ಶುಕ್ರವಾರ, ಡಿಸೆಂಬರ್ 6, 2019
19 °C

ಕೆರೆ ಪುನಶ್ಚೇತನಕ್ಕೆ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆರೆ ಪುನಶ್ಚೇತನಕ್ಕೆ ಜಾಥಾ

ಬೆಂಗಳೂರು: ನೇತ್ರಾ ಟ್ರಸ್ಟ್, ಜೀವನ್‌ಬಿಮಾನಗರ ರೋಟರಿ ಕ್ಲಬ್ ಹಾಗೂ ಇಂಟೆಲ್ ಕಂಪೆನಿಯ ಆಶ್ರಯದಲ್ಲಿ ‘ದೊಡ್ಡನೆಕ್ಕುಂದಿ ಕೆರೆಯ ಪುನರುಜ್ಜೀವನಕ್ಕಾಗಿ ಕಾಲ್ನಡಿಗೆ ಜಾಥಾ’ವನ್ನು (ಲೇಕಥಾನ್‌) ಭಾನುವಾರ ಹಮ್ಮಿಕೊಳ್ಳಲಾಗಿತ್ತು.

ವಿಜ್ಞಾನನಗರ, ಮಾರತ್ತಹಳ್ಳಿ, ದೊಡ್ಡನೆಕ್ಕುಂದಿ, ಮತ್ತು ಸಿ.ವಿ.ರಾಮನ್‌ ನಗರದ ನೂರಾರು ಮಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

ನೇತ್ರಾ ಟ್ರಸ್ಟ್‌ನ ಅಧ್ಯಕ್ಷ ಚೆನ್ನಿಯಪ್ಪನ್ ಮಾತನಾಡಿ, ‘ಕೆರೆ ಸುತ್ತಮುತ್ತಲಿನ ಪ್ರದೇಶಗಳ ಆರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಸೇರಿಕೊಂಡು ನೇತ್ರಾ ಟ್ರಸ್ಟ್‌ ಸ್ಥಾಪಿಸಿವೆ. ಈ ಟ್ರಸ್ಟ್‌ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಕೆರೆ ಅಭಿವೃದ್ಧಿ ಪಡಿಸುವ ಕಾರ್ಯದಲ್ಲಿ ತೊಡಗಿದೆ’ ಎಂದರು.

‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ₹10.5 ಕೋಟಿ ವೆಚ್ಚದಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಿದೆ. ದಂಡೆ, ಕೆರೆ ಮಧ್ಯ ಭಾಗದಲ್ಲಿ ಎರಡು ದ್ವೀಪಗಳು, ನಡಿಗೆ ಪಥವನ್ನು ನಿರ್ಮಿಸಿದೆ. ಕೆರೆಗೆ ಸೇರುತ್ತಿರುವ ಕೊಳಚೆ ನೀರನ್ನು ಶುದ್ಧೀಕರಿಸಲು ಘಟಕ (ಎಸ್‌ಟಿಪಿ) ಸ್ಥಾಪನೆ ಹಾಗೂ ಹಸಿರೀಕರಣ ಮಾಡಲು ಇಂಟೆಲ್‌ ಸಂಸ್ಥೆಯು ₹8 ಲಕ್ಷ ಸಹಾಯಧನ ನೀಡಿದೆ’ ಎಂದು ತಿಳಿಸಿದರು.

‘ಕೆರೆ ಸುತ್ತಲೂ ಗಿಡಗಳನ್ನು ನೆಡುವುದು, ತಂತಿಬೇಲಿ ಅಳವಡಿಕೆ, ಸೋಲಾರ್‌ ದೀಪಗಳ ಅಳವಡಿಕೆ, ಮಕ್ಕಳ ಆಟದ ಮೈದಾನ, ಬಯಲು ರಂಗಮಂದಿರ, ಜಿಮ್‌ ನಿರ್ಮಿಸುವ ಉದ್ದೇಶವಿದೆ’ ಎಂದರು.

ಜೀವನ್‌ಬಿಮಾನಗರದ ರೋಟರಿ ಕ್ಲಬ್‌ನ ಅಧ್ಯಕ್ಷೆ ಆರ್.ಜ್ಯೋತಿ, ‘ಈ ಕೆರೆ 115 ಎಕರೆ ವಿಸ್ತೀರ್ಣ ಹೊಂದಿದೆ. ಆದರೆ, ರಾಜಕಾಲುವೆಗಳ ಒತ್ತುವರಿಯಿಂದ ಮಳೆ ನೀರು ಸರಾಗವಾಗಿ ಹರಿದು ಬರುತ್ತಿಲ್ಲ. ಇದನ್ನು ಸರಿಪಡಿಸುವುದು, ಕೊಳಚೆ ನೀರನ್ನು ಜೈವಿಕ ವಿಧಾನದ ಮೂಲಕ ಶುದ್ಧೀಕರಿಸುವ ಯೋಜನೆ ಹಮ್ಮಿಕೊಂಡಿದ್ದೇವೆ’ ಎಂದು ತಿಳಿಸಿದರು.

ನೇತ್ರಾ ಟ್ರಸ್ಟ್‌ನ ಅಭಿಷೇಕ್ ರಂಜನ್, ‘ಕೆರೆ ಸಂರಕ್ಷಣೆಯಲ್ಲಿ ಸಮುದಾಯದ ಭಾಗವಹಿಸುವಿಕೆ ಮುಖ್ಯ. ಸುತ್ತಲಿನ ಬಡಾವಣೆಗಳ ನಿವಾಸಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಪ್ರತಿಕ್ರಿಯಿಸಿ (+)