ಭಾನುವಾರ, ಡಿಸೆಂಬರ್ 15, 2019
18 °C
ಕಬ್ಬನ್‌ ಉದ್ಯಾನ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ

ವಾರಾಂತ್ಯದಲ್ಲೂ ಹೆಚ್ಚಾದ ಮಾಲಿನ್ಯ

ಯೋಗಿತಾ ಆರ್‌.ಜೆ. Updated:

ಅಕ್ಷರ ಗಾತ್ರ : | |

ವಾರಾಂತ್ಯದಲ್ಲೂ ಹೆಚ್ಚಾದ ಮಾಲಿನ್ಯ

ಬೆಂಗಳೂರು: ಕಬ್ಬನ್‌ ಉದ್ಯಾನದಲ್ಲಿ  ವಾಹನ ಸಂಚಾರ ನಿಷೇಧವಿರುವ ವಾರಾಂತ್ಯದಲ್ಲೂ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗಿದೆ ಎಂಬ ವಿಷಯ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯಿಂದ ಬಹಿರಂಗಗೊಂಡಿದೆ.

‘ಹೆಚ್ಚು ಜನರ ಓಡಾಟ ಹಾಗೂ ಬಹುತೇಕರು ವಾಹನಗಳಲ್ಲಿ ಉದ್ಯಾನಕ್ಕೆ ಬರುವುದರಿಂದ  ವಾರಾಂತ್ಯದಲ್ಲಿ  ಗಾಳಿಯಲ್ಲಿ ತೇಲಾಡುವ ದೂಳಿನ ಪ್ರಮಾಣ (ಪಿಎಂ10) ಹೆಚ್ಚಾಗಿದೆ’ ಎಂದು ವರದಿ ತಿಳಿಸಿದೆ.

‘ಗ್ರಂಥಾ­ಲಯದ ಸುತ್ತ, ಪ್ರೆಸ್‌ಕ್ಲಬ್‌ನಿಂದ ಕಬ್ಬನ್‌ ಉದ್ಯಾನದ ಪೊಲೀಸ್ ಠಾಣೆವರೆಗೆ, ಬಾಲ­ಭವನ, ವಿಶ್ವೇಶ್ವ­ರಯ್ಯ ವಸ್ತು ಸಂಗ್ರಹಾಲ­ಯದ ಹಿಂಭಾಗ, ಸೆಂಚುರಿ ಕ್ಲಬ್ ಬಲಭಾಗ, ಟೆನಿಸ್ ಕ್ಲಬ್ ಒಳಗೆ, ಹೈಕೋರ್ಟ್ ಮುಂಭಾಗ... ಹೀಗೆ ಉದ್ಯಾನದ ಸುತ್ತಮುತ್ತ ವಾಹನ ನಿಲುಗಡೆ ಅವಕಾಶವಿದೆ. ವಾರಾಂತ್ಯದಲ್ಲಿ ಹೆಚ್ಚು ವಾಹನಗಳು ಉದ್ಯಾನಕ್ಕೆ ಬರುತ್ತವೆ. ಇದು ಮಾಲಿನ್ಯಕ್ಕೆ ಕೊಡುಗೆ ನೀಡಿರಬಹುದು’ ಎಂದು ಕಬ್ಬನ್ ಉದ್ಯಾನ ನಡಿಗೆದಾರರ ಸಂಘದ ಅಧ್ಯಕ್ಷ ಎಸ್. ಉಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

‘ನೃಪತುಂಗ ರಸ್ತೆ ಕಾಮಗಾರಿಗಾಗಿ ಕಬ್ಬನ್‌ ಉದ್ಯಾನದ ಒಳಗೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರಿಂದ ಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ. ಇನ್ನು ನಿರಂತರವಾಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಮಾಲಿನ್ಯ ಯಾವ ಪ್ರಮಾಣದಲ್ಲಿ ಹೆಚ್ಚಾಗುತ್ತದೆ ಎಂಬುದಕ್ಕೆ ಈ ವರದಿ ಉದಾಹರಣೆಯಾಗಿದೆ’ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ (ಕಬ್ಬನ್ ಉದ್ಯಾನ) ಮಹಾಂತೇಶ ಮುರಗೋಡ ತಿಳಿಸಿದರು.

ಮಾಯವಾಗುತ್ತಿದೆ ಪಕ್ಷಿ ಸಂಕುಲ: ‘ಕಬ್ಬನ್‌ ಉದ್ಯಾನ, ಲಾಲ್‌ಬಾಗ್ ಹಾಗೂ ಕೆರೆಗಳಲ್ಲಿ  ಸುಮಾರು 255 ಜಾತಿ ಪಕ್ಷಿಗಳು ವಾಸ ಮಾಡುತ್ತಿದ್ದವು. ಮಾಲಿನ್ಯ ಹೆಚ್ಚಾಗಿದ್ದರಿಂದ ಅವುಗಳಲ್ಲಿ 20ರಿಂದ 25 ಪ್ರಭೇದಗಳು ನಗರ ಬಿಟ್ಟು ಬೇರೆ ಪ್ರದೇಶಗಳಿಗೆ ಹಾರಿಹೋಗಿವೆ’ ಎಂದು ಪಕ್ಷಿಪ್ರಿಯ ಬಿ. ಶಶಿಕುಮಾರ್ ತಿಳಿಸಿದರು.

