ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧುಗೆ ವಿಶ್ವ ಪ್ರಶಸ್ತಿ ಜಯದ ಕನಸು

Last Updated 2 ಜುಲೈ 2017, 19:30 IST
ಅಕ್ಷರ ಗಾತ್ರ

ಚೆನ್ನೈ :  ‘ವಿಶ್ವ ಚಾಂಪಿಯನ್‌ ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಳ್ಳುವುದು ನನ್ನ ಮುಂದಿನ ಗುರಿ. ಇದಕ್ಕಾಗಿ ಸಂಪೂರ್ಣ ಪ್ರಯತ್ನ ಹಾಕಿ ಅಭ್ಯಾಸ ನಡೆಸುತ್ತಿದ್ದೇನೆ’ ಎಂದು ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದುಕೊಂಡಿರುವ ಭಾರತದ ಆಟಗಾರ್ತಿ ಪಿ.ವಿ ಸಿಂಧು ಹೇಳಿದ್ದಾರೆ. ಮುಂದಿನ ತಿಂಗಳು ಗ್ಲಾಸ್ಗೋದಲ್ಲಿ ವಿಶ್ವ ಚಾಂಪಿಯನ್‌ಷಿಪ್ ನಡೆಯಲಿದೆ.

‘ಮಹತ್ವದ ಟೂರ್ನಿಗೆ ಸಾಕಷ್ಟು ಸಿದ್ಧತೆ ಯೊಂದಿಗೆ ಕಣಕ್ಕಿಳಿಯುವ ಯೋಜನೆ ರೂಪಿಸಿಕೊಂಡಿದ್ದೇನೆ. ಇದು ಸುಲಭದ ಹಾದಿ ಅಲ್ಲ. ಫಾರ್ಮ್‌ ಮರಳಿ ಪಡೆಯಲು ಕಠಿಣ ಅಭ್ಯಾಸದ ಅವಶ್ಯಕತೆ ಇದೆ’ ಎಂದು ಸಿಂಧು ಹೇಳಿದ್ದಾರೆ. ಭಾರತದ ಆಟಗಾರ್ತಿ ಬಿಡಬ್ಲ್ಯುಎಫ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ ಐದನೇ ಸ್ಥಾನ ದಲ್ಲಿದ್ದಾರೆ. 2014 ಮತ್ತು 2013ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸಿಂಧು ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

‘ರಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೇಲೆ ನನ್ನ ಮೇಲಿನ ನಿರೀಕ್ಷೆ ಹೆಚ್ಚಿದೆ. ಆ ಬಳಿಕ ಇಂಡಿಯಾ ಓಪನ್ ಹಾಗೂ ಚೀನಾ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದೇನೆ. ಮುಂದಿನ ದಿನಗಳಲ್ಲಿ ನನ್ನ ಜವಾಬ್ದಾರಿ ಇನ್ನೂ ಹೆಚ್ಚಿದೆ’ ಎಂದು ಸಿಂಧು ಹೇಳಿದ್ದಾರೆ. ‘ಗೋಪಿಚಂದ್ ಅವರಂತಹ ಕೋಚ್ ಸಿಕ್ಕಿದ್ದು ನನ್ನ ಅದೃಷ್ಟ. ಸಾಕಷ್ಟು ವರ್ಷದಿಂದ ಅವರ ಬಳಿ ಕಲಿತಿದ್ದೇನೆ. ಎಲ್ಲಾ ಆಟಗಾರರಿಗೂ ಅವರಲ್ಲಿ ಸಾಕಷ್ಟು ಗೌರವ ಇದೆ. ಇಂಡೊನೇಷ್ಯಾದ ಕೋಚ್ ಕೂಡ ನಮಗೆ ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ಸಾಕಷ್ಟು ಹೊಸ ತಂತ್ರಗಳನ್ನು ಹೇಳಿಕೊಟ್ಟಿದ್ದಾರೆ. ಇದು ನನಗೆ ನೂತನ ಅನುಭವಗಳನ್ನು ನೀಡಿದೆ’ ಎಂದು ಸಿಂಧು ಹೇಳಿದ್ದಾರೆ.

‘ಪುರುಷರ ವಿಭಾಗದಲ್ಲೂ ಸಾಕಷ್ಟು ಉತ್ತಮ ಪ್ರಯತ್ನಗಳು ನಡೆಯುತ್ತಿವೆ. ಇಂಡೊನೇಷ್ಯಾ ಹಾಗೂ ಆಸ್ಟ್ರೇಲಿಯಾ ಓಪನ್‌ನಲ್ಲಿ ಕಿದಂಬಿ ಶ್ರೀಕಾಂತ್‌ ಪ್ರಶಸ್ತಿ ಗೆದ್ದರೆ, ಪ್ರಣೀತ್‌ ಕೂಡ ಉತ್ತಮವಾಗಿ ಆಡಿದ್ದಾರೆ. ಕಠಿಣ ಪರಿಶ್ರಮದಿಂದಾಗಿ ಅವರಿಗೆ ಯಶಸ್ಸು ಸಿಕ್ಕಿದೆ’ ಎಂದು ಸಿಂಧು ಅಭಿಪ್ರಾಯಪಟ್ಟಿದ್ದಾರೆ.

‘ಭಾರತದ ಬ್ಯಾಡ್ಮಿಂಟನ್‌ ಆಟಗಾರರಿಗೆ ವಿಶ್ವ ಮಟ್ಟದಲ್ಲಿ ಮನ್ನಣೆ ಸಿಗುತ್ತಿದೆ. ನಮ್ಮ ಆಟಗಾರರು ಹೆಚ್ಚಿನ ಜವಾಬ್ದಾರಿಯಿಂದ ಆಡುತ್ತಿದ್ದಾರೆ.  ಇದಕ್ಕಾಗಿ ಕೋಚ್‌ಗಳು ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ. ‘ನಾನು ಹಾಗೂ ಸೈನಾ ನೆಹ್ವಾಲ್‌ ಕಣದಲ್ಲಿ ಇದ್ದಾಗ ಎದುರಾಳಿಗಳು, ಬ್ಯಾಡ್ಮಿಂಟನ್ ಕೋರ್ಟ್‌ನಿಂದ ಆಚೆಗೆ ಬಂದರೆ ಉತ್ತಮ ಸ್ನೇಹಿತರು. ಅವರು ಬೆಂಗಳೂರಿನಲ್ಲಿ ಅಭ್ಯಾಸ ಮಾಡುತ್ತಿದ್ದರೆ ನಾನು ಹೈದರಾಬಾದ್‌ನಲ್ಲಿ ಇದ್ದೇನೆ. ಟೂರ್ನಿಗಳಲ್ಲಿ ಮಾತ್ರ ಭೇಟಿ ಯಾಗು ತ್ತೇವೆ. ಇಬ್ಬರದೂ ಭಿನ್ನ ಶೈಲಿಯ ಆಟ. ಪಂದ್ಯದಲ್ಲಿ ಮುಖಾಮುಖಿಯಾದಾಗ  ಗೆಲ್ಲುವುದಕ್ಕಾಗಿ ಹೋರಾಡುತ್ತೇವೆ’ ಎಂದು  ಅವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT