ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷೆ ವಿಧಿಸುವ ಅಧಿಕಾರ ಸದನಕ್ಕೆ ಇದೆ: ಕೋಳಿವಾಡ

ಸಭಾಧ್ಯಕ್ಷರ ಮುಂದೆ ಹಾಜರಾದ ರವಿ ಬೆಳೆಗೆರೆ, ಅನಿಲ್ ರಾಜ್
Last Updated 3 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸದನಕ್ಕೆ ತನ್ನದೇ  ಆದ ವಿಶೇಷ ಹಕ್ಕುಗಳಿದ್ದು, ಅದನ್ನು ಉಲ್ಲಂಘಿಸಿದವರನ್ನು ಜೈಲಿಗೆ ಕಳುಹಿಸುವ ಅಥವಾ ವಾಗ್ದಂಡನೆ ವಿಧಿಸುವ ಅಧಿಕಾರ ಅದಕ್ಕಿದೆ’ ಎಂದು ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಪ್ರತಿಪಾದಿಸಿದರು.

ಸದನವು ಏಕಮಾತ್ರ ನ್ಯಾಯಸ್ಥಾನ ಆಗಿದ್ದು, ಅದರ ತೀರ್ಮಾನ ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ಕೋಳಿವಾಡ ಹೇಳಿದರು.

ಹಕ್ಕು ಬಾಧ್ಯತಾ ಸಮಿತಿ ಶಿಫಾರಸಿನ ಮೇರೆಗೆ ಜೈಲು ಶಿಕ್ಷೆಗೆ ಗುರಿಯಾಗಿರುವ ಪತ್ರಕರ್ತರಾದ ರವಿಬೆಳಗೆರೆ ಹಾಗೂ ಅನಿಲ್‌ ರಾಜ್‌, ಸಭಾಧ್ಯಕ್ಷರ ಮುಂದೆ ಸೋಮವಾರ ಹಾಜರಾಗಿ, ಶಿಕ್ಷೆ ಮರು ಪರಿಶೀಲಿಸುವಂತೆ ಮನವಿ ಸಲ್ಲಿಸಿದರು.

ಸಭಾಧ್ಯಕ್ಷರ ಎದುರು ವಾದ ಮಂಡಿಸಿದ ಅರ್ಜಿದಾರರ ವಕೀಲ ಶಂಕರಪ್ಪ, ‘ನನ್ನ ಕಕ್ಷಿದಾರರು ತಮ್ಮ ಪತ್ರಿಕೆಯಲ್ಲಿ ಬರೆದಿರುವ ವರದಿಗಳಿಂದ ಶಾಸಕರ ಹಕ್ಕುಚ್ಯುತಿ ಆಗುವುದಿಲ್ಲ. ಇದು ಸದನದ ಹೊರಗಿನ ವಿಷಯ. ಹಕ್ಕು ಬಾಧ್ಯತಾ ಸಮಿತಿ ಶಿಫಾರಸು ಆಧರಿಸಿ ಸದನ ವಿಧಿಸಿರುವ ಒಂದು ವರ್ಷ ಜೈಲು ಮತ್ತು ₹ 10,000 ದಂಡ ಶಿಕ್ಷೆಯನ್ನು ಮರು ಪರಿಶೀಲಿಸಬೇಕು’ ಎಂದು ಮನವಿ ಮಾಡಿದರು.

ಅವರನ್ನು ಮಧ್ಯಕ್ಕೆ ತಡೆದ ಕೋಳಿವಾಡ ಅವರು ‘ಕೌಲ್ ಅಂಡ್ ಶೆಕ್ದರ್‌’ ಪುಸ್ತಕವನ್ನು ತೆರೆದು ಅದರಲ್ಲಿರುವ ವಾಕ್ಯವನ್ನು ಉಲ್ಲೇಖಿಸಿ, ಸದನದ ಪರಮಾಧಿಕಾರವನ್ನು ಏರುಧ್ವನಿಯಲ್ಲಿ ಸಮರ್ಥಿಸಿಕೊಂಡರು.

‘ಸದನದ ಸದಸ್ಯರಷ್ಟೇ ಅಲ್ಲದೆ , ಹೊರಗಿನ ಇತರೆ ವ್ಯಕ್ತಿಗಳು ಮಾಡುವ ಯಾವುದೇ ನಿಂದನೆಗಳಿಗೂ ಇದು ಅನ್ವಯ ಆಗುತ್ತದೆ. ಯಾವುದೇ ವ್ಯಕ್ತಿ ಸದಸ್ಯರಿಗೆ ಅಪಮಾನ, ನಿಂದನೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸುವಂತಹ ಅಪರಾಧ ಮಾಡಿದ್ದಾನೆ  ಎಂದು ಸದನ ಭಾವಿಸಿದರೆ ಆ ವ್ಯಕ್ತಿಗೆ ಕಾರಾಗೃಹ ವಾಸ, ವಾಗ್ದಂಡನೆ ವಿಧಿಸಲು ಸದನಕ್ಕೆ ಅಧಿಕಾರ ಇದೆ’ ಎಂದು ಬಲವಾಗಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಂಕರಪ್ಪ, ‘ಸದನ ನೀಡಿರುವ ಶಿಕ್ಷೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಆದರೆ, ಅದನ್ನು ಸಭಾಧ್ಯಕ್ಷರ ಮುಂದೆಯೇ ಮಂಡಿಸಿ ತಾರ್ಕಿಕ ಅಂತ್ಯ ಕಂಡುಕೊಳ್ಳಿ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಸಲಹೆ ನೀಡಿದರು. ನನ್ನ ಕಕ್ಷಿದಾರರನ್ನು ಬಂಧಿಸುವುದಿಲ್ಲ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರೂ ನ್ಯಾಯಾಲಯದ ಮುಂದೆ ಭರವಸೆ ನೀಡಿದರು. ಹೀಗಾಗಿ ಕಕ್ಷಿದಾರರು ಇಲ್ಲಿಗೇ ಬಂದಿದ್ದಾರೆ’ ಎಂದು ಅವರು ವಿವರಿಸಿದರು.

‘ಸದನದ ಒಳಗೆ ಗ್ಯಾಲರಿಯಲ್ಲಿ ಕುಳಿತ ವ್ಯಕ್ತಿಗಳು ಅಥವಾ ಸದನದ ಹೊರಗಿನ ವ್ಯಕ್ತಿಗಳು ಶಾಸಕರ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದರೆ ಅಂತಹ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲು ಅವಕಾಶ ಇದೆ. ಆದರೆ, ಪತ್ರಿಕೆಗಳಲ್ಲಿ ವರದಿ ಬರೆದಿದ್ದನ್ನು ಹಕ್ಕುಚ್ಯುತಿ ಎಂದು ಪರಿಗಣಿಸಲು ಬರುವುದಿಲ್ಲ ’ ಎಂದು ಶಂಕರಪ್ಪ ವಾದಿಸಿದರು.

ತಮಿಳುನಾಡಿನಲ್ಲಿ ಎನ್‌. ಬಾಲಕೃಷ್ಣ ಪ್ರಕರಣದಲ್ಲಿ ಅಲ್ಲಿನ  ವಿಧಾನಸಭಾಧ್ಯಕ್ಷರು ಇದೇ ರೀತಿ ತೀರ್ಪು ನೀಡಿದಾಗ ನ್ಯಾಯಾಲಯ ಸರ್ಕಾರಕ್ಕೆ ದಂಡ ವಿಧಿಸಿತ್ತು ಎಂಬುದನ್ನೂ ಅವರು ನೆನಪಿಸಿದರು. ವಾದಕ್ಕೆ ಸ್ಪಂದಿಸದ ಕೋಳಿವಾಡ,   ‘ಈ ಬಗ್ಗೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತೇನೆ’ ಎಂದಷ್ಟೇ ಪ್ರತಿಕ್ರಿಯಿಸಿದರು.

‘ಅಗತ್ಯವಾದರೆ ಬೆಳಗೆರೆ ಕ್ಷಮೆ’: ‘ಪತ್ರಿಕೆಯಲ್ಲಿ ಬರೆದ ವರದಿ ಹಕ್ಕುಚ್ಯುತಿ ವ್ಯಾಪ್ತಿಗೆ ಬರುವುದಿಲ್ಲ ಎಂದು ವಕೀಲ ಶಂಕರಪ್ಪ ಸಮರ್ಥಿಸಿದರು. ಆದರೆ ವಾದದ ಕೊನೆಗೆ, ‘ಅಗತ್ಯವಾದರೆ ರವಿ ಬೆಳಗೆರೆ ಕ್ಷಮೆಯಾಚಿಸಲಿದ್ದಾರೆ’ ಎಂದು ಹೇಳಲು ಮರೆಯಲಿಲ್ಲ.

‘ಅನಿಲ್‌ರಾಜ್‌ ಅವರು ಸಮಿತಿ ಮುಂದೆ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಇದರಿಂದ ಅವರಿಗೆ ಶಿಕ್ಷೆ ವಿಧಿಸಲು ಸಮಿತಿ ಶಿಫಾರಸು ಮಾಡಬಾರದಿತ್ತು. ಆದರೂ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ’ ಎಂದರು. 

ಸದನವೇ ತೀರ್ಮಾನ ಮಾಡಬೇಕು: ‘ಜೈಲು ಶಿಕ್ಷೆಯ ಪ್ರಕರಣವನ್ನು ಮುಂದೆ ಸದನವೇ ತೀರ್ಮಾನ ಮಾಡುತ್ತದೆ’ ಎಂದು ಕೋಳಿವಾಡ ಅನಂತರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಅವರನ್ನು ಬಂಧಿಸಬೇಕೇ ಬೇಡವೇ ಎಂಬ ವಿಷಯ ನನ್ನ ವ್ಯಾಪ್ತಿಯಲ್ಲಿ ಇಲ್ಲ. ಅದು ಕಾರ್ಯಾಂಗದ ಮುಖ್ಯಸ್ಥರ ಅಧಿಕಾರ. ಶಾಸನಸಭೆ ಮತ್ತೆ ಸೇರಿ ನಿರ್ಣಯ ಕೈಗೊಳ್ಳುವವರೆಗೆ ಹಿಂದಿನ ನಿರ್ಣಯ ಚಾಲ್ತಿಯಲ್ಲಿರುತ್ತದೆ’ ಎಂದರು.

ಈ ಪ್ರಕರಣ ಮುಂದೆ ಏನಾಗುತ್ತದೆ ಎಂಬ ಪ್ರಶ್ನೆಗೆ, ‘ಅದನ್ನು ನಿಮ್ಮ ಊಹೆಗೆ ಬಿಡುತ್ತೇನೆ’ ಎಂದರು. ಪತ್ರಕರ್ತರನ್ನು ಬಂಧಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಒತ್ತಡ ಇತ್ತೇ ಎಂಬ ಪ್ರಶ್ನೆಗೆ, ‘ಅಂತಹ ಯಾವುದೇ ಒತ್ತಡ ಇಲ್ಲ’ ಎಂದು ತಳ್ಳಿ ಹಾಕಿದರು.

***

ಒಂದು ದಿನದ ಅಧಿವೇಶನ ಸಾಧ್ಯತೆ

ರಾಷ್ಟ್ರಪತಿ ಚುನಾವಣೆಯ ಮತದಾನದ ಕಾರಣಕ್ಕೆ ಇದೇ 17ರಂದು ಒಂದು ದಿನದ ವಿಧಾನಮಂಡಲ ವಿಶೇಷ ಅಧಿವೇಶನ ನಡೆಸುವ ಸಾಧ್ಯತೆ ಇದೆ.
ಇಬ್ಬರು ಪತ್ರಕರ್ತರಿಗೆ ಜೈಲು ಶಿಕ್ಷೆ ವಿಧಿಸಿದ ನಿರ್ಣಯ ಮರುಪರಿಶೀಲಿಸಬೇಕು ಎಂಬ ಒತ್ತಡ ಸರ್ಕಾರದ ಮೇಲೆ ಇದೆ. ಈ ಉದ್ದೇಶಕ್ಕೆ ಅಧಿವೇಶನ ಕರೆದರೆ ಸರಿಯಾಗದು. ಹೀಗಾಗಿ, ರಾಷ್ಟ್ರಪತಿ ಚುನಾವಣೆ ಕಾರಣ ನೀಡಿ ಅಧಿವೇಶನ ಕರೆದು, ಜೈಲು ಶಿಕ್ಷೆ ನಿರ್ಣಯವನ್ನು ಸದನದಲ್ಲಿಯೇ  ಮರುಪರಿಶೀಲಿಸುವ ಬಗ್ಗೆ  ಚರ್ಚಿಸಲಾಗುತ್ತದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT