ಬುಧವಾರ, ಡಿಸೆಂಬರ್ 11, 2019
19 °C

ಶಾಪಿಂಗ್ ಮಾಲ್‍ಗಳಲ್ಲಿ ಟ್ರೋಲ್ ಹೈದರು 'ಕಿರಿಕ್' ಮಾಡುತ್ತಿರುವುದೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಪಿಂಗ್ ಮಾಲ್‍ಗಳಲ್ಲಿ ಟ್ರೋಲ್ ಹೈದರು 'ಕಿರಿಕ್' ಮಾಡುತ್ತಿರುವುದೇಕೆ?

ಬೆಂಗಳೂರು: 'ನಮ್ಮ ಮೆಟ್ರೊ' ರೈಲಿನಲ್ಲಿ ಅನವಶ್ಯಕ ಹಿಂದಿ ಬಳಕೆ ವಿರೋಧಿಸಿ ಸಾಮಾಜಿಕ ತಾಣಗಳಲ್ಲಿ  ಅಭಿಯಾನ ಮುಂದುವರಿಯುತ್ತಿದ್ದಂತೆ 'ಟ್ರೋಲ್ ಹೈದರು' ಬೆಂಗಳೂರಿನ ಶಾಪಿಂಗ್ ಮಾಲ್‍ಗಳಲ್ಲಿ ಕನ್ನಡ ಹಾಡುಗಳನ್ನೇ ಹಾಕಬೇಕು ಎಂದು ಒತ್ತಾಯಿಸಿ ಹೋರಾಟಕ್ಕಿಳಿದಿದ್ದಾರೆ.

ಬೆಂಗಳೂರಿನ ಶಾಪಿಂಗ್ ಮಾಲ್‍ಗಳಲ್ಲಿ ಕನ್ನಡ ಹಾಡುಗಳನ್ನೇ ಪ್ರಸಾರ ಮಾಡಬೇಕು, ಜಿಮ್‍ಗಳಲ್ಲಿಯೂ ಕನ್ನಡಬೇಕು ಎಂದು ಒತ್ತಾಯಿಸಿ ಟ್ರೋಲ್ ಹೈದ ಫೇಸ್‍ಬುಕ್ ಪೇಜ್ ಸದಸ್ಯರು ಮಾಲ್‍ಗಳಿಗೆ ಹೋಗಿ ಕನ್ನಡ ಜಾಗೃತಿ ಮೂಡಿಸುತ್ತಿದ್ದಾರೆ.

ಟ್ರೋಲ್ ಹೈದ ಪೇಜ್‍ನ ಶಿವಮೊಗ್ಗದ ನಯನ್ ಎಂಬ ಯುವಕ ಸ್ನೇಹಿತರೊಡನೆ ಸೇರಿ ಮಾಲ್‍ಗಳಿಗೆ ಭೇಟಿ ನೀಡುತ್ತಾರೆ. ಹಾಗೆ ಭೇಟಿ ನೀಡಿದವರು ಮಾಲ್‍ಗಳಲ್ಲಿ ಕನ್ನಡ ಹಾಡುಗಳನ್ನು ಯಾಕೆ ಹಾಕುತ್ತಿಲ್ಲ ಎಂದು ಪ್ರಶ್ನಿಸಿ ಮಾಲ್ ಮುಖ್ಯಸ್ಥರನ್ನು ಭೇಟಿ ಮಾಡಿ ಕನ್ನಡದ ಬಗ್ಗೆ ಅರಿವು ಮೂಡಿಸುತ್ತಿರುವ ವಿಡಿಯೊ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.

ಟ್ರೋಲ್ ಹೈದ ಪೇಜ್‍ನ ಮುಖ್ಯ ಉದ್ದೇಶ ಕನ್ನಡ ಉಳಿಸಿ, ಕನ್ನಡ ಬೆಳೆಸಿ, ಕನ್ನಡ ಮಾತನಾಡಿ ಎಂಬುದು. ಹಾಗಾಗಿ ತಂಡದವರು ಮೊದಲು ಮಾಲ್‍ಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿ ಗತಿಗಳನ್ನು ಅರಿತು, ಅಲ್ಲಿ ಕನ್ನಡ ಬಳಸುವಂತೆ ಹೇಳುತ್ತಾರೆ. ಮಾಲ್ ಸಿಬ್ಬಂದಿಗಳು ಇದನ್ನು ನಿರ್ಲಕ್ಷಿಸಿದಾಗ ಟ್ರೋಲ್ ಹೈದ ಫೇಸ್‍ಬುಕ್ ಪೇಜ್‍ ಮೂಲಕ  ಲೈವ್ ವಿಡಿಯೊ ಮಾಡಿ ಕನ್ನಡ ಬಳಸುವಂತೆ ಒತ್ತಡ ಹೇರುತ್ತಾರೆ. ಈಗಾಗಲೇ ಬೆಂಗಳೂರಿನ ಕೆಲವು ಮಾಲ್‍ಗಳಲ್ಲಿ ಕನ್ನಡ ಜಾಗೃತಿ ಮೂಡಿಸಿದೆ ಈ ತಂಡ.

ಇದ್ಯಾವ ರೀತಿಯ ಹೋರಾಟ ಸ್ವಾಮಿ?

" ಯಾರೋ ಕನ್ನಡೇತರರ ಹತ್ತಿರ “ಜೈ ಕನ್ನಡಾಂಬೆ” ಅಂತ ಘೋಷಣೆ ಕೂಗಿಸಿದ್ದು ಇದೆಯಲ್ಲಾ, ಅದು ಅಸಹ್ಯ! ಆ ವ್ಯಕ್ತಿ ಆವತ್ತು ರಾತ್ರಿ ಮನೆಗೆ ಹೋಗುವಾಗ ಕನ್ನಡ ಪುಸ್ತಕ ತೆಗೆದುಕೊಂಡು ಹೋಗಿ ಮನೆಯವರಿಗೆಲ್ಲಾ ಹೇಳಿಕೊಡುವುದಿಲ್ಲ, ಅಥವಾ ಅವನ ಮನೆಯಲ್ಲಿ ತಾಯಿ ಭುವನೇಶ್ವರಿ ಫೋಟೋ ಹಾಕೋಳಲ್ಲ. ಕೇವಲ ಭಯದಿಂದ ಅವರು ಹೇಳಿದ ಹಾಗೆ ಕೇಳುವಂತೆ ಮಾಡುವುದು ಕನ್ನಡದ ಗೆಲುವಲ್ಲ. ಇನ್ನೊಬ್ಬರಿಗೆ ಹೆದರಿಸಿ, ಬೆದರಿಸಿ ಪಡೆದುಕೊಳ್ಳುವ “ಮರ್ಯಾದೆ” ಮರ್ಯಾದೆನೇ ಅಲ್ಲ. ಅಲ್ಲಿ ನಡೆದದ್ದು bullying ಅಷ್ಟೇ! "

ಅಂದಹಾಗೆ ಕನ್ನಡ ಜಾಗೃತಿ ಮೂಡಿಸುವುದು ಒಳ್ಳೆಯ ಕೆಲಸವೇ. ಆದರೆ ಮಾಲ್‍ಗಳಲ್ಲಿ ಕನ್ನಡ ಹಾಡುಗಳನ್ನು ಮಾತ್ರ ಹಾಕಿ ಎಂದು ಒತ್ತಾಯಿಸುವುದು, ಜಿಮ್‍ನಲ್ಲಿ ವರ್ಕೌಟ್ ಮಾಡುವಾಗ ಕನ್ನಡ ಹಾಡೇ ಹಾಕಬೇಕು ಎಂದು ಹೇಳುವ ಟ್ರೋಲ್ ಹೈದರ ಒತ್ತಾಯಕ್ಕೆ ಕನ್ನಡಿಗ ನೆಟಿಜನ್‍ಗಳಿಂದಲೇ ವಿರೋಧ ವ್ಯಕ್ತವಾಗಿದೆ.

ಫೇಸ್‍ಬುಕ್ ಲೈವ್ ವಿಡಿಯೊ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುವ ಗೀಳು ಎಂದು ಕೆಲವರು ಈ ವಿಡಿಯೊ ಬಗ್ಗೆ ಟೀಕಿಸಿದ್ದಾರೆ. ಮಾಲ್‍ಗಳಲ್ಲಿ ಎಲ್ಲ ಭಾಷೆಯ ಎಲ್ಲ ವರ್ಗದ ಜನರೂ ಬರುತ್ತಾರೆ. ಅಲ್ಲಿನ ಸಿಬ್ಬಂದಿ ಗ್ರಾಹಕರೊಂದಿಗೆ ಕನ್ನಡದಲ್ಲಿ ಸಂವಹನ ಮಾಡಲು ನಿರಾಕರಿಸಿದರೆ ಪ್ರಶ್ನಿಸಬಹುದು. ಆದರೆ ಮಾಲ್‍ನೊಳಗಿರುವ ಅಂಗಡಿಗಳಲ್ಲಿ ಕನ್ನಡ ಹಾಡುಗಳನ್ನೇ ಹಾಕಿ ಎಂದು ಒತ್ತಾಯಿಸಿ ಬಲವಂತ ಮಾಡುತ್ತಿರುವುದು ಸರಿಯಲ್ಲ ಎಂದು ಕೆಲವರು ಟೀಕಿಸಿದ್ದಾರೆ.

ಮಾಲ್‍ಗಳೊಳಗೆ ವಿಡಿಯೊ ಶೂಟಿಂಗ್ ಮಾಡುವುದೂ ಸರಿಯಲ್ಲ. ಇನ್ನು ಅಲ್ಲಿನ ಸಿಬ್ಬಂದಿಗಳನ್ನು ಕ್ಯಾಮೆರಾ ಮುಂದೆ ನಿಲ್ಲಿಸಿ, ನೀವು ಹಾಗೆ ಹೇಳಿ, ಹೀಗೆ ಹೇಳಿ ಎಂದಾಗ ಸಹಜವಾಗಿಯೇ ಅವರು ಅನುಸರಿಸುತ್ತಾರೆ. ಅದು ಕ್ಯಾಮೆರಾ ನೋಡಿದ ಭಯದಿಂದಲೇ ಹೊರತು ಅರಿವು ಮೂಡಿಸಿದ ಕಾರ್ಯಕ್ರಮದ ಪರಿಣಾಮ ಏನೂ ಅಲ್ಲ. 

 

ಕನ್ನಡ ಭಾಷೆ ಬಗ್ಗೆ ಅರಿವು  ಮೂಡಿಸಬೇಕು ಸರಿ. ಆದರೆ ಬಲವಂತದಿಂದ ಆಗಬಾರದು. ಹೋದಲ್ಲೆಲ್ಲಾ ಫೇಸ್‍ಬುಕ್ ಲೈವ್ ಮಾಡಿಕೊಂಡು, ಪೂರ್ತಿ ಕನ್ನಡವೂ ಮಾತನಾಡದೆ ಟೀ ಶರ್ಟ್ ನಲ್ಲೇ ಇಂಗ್ಲಿಷಿನಲ್ಲಿ ಟ್ರೋಲ್ ಹೈದ ಅಂತ ಬರೆದು ಕನ್ನಡದ ಬಗ್ಗೆ ಇದೆಂಥಾ ಹೋರಾಟ? ಎಂದು ಕೆಲವರು ಟ್ರೋಲ್ ಹೈದರನ್ನು ಪ್ರಶ್ನಿಸಿದ್ದಾರೆ.

ಪ್ರತಿಕ್ರಿಯಿಸಿ (+)