ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯ ವಿವಾಹವಾಗಿದ್ದ ಹುಡುಗಿ ಅತ್ತೆ ಮನೆಯಲ್ಲೇ ಓದಿ ನೀಟ್ ಪರೀಕ್ಷೆ ತೇರ್ಗಡೆಯಾದಳು!

Last Updated 1 ಜುಲೈ 2017, 20:32 IST
ಅಕ್ಷರ ಗಾತ್ರ

ರಾಜಸ್ಥಾನ: 8 ವರ್ಷದ ರೂಪಾ ಮೂರನೇ ಕ್ಲಾಸಿನಲ್ಲಿದ್ದಾಗ 12 ವರ್ಷದ ಬಾಲಕ ಶಂಕರ್ ಲಾಲ್ ಜತೆ ವಿವಾಹವಾಗಿತ್ತು. ಭಾರತದಲ್ಲಿ ಬಾಲ್ಯ ವಿವಾಹ ಕಾನೂನು ಅಪರಾಧವಾಗಿದ್ದರೂ ರಾಜಸ್ಥಾನದ ಗ್ರಾಮೀಣ ಪ್ರದೇಶದ ಜನರಲ್ಲಿ ಬಾಲ್ಯ ವಿವಾಹ ಪದ್ದತಿ ಇಂದಿಗೂ ಚಾಲ್ತಿಯಲ್ಲಿದೆ.

ರೂಪಾ ಯಾದವ್ ಅವರ ಅಕ್ಕ ರುಕ್ಮಾ ದೇವಿ ಶಂಕರ್ ಲಾಲ್ ಅವರ ಅಣ್ಣನನ್ನು ವರಿಸಿದ್ದರು.

ಮೂರನೇ ಕ್ಲಾಸಿನಲ್ಲಿ ಕಲಿಯುತ್ತಿದ್ದ ರೂಪಾ 10ನೇ ತರಗತಿ ಪರೀಕ್ಷೆ ಬರೆದ ನಂತರವೇ ಗಂಡನ ಮನೆಗೆ ಹೋಗಿದ್ದು. ಹತ್ತನೇ ತರಗತಿಯಲ್ಲಿ ಶೇ. 84 ಅಂಕ ಗಳಿಸಿದ್ದ ರೂಪಾ, ಪರೀಕ್ಷೆ ಫಲಿತಾಂಶ ಪ್ರಕಟವಾದಾಗ ಅತ್ತೆ ಮನೆಯಲ್ಲಿದ್ದರು.

ರೂಪಾ ಅವರ ಗಂಡನ ಮನೆ ಇದ್ದ ಊರಲ್ಲಿ ಯಾವುದೇ ಶಾಲೆ ಇರಲಿಲ್ಲ. ಆದರೆ ರೂಪಾಳಿಗೆ ಕಲಿಕೆ ಮುಂದುವರಿಸಬೇಕೆಂಬ ಆಸೆ. ಈಕೆಯ ಆಸೆಗೆ ಸಾಥ್ ನೀಡಿದ ಗಂಡನ ಮನೆಯವರು 6 ಕಿಮೀ ದೂರದಲ್ಲಿರುವ ಖಾಸಗಿ ಶಾಲೆಗೆ ಈಕೆಯನ್ನು ಸೇರಿಸಿದ್ದಾರೆ.

12ನೇ ತರಗತಿಯಲ್ಲಿ ಉತ್ತಮ ಅಂಕಗಳಿಸಿದ್ದ ಈಕೆ ಬಿಎಸ್ಸಿ ಪದವಿ ಪೂರೈಸಿ ಆಲ್ ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್ (AIPMT) ಬರೆದಿದ್ದಾರೆ. ಆದರೆ ಅದರಲ್ಲಿ 23,000 ರ‍್ಯಾಂಕ್‌‌ ಬಂದ ಕಾರಣ ಎಂಬಿಬಿಎಸ್ ಸೀಟು ಸಿಗಲಿಲ್ಲ.

ಪರೀಕ್ಷೆಯಲ್ಲಿ ಗೆಲ್ಲಬೇಕಾದರೆ ಕೋಟಾಗೆ ಹೋಗಿ ತರಬೇತಿ ಪಡೆಯಿರಿ ಎಂದು ಕೆಲವರು ಸಲಹೆ ನೀಡಿದ್ದರು. ಆದರೆ ಅತ್ತೆ ಮನೆಯಲ್ಲಿ ಇದಕ್ಕೆ ಅನುಮತಿ ನೀಡುತ್ತಾರೋ ಇಲ್ಲವೋ ಎಂಬ ಭಯ ಇತ್ತು ನನಗೆ ಅಂತಾರೆ ರೂಪ.

ನನ್ನನ್ನು ಕೋಟಾಗೆ ತರಬೇತಿ ಕಳಿಸಲು ನನ್ನ ಪತಿ ಮತ್ತು ಅವರ ಅಣ್ಣ ಒಪ್ಪಿದರು. ನನ್ನ ಖರ್ಚು ವೆಚ್ಚವನ್ನುಭರಿಸಲು ಅವರಿಬ್ಬರೂ ಆಟೋ ರಿಕ್ಷಾ ಓಡಿಸಿದರು.  2016ರಲ್ಲಿ ಉತ್ತಮವಾಗಿ ಪರೀಕ್ಷೆ ಬರೆದರೂ ಮೆಡಿಕಲ್ ಕಾಲೇಜಿನಲ್ಲಿ ಸೀಟು ಗಿಟ್ಟಿಸಲು ಅದು ಸಾಕಾಗಲಿಲ್ಲ.

ಇನ್ನೊಂದು ವರ್ಷ ಕೋಟಾದಲ್ಲಿ ತರಬೇತಿಗೆ ಕಳುಹಿಸಲು ಕುಟುಂಬ ಒಪ್ಪಿಗೆ ನೀಡುವ ಸಾಧ್ಯತೆಯೂ ಇರಲಿಲ್ಲ.

ಸೊಸೆಯನ್ನು ಕಲಿಯಲು ಕಳುಹಿಸುತ್ತಿರುವುದನ್ನು ಕಂಡ ಊರವರು ಮದುವೆಯಾಗಿ ಬಂದ ಹುಡುಗಿ ಮನೆಗೆಲಸ ಮಾಡಿಕೊಂಡು ಗಂಡನನ್ನು ನೋಡಿಕೊಳ್ಳಬೇಕು ಎಂದು ಮೂಗು ತೂರಿಸುತ್ತಿದ್ದರು. ಆದರೆ ನನ್ನ ಗಂಡನಿಗೆ ನನ್ನ ಮೇಲೆ ಭರವಸೆ ಇತ್ತು.

ಆ ಹೊತ್ತಿಗೆ ಕೋಚಿಂಗ್ ಇನ್ಸಿಟ್ಯೂಟ್ ನನ್ನ ತರಬೇತಿ ಶುಲ್ಕದ ಶೇ.75 ಹಣವನ್ನು ಮನ್ನಾ ಮಾಡಿದ್ದರಿಂದ ಇನ್ನೊಂದು ವರ್ಷ ಅಲ್ಲಿ ಕಲಿಯಲು ನನ್ನನ್ನು ಕಳುಹಿಸುವಂತೆ ನನ್ನ ಗಂಡ  ಮನೆಯವರ ಮನವೊಲಿಸಿದರು.

ಈ ವರ್ಷ ನೀಟ್ ಪರೀಕ್ಷೆ ಬರೆದ ರೂಪಾ 720 ಅಂಕಗಳಲ್ಲಿ 603 ಅಂಕಗಳಿಸಿ ರಾಷ್ಟ್ರ ಮಟ್ಟದಲ್ಲಿ 2, 283 ರ‍್ಯಾಂಕ್‌‌ ಗಳಿಸಿದ್ದಾರೆ. ರಾಜಸ್ಥಾನದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲೇ ನನಗೆ ಸೀಟು ಸಿಗಲಿ ಎಂದು ಪ್ರಾರ್ಥಿಸುತ್ತಿದ್ದೇನೆ ಎನ್ನುವ ರೂಪಾ, ಕಲಿಕೆಗಾಗಿ ತನ್ನ ಗಂಡ ಮತ್ತು ಅತ್ತೆ ಮನೆಯವರು ಮಾಡಿದ ಸಹಾಯವನ್ನು ಸ್ಮರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT