ಅಂಧರ ಬಾಳಿಗೆ ಬೆಳಕಾದ ‘ಶಾರದಾ ದೇವಿ’

7
ರಾಜ್ಯದ ವಿವಿಧ ಭಾಗಗಳ ಅಂಧ ಮಕ್ಕಳಿಗೆ ಆಶ್ರಯ l ವಿದ್ಯಾರ್ಥಿಗಳಿಗೆ ನೃತ್ಯ, ಸಂಗೀತ ಪಾಠ

ಅಂಧರ ಬಾಳಿಗೆ ಬೆಳಕಾದ ‘ಶಾರದಾ ದೇವಿ’

Published:
Updated:
ಅಂಧರ ಬಾಳಿಗೆ ಬೆಳಕಾದ ‘ಶಾರದಾ ದೇವಿ’

ಶಿವಮೊಗ್ಗ:  ಗೋಪಾಳದ ಶಾರದಾ ದೇವಿ ಅಂಧರ ವಿಕಾಸ ಕೇಂದ್ರ ಅಂಧ ಮಕ್ಕಳ ಬಾಳಿಗೆ ಬೆಳಕಾಗಿದೆ.

1986ರಲ್ಲಿ ಒಬ್ಬ ಅಂಧ ವಿದ್ಯಾರ್ಥಿಯಿಂದ ಆರಂಭವಾದ ಸಂಸ್ಥೆ ಪ್ರಸ್ತುತ 100 ಮಕ್ಕಳಿಗೆ ಉಚಿತ ಆಶ್ರಯ, ವಿದ್ಯೆ, ವೈದ್ಯಕೀಯ ಸೌಲಭ್ಯ ಕಲ್ಪಿಸಿಕೊಟ್ಟಿದೆ. ರಾಜ್ಯದ ವಿವಿಧ ಭಾಗಗಳ ಅಂಧ ಮಕ್ಕಳು ಇಲ್ಲಿ ಆಶ್ರಯ ಪಡೆದಿದ್ದಾರೆ.

ಇದು ಆಂಗ್ಲ ಮಾಧ್ಯಮ ಶಾಲೆ. ಒಟ್ಟು 12 ಶಿಕ್ಷಕರು ಕಾರ್ಯನಿರ್ವಹಿಸುತ್ತಾರೆ. ಬೆಳಿಗ್ಗೆ 9.30ಕ್ಕೆ ಶಾಲೆ ಆರಂಭವಾಗುತ್ತದೆ.  ದಿನಪ್ರತಿಕೆಗಳಲ್ಲಿ ಪ್ರಕಟ ಗೊಂಡ ಪ್ರಮುಖ ಸುದ್ದಿಯನ್ನು ಮೊದಲ 20 ನಿಮಿಷಗಳ ಕಾಲ ಮಕ್ಕಳಿಗೆ ಓದಿ ಹೇಳಲಾಗುತ್ತದೆ. ನಂತರ ಅವರ ದೈನಂದಿನ ಶಾಲಾ ಚಟುವಟಿಕೆ ಆರಂಭವಾಗುತ್ತದೆ.

ಮಕ್ಕಳು ಶ್ರದ್ಧೆ, ಆಸಕ್ತಿಯಿಂದ ಎಲ್ಲ ಚಟುವಟಿಕೆಗಳಲ್ಲೂ ತೊಡಗಿ ಕೊಳ್ಳುತ್ತಾರೆ. ಶಾಲೆಯು ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆಯುತ್ತಿದೆ. 2012–13ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಬ್ಬರು ಮಕ್ಕಳು ಕ್ರಮವಾಗಿ ಶೇ 96 ಮತ್ತು ಶೇ 92 ಫಲಿತಾಂಶ ಪಡೆದಿದ್ದರು. ವಸತಿ ಶಾಲೆಯಲ್ಲಿನ  ಮಕ್ಕಳು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಾರೆ. ಇದಕ್ಕೆ ಅವರಿಗೆ ಅಗತ್ಯ ತರಬೇತಿಯನ್ನು ನೀಡಲಾಗುತ್ತಿದೆ.

ಒಂದು ಕೋಣೆಗೆ ಒಬ್ಬ ಮಾರ್ಗದರ್ಶಕರು ಇರುತ್ತಾರೆ. ಮಕ್ಕಳ ದಿನ ನಿತ್ಯದ ಕೆಲಸಗಳಿಗೆ ಅವರು ಸಹಾಯ ಮಾಡುತ್ತಾರೆ. ವಾರಕ್ಕೊಮ್ಮೆ ಮಕ್ಕಳನ್ನು ನೋಡಲು ಪೋಷಕರಿಗೆ ಅವಕಾಶ ಕಲ್ಪಿಸಲಾಗಿದೆ.

ಪಠ್ಯೇತರ ಚಟುವಟಿಕೆಗೂ ಆದ್ಯತೆ: ಶಾಲೆಯಲ್ಲಿ ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಾದ ನೃತ್ಯ, ಸಂಗೀತ, ವಾದ್ಯ ನುಡಿಸುವುದು, ಕೋಲಾಟ, ಯಕ್ಷಗಾನವನ್ನು ಹೇಳಿಕೊಡಲಾಗುತ್ತದೆ.ಯೋಗಾಸನ, ವ್ಯಾಯಾಮ ತರಬೇತಿ ನೀಡಲಾಗುತ್ತದೆ. ಆದ್ಯಾತ್ಮಿಕ ಚಟುವಟಿಕೆಗಳಾದ ಸತ್ಸಂಗ, ಭಜನೆ, ಧ್ಯಾನ ಶಿಬಿರಗಳನ್ನೂ ಆಯೋಜಿಸಲಾಗುತ್ತದೆ.

ಕ್ರಿಕೆಟ್‌ ತರಬೇತಿ:  ಅಂಧ ಮಕ್ಕಳಿಗೆ ವಿಶೇಷವಾದ ಕ್ರಿಕೆಟ್‌ ತರಬೇತಿ ನೀಡಲಾಗುತ್ತದೆ. ಶಬ್ದ ಹೊರಸೂಸುವ ಚೆಂಡು ಬಳಕೆ ಮಾಡುವುದರಿಂದ ಅದು ಯಾವ ಕಡೆ ಹೋಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಕ್ರೀಡಾಪಟುಗಳಿಗೆ ಅನುಕೂಲವಾಗುತ್ತದೆ. ವಿಕೆಟ್‌ನಲ್ಲೂ ಇದೇ ರೀತಿಯ ತಂತ್ರಜ್ಞಾನ ಬಳಸಲಾಗುತ್ತದೆ. ಇದರಿಂದ ಅಂಧ ಮಕ್ಕಳಿಗೆ ಕ್ರಿಕೆಟ್‌ ಆಡಲು ಸುಲಭವಾಗುತ್ತದೆ. ಚೆಸ್‌ ಆಟವನ್ನೂ ಹೇಳಿಕೊಡಲಾಗುತ್ತದೆ. ಮಕ್ಕಳು  ಉತ್ಸುಕರಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ, ಸ್ಪರ್ಧೆಗಳಲ್ಲಿ ಹಲವು ಬಹುಮಾನ ಪಡೆದಿದ್ದಾರೆ.

ಸ್ವಾವಲಂಬಿ ಜೀವನಕ್ಕೆ ತರಬೇತಿ:  ಅಂಧ ಮಕ್ಕಳು ವಿದ್ಯಾಭ್ಯಾಸದ ನಂತರ ಸ್ವಾವಲಂಬಿ ಜೀವನ ಸಾಗಿಸಲು ಅವರಿಗೆ ಫಿನಾಯಿಲ್‌, ಸೋಪ್‌ ಆಯಿಲ್‌, ಪ್ಲಾಸ್ಟಿಕ್‌ ವಸ್ತುಗಳ ತಯಾರಿಕೆ, ಹೈನುಗಾರಿಕೆ ನಿರ್ವಹಣೆ, ಕಂಪ್ಯೂಟರ್‌ ಶಿಕ್ಷಣ, ಕೃಷಿ ಹಾಗೂ ತೋಟಗಾರಿಕೆ ಗಳಲ್ಲಿ ತರಬೇತಿ ನೀಡಲಾಗುತ್ತಿದೆ. ತರಬೇತಿ ನಂತರ ಜೀವನ ನಿರ್ವಹಣೆ ಮಾಡಲು ಸಹಕಾರಿಯಾಗುತ್ತಿದೆ.

