ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಗ್ಗರಣೆ ಮಂಡಕ್ಕಿ ಸಿದ್ಧಪಡಿಸಿದ ಎಂಜಿನಿಯರ್!

ಬಿ.ಸಿ.ಎಂ ಹಾಸ್ಟೆಲ್ ಅಡುಗೆಯವರ ನೇಮಕಕ್ಕೆ ಪ್ರಾಯೋಗಿಕ ಪರೀಕ್ಷೆ
Last Updated 3 ಜುಲೈ 2017, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯ ಹಿಂದುಳಿದ ವರ್ಗಗಳ ಇಲಾಖೆಯ (ಬಿಸಿಎಂ) ಹಾಸ್ಟೆಲ್‌ಗಳಿಗೆ ಅಡುಗೆಯವರ ನೇಮಕಕ್ಕೆ ಸೋಮವಾರ ನಡೆದ ಪ್ರಾಯೋಗಿಕ ಪರೀಕ್ಷೆಯಲ್ಲಿ ಬಾದಾಮಿ ತಾಲ್ಲೂಕು ರಡ್ಡೇರ ತಿಮ್ಮಾಪುರದ ಮೆಕ್ಯಾನಿಕಲ್ ಎಂಜಿನಿಯರ್‌ ಶಿವಾನಂದ ಕಿಲಬನೂರ ಪಾಲ್ಗೊಂಡು ಗಮನ ಸೆಳೆದರು.

ಕಾರವಾರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 2014ರಲ್ಲಿ ಎಂಜಿನಿಯರಿಂಗ್‌ ಪೂರ್ಣಗೊಳಿಸಿರುವ ಶಿವಾನಂದ, ಸದ್ಯ ಗದಗ ಜಿಲ್ಲೆ ನರಗುಂದದ ಸರ್‌ ಎಂ.ವಿಶ್ವೇಶ್ವರಯ್ಯ ಡಿಪ್ಲೊಮಾ ಕಾಲೇಜಿನ ಮೆಕ್ಯಾನಿಕಲ್‌ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಾಯೋಗಿಕ ಪರೀಕ್ಷೆಯಲ್ಲಿ ಅವರು ಮಂಡಕ್ಕಿ ಸೂಸಲ (ಒಗ್ಗರಣೆ) ಸಿದ್ಧಪಡಿಸಿ ತೋರಿಸಿದರು.

ನಳಪಾಕ ಸಿದ್ಧತೆ: ಪ್ರಾಯೋಗಿಕ ಪರೀಕ್ಷೆಗೆ ಬಾಬು ಜಗಜೀವನರಾಮ್ ಭವನದಲ್ಲಿ 24 ಒಲೆಗಳ ವ್ಯವಸ್ಥೆ ಮಾಡಲಾಗಿತ್ತು. ಚಿತ್ರಾನ್ನ, ಅವಲಕ್ಕಿ, ಮಂಡಕ್ಕಿ ಸೂಸಲ, ರೊಟ್ಟಿ, ಚಪಾತಿ, ಪಾಯಸ, ಬೇಳೆ ಸಾಂಬಾರ್‌, ಬೇರೆ ಬೇರೆ ಕಾಳು ಹಾಗೂ ತರಕಾರಿ ಪಲ್ಯಗಳಲ್ಲಿ ಯಾವುದಾದರೂ ಒಂದನ್ನು 35 ನಿಮಿಷದಲ್ಲಿ ಸಿದ್ಧಪಡಿಸಲು  ಅಭ್ಯರ್ಥಿಗಳಿಗೆ ಸೂಚಿಸಲಾಗಿತ್ತು.

ಅಡುಗೆ ತಯಾರಿಸಿದವರಲ್ಲಿ ಕೆಲವರು ಈರುಳ್ಳಿ ಕತ್ತರಿಸುತ್ತ ಅದರ ಘಾಟಿಗೆ ಕಣ್ಣು ಒರೆಸಿಕೊಳ್ಳುತ್ತಿದ್ದರೆ, ಇನ್ನೂ ಕೆಲವರು ಒಗ್ಗರಣೆಗೆ ಸಾಸಿವೆ ಸಿಡಿಸುವ ಚಡಪಡಿಕೆಯಲ್ಲಿದ್ದರು. ಆಗಾಗ ಮಣೆಗೆ ಅಂಟಿಕೊಳ್ಳುತ್ತಿದ್ದ ಚಪಾತಿ ಹಿಟ್ಟನ್ನು ಬಿಡಿಸಿ ಅದಕ್ಕೆ ರೂಪ ನೀಡುವಲ್ಲಿ ಒಂದಷ್ಟು ಮಂದಿ ತಲ್ಲೀನರಾಗಿದ್ದರು. ನಿಗದಿತ ಅವಧಿಯಲ್ಲಿ ಅಡುಗೆ ಸಿದ್ಧಪಡಿಸಿ ಪರೀಕ್ಷಕರಿಗೆ ತಮ್ಮ ಕೈರುಚಿ ತೋರಿಸುವ ಧಾವಂತ ಅಭ್ಯರ್ಥಿಗಳಲ್ಲಿ ಕಂಡು ಬಂದಿತು.

ಬಿ.ಎಸ್‌ಸಿ ಅಗ್ರಿ ಪದವೀಧರೆ: ಅಡುಗೆ ಸಹಾಯಕಿ ಹುದ್ದೆಗೆ ಬಿ.ಎಸ್‌ಸಿ ಅಗ್ರಿ ಪದವೀಧರೆ, ವಿಜಯಪುರ ಜಿಲ್ಲೆ ನಿಡಗುಂದಿಯ ವಾಣಿಶ್ರೀ ರಾಂಪುರ ಅರ್ಜಿ ಸಲ್ಲಿಸಿದ್ದಾರೆ.   ಅವರಿಗೆ ಮಂಗಳವಾರ ಪ್ರಾಯೋಗಿಕ ಪರೀಕ್ಷೆ ಇದೆ ಎಂದು ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಡಿಪ್ಲೊಮಾ ಎಲೆಕ್ಟ್ರಿಕಲ್ ಪೂರ್ಣಗೊಳಿಸಿರುವ ರಾಯಚೂರು ತಾಲ್ಲೂಕು ಕುಚ್ಚಲದಿನ್ನಿಯ ಲಿಂಗಾರಡ್ಡಿ ಅವರಿಗೆ ಪ್ರಾಯೋಗಿಕ ಪರೀಕ್ಷೆಯಲ್ಲಿ ಉಪ್ಪಿಟ್ಟು ಮಾಡುವ ಅವಕಾಶ ಸಿಕ್ಕಿತ್ತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 77.60ರಷ್ಟು ಅಂಕಗಳಿಸಿದ್ದಾರೆ.

‘ಹಿಂದುಳಿದ ವರ್ಗಗಳ ಇಲಾಖೆಯ ತಲಾ 12 ಮಂದಿ ಸಹಾಯಕ ನಿರ್ದೇಶಕರು ಹಾಗೂ ಹಾಸ್ಟೆಲ್ ಮೇಲ್ವಿಚಾರಕರನ್ನು ಪರೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಅವರಿಗೆ ಮೇಲುಸ್ತುವಾರಿ ಮಾಡಲು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಗೃಹ ವಿಜ್ಞಾನ ವಿಭಾಗದ ಮೂವರು ಅಧ್ಯಾಪಕಿಯರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ’ ಎಂದು ಇಲಾಖೆಯ ಉಪ ನಿರ್ದೇಶಕ ಶಿವಾನಂದ ಕುಂಬಾರ ತಿಳಿಸಿದರು.

***

ಸ್ನಾತಕೋತ್ತರ ಪದವೀಧರರೂ ಆಕಾಂಕ್ಷಿಗಳು!
ಜಿಲ್ಲೆಯಲ್ಲಿ ಖಾಲಿ ಇರುವ 79 ಅಡುಗೆಯವರು ಹಾಗೂ 92 ಅಡುಗೆ ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. 3 ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಅವರಲ್ಲಿ ಎಂ.ಎ, ಎಂ.ಎಸ್‌ಸಿ, ಬಿ.ಇ, ಬಿ.ಎಸ್‌ಇ ಅಗ್ರಿ, ಬಿ.ಎ, ಬಿ.ಎಸ್‌ಸಿ, ಬಿ.ಇಡಿ ಪದವೀಧರರು, ಹಾಗೂ ಡಿಪ್ಲೊಮಾ, ಡಿ.ಇಡಿ ಕೋರ್ಸ್‌ ಮುಗಿಸಿದವರು ಸೇರಿದ್ದಾರೆ. ಅರ್ಜಿ ಸಲ್ಲಿಸಿದವರ ಪೈಕಿ 178 ಮಂದಿಯನ್ನು 1:3ರ ಅನುಪಾತದಲ್ಲಿ ಪ್ರಾಯೋಗಿಕ ಪರೀಕ್ಷೆಗೆ ಆಯ್ಕೆ ಮಾಡಲಾಗಿದೆ.

***

ಕೂಲಿ ಮಾಡುವ ಅಪ್ಪ– ಅಮ್ಮನಿಗೆ ನೆರವಾಗಲು ಖಾಸಗಿ ಉದ್ಯೋಗದಲ್ಲಿ ಸಿಗುವ  ₹8 ಸಾವಿರ ಪಗಾರದಲ್ಲಿ ಸಾಧ್ಯವಾಗುತ್ತಿಲ್ಲ. ಇದು ಸರ್ಕಾರಿ ಕೆಲಸ. ಆರಂಭದಲ್ಲಿಯೇ ₹16,400 ಪಗಾರ ಸಿಗಲಿದೆ.
ಶಿವಾನಂದ ಕಿಲಬನೂರ, ಮೆಕ್ಯಾನಿಕಲ್ ಎಂಜಿನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT