ಭಾನುವಾರ, ಡಿಸೆಂಬರ್ 15, 2019
18 °C
ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌

ರಾಜ್ಯದ ತನಿಷ್‌ ಜಾರ್ಜ್ ದಾಖಲೆ

ಪಿಟಿಐ Updated:

ಅಕ್ಷರ ಗಾತ್ರ : | |

ರಾಜ್ಯದ ತನಿಷ್‌ ಜಾರ್ಜ್ ದಾಖಲೆ

ಪುಣೆ: ಕರ್ನಾಟಕದ ತನಿಷ್ ಜಾರ್ಜ್‌ ಮ್ಯಾಥ್ಯೂ ಇಲ್ಲಿ ನಡೆಯುತ್ತಿರುವ 44ನೇ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ನೂತನ ಕೂಟ ದಾಖಲೆಯೊಂದಿಗೆ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.

ಚಾಂಪಿಯನ್‌ಷಿಪ್‌ನ ಮೂರನೇ ದಿನ ಬಾಲಕರ 100ಮೀಟರ್ಸ್ ಬಟರ್‌ಫ್ಲೈ ವಿಭಾಗದಲ್ಲಿ (58.37) ಮೊದಲ ಸ್ಥಾನ ಪಡೆದ ತನಿಷ್‌ 2015ರಲ್ಲಿ ಗೋವಾದ ಕ್ಸೇವಿಯರ್ ಡಿಸೋಜಾ (59.23) ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದರು. ಇದೇ ವಿಭಾಗದಲ್ಲಿ ಕರ್ನಾಟಕದವರೇ ಆದ ಪಿ.ಪ್ರಸಿದ್ಧ ಕೃಷ್ಣ (59.55) ಬೆಳ್ಳಿ ಗೆದ್ದರು.

ಬಾಲಕಿಯರ 800ಮೀ ಫ್ರೀಸ್ಟೈಲ್ ವಿಭಾಗದಲ್ಲಿ ಖುಷಿ ದಿನೇಶ್ (9:42.12) ಚಿನ್ನ ಜಯಿಸಿದರು. ಇದೇ ವಿಭಾಗದ ಬೆಳ್ಳಿ ಪದಕವನ್ನು ರಾಜ್ಯದವರೇ ಆದ ಪೂಜಿತಾ ಜಿ. ಮೂರ್ತಿ (9:47.77) ಗೆದ್ದರು. 200ಮೀ ಬಾಲಕಿಯರ ಬಟರ್‌ಫ್ಲೈ ವಿಭಾಗದಲ್ಲಿ ಜಿ.ಸಾಚಿ (2:33.52) ಚಿನ್ನಕ್ಕೆ ಕೊರಳೊಡ್ಡಿದರು. 4x200ಮೀ ಬಾಲಕಿಯರ ಫ್ರೀಸ್ಟೈಲ್ ವಿಭಾಗದಲ್ಲಿ ಕರ್ನಾಟಕ ತಂಡ (9:15.38) ಚಿನ್ನ ಜಯಿಸಿದೆ. ಮಹಿಳೆಯರ 4x100 ಮೆಡ್ಲೆ ವಿಭಾಗದಲ್ಲಿ ಕೂಡ ರಾಜ್ಯ ತಂಡ (4:43.03) ಚಿನ್ನ ಗೆದ್ದುಕೊಂಡಿದೆ.

ಮೊದಲ ಗುಂಪಿನ ಬಾಲಕರ 4x200 ಫ್ರೀಸ್ಟೈಲ್ ವಿಭಾಗದಲ್ಲಿ ಕರ್ನಾಟಕ ತಂಡ (7:57.07)  ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿದೆ. 2016ರಲ್ಲಿ ಬೆಂಗಳೂರಿನಲ್ಲಿ ನಡೆದ ಈಜು ಚಾಂಪಿಯನ್‌ಷಿಪ್‌ನಲ್ಲಿ ಮಹಾರಾಷ್ಟ್ರ ತಂಡ (8:04.39) ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿತು. ಇದೇ ವಿಭಾಗದ ಎರಡನೇ ಗುಂಪಿನ ಪಂದ್ಯದಲ್ಲಿ ರಾಜ್ಯ ತಂಡ (8:35.44) ಚಿನ್ನ ಗೆದ್ದಿದೆ.

ಗುಂಪು ಎರಡರ 4x100ಮೀ ಬಾಲಕಿಯರ ಮೆಡ್ಲೆ ವಿಭಾಗದಲ್ಲಿ ಕರ್ನಾಟಕ (4:45.53) ನೂತನ ಕೂಟ ದಾಖಲೆ ನಿರ್ಮಿಸಿತು.

ಈ ಮೊದಲು 2012ರಲ್ಲಿ ಚೆನ್ನೈನಲ್ಲಿ ಮಹಾರಾಷ್ಟ್ರ ತಂಡ (4:50.13) ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿತು. ಬಾಲಕರ 400ಮೀ ಮೆಡ್ಲೆ ವಿಭಾಗದಲ್ಲಿ ಹೇಮಂತ್ ಜೇನುಕಲ್ (4:53.98) ಕಂಚು ಗೆದ್ದರೆ, 4x200ಮೀ ಫ್ರೀಸ್ಟೈಲ್‌ ವಿಭಾಗದಲ್ಲಿ ಕರ್ನಾಟಕ ತಂಡ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತು.  ಮಹಿಳೆಯರ 4x200ಮೀ ಫ್ರೀಸ್ಟೈಲ್ ವಿಭಾಗದಲ್ಲಿ ರಾಜ್ಯ ತಂಡ ಬೆಳ್ಳಿಗೆ ಕೊರಳೊಡ್ಡಿತು. 100ಮೀ ಬ್ಯಾಕ್‌ ಸ್ಟ್ರೋಕ್ ಬಾಲಕಿಯರ ವಿಭಾಗದಲ್ಲಿ ಸುವನಾ ಸಿ. ಭಾಸ್ಕರ್ ಬೆಳ್ಳಿ ಜಯಿಸಿದರು.

ಬಾಲಕರ 100ಮೀ ಬಟರ್‌ಫ್ಲೈ ವಿಭಾಗದಲ್ಲಿ ಎಮ್‌.ರಾಹುಲ್ ಕಂಚು ಗೆದ್ದರೆ, 50 ಮೀ ಬ್ರೆಸ್ಟ್‌ಸ್ಟ್ರೋಕ್ ವಿಭಾಗದಲ್ಲಿ  ಕರ್ನಾಟಕದ ಸಲೋನಿ ದಲಾಲ್ ಹಾಗೂ ರಿದ್ಧಿ ಎಸ್.ಬೋರಾ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಕ್ಕೆ ಕೊರಳೊಡ್ಡಿದರು. 50ಮೀ ಬಾಲಕಿಯರ ಬ್ರೆಸ್ಟ್‌ಸ್ಟ್ರೋಕ್ ವಿಭಾಗದಲ್ಲಿ ರಾಜ್ಯದ ಮಧುರಾ ಹಾಗೂ ರಚನಾ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಜಯಿಸಿದರು.

50ಮೀ ಬಾಲಕರ ಬ್ರೆಸ್ಟ್‌ಸ್ಟ್ರೋಕ್‌ ವಿಭಾಗದಲ್ಲಿ ಮಾನವ್ ದಿಲೀಪ್‌ ಬೆಳ್ಳಿ ಗೆದ್ದರು. ಇದೇ ವಿಭಾಗದ ಗುಂಪು ಎರಡರಲ್ಲಿ ಎಸ್‌. ಹಿತೆನ್‌ ಮಿತ್ತಲ್‌ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಪ್ರಸಿದ್ಧ ಕೃಷ್ಣ ಬಾಲಕರ 50ಮೀ ಫ್ರೀಸ್ಟೈಲ್ ವಿಭಾಗದಲ್ಲಿ ಕಂಚು ಜಯಿಸಿದರೆ, ಧೃತಿ ಮುರಳೀಧರನ್ ಮಹಿಳೆಯರ 1500ಮೀ ಫ್ರೀಸ್ಟೈಲ್‌ನಲ್ಲಿ ಬೆಳ್ಳಿ ಗೆದ್ದರು.

ಅಗ್ರ ಸ್ಥಾನದಲ್ಲಿ ಕರ್ನಾಟಕ

ಚಾಂಪಿಯನ್‌ಷಿಪ್‌ನ ಮೂರನೇ ದಿನವೂ ಕರ್ನಾಟಕ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.  21 ಚಿನ್ನ, 21 ಬೆಳ್ಳಿ ಹಾಗೂ 17 ಕಂಚು ಸೇರಿ ಒಟ್ಟು 69 ಪದಕ ಗಳನ್ನು ರಾಜ್ಯದ ಸ್ಪರ್ಧಿಗಳು ಗೆದ್ದುಕೊಂಡಿದ್ದಾರೆ. ಮಹಾರಾಷ್ಟ್ರ ಹಾಗೂ ತಮಿಳುನಾಡು ತಂಡಗಳು ಕ್ರಮವಾಗಿ 43, 23 ಪದಕಗಳಿಂದ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ಪ್ರತಿಕ್ರಿಯಿಸಿ (+)