ಶನಿವಾರ, ಡಿಸೆಂಬರ್ 7, 2019
24 °C

1955ರ ಅಚ್ಚ ಕನ್ನಡದಲ್ಲಿ ಶಾಲಾ ಪ್ರಮಾಣ ಪತ್ರ ಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

1955ರ ಅಚ್ಚ ಕನ್ನಡದಲ್ಲಿ ಶಾಲಾ ಪ್ರಮಾಣ ಪತ್ರ ಲಭ್ಯ

ಬೆಳಗಾವಿ: ಬೆಳಗಾವಿಯಲ್ಲಿ ಕನ್ನಡ ಭಾಷೆಯ ಬಳಕೆ ಹಲವಾರು ವರ್ಷಗಳಿಂದ ಇದೆ ಎನ್ನುವುದಕ್ಕೆ ದಾಖಲೆಗಳನ್ನು ಸಂಗ್ರಹಿಸುತ್ತಿರುವ ರಾಜ್ಯ ವಕೀಲರ ಸಾಹಿತ್ಯ ಪರಿಷತ್ತಿಗೆ, 1955ರ ಜೂನ್‌ 3 ರಲ್ಲಿ ಕನ್ನಡ ಭಾಷೆಯಲ್ಲಿ ನೀಡಲಾಗಿದ್ದ ಶಾಲೆ ಬಿಟ್ಟ ಪ್ರಮಾಣ ಪತ್ರವು (ಎಲ್‌.ಸಿ) ದೊರೆತಿದೆ.

ಬೆಳಗಾವಿಯವರೇ ಆದ ಚಂದ್ರಪ್ಪ ಶಂಕರೆಪ್ಪ ಕುಪಾಟಿ ಅವರು 7ನೇ ತರಗತಿಯನ್ನು ಇಲ್ಲಿನ ಖಾಸಬಾಗದಲ್ಲಿರುವ 3ನೇ ಸಂಖ್ಯೆಯ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ತೇರ್ಗಡೆಯಾದ ನಂತರ 1955ರ ಮೇ 31ರಂದು 3 ಸಂಖ್ಯೆಯ ಶಾಲೆಯನ್ನು ಬಿಟ್ಟಿದ್ದರು.

ಇದಕ್ಕೆ ಸಂಬಂಧಿಸಿದಂತೆ ಜೂನ್‌ 3 ರಂದು ಶಾಲೆ ಬಿಟ್ಟ ಪ್ರಮಾಣ ಪತ್ರವನ್ನು ಕನ್ನಡದಲ್ಲಿಯೇ ಶಾಲೆಯವರು ನೀಡಿದ್ದು ವಿಶೇಷವಾಗಿದೆ. ಚಂದ್ರಪ್ಪ ಅವರ ಅಣ್ಣನ ಮಗನಾದ ಶ್ರೀಶೈಲ ಬಸವಣ್ಣೆಪ್ಪ ಕುಪಾಟಿ ಅವರು ಪರಿಷತ್ತಿಗೆ ಈ ದಾಖಲೆಯನ್ನು ತಲುಪಿಸಿದ್ದಾರೆ.

ಬೆಳಗಾವಿ ಗಡಿ ವಿವಾದದ ಪ್ರಕರಣವನ್ನು ಇತ್ಯರ್ಥಪಡಿಸುವಂತೆ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿರುವುದರಿಂದ ಕನ್ನಡ ಭಾಷೆಯಲ್ಲಿರುವ ದಾಖಲೆಗಳನ್ನು ಸಂಗ್ರಹಿಸಲು ವಕೀಲರ ಪರಿಷತ್‌ ಮುಂದಾಗಿರುವುದನ್ನು ಸ್ಮರಿಸಬಹುದು.

ಬ್ರಿಟಿಷರ ಆಡಳಿತದಲ್ಲಿಯೇ ಕನ್ನಡ ಶಾಲೆ: ದೇಶ ಸ್ವಾತಂತ್ರ್ಯಗೊಳ್ಳುವ ಪೂರ್ವದಲ್ಲಿ 1838ರ ವೇಳೆಯಲ್ಲಿ ಬ್ರಿಟಿಷರು ಖಾಸಬಾಗದಲ್ಲಿ ಕನ್ನಡ ಶಾಲೆ ನಂಬರ್‌ 1 ಆರಂಭಿಸಿದ್ದರು. ಇದಾದ ನಂತರ 1882ರಲ್ಲಿ ಕನ್ನಡ ಶಾಲೆ ನಂಬರ್‌ 3 ತೆರೆದಿದ್ದರು. ಇವೆಲ್ಲ ಅಂಶಗಳನ್ನು ಗಮನಿಸಿದರೆ 180 ವರ್ಷಗಳ ಹಿಂದೆಯೇ ಈ ಭಾಗದಲ್ಲಿ ಕನ್ನಡ ಭಾಷೆ ಆಡಳಿತ ಭಾಷೆಯಾಗಿತ್ತು ಎಂದು ಶ್ರೀಶೈಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜ್ಯಗಳ ಪುನರ್‌ವಿಂಗಡಣೆಗೂ ಮೊದಲೇ ಚಂದ್ರಪ್ಪ ಅವರಿಗೆ ನೀಡಲಾದ ಶಾಲೆ ಬಿಟ್ಟ ಪ್ರಮಾಣ ಪತ್ರದಲ್ಲಿ ಬಳಸಿರುವ ಭಾಷೆಯು ಅಚ್ಚ ಕನ್ನಡ ಭಾಷೆಯಾಗಿದೆ. ಕೈಬರಹ ಹಾಗೂ ಅಂಕಿ– ಅಂಶಗಳು ಸ್ಪಷ್ಟವಾಗಿವೆ. 

ಅಪರೂಪದ ಈ ಕನ್ನಡ ಪ್ರಮಾಣ ಪತ್ರದ ಮೇಲೆ ಆಗಿನ ತರಗತಿಯ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ತಮ್ಮ ರುಜುಗಳನ್ನು ಕನ್ನಡದಲ್ಲಿಯೇ ಮಾಡಿರುವುದು ವಿಶೇಷ ಸಂಗತಿಯಾಗಿದೆ.

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಕ್ರೋಡೀಕರಿಸುತ್ತಿರುವ ಗಡಿ ರಕ್ಷಣಾ ಆಯೋಗಕ್ಕೆ ಈ ದಾಖಲೆಯನ್ನು ನೀಡುವಂತೆ ಶ್ರೀಶೈಲ ಅವರು ರಾಜ್ಯ ವಕೀಲರ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ತೋಟಿಗೇರ, ಉಪಾಧ್ಯಕ್ಷ ಸುಧೀರ ನಿರ್ವಾಣಿ, ಕುಮಾರ ಸರವದೆ,  ಪ್ರಧಾನ ಕಾರ್ಯದರ್ಶಿಗಳಾದ ಶಿವಾನಂದ ಈರಣಗೌಡ್ರ ಹಾಗೂ ಜಂಟಿ ಕಾರ್ಯದರ್ಶಿಗಳಾದ ಪ್ರಕಾಶ ಚನ್ನಾಳ ಅವರಿಗೆ ಹಸ್ತಾಂತರಿಸಿದ್ದಾರೆ.

ಪ್ರತಿಕ್ರಿಯಿಸಿ (+)