ಸೋಮವಾರ, ಡಿಸೆಂಬರ್ 16, 2019
26 °C

ತೃತೀಯ ಲಿಂಗಿಗಳಿಗೆ ಕ್ರೀಡಾಕೂಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೃತೀಯ ಲಿಂಗಿಗಳಿಗೆ ಕ್ರೀಡಾಕೂಟ

ಅದು ತಿರುವನಂತಪುರದ ಕ್ರೀಡಾಂಗಣ. ಕೇರಳ ರಾಜ್ಯ ಕ್ರೀಡಾ ಪರಿಷತ್ತಿನಿಂದ ಅಲ್ಲಿ ತೃತೀಯ ಲಿಂಗಿಗಳ ರಾಜ್ಯಮಟ್ಟದ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ರಾಜ್ಯದ ಎಲ್ಲ ಜಿಲ್ಲೆಗಳಿಂದ ನೂರಾರು ಕ್ರೀಡಾಪಟುಗಳು ಈ ಕೂಟದಲ್ಲಿ ಪಾಲ್ಗೊಂಡಿದ್ದರು. ಕೆಲವರು ತಮ್ಮ, ತಮ್ಮ ಜಿಲ್ಲೆಗಳ ಹೆಸರುಗಳಿದ್ದ ಜರ್ಸಿಗಳನ್ನು ತೊಟ್ಟಿದ್ದರೆ, ಉಳಿದವರು ಸಾಂಪ್ರದಾಯಿಕ ಉಡುಗೆಯಲ್ಲೇ ಬಂದಿದ್ದರು. ಸೀರೆ ಉಟ್ಟವರು, ಓಡುವ, ಜಿಗಿಯುವ ಗಡಿಬಿಡಿಯಲ್ಲೂ ಮೇಕ್‌ಅಪ್‌ ಕಡೆ ಗಮನಕೊಟ್ಟವರು ಅಲ್ಲಿದ್ದರು.

ತೃತೀಯ ಲಿಂಗಿಗಳ ಕ್ರೀಡಾಕೂಟವನ್ನು ಸರ್ಕಾರವೇ ಮುಂದೆ ನಿಂತು ಆಯೋಜಿಸಿದ್ದು ಅದೇ ಮೊದಲು. ‘ನಮಗೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ನಡೆಸುವ ಉತ್ಸಾಹವೂ ಇದೆ. ಆದರೆ, ಇತರ ರಾಜ್ಯಗಳಲ್ಲಿ ಇನ್ನೂ ರಾಜ್ಯಮಟ್ಟದ ಕ್ರೀಡಾಕೂಟಗಳು ಶುರುವಾಗಿಲ್ಲ’ ಎಂದು ಕೇರಳದ ಕ್ರೀಡಾ ಇಲಾಖೆಯ ಅಧಿಕಾರಿಗಳು ವಿಷಾದದಿಂದ ಹೇಳುತ್ತಾರೆ.

100, 200 ಮತ್ತು 400 ಮೀ. ಓಟ, 4X100 ಮೀ ರಿಲೆ ಸ್ಪರ್ಧೆಗಳು ತುರಿಸಿನ ಪೈಪೋಟಿಯನ್ನೇ ಕಂಡವು. ಮಿಕ್ಕ ಸ್ಪರ್ಧೆಗಳಲ್ಲಿ ಪೈಪೋಟಿಗಿಂತ ಸಂಭ್ರಮ ಹೆಚ್ಚಾಗಿತ್ತು. 100 ಮೀ. ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಅರುಣ್‌ ಉರ್ಫ್‌ ಅರುಣಿಮಾ, ‘ಮುಂದಿನ ವರ್ಷ ಶಾಟ್‌ ಪಟ್‌ ಸ್ಪರ್ಧೆಯಲ್ಲೂ ಪಾಲ್ಗೊಳ್ಳುವೆ’ ಎಂದು ಸಂಭ್ರಮದಿಂದ ಹೇಳುತ್ತಿದ್ದರು.

‘ಚಿಕ್ಕ ವಯಸ್ಸಿನಲ್ಲಿ ನಾನು ಬಾಲಕಿಯಾಗಿ ಬೆಳೆದಿದ್ದೆ. ಲಿಂಗ ತಾರತಮ್ಯದ ಕಾರಣ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿರಲಿಲ್ಲ. ಚಿಕ್ಕ ವಯಸ್ಸಿನಲ್ಲಿ ಕಂಡಿದ್ದ ಆಟವಾಡುವ ಕನಸು ಈಗ ಕೈಗೂಡಿದೆ. ನೈಜ ಸ್ವಾತಂತ್ರ್ಯದ ಅನುಭವ ಆಗುತ್ತಿದೆ’ ಎಂದು ಅವರು ಖುಷಿಯಿಂದ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದರು.

ಮಲಪ್ಪುರಂ ಜಿಲ್ಲೆಯಿಂದ ಬಂದಿದ್ದ ರಾಕೇಶ್‌ ಉರ್ಫ್‌ ರಾಗಿಣಿ 100 ಮೀ. ಓಟದ ಸ್ಪರ್ಧೆಯಲ್ಲಿ ಕೇವಲ 12.3 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ‘ಅತ್ಯಂತ ವೇಗದ ತೃತೀಯ ಲಿಂಗಿ’ ಎಂಬ ಗೌರವಕ್ಕೆ ಪಾತ್ರರಾಗಿದ್ದರು. ‘ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮುನ್ನ ನಾನು ಯಾವುದೇ ತರಬೇತಿಯಲ್ಲಿ ಪಾಲ್ಗೊಂಡಿರಲಿಲ್ಲ. ಶಾಲಾ ದಿನಗಳಲ್ಲಿ ಕೊಕ್ಕೊ ಆಡುತ್ತಿದ್ದೆ ಅಷ್ಟೆ’ ಎಂದು ಹೇಳುತ್ತಿದ್ದರು.

ಕೇರಳದ ತೃತೀಯ ಲಿಂಗಿಗಳ ಕ್ರೀಡಾಕೂಟ ಒಂದು ಆರಂಭವಷ್ಟೇ. ಇಲ್ಲಿಯೂ ಪ್ರೇಕ್ಷಕರ ಕೊರತೆ ತೀವ್ರವಾಗಿ ಕಾಡಿದೆ. ದೇಶದಾದ್ಯಂತ ಈ ಸಂಸ್ಕೃತಿಯನ್ನು ಬೆಳೆಸಲು ತುಂಬಾ ಕಾಲಾವಕಾಶಬೇಕು ಎನ್ನುತ್ತಾರೆ ಈ ಸಮುದಾಯದ ಕಲ್ಯಾಣ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಪಿ.ಕೆ. ಪ್ರಜಿತ್‌.

ಸ್ಪರ್ಧಾಳುಗಳು ಶಾಟ್‌ ಪಟ್‌ ಮತ್ತು ಲಾಂಗ್‌ ಜಂಪ್‌ ಸ್ಪರ್ಧೆಗಳಲ್ಲಿ ಪದೇ ಪದೇ ಪೌಲ್‌ಗಳನ್ನು ಮಾಡುತ್ತಿದ್ದರು. ಹೀಗಾಗಿ ಕ್ರೀಡೆಗಳ ನಿಯಮಾವಳಿ ಕುರಿತು ಅವರಿಗೆ ಸರಿಯಾದ ಮಾಹಿತಿ ನೀಡುವ ದೃಷ್ಟಿಯಿಂದ ಕೂಟದ ಮುಂಚೆ ಮೂರು ದಿನಗಳ ತರಬೇತಿಯನ್ನು ನೀಡಲಾಗಿತ್ತು ಎಂದು ಅವರು ವಿವರಿಸುತ್ತಾರೆ.

ತೃತೀಯ ಲಿಂಗಿಗಳ ಕ್ರೀಡಾ ಕೌಶಲವನ್ನು ಹೆಚ್ಚಿಸಲು ಕೇರಳದ ಪ್ರತಿ ಜಿಲ್ಲೆಯಲ್ಲೂ ತರಬೇತಿ ಕೇಂದ್ರಗಳನ್ನು ತೆರೆಯುವ ಚಿಂತನೆ ಕೂಡ ನಡೆದಿದೆ. ಬೇರೆ ರಾಜ್ಯಗಳಲ್ಲೂ ಇಂತಹ ಕ್ರೀಡಾಕೂಟ ನಡೆಸಲು ಪ್ರಯತ್ನಗಳು ಆರಂಭವಾಗಿವೆ. ಅಂತೂ ಈ ಕೂಟ ದೇಶದ ಕ್ರೀಡಾ ಚರಿತ್ರೆಯಲ್ಲಿ ಹೊಸ ಭಾಷ್ಯ ಬರೆದಿದೆ.

ಪ್ರತಿಕ್ರಿಯಿಸಿ (+)