ಇಲ್ಲಿ ಕಲಿತ ಮಕ್ಕಳು ಮುಂದೆ ವಿದ್ಯಾಭ್ಯಾಸ ಮುಂದುವರಿಸಿ ಹಲವು ಶಾಲೆ–ಕಾಲೇಜುಗಳಲ್ಲಿ ಶಿಕ್ಷಕರಾಗಿ, ಸಂಗೀತ ವಿದ್ವಾಂಸರಾಗಿ, ಪ್ರಾಂಶುಪಾಲ ರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ವಿದ್ಯಾರ್ಥಿಗಳು ಏನಂತಾರೆ?: ಎಸ್ಸೆಸ್ಸೆಲ್ಸಿ ಪೂರೈಸಿದ ವಿದ್ಯಾರ್ಥಿಗಳಲ್ಲಿ ಕೆಲವರು ಶಿಕ್ಷಣ ಮುಂದುವರಿಸಿಲ್ಲ. ಎಲ್ಲರಿಗೂ ಶಿಕ್ಷಣ ಮುಂದುವರಿಸಲು ಅವಕಾಶವಾಗ ಬೇಕು. ಬೇರೆ ಮಕ್ಕಳಿಗೂ ವಿದ್ಯೆ ಕಲಿಸು ವಂತಾಗಬೇಕು ಎಂದು ವಿದ್ಯಾರ್ಥಿ ಅಕ್ಷಯ್ ಅಭಿಪ್ರಾಯಪಟ್ಟರು.

ಶಾಲೆಯಲ್ಲಿ ಎಲ್ಲಾ ರೀತಿಯ ಸೌಲಭ್ಯ ನೀಡಿದ್ದಾರೆ. ಶಿಕ್ಷಕರು ಹೆಚ್ಚಿನ ಕಾಳಜಿ ವಹಿಸುತ್ತಾರೆ. ಎಲ್ಲಾ ವಿಷಯಗಳನ್ನೂ ಕಲಿಸುತ್ತಾರೆ ಎಂದು ವಿದ್ಯಾರ್ಥಿ ಹರೀಶ್ ಕೃತಜ್ಞತೆ ಸಲ್ಲಿಸಿದರು. ಅಂಧ ಮಕ್ಕಳು ಸಾಮಾನ್ಯರಂತೆ ಜೀವನ ಸಾಗಿಸಲು ಬೇಕಾಗುವ ಎಲ್ಲಾ ರೀತಿಯ ತರಬೇತಿ ಯನ್ನು ಈ ಶಾಲೆಯಲ್ಲಿ ನೀಡಲಾಗುತ್ತಿದೆ ಎಂದು ಮಂಜುನಾಥ್ ಶ್ಲಾಘಿಸಿದರು.

***

ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ಅಂಧ ಮಕ್ಕಳು   ವಿವೇಕಾನಂದರ ಆದರ್ಶ ಅಳವಡಿಸಿ ಕೊಂಡು ಸ್ವಾವಲಂಬಿ ಬದುಕು ನಡೆಸುತ್ತಿರುವುದು ಹೆಮ್ಮೆಯ ಸಂಗತಿ

– ಈಶ್ವರ್‌ ಭಟ್, ಆಡಳಿತಾಧಿಕಾರಿ, ಶಾರದ ದೇವಿ ಅಂಧರ ವಿಕಾಸ ಕೇಂದ್ರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry