ಭಾನುವಾರ, ಡಿಸೆಂಬರ್ 15, 2019
23 °C

ಮೈದುಂಬಿಕೊಂಡ ‘ಗೋಲಾರಿ’ ಜಲಪಾತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈದುಂಬಿಕೊಂಡ ‘ಗೋಲಾರಿ’ ಜಲಪಾತ

ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಕಾರವಾರ ತಾಲ್ಲೂಕಿನ ತೋಡೂರಿನ ‘ಗೋಲಾರಿ’ ಜಲಧಾರೆ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿ ಹಾಗೂ ಚಾರಣಿಗರ ನೆಚ್ಚಿನ ತಾಣವಾಗಿದೆ.

ಕಾರವಾರದಿಂದ ಸುಮಾರು 17 ಕಿ.ಮೀ. ದೂರದ ತೋಡೂರು ಬಳಿಯ ರಾಷ್ಟ್ರೀಯ ಹೆದ್ದಾರಿ–66ರಿಂದ ಒಳಗಿನ ಅರಣ್ಯ ಪ್ರದೇಶಲ್ಲಿ ಸುಮಾರು 3 ಕಿ.ಮೀ.ವರೆಗೆ ವಾಹನದ ಮೂಲಕ ತೆರಳಿ, ಬಳಿಕ ಮತ್ತೆ 2 ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಬೇಕು. ಆಗ ಕಾಣ ಸಿಗುವುದೇ ಬೆಟ್ಟದ ತುದಿಯಿಂದ ಶ್ವೇತ ಸುಂದರಿಯಂತೆ ಬಳಕುತ್ತಾ, ಬಂಡೆಗಲ್ಲಿನ ನಡುವೆ ಅಂಕುಡೊಂಕಾಗಿ ಧುಮ್ಮಿಕ್ಕುವ ‘ಗೋಲಾರಿ ಜಲಪಾತ’.

ಚಾರಣ ಸ್ಥಳ: ಸುಮಾರು 65 ಅಡಿ ಎತ್ತರದಿಂದ ಧುಮುಕುವ ಈ ಜಲಪಾತ ನಯನ ಮನೋಹರವಾಗಿದೆ. ಇಲ್ಲಿಗೆ ಬರುವ ಯುವಕರ ಗುಂಪು ಕ್ಯಾಮೆರಾ, ಮೊಬೈಲ್‌ಗಳ ಮೂಲಕ ಜಲಪಾತದ ಫೋಟೋ ಕ್ಲಿಕ್ಕಿಸಿ, ಸೆಲ್ಫಿ ತೆಗೆದುಕೊಳ್ಳುತ್ತಾರೆ. ಇಲ್ಲಿಗೆ ಹೋಗಲು ಸರಿಯಾದ ದಾರಿಯಿಲ್ಲದ ಕಾರಣ ಸಾಗುವುದು ಕಷ್ಟದ ಮಾತು.

ಕಾಡಿನ ಮಧ್ಯದಿಂದ ಕಾಲ್ನಡಿಗೆಯಲ್ಲಿ ಕಲ್ಲುಬಂಡೆಗಳನ್ನು ಹತ್ತಿ, ಹಳ್ಳಗಳನ್ನು ದಾಟುತ್ತಾ, ಗಿಡದ ಪೊದೆಗಳನ್ನು ಬೇರ್ಪಡಿಸುತ್ತಾ ಸಾಗಬೇಕು. ಹೀಗಾಗಿ ಇದೊಂದು ಚಾರಣದ ಸ್ಥಳವಾಗಿಯೂ ಕೂಡ ಮಾರ್ಪಟ್ಟಿದೆ.

ಪ್ರವಾಸಿಗರ ಸ್ವರ್ಗ:  ಇತ್ತೀಚಿನ ವರ್ಷಗಳಲ್ಲಿ ಈ ಜಲಪಾತ ಹೊರ ಜಗತ್ತಿಗೆ ಪರಿಚಯವಾಗುತ್ತಿದ್ದು, ಪ್ರವಾಸಿಗರ ಸಂಖ್ಯೆ ಕೂಡ ದಿನೇ ದಿನೇ ಹೆಚ್ಚುತ್ತಿದೆ. ಪ್ರವಾಸಿಗರು ಜಲಪಾತದ ನೀರಿಗಿಳಿದು ಆಟವಾಡುತ್ತಾ ಸಮಯ ಕಳೆಯುತ್ತಾರೆ. ಇಲ್ಲಿ ಯಾವುದೇ ರೀತಿಯ ಮೂಲ ಸೌಕರ್ಯಗಳಿಲ್ಲದ ಕಾರಣ ಪ್ರವಾಸಿಗರು ಊಟ, ತಿಂಡಿಗಳನ್ನು ಹೆಚ್ಚಾಗಿ ಹೊರಗಿನಿಂದಲೇ ತರುತ್ತಾರೆ. ಇನ್ನು ಕೆಲವರು ಸಾಮಗ್ರಿಗಳನ್ನು ತಂದು ಇಲ್ಲಿಯೇ ಅಡುಗೆ ಮಾಡಿ ಸವಿಯುತ್ತಾರೆ.

ಅಪಾಯಕಾರಿ: ಕೆಲ ಯುವಕರ ಗುಂಪು ಜಲಪಾತದ ತುತ್ತತುದಿ ವೀಕ್ಷಣೆಗಾಗಿ ಕಲ್ಲು, ಬಂಡೆಗಳನ್ನು ಹಿಡಿದು ಹತ್ತುತ್ತಾರೆ. ಸಾಹಸದಿಂದ ಬೃಹತ್ ಗಾತ್ರದ ಬಂಡೆಗಳನ್ನು ಹತ್ತಿ ಮೇಲೆ ತಲುಪಿದರೆ, ಪ್ರಕೃತಿಯ ನೈಜ ಸೌಂದರ್ಯ ಸವಿಯಬಹುದಾಗಿದೆ. ಆದರೆ ಇದು ವೀಕ್ಷಣೆಗೆ ಎಷ್ಟು ಸುಂದರವೋ, ಅಷ್ಟೇ ಅಪಾಯಕಾರಿ ಕೂಡ. ಬಂಡೆಗಲ್ಲುಗಳ ಮೇಲೆ ಹತ್ತಿಳಿಯುವಾಗ ಕಾಲು ಒಮ್ಮೆ ಜಾರಿದರೆ ಜೀವಹಾನಿ ನಿಶ್ಚಿತ.

ಮದ್ಯ  ಬಾಟಲಿ ರಾಶಿ ರಾಶಿ...

ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ ಪೈಕಿ ಕೆಲವರು ಪಾನಗೋಷ್ಠಿ ನಡೆಸಿ, ಮದ್ಯ ಬಾಟಲಿಗಳನ್ನು ಇಲ್ಲಿಯೇ ಎಸೆಯುತ್ತಿದ್ದಾರೆ. ಹೀಗಾಗಿ ಇಲ್ಲಿ ವಿಸ್ಕಿ, ಬಿಯರ್ ಬಾಟಲಿಗಳು, ತಿಂಡಿ ಪೊಟ್ಟಣಗಳು ರಾಶಿ ರಾಶಿ ಬಿದ್ದಿದೆ. ಇದು ಅನೇಕ ಪ್ರವಾಸಿಗರಿಗೆ ಅಸಹ್ಯ ಉಂಟುಮಾಡಿದೆ.

* * 

ಗೋಲಾರಿ ಜಲಪಾತ ರಮಣೀಯವಾಗಿದೆ. ನಿಸರ್ಗದ ಸೌಂದರ್ಯ ಸವಿಯಲೆಂದು ಒಮ್ಮೆ ಇಲ್ಲಿಗೆ ಭೇಟಿ ನೀಡಿದರೆ ಊರಿಗೆ ಮರಳಲು ಮನಸ್ಸು ಒಪ್ಪುವುದಿಲ್ಲ

ಶ್ಯಾಮ್ ಉಳ್ವೇಕರ

ಸ್ಥಳೀಯ ಪ್ರವಾಸಿ

 

ಪ್ರತಿಕ್ರಿಯಿಸಿ (+)