ಕಬ್ಬನ್ ಉದ್ಯಾನ ನಡಿಗೆದಾರರ ಸಂಘದ ಕಾರ್ಯದರ್ಶಿ ಕವಿತಾ, ‘ಉದ್ಯಾನದಲ್ಲಿ ಶಬ್ದ ಮಾಲಿನ್ಯದಿಂದ ಮೂರು ತಿಂಗಳಲ್ಲಿ ಸಾಕಷ್ಟು ಬಾವಲಿಗಳು ಮೃತಪಟ್ಟಿವೆ. ಬಾವಲಿಗಳು 12 ಡೆಸಿಬಲ್‌ವರೆಗಿನ ಶಬ್ದವನ್ನು ಮಾತ್ರ ತಡೆದುಕೊಳ್ಳುತ್ತವೆ. ಕಬ್ಬನ್ ಉದ್ಯಾನದಲ್ಲಿ ಇತ್ತೀಚಿನ ದಿನಗಳಲ್ಲಿ ಗರಿಷ್ಠ 85 ಡೆಸಿಬಲ್‌ವರೆಗೂ ದಾಖಲಾಗುತ್ತಿದೆ’ ಎಂದು ಹೇಳಿದರು.

***

‘ಅಧಿಕೃತ ಆದೇಶ ಬಂದಿಲ್ಲ’

‘ಕಬ್ಬನ್ ಉದ್ಯಾನದಲ್ಲಿ ಭಾನುವಾರ ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲೂ ವಾಹನ ಸಂಚಾರಕ್ಕೆ ಅವಕಾಶ ನೀಡಿದ ಆದೇಶವನ್ನು ನಗರ ಪೊಲೀಸ್ ಕಮಿಷನರ್ ಪ್ರವೀಣ್ ಸೂದ್ ಹಿಂಪಡೆದಿದ್ದಾರೆ. ಆದರೆ, ಆ ಕುರಿತು ಅಧಿಕೃತ ಆದೇಶ ಇನ್ನೂ ನೀಡಿಲ್ಲ’ ಎಂದು ರಾಜ್ಯ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್‌ ತಿಳಿಸಿದರು.

‘ಜೂನ್‌ 9ರಂದು ಸೂದ್‌ ಅವರು ಈ ಆದೇಶ ಹೊರಡಿಸಿದ್ದರು. ನಂತರ ತೋಟಗಾರಿಕೆ ಇಲಾಖೆ ಆಯುಕ್ತರೊಂದಿಗೆ ಸಭೆ ನಡೆಸಿ, ಆದೇಶವನ್ನು ಹಿಂಪಡೆಯುವುದಾಗಿ ಹೇಳಿದ್ದರು. ಈ ತಿಂಗಳ ಎರಡನೇ ಶನಿವಾರಕ್ಕೆ ಎರಡೇ ದಿನ ಬಾಕಿ ಇದೆ. ಅವರು ಅಧಿಕೃತ ಆದೇಶ ಹೊರಡಿಸದ ಹೊರತು ವಾಹನ ಸಂಚಾರ ನಿರ್ಬಂಧಿಸಲು ಸಾಧ್ಯವಾಗುವುದಿಲ್ಲ’ ಎಂದು ಹೇಳಿದರು.

***

ವಾಹನ ಸಂಚಾರದ ಸರ್ವೇ

‘ಉದ್ಯಾನದ ನಾಲ್ಕು ಮಾರ್ಗಗಳಲ್ಲಿ ಸಂಚಾರ ನಿರ್ಬಂಧಿಸಲು ಪ್ರಸ್ತಾವ ಸಲ್ಲಿಸಿದ್ದೆವು. ಯಾವ ರಸ್ತೆಯಲ್ಲಿ ಎಷ್ಟು ವಾಹನಗಳು ಸಂಚರಿಸುತ್ತವೆ ಎಂಬ ಬಗ್ಗೆ ಸರ್ವೇ ಮಾಡಲು ಲೋಕೋಪಯೋಗಿ ಇಲಾಖೆಗೆ ಕೋರಿದ್ದೇವೆ. ಶೀಘ್ರ ಸರ್ವೇ ಪ್ರಾರಂಭವಾಗಲಿದೆ. ನಂತರ ಸಂಚಾರ ಮಾರ್ಗ ನಿರ್ಬಂಧದ ಬಗ್ಗೆ ನಿರ್ಧರಿಸಿ ಮತ್ತೊಮ್ಮೆ ಪ್ರಸ್ತಾವ ನೀಡುತ್ತೇವೆ’ ಎಂದು ಮಹಾಂತೇಶ ಮುರಗೋಡ ಹೇಳಿದರು.

***

ಕಬ್ಬನ್‌ ಪಾರ್ಕ್‌ನಲ್ಲಿ ಪ್ರತಿದಿನ ವಾಯು ಮಾಲಿನ್ಯ ಮಾಪನ

‘ಮಾನವ ನಿರ್ವಹಣೆ ಹಾಗೂ ಸ್ವಯಂಚಾಲಿತ ಸೇರಿ ಒಟ್ಟು 14 ಮಾಪನಗಳ ಮೂಲಕ ನಗರದ ವಿವಿಧ ಭಾಗಗಳ ಮಾಲಿನ್ಯ ಪ್ರಮಾಣವನ್ನು ಅಳೆಯಲಾಗುತ್ತಿದೆ. ಇದನ್ನು ಹೆಚ್ಚಿಸುವ ಗುರಿ ಇದೆ. ಆ ಹಂತದಲ್ಲಿ ಕಬ್ಬನ್‌ ಉದ್ಯಾನದಲ್ಲಿ ಪ್ರತಿ ದಿನ ಮಾಪನ ಮಾಡಲು ಕೈಗೊಳ್ಳುತ್ತೇವೆ’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)