ಶನಿವಾರ, ಡಿಸೆಂಬರ್ 14, 2019
20 °C

ಸ್ವಯಂ ಸೇವಕರ ಪಟ್ಟ ಬೇಕಿಲ್ಲ, ನಮ್ಮನ್ನು ಕಾರ್ಮಿಕರೆಂದು ಪರಿಗಣಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಯಂ ಸೇವಕರ ಪಟ್ಟ ಬೇಕಿಲ್ಲ, ನಮ್ಮನ್ನು ಕಾರ್ಮಿಕರೆಂದು ಪರಿಗಣಿಸಿ

ತುಮಕೂರು: ಶಾಲೆಗಳಲ್ಲಿ ದುಡಿಯುತ್ತಿರುವ ಬಿಸಿಯೂಟದ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಬೇಕು. ಸ್ವಯಂ ಸೇವಕರ ಪಟ್ಟ ಬೇಕಿಲ್ಲ  ಎಂದು ಎಐಟಿಯುಸಿ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಅಮರಜಿತ್‌ ಕೌರ್‌ ಒತ್ತಾಯಿಸಿದರು.

ನಗರದ ಟೌನ್‌ ಹಾಲ್‌ನಲ್ಲಿ ಭಾನುವಾರ ಅಖಿಲ ಭಾರತ ಬಿಸಿಯೂಟ ತಯಾರಕರ ಫೆಡರೇಷನ್‌ನ ರಾಷ್ಟ್ರೀಯ ಸಮ್ಮೇಳನದ ಬಹಿರಂಗ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಸಿಯೂಟ ತಯಾರಿಕರಿಗೆ ಮೋಸ ಮಾಡುತ್ತಿವೆ. ಅವರಿಗೆ ಹಕ್ಕು ಮತ್ತು ಸೌಲಭ್ಯಗಳನ್ನು ನೀಡುತ್ತಿಲ್ಲ. ಕಾರ್ಮಿಕರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ನೀಡಬೇಕು. ನಾವು ಭಿಕ್ಷೆ ಬೇಡುತ್ತಿಲ್ಲ. ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆ. ಪಿಂಚಣಿ ಸೌಲಭ್ಯ, ಇಎಸ್‌ಐ, ಸಾಮಾಜಿಕ ಭದ್ರತೆ ನೀಡಬೇಕು’  ಎಂದರು.

‘ಮೋದಿ ಸರ್ಕಾರ ಜಾತಿ, ಧರ್ಮದ ಹೆಸರಿನಲ್ಲಿ ಕಾರ್ಮಿಕರ ಸಂಘಟನೆಯನ್ನು ಒಡೆಯುವ ಕೆಲಸ ಮಾಡುತ್ತಿದೆ. ಕೋಮುವಾದದಂತಹ ವಿವಾದಗಳನ್ನು ಸೃಷ್ಟಿಸಿ ಜನರ ದಾರಿ ತಪ್ಪಿಸುತ್ತಿದೆ ’ ಎಂದು ಆರೋಪಿಸಿದರು.

ನರೇಂದ್ರ ಮೋದಿ ಜಿಎಸ್‌ಟಿ ಮೂಲಕ ದೇಶದಲ್ಲಿ ಏಕತೆ ತರುತ್ತೇವೆ ಎನ್ನುತ್ತಿದ್ದಾರೆ. ಆದರೆ ನಿಜವಾದ ಏಕತೆ, ಅಭಿವೃದ್ಧಿಯು ಉದ್ಯೋಗ ಸೃಷ್ಟಿ, ಕಾರ್ಮಿಕರಿಗೆ ಭದ್ರತೆ, ಸೌಲಭ್ಯಗಳನ್ನು ನೀಡುವುದರಿಂದ ಸಾಧ್ಯ ಎನ್ನುವುದನ್ನು ಅವರು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಎಐಟಿಯುಸಿ ರಾಜ್ಯ ಸಮಿತಿ ಅಧ್ಯಕ್ಷ ಎಚ್‌.ವಿ.ಸುಬ್ಬರಾವ್‌  ಮಾತನಾಡಿ, ‘ನರೇಂದ್ರ ಮೋದಿ  ಕಳಂಕರಹಿತ ಸರ್ಕಾರ ಎಂದು ಹೇಳಿಕೊಳ್ಳುತ್ತಿದ್ದರೂ ಇದನ್ನು ನಂಬಲು ನಾವು ಸಿದ್ಧರಿಲ್ಲ.

ಕೇಂದ್ರ ಸರ್ಕಾರ ಜಿಎಸ್‌ಟಿಯನ್ನು ದೊಡ್ಡ ಸಾಧನೆಯಂತೆ ಬಿಂಬಿಸುತ್ತಿದೆ. ಆದರೆ ಇದರಿಂದ ಸಾಧಾರಣ ಜನರ ಸುಲಿಗೆ ಆಗುತ್ತಿದೆ. ಬೀಡಿ ಕೈಗಾರಿಕೆಗಳಂತ ಬಡ ಕೈಗಾರಿಕೆಗಳಿಗೆ ತೆರಿಗೆ ಹೆಚ್ಚಳವಾಗಿದ್ದು, ಇದಕ್ಕೆ ಸಾಕ್ಷಿಯಾಗಿದೆ’ ಎಂದರು.

ಎಐಟಿಯುಸಿ ರಾಜ್ಯ ಸಮಿತಿ ಕಾರ್ಯಾಧ್ಯಕ್ಷ ಎಚ್‌.ಕೆ.ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಬಿ.ವಿ.ವಿಜಯಲಕ್ಷ್ಮೀ, ಡಿ.ಎ.ವಿಜಯ ಭಾಸ್ಕರ, ಎನ್‌.ಶಿವಣ್ಣ ಇದ್ದರು.

**

‌ಮಕ್ಕಳು ನಾಯಕರಾಗಲು ಯಾಕೆ ಸಾಧ್ಯವಿಲ್ಲ?

‘ಬಿಸಿಯೂಟ ಕಾರ್ಯಕರ್ತೆಯರು ರಾಜಕೀಯ ಕಲಿಯಬೇಕು. ಭವಿಷ್ಯತ್ತಿನ ಉತ್ತಮ ನಾಯಕರನ್ನು ಸೃಷ್ಟಿಸುವ ಕೆಲಸ ನಿಮ್ಮಿಂದ ಸಾಧ್ಯ. ಟೀ ಮಾರುವ ಹುಡುಗ ಪ್ರಧಾನ ಮಂತ್ರಿ ಆಗಿರುವಾಗ ಬಿಸಿಯೂಟ ಊಟ ಮಾಡುವ ಮಕ್ಕಳು ನಾಯಕರಾಗಲು ಯಾಕೆ ಸಾಧ್ಯವಿಲ್ಲ?’ ಎಂದು ಸಿಪಿಐನ ರಾಜ್ಯ ಮಂಡಳಿ ಪಿ.ವಿ.ಲೋಕೆಶ್‌ ಬಿಸಿಯೂಟ ಕಾರ್ಯಕರ್ತೆಯರನ್ನು ಪ್ರಶ್ನಿಸಿದರು.

ಮೆರವಣಿಗೆ

ಅಖಿಲ ಭಾರತ ಬಿಸಿಯೂಟ ತಯಾರಕರ ಫೆಡರೇಷನ್‌, ಎಐಯುಟಿಸಿ ನಗರದಲ್ಲಿ ಬೃಹತ್‌ ಮೆರವಣಿಗೆ ನಡೆಸಿತು. ಟೌನ್‌ ಹಾಲ್‌ನಿಂದ ಬಿ.ಎಚ್‌ ರಸ್ತೆ ಮಾರ್ಗವಾಗಿ ಮೆರವಣಿಗೆ ಸಾಗಿತು. ಸಂಪೂರ್ಣ ವಾಹನ ದಟ್ಟಣೆ ಇರುವ ರಸ್ತೆ ಇದಾಗಿದ್ದರಿಂದ ಸಂಚಾರ ಸಮಸ್ಯೆ ಉಂಟಾಯಿತು. ಸುಮಾರು ಸಾವಿರಕ್ಕೂ ಹೆಚ್ಚು ಬಿಸಿಯೂಟ ಕಾರ್ಯಕರ್ತೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರಿಂದ ಅರ್ಧ ಗಂಟೆಗಳ ಕಾಲ ಸಂಚಾರ ದಟ್ಟಣೆಯಾಯಿತು.

ಎಂ.ಜಿ.ರಸ್ತೆಯಿಂದ ಮೆರವಣಿಗೆ ಹೊರಟಿದ್ದಾಗ ಸಂಪೂರ್ಣ ರಸ್ತೆ ಬಿಸಿಯೂಟ ತಯಾರಕರಿಂದ ತುಂಬಿ ಹೋಗಿತ್ತು. ರಸ್ತೆಯ ತುಂಬ ಕೆಂಪು ಬಾವುಟಗಳೆ ಕಾಣಿಸುತ್ತಿದ್ದವು.

ಪ್ರತಿಕ್ರಿಯಿಸಿ (+)