ಎಟಿಎಂನಲ್ಲಿ ಹಣ ಖಾಲಿ: ತಪ್ಪದ ಪರದಾಟ

7

ಎಟಿಎಂನಲ್ಲಿ ಹಣ ಖಾಲಿ: ತಪ್ಪದ ಪರದಾಟ

Published:
Updated:
ಎಟಿಎಂನಲ್ಲಿ ಹಣ ಖಾಲಿ: ತಪ್ಪದ ಪರದಾಟ

ಚಿಂತಾಮಣಿ: ನಗರದಲ್ಲಿರುವ ಕೆಲವು ಎಟಿಎಂಗಳು ಹಣದ ಕೊರತೆಯಿಂದಾಗಿ ಮುಚ್ಚಿದ್ದರೆ, ಇನ್ನುಳಿದ ಎಟಿಎಂಗಳ ಮುಂದೆ ‘ನೋ ಕ್ಯಾಷ್‌’ ಫಲಕಗಳನ್ನು ನೇತು ಹಾಕಲಾಗಿದೆ. ಯಾವ ಎಟಿಎಂ ಗಳಿಗೆ ಹೋದರೂ ಹಣವಿಲ್ಲ ಎಂದು ಗ್ರಾಹಕರು ಗೊಣಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಗರಿಷ್ಠ ಮುಖಬೆಲೆಯ ನೋಟು ಅಮಾನ್ಯೀಕರಣ ಆಗಿ 8 ತಿಂಗಳು ಕಳೆದರೂ ಎಟಿಎಂ ಗಳು ಸಾಮಾನ್ಯ ಪರಿಸ್ಥಿತಿಗೆ ತಲುಪಿಲ್ಲ. ನಗರದ ಕೆನರಾ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಆಕ್ಸಿಸ್‌ ಬ್ಯಾಂಕ್‌, ಕರ್ನಾಟಕ ಬ್ಯಾಂಕ್‌, ಕಾರ್ಪೋರೇಷನ್‌ ಬ್ಯಾಂಕ್‌, ವಿಜಯಾ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಸೇರಿದಂತೆ ವಿವಿಧ ಬ್ಯಾಂಕುಗಳ ಎಟಿಎಂಗಳ ಮುಂದೆ ‘ನೋ ಕ್ಯಾಷ್‌’  ಫಲಕ ನೇತಾಡುತ್ತಿದೆ.

ಆಸ್ಪತ್ರೆಗಳು, ದೂರದ ಊರುಗಳಿಗೆ ಪ್ರಯಾಣ, ದೈನಂದಿನ ಖರ್ಚು ವೆಚ್ಚ ವಿವಿಧ ಉದ್ದೇಶಗಳಿಗಾಗಿ ಹಣ ಪಡೆದುಕೊಳ್ಳುತ್ತಿದ್ದ ಗ್ರಾಹಕರು, ಒಂದು ಎಟಿಎಂ ನಿಂದ ಮತ್ತೊಂದು ಎಟಿಎಂ ಸುತ್ತಾಡಿದರೂ  ಹಣವನ್ನು ತೆಗೆಯಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

‘ಬ್ಯಾಂಕುಗಳಲ್ಲಿ ಹಣವನ್ನು ಡ್ರಾ ಮಾಡುವ ಮಿತಿಯನ್ನು ಸಡಿಲಗೊಳಿಸಿದ ನಂತರ ಸಮಸ್ಯೆಗಳು ಬಗೆಹರಿಯುವ ಜನರ ಆಶಾಭಾವನೆ ದೂರವಾಗಿದೆ. ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರ ಹಾಗೂ ಜನವಿರೋಧಿ ನೀತಿಯಿಂದಾಗಿ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ಮಹಿಳಾ ಹೋರಾಟಗಾರ್ತಿ ನಂದಿನಿ ತಿಳಿಸಿದ್ದಾರೆ.

ಬ್ಯಾಂಕುಗಳು ಬೆಳಿಗ್ಗೆ 10.30 ಗಂಟೆಗೆ ಬಾಗಿಲು ತೆರೆದು ಕಾರ್ಯನಿರ್ವಹಿಸುತ್ತವೆ. ಅಲ್ಲಿ ಹೋಗಿ ಸರತಿ ಸಾಲಿನಲ್ಲಿ ನಿಂತು ಹಣ ಡ್ರಾ ಮಾಡಿಕೊಂಡು ಕೆಲಸ ಕಾರ್ಯಗಳಿಗೆ ಹೋಗುವುದು ದುಸ್ಸಾಹಸದ ಕೆಲಸವಾಗಿದೆ.

‘ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಕಪ್ಪು ಕುಳಗಳನ್ನು ಮಟ್ಟ ಹಾಕಲು ಹಾಗೂ ನಕಲಿ ನೋಟುಗಳ ಹಾವಳಿಯನ್ನು ತಡೆಗಟ್ಟುವ ನೆಪದಲ್ಲಿ ಜನಸಾಮಾನ್ಯರಿಗೆ ತೊಂದರೆ ಕೊಡುವುದು ಸರಿಯಲ್ಲ. ಬ್ಯಾಂಕುಗಳಿಗೆ ಅಗತ್ಯವಾಗಿರುವಷ್ಟು ಹಣವನ್ನು ಪೂರೈಕೆ ಮಾಡಬೇಕು. ಎಲ್ಲ ಎಟಿಎಂ ಗಳನ್ನು ತೆರೆದು ಎಲ್ಲ ಸಮಯದಲ್ಲೂ ಹಣ ದೊರೆಯುವಂತೆ ಮಾಡಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಗೋಪಿನಾಥ್‌ ಒತ್ತಾಯಿಸಿದ್ದಾರೆ.

‘ಕೇಂದ್ರ ಸರ್ಕಾರ ನೋಟ್‌ ಬ್ಯಾನ್‌ ಮಾಡಿದಾಗಿನಿಂದಲೂ ಸಾಮಾನ್ಯ ಜನರೇ ತೊಂದರೆ ಅನುಭವಿಸುತ್ತಿದ್ದಾರೆ.  ಕಪ್ಪು ಹಣ ಹೊಂದಿರುವವರು ಆರಾಮವಾಗಿ ತಿರುಗಾಡಿಕೊಂಡು ತಮ್ಮ ಹಣವನ್ನು ಬದಲಾವಣೆ ಮಾಡಿಕೊಂಡರು. ಕೇಂದ್ರ ಸರ್ಕಾರದ ನೋಟುಗಳ ಅಮಾನ್ಯೀಕರಣ ಕ್ರಮವು ಬೆಟ್ಟ ಅಗೆದು ಇಲಿಯನ್ನು ಹಿಡಿದಂತಾಗಿದೆ’ ಎಂದು ಸಿಪಿಎಂ ಮುಖಂಡ ಡಾ.ಅನಿಲ್‌ ಟೀಕಿಸಿದ್ದಾರೆ.

* * 

ಎಟಿಎಂ ಗಳಿಗೆ ಹಣ ಪೂರೈಕೆ ಮಾಡಲಾಗದ ಕೇಂದ್ರ ಸರ್ಕಾರ ನಗದು ರಹಿತ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ

ಎನ್‌.ವೆಂಕಟೇಶ್‌

ದಲಿತ ಸಂಘರ್ಷ ಸಮಿತಿ ಮುಖಂಡ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry