹಣ್ಣುಗಳು, ಕಲ್ಲಂಗಡಿ ಹಣ್ಣಿನ ರಸ, ಎಳನೀರುಒಂದು ದಿನವೂ ತಪ್ಪಿಸುವುದಿಲ್ಲ’ ಎಂದು ದಿನಚರಿ ಒಪ್ಪಿಸುತ್ತಾರೆ.

ಚರ್ಮದ ಸಹಜವಾಗಿ ಕಾಂತಿಯುತವಾಗಿದೆ. ಒಂದು ವೇಳೆ ಬಿಸಿಲಿಗೆ ಮುಖ ಬಾಡಿದರೆ ಟೊಮೆಟೊ ಹಚ್ಚಿಕೊಳ್ಳುತ್ತಾರಂತೆ. ಅಂತೂ ಖುಷಿ, ಖುಷಿ ಖುಷಿಯಾಗಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry