ಶನಿವಾರ, ಡಿಸೆಂಬರ್ 7, 2019
25 °C

ಇಸ್ರೇಲ್‌ಗೆ ಮೋದಿ: ವಿದೇಶಾಂಗ ನೀತಿಯಲ್ಲಿ ದೊಡ್ಡ ತಿರುವು

Published:
Updated:
ಇಸ್ರೇಲ್‌ಗೆ ಮೋದಿ: ವಿದೇಶಾಂಗ ನೀತಿಯಲ್ಲಿ ದೊಡ್ಡ  ತಿರುವು

ಇಸ್ರೇಲ್ ಜತೆಗಿನ ಭಾರತದ ಬಾಂಧವ್ಯವನ್ನು ‘ವಿಶೇಷ’ ಎಂದು ಇಸ್ರೇಲ್ ಪ್ರವಾಸದಲ್ಲಿರುವ  ಪ್ರಧಾನಿ  ನರೇಂದ್ರ ಮೋದಿ  ಬಣ್ಣಿಸಿದ್ದಾರೆ. ಯಹೂದಿಗಳ ರಾಷ್ಟ್ರ ಇಸ್ರೇಲ್‌ಗೆ ಭಾರತದ ಪ್ರಧಾನಿಯೊಬ್ಬರು ನೀಡಿರುವ ಮೊದಲ ಭೇಟಿ ಇದು.

ಇಸ್ರೇಲ್ ಜೊತೆಗಿನ ರಾಜತಾಂತ್ರಿಕ ಸಂಬಂಧ ಸ್ಥಾಪನೆಗೆ 25 ವರ್ಷಗಳಾಗುತ್ತಿರುವ ವಿಶೇಷ ಸಂದರ್ಭದಲ್ಲಿ ಈ ಭೇಟಿ ನಡೆದಿದೆ. ಹಲವು ಅಂತರರಾಷ್ಟ್ರೀಯ ನಿರ್ಣಯಗಳನ್ನು ಉಲ್ಲಂಘಿಸಿ ಅರಬ್ ಇಸ್ರೇಲಿಗಳ ವಿರುದ್ಧ  ಜನಾಂಗಭೇದ ನೀತಿ ಪರಿಪಾಲಿಸುತ್ತಾ  ಪ್ಯಾಲೆಸ್ಟೀನಿಯರ ವಿರುದ್ಧ  ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವ  ಇಸ್ರೇಲ್‌ಗೆ ಭೇಟಿ ನೀಡಲು ಉದಾರವಾದಿ ಮೌಲ್ಯಗಳನ್ನು ಹೊಂದಿದ ರಾಷ್ಟ್ರಗಳ ನಾಯಕರು ಹಿಂಜರಿಯುತ್ತಾರೆ. 

ಇನ್ನು,  ಹೆಚ್ಚಿನ ಮುಸ್ಲಿಮರಿರುವ ರಾಷ್ಟ್ರಗಳಿಗಂತೂ ಇಸ್ರೇಲ್ ಅಸ್ಪೃಶ್ಯ ಎನಿಸಿದೆ. ಇಂತಹ ದೃಷ್ಟಿಕೋನಗಳು  ಪ್ರಬಲವಾಗಿ ಆಳುತ್ತಿರುವ ಸಂದರ್ಭದಲ್ಲಿ ಇಸ್ರೇಲ್‌ಗೆ ಮೋದಿಯವರ ಭೇಟಿ ಮಹತ್ವದ್ದು. ಅಲಿಪ್ತ ನೀತಿಯ ಕಡೆಯ ಕುರುಹುಗಳನ್ನು ಕೊಡವಿಕೊಳ್ಳುವಲ್ಲಿ ಮೋದಿಯವರು ಈ ಮೂಲಕ ಯಶಸ್ವಿಯಾಗಿದ್ದಾರೆ.

ಕಳೆದ ಹಲವು ವರ್ಷಗಳಲ್ಲಿ  ಪ್ಯಾಲೆಸ್ಟೀನ್ ಪರ ನೈತಿಕ ಬೆಂಬಲ ನೀಡುತ್ತಲೇ ಇಸ್ರೇಲ್‌ ಜೊತೆಗಿನ ಸಂಬಂಧವನ್ನು ಸಮತೋಲಿತ ರೀತಿಯಲ್ಲಿ ಭಾರತ ಕಾಯ್ದುಕೊಂಡು ಬಂದಿದೆ. ರಾಷ್ಟ್ರದೊಳಗಿನ  ಮುಸ್ಲಿಂ ಜನಸಂಖ್ಯೆಯ ಜೊತೆಗೆ ತೈಲ ಆಮದಿಗಾಗಿ ಅರಬ್‌ ರಾಷ್ಟ್ರಗಳು ಹಾಗೂ  ಇರಾನ್‌ ಮೇಲಿನ ಅವಲಂಬನೆಯಿಂದಾಗಿ ಇಸ್ರೇಲ್ ಜೊತೆಗಿನ ಬಾಂಧವ್ಯದಲ್ಲಿ ಸಮತೋಲನ ಕಾಯ್ದುಕೊಳ್ಳಲು ಎಚ್ಚರ ವಹಿಸಲಾಗುತ್ತಿತ್ತು. ಸಚಿವ ಮಟ್ಟದ ಭೇಟಿ ಸಂದರ್ಭಗಳಲ್ಲಿ ಟೆಲ್ ಅವೀವ್ ಜೊತೆಗೆ ಪ್ಯಾಲೆಸ್ಟೀನ್ ಅಧಿಕಾರದ ನೆಲೆಯಾದ  ರಾಮಲ್ಲಾಗೂ ಭೇಟಿ ನೀಡಲು ಗಮನ ನೀಡಲಾಗುತ್ತಿತ್ತು.

ಆದರೆ ಈ ಬಾರಿ ಮೋದಿ ಅವರು ರಾಮಲ್ಲಾಗೆ ಭೇಟಿ ನೀಡುವ ಸಂಪ್ರದಾಯವನ್ನೂ ಮುರಿದಿದ್ದಾರೆ. ವಿಶ್ವದಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದರೂ ಪ್ಯಾಲೆಸ್ಟೀನಿಯರ ವಿರುದ್ಧ ತೀವ್ರವಾದಿ ನೀತಿಗಳಿಗೇ ಬದ್ಧವಾಗಿರುವ ಇಸ್ರೇಲ್ ಸರ್ಕಾರಕ್ಕೆ ಇದು ಅತಿ ದೊಡ್ಡ ಸಂಕೇತವಾಗಲಿದೆ. ಹೀಗಾಗಿ, ಇಸ್ರೇಲ್ ಪ್ರಧಾನಿ ಬೆಂಜಾಮಿನ್ ನೆತನ್ಯಾಹು ಅವರು ಮೋದಿ ಭೇಟಿಯನ್ನು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ.  ಪ್ರಮುಖರಿಗೆ ನೀಡಲಾಗುವ ಶಿಷ್ಟಾಚಾರವನ್ನೂ ಮೀರಿ ಹೆಚ್ಚಿನ ಗೌರವಗಳನ್ನು ಮೋದಿಯವರಿಗೆ ಸಲ್ಲಿಸಲಾಗುತ್ತಿದೆ. ಮೋದಿಯವರು ಭೇಟಿ ನೀಡಲಿರುವ ಬಹುತೇಕ ಸ್ಥಳಗಳಿಗೆ ನೆತನ್ಯಾಹು ಅವರೂ ಜೊತೆಗೆ ಹೋಗುತ್ತಿದ್ದಾರೆ ಎಂಬುದೂ ವಿಶೇಷ.  

ಇಸ್ರೇಲ್‌ಗೆ ಇದು ಮೋದಿಯವರ ಮೊದಲ ಭೇಟಿ ಅಲ್ಲ. 2006ರಲ್ಲಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಭೇಟಿ ನೀಡಿದ್ದರು. ಕಳೆದ ದಶಕದಲ್ಲಿ ಭಾರತ, ಇಸ್ರೇಲ್‌ನ ರಕ್ಷಣಾ ಸಾಮಗ್ರಿಗಳ ಅತಿ ದೊಡ್ಡ ಗ್ರಾಹಕ ರಾಷ್ಟ್ರವಾಗಿದೆ.  ರಕ್ಷಣಾ ಸಹಕಾರದಲ್ಲಿ ಭಾರಿ ಜಿಗಿತಗಳಾಗಿವೆ. ಭಾರತ –ಇಸ್ರೇಲ್ ಸಂಬಂಧದ ಸದ್ಯದ ಪರಿಸ್ಥಿತಿ ಅವಲೋಕಿಸಿದಲ್ಲಿ ಇಸ್ರೇಲ್‌ನ ಕೃಷಿ ಹಾಗೂ ನೀರಾವರಿ ವಿಚಾರ ಭಾರತೀಯ ರೈತರಲ್ಲಿ ಇನ್ನೂ ಹೆಚ್ಚಿನ ಸ್ಪಂದನ ಮೂಡಿಸಬೇಕಿದೆ. ಆದರೆ ಇಸ್ರೇಲ್‌ನ  ಭಯೋತ್ಪಾದನಾ ನಿಯಂತ್ರಣ ವಿಧಾನಗಳು ಹೆಚ್ಚು  ಪ್ರಯೋಜನಕಾರಿ.

‘ಭಯೋತ್ಪಾದನೆಗೆ ಬಲಿಪಶುವಾಗಿದ್ದೇವೆ’ ಎಂಬ ಭಾರತದ ಮಾತು ಇಸ್ರೇಲ್‌ನಲ್ಲಿ ವಿಶೇಷವಾಗಿ ಅನುರಣಿಸುತ್ತದೆ. ಭಯೋತ್ಪಾದನೆಯನ್ನು ಈ ಯಹೂದಿ ರಾಷ್ಟ್ರ ಕಠಿಣವಾಗಿ  ನಿರ್ವಹಿಸುವ  ಬಗ್ಗೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೆ ಮೊದಲಿನಿಂದಲೂ ಮೆಚ್ಚುಗೆ ಇದ್ದೇ ಇದೆ. ಆದರೆ ಎಲ್ಲಾ ಭದ್ರತಾ ವಿಚಾರಗಳಿಗೆ ಇಸ್ರೇಲ್‌ನ ಮಿಲಿಟರಿ ದೃಷ್ಟಿಕೋನ ಆ ನಾಡಿಗೆ ಪೂರ್ಣ ಶಾಂತಿಯನ್ನೇನೂ ತಂದುಕೊಟ್ಟಿಲ್ಲ ಎಂಬುದನ್ನೂ ಗಮನಿಸಬೇಕು. ಎಲ್ಲಾ ತಂತ್ರಜ್ಞಾನ, ಕಮಾಂಡೊಗಳ ನಡುವೆಯೂ ಅಶಾಂತಿಯನ್ನು ತಿಳಿಗೊಳಿಸಲಾಗಿಲ್ಲ.

ಹೆಜ್ಬುಲ್ಲಾ ಹಾಗೂ ಹಮಾಸ್ ಜೊತೆ ಶಾಂತಿ ಒಪ್ಪಂದ ಮಾಡಿಕೊಳ್ಳುವಂತಹ ಅನಿವಾರ್ಯತೆಯೂ ಇದೆ ಎಂಬುದನ್ನು ಮರೆಯುವಂತಿಲ್ಲ. ಇಸ್ರೇಲ್‌ನ ರಕ್ಷಣಾ ಹಾಗೂ ಭಯೋತ್ಪಾದನಾ ಪ್ರತಿಬಂಧಕ ವಲಯದ ಸಾಮಗ್ರಿಗಳಿಗೆ ಭಾರತ ಬೃಹತ್ ಮಾರುಕಟ್ಟೆಯಾಗಲಿದೆ ಎಂಬುದಂತೂ ನಿಚ್ಚಳ. ಹಾಗೆಯೇ ಅಂತರರಾಷ್ಟ್ರೀಯ ರಾಜಕಾರಣದ ಮರ್ಮಗಳಿಗೆ ಅನುಗುಣವಾಗಿ ಇದೇ ಮೇ ತಿಂಗಳಲ್ಲಿ ಪ್ಯಾಲೆಸ್ಟೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರನ್ನೂ ಮೋದಿಯವರು ಭೇಟಿಯಾಗಿದ್ದರು ಎಂಬುದನ್ನೂ ನೆನಪಿಸಿಕೊಳ್ಳಬೇಕು.

ಒಟ್ಟಾರೆ ಇಸ್ರೇಲ್ ಜೊತೆಗಿನ ಬಾಂಧವ್ಯದಲ್ಲಿ ಭಾರತಕ್ಕೆ ಹಿಂಜರಿಕೆ ಹಾಗೂ ಮಿತಿಗಳಿದ್ದವು. ಈಗ ಅದರಿಂದ ಹೊರಬರಲಾಗಿದೆ.   ಇಸ್ರೇಲ್ ಜೊತೆಗಿನ ಬಾಂಧವ್ಯವನ್ನು ಮುಕ್ತವಾಗಿ ತೆರೆದಿಡುತ್ತಿರುವುದು ದೊಡ್ಡ ಬದಲಾವಣೆ. ಇಸ್ರೇಲ್‌ಗೆ ಪ್ರಧಾನಿಯವರ ಭೇಟಿ ಅದಕ್ಕೊಂದು ಅಧಿಕೃತತೆಯನ್ನೂ ತಂದುಕೊಟ್ಟಂತಾಗಿದೆ.

ಪ್ರತಿಕ್ರಿಯಿಸಿ (+)