ಪರ್ಯಾಯ ಬೆಳೆ ಜಿಜ್ಞಾಸೆಯಲ್ಲಿ ರೈತರು

7
ಸತತ ಎರಡು ಬೆಳೆಗಳಿಗೆ ಹಿನ್ನಡೆ ರೈತರಿಗೆ ಆರ್ಥಿಕ ನಷ್ಟ

ಪರ್ಯಾಯ ಬೆಳೆ ಜಿಜ್ಞಾಸೆಯಲ್ಲಿ ರೈತರು

Published:
Updated:
ಪರ್ಯಾಯ ಬೆಳೆ ಜಿಜ್ಞಾಸೆಯಲ್ಲಿ ರೈತರು

ಸಂತೇಬೆನ್ನೂರು: ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ. ಸತತ ಎರಡನೇ ಬಾರಿಗೆ ಭತ್ತ ಬೆಳೆಯುವ ರೈತರಿಗೆ ನಾಲೆಯ ನೀರು ಸಿಗುತ್ತಿಲ್ಲ. ಮಳೆಗಾಲದ ಬೆಳೆಗೂ ನೀರು ಬಿಡುವ ಭರವಸೆ ಉಳಿದಿಲ್ಲ. ಹೀಗಾಗಿ ಹೋಬಳಿಯಾದ್ಯಂತ ಪರ್ಯಾಯ ಬೆಳೆಯ ಬಗ್ಗೆ ರೈತರು ಯೋಚಿಸುತ್ತಿದ್ದಾರೆ.

ಕೊಳವೆ ಬಾವಿ ನೀರು ಬಳಕೆಯಿಂದ ಬೆರಳೆಣಿಕೆಯಷ್ಟು ರೈತರು ಭತ್ತ ಬೆಳೆದಿದ್ದಾರೆ. ಉಳಿದಂತೆ ನೀರಿಲ್ಲದೇ ಬಿರುಕು ಬಿಟ್ಟ ಗದ್ದೆ ಸಾಲುಗಳು ಕಾಣಿಸುತ್ತವೆ. ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ನೀರಾವರಿ ಪ್ರದೇಶ ಬರದ ಬವಣೆಯಲ್ಲಿ ನಲುಗಿದೆ.

ಮೆದಿಕೆರೆಯ ರೈತ ಕುಮಾರ್ ಭತ್ತ ಬೆಳೆಯುತ್ತಿದ್ದು, ಪರ್ಯಾಯ ಬೆಳೆಯ ಬಗ್ಗೆ ಜಿಜ್ಞಾಸೆಯಲ್ಲಿದ್ದಾರೆ. ‘ಈ ಭಾಗದಲ್ಲಿ ಭತ್ತ ಬೆಳೆಯುವುದು ರೈತರಿಗೆ ಕರಗತವಾಗಿದೆ. ಇತರ ಬೆಳೆಗಳಿಗೆ ಬದಲಾಯಿಸಿಕೊಳ್ಳುವುದು ಸುಲಭವಲ್ಲ. ಮಳೆಯಾಧಾರಿತ ಬೆಳೆ ಬೆಳೆಯಲು ನವೀನ ವ್ಯವಸಾಯ ಉಪಕರಣಗಳ ಅವಶ್ಯಕತೆ ಇದೆ. ಮೆಕ್ಕೆಜೋಳ ಬೆಳೆಯು ಸಾಧ್ಯವಿದೆ. ಭೂಮಿಯ ಫಲವತ್ತತೆ ಹೆಚ್ಚಿಸಲು ಕೆಲವು ರೈತರು ಅಲಸಂದೆಯಂತಹ ದ್ವಿದಳ ಧಾನ್ಯ ಬಿತ್ತನೆಗೆ ಮುಂದಾಗಿದ್ದಾರೆ’ ಎನ್ನುತ್ತಾರೆ ಅವರು.

ಸತತ ಎರಡು ಭತ್ತದ ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರಲ್ಲಿ ಆರ್ಥಿಕ ಸಂಕಟ ಉಂಟಾಗಿದೆ. ಇತ್ತ ಮಳೆಯಾಧಾರಿತ ಬೆಳೆಯೂ ಇಲ್ಲ. ಮತ್ತೊಂದೆಡೆ ನಾಲೆಯ ನೀರಿನ ಲಭ್ಯತೆಯೂ ಇಲ್ಲ. ಹೀಗಾಗಿ ರೈತರು ಕೈಚೆಲ್ಲುವ ಪರಿಸ್ಥಿತಿಯಿದೆ.

‘ಹೊರ ರಾಜ್ಯಗಳಿಂದ ನಮ್ಮ ಮಾರುಕಟ್ಟೆಗೆ ಅಕ್ಕಿ ಪ್ರವೇಶಿಸಿದೆ. ಅದರ ಗುಣಮಟ್ಟ ನಮ್ಮ ವ್ಯಾಪ್ತಿಯ ಭತ್ತದಷ್ಟು ಇಲ್ಲ. ಜಿಎಸ್‌ಟಿ  ಜಾರಿಯಾಗುತ್ತಿರುವ ಕಾರಣ ಅಕ್ಕಿ ಗಿರಣಿ ಮಾಲೀಕರು ದಾಸ್ತಾನು ಖಾಲಿ ಮಾಡುತ್ತಿದ್ದಾರೆ. ಹಾಗಾಗಿ ಭತ್ತದ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1600ರಿಂದ ₹ 2,100 ಅಂತರದಲ್ಲಿದೆ’ ಎನ್ನುತ್ತಾರೆ ಇಲ್ಲಿನ ವರ್ತಕ ಕೆ.ಸಿರಾಜ್ ಅಹಮದ್‌.

***

2003ರಲ್ಲಿ ಹೀಗೇ ಇತ್ತು

15 ವರ್ಷಗಳಲ್ಲಿ ಎರಡನೇ ಬಾರಿ ಸತತ ಎರಡು ಬೆಳೆಗೆ ಭದ್ರಾ ನಾಲೆ ನೀರು ಹರಿದಿಲ್ಲ. 2003ರಲ್ಲಿ ಇದೇ ಪರಿಸ್ಥಿತಿ ಇತ್ತು ಎಂದು ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಸನ್ನ ನೆನಪಿಸಿಕೊಳ್ಳುತ್ತಾರೆ.

***

ಮಳೆ ಆಧಾರಿತ ಬೆಳೆಯತ್ತ ಚಿತ್ತ

‘ಭತ್ತ ನಾಟಿಗೆ ನಾಲೆಯಲ್ಲಿ ನೀರಿಲ್ಲ. ಭದ್ರಾ ಜಲಾಶಯದ ಒಳಹರಿವು ಗಮನಿಸಲಾಗುತ್ತಿದೆ. ಇನ್ನೂ 15 ದಿನ ಕಾಯಲು ರೈತರು ನಿರ್ಧರಿಸಿದ್ದಾರೆ. ಉತ್ತಮ ಮಳೆಯಾಗದಿದ್ದರೆ ಪರ್ಯಾಯ ಬೆಳೆಗಳಿಗೆ ಮೊರೆ ಹೋಗುವುದು ಅನಿವಾರ್ಯ. ಸದ್ಯ ಕಾದು ನೋಡುತ್ತೇವೆ’ ಎನ್ನುತ್ತಾರೆ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಂಗೇನಹಳ್ಳಿಯ ಲೋಹಿತ್‌ ಕುಮಾರ್‌.

ಸಿರಿಧಾನ್ಯಕ್ಕೆ ಮೊರೆ: ‘ಭೀಮನೆರೆ, ತಣಿಗೆರೆ ವ್ಯಾಪ್ತಿ ಯಲ್ಲಿ ಸಿರಿಧಾನ್ಯ ಬಿತ್ತನೆಗೆ ಮುಂದಾಗಿದ್ದಾರೆ. ಸತತ ಎರಡು ಭತ್ತದ ಬೆಳೆಯಿಂದ ವಂಚಿತರಾಗಿದ್ದೇವೆ. ನಾಲೆಗೆ ನೀರು ಹರಿಯುವ ಮೊದಲು ಕಡಿಮೆ ನೀರಿನಲ್ಲಿ ಬೆಳೆಯುವ ಸಿರಿಧಾನ್ಯ ಬಿತ್ತನೆ ಮಾಡಲಾಗಿದೆ. ಅನೇಕರು ಕೊರಲೆ ಬಿತ್ತನೆ ಮಾಡಲು ಆಸಕ್ತರಾಗಿ

ದ್ದಾರೆ’ ಎನ್ನುತ್ತಾರೆ ಭೀಮನೆರೆ ರೈತ ಸಂಜೀವ ರೆಡ್ಡಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry