ಭಾನುವಾರ, ಡಿಸೆಂಬರ್ 8, 2019
25 °C

2ನೇ ನಿಮಿಷದಲ್ಲಿ 12 ಸಾವಿರ ಸಸಿ ನಾಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2ನೇ ನಿಮಿಷದಲ್ಲಿ 12 ಸಾವಿರ ಸಸಿ ನಾಟಿ

ಹಾವೇರಿ: ‘ಬರಗಾಲ ನಿವಾರಣೆ, ಪರಿಸರ ಸಂರಕ್ಷಣೆ, ಮಳೆಗಾಗಿ ಪ್ರಾರ್ಥನೆ ಹಾಗೂ 12 ಧಾರ್ಮಿಕ ವಿಶೇಷತೆಗಳ ಹಿನ್ನೆಲೆಗಳಲ್ಲಿ ಅಗಡಿ ಅಕ್ಕಿಮಠದ ಆಶ್ರಯದಲ್ಲಿ ಇದೇ 9ರಂದು ಎರಡೇ ನಿಮಿಷದಲ್ಲಿ 12 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿಸರ ಜಾಗೃತಿ ಕಾರ್ಯಕ್ರಮವನ್ನು  ಜೂನ್ 4ರಿಂದ ಆರಂಭಿಸಿದ್ದು, ಜುಲೈ 9ರವರೆಗೆ ‘ಪರಿಸರ ಜಾತ್ರೆ –2017’ ಹೆಸರಿನಲ್ಲಿ ವಿನೂತನವಾಗಿ  ನಡೆಸಲಾಗುತ್ತಿದೆ. 12 ಧಾರ್ಮಿಕ ವಿಶೇಷತೆಗಳ ಹಿನ್ನೆಲೆಯಲ್ಲಿ ತಾಲ್ಲೂಕಿನ ಆಯ್ದ 33 ಗ್ರಾಮಗಳಲ್ಲಿ ಒಟ್ಟು 12 ಸಾವಿರ ಸಸಿಗಳನ್ನು ಎರಡೇ ನಿಮಿಷದಲ್ಲಿ ನೆಡುವ ಮೂಲಕ, ಹೊಸ ದಾಖಲೆ ನಿರ್ಮಿಸುವ ಕಾರ್ಯಕ್ರಮ ಇದಾಗಿದೆ’ ಎಂದರು.

‘‘ಬಸವ ಸಸಿ’ ಎಂದು ನಾಮಕರಣ ಮಾಡಲಾದ ಸಸಿಗಳನ್ನು ಇದೇ 9ರಂದು ಬೆಳಿಗ್ಗೆ 11ಕ್ಕೆ ನಗರ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ನೆಡುವ ಮೂಲಕ ಸಾಲುಮರದ ತಿಮ್ಮಕ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಬಳಿಕ ತಾಲ್ಲೂಕಿನ ಆಯ್ದ 33 ಗ