ಶುಕ್ರವಾರ, ಡಿಸೆಂಬರ್ 13, 2019
17 °C

ಇತಿಹಾಸ ಸಾರುವ ಭಂಡಾರ ಬಸದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇತಿಹಾಸ ಸಾರುವ ಭಂಡಾರ ಬಸದಿ

ಶ್ರವಣಬೆಳಗೊಳ: ವಿಶ್ವ ಸಾಂಸ್ಕೃತಿಕ ಭೂಪಟದಲ್ಲಿ ಶ್ರವಣಬೆಳಗೊಳ ಎಂದರೆ ಬಾಹುಬಲಿಯ 58.8 ಅಡಿ ಎತ್ತರದ ಏಕಶಿಲಾ ವಿಗ್ರಹ ಒಂದೆಡೆಯಾದರೆ, ಮತ್ತೊಂದೆಡೆ ನಗರದಲ್ಲಿ ಮೊಟ್ಟ ಮೊದಲು ಸ್ಥಾಪನೆಗೊಂಡ ಭಂಡಾರ ಬಸದಿ ಸ್ಥಾನ ಪಡೆದಿವೆ.

ಶ್ರೀ ಕ್ಷೇತ್ರದಲ್ಲಿ ವಿಂಧ್ಯಾಗಿರಿಯ ಬಾಹುಬಲಿ ಮತ್ತು ಚಂದ್ರಗಿರಿಯ 14 ಪ್ರಾಚೀನ ಬಸದಿ ನೋಡಿ ಪ್ರವಾಸಿಗರು ಪುಳಕಿತರಾಗುತ್ತಾರೆ. ಜತೆಗೆ, ಬೃಹತ್‌ 200 ಕಲ್ಲು ಕಂಬಗಳಿಂದ ನಿರ್ಮಾಣ ಗೊಂಡಿರುವ 3 ಅಂಕಣದ ವಿಶಾಲ ಬಸದಿ ಮತ್ತು ಸುತ್ತಲಿನ ಬೃಹತ್‌ ಕಲ್ಲಿನ ಗೋಡೆಯೂ ನೋಡುಗರ ಗಮನ ಸೆಳೆಯುತ್ತಿದೆ.

ಕ್ರಿ.ಶ.1159ರಲ್ಲಿ ಹೊಯ್ಸಳರ ದೊರೆ ನರಸಿಂಹನ ದಂಡನಾಯಕ ಹುಳ್ಳಮಯ್ಯ ಈ ಬಸದಿ ಕಟ್ಟಿಸಿದ್ದಾನೆ. ಗರ್ಭಗೃಹ, ಸುಖನಾಸಿ, ನವರಂಗ, ಮುಖಮಂಟಪ ಹಾಗೂ ಪ್ರಾಕಾರ ಹೊಂದಿದೆ. ಗರ್ಭಗುಡಿಯ 48 ಅಡಿ ಉದ್ದದ ಅಲಂಕೃತಗೊಂಡ ಹರಿ ಪೀಠದ  ಮೇಲೆ 3X8 1/2 ಅಡಿ ಎತ್ತರದ ಸುಂದರವಾದ 24 ತೀರ್ಥಂಕರರ ಮೂರ್ತಿಗಳಿವೆ.

ತೀರ್ಥಂಕರರ ಪೀಠ ಭಾಗದಲ್ಲಿ ಜಿನ ಲಾಂಛನಗಳಿರುವುದು ತೀರ್ಥಂಕರರನ್ನು ಗುರುತಿಸಲು ಸಹಾ ಯಕವಾಗಿದೆ. ಪ್ರತಿ ಮೂರ್ತಿಗಳ ಅಕ್ಕ– ಪಕ್ಕದಲ್ಲಿ ಆಯಾಯ ತೀರ್ಥಂಕರರ ಯಕ್ಷ, ಯಕ್ಷಿಯರನ್ನು ಕೆತ್ತಲಾಗಿದೆ.

‘ಚತುರ್ವಿಂಶತಿ ತೀರ್ಥಂಕರರ ಬಸ್ತಿ‘ ಎಂಬ ಹೆಸರಿನ ಈ ಜಿನಾಲಯವನ್ನು ‘ಭವ್ಯ ಚೂಡಾಮಣಿ’ ಎಂದು ಹೊಯ್ಸಳರ ಅರಸ ನರಸಿಂಹ ಕರೆದನು. ಹುಳ್ಳರಾಜನು ನರಸಿಂಹ ದೊರೆಯ ಭಂಡಾರಿ ಆಗಿದ್ದರಿಂದ ‘ಭಂಡಾರ ಬಸದಿ‘ ಎಂದೂ ಪ್ರಖ್ಯಾತವಾಯಿತು.

ಈ ಜಿನಾಲಯವನ್ನು ‘ಗೊಮ್ಮಟ ಪುರದ ಭೂಷಣ’ ಎಂದು ಶಾಸನ ವೊಂದರಲ್ಲಿ ಉಲ್ಲೇಖಿಸಲಾಗಿದ್ದು, ಇಲ್ಲಿ 3 ಪ್ರಮುಖ ದ್ವಾರಗಳಿವೆ. ಮಧ್ಯದ ದ್ವಾರದ ಬಾಗಿಲಿನ ಮೇಲೆ ಎರಡೂ ಬದಿಯಲ್ಲಿ ನರ್ತನ ಮಾಡುತ್ತಿರುವ ಸೌಧರ್ಮೇಂದ್ರನ ಅಪರೂಪದ ಉಬ್ಬು ಶಿಲ್ಪವಿದೆ. ತೋರಣದ ಪಾರ್ಶ್ವಗಳಲ್ಲಿ ಗಂಧರ್ವ ದಂಪತಿಗಳಿದ್ದಾರೆ. ಕೆಳಭಾಗದಲ್ಲಿ ವೀರರು, ನರ್ತಕರು, ನರ್ತಕಿಯರು, ಮುನಿಗಳು, ಗಂಧರ್ವರು, ಶ್ರಾವಕರು, ಚಿಕಣಿ ಉಬ್ಬು ಶಿಲ್ಪಗಳಿವೆ’ ಎಂದು ಇತಿಹಾಸ ಸಹಾಯಕ ಪ್ರಾಧ್ಯಾಪಕ ಡಾ.ಅಪ್ಪಣ್ಣ ಎನ್‌.ಹಂಜೆ ಅವರು ಸಮವಸರಣ ಸಂಶೋಧನಾ ಲೇಖನದಲ್ಲಿ ವರ್ಣಿಸಿದ್ದಾರೆ.

ನಾಲ್ಕು ಬಾರಿ ಈ ಬಸದಿ ಜೀರ್ಣೋದ್ಧಾರಗೊಂಡಿದ್ದು, ಸರಸ್ವತಿ ಮಂಟಪ, ಗೋಪುರ, ಪ್ರಾಕಾರ, ಮಾನಸ್ಥಂಬಗಳೆಲ್ಲ ವಿಜಯನಗರ ಕಾಲಕ್ಕೆ ಸೇರಿದೆ. ಭಂಡಾರ ಬಸದಿಯಲ್ಲಿ  ಕ್ರಿ.ಶ.1368ರಲ್ಲಿ ಕೆತ್ತಿಸಿದ ವೀರ ಬುಕ್ಕರಾಯನ ಶಾಸನ, ಕ್ರಿ.ಶ.1159ರ ಭಂಡಾರಿ ಹುಳ್ಳನ ಶಾಸನ, ಕ್ರಿ.ಶ.1165ರ ಸವಣೇರಿಯ ದಾನ ಶಾಸನ, ಕ್ರಿ.ಶ.1278ರ ದೇವರ ವಲ್ಲಭ ದೇವರ ಕಂದಾಯ ಶಾಸನ, 1159ರ ಹುಲ್ಲಪ್ಪನ ದತ್ತಿ ಶಾಸನ ಸೇರಿದಂತೆ ಒಟ್ಟು 5 ಶಾಸನಗಳಿವೆ.

ಚೈತ್ರ ಶುದ್ಧ ಹುಣ್ಣಿಮೆಯಂದು ವಾರ್ಷಿಕ ಜಾತ್ರೆ ನಡೆಯುವಾಗ ನೇಮಿನಾಥ ತೀರ್ಥಂಕರರ ಹಾಗೂ ಅಧಿದೇವತೆ ಕೂಷ್ಮಾಂಡಿನಿಯ ಮಹಾರಥ ಬಸದಿಯ ಸುತ್ತಲೂ ಪ್ರದಕ್ಷಿಣೆ ಹಾಕಲಿದೆ. ಆಗ ಹೋಬಳಿಯ ಎಲ್ಲಾ ಜನರು ಭಾಗವಹಿಸಿ ಹಬ್ಬದಂತೆ ಆಚರಿಸುವುದು ವಿಶೇಷವಾಗಿದೆ.

 

ಪ್ರತಿಕ್ರಿಯಿಸಿ (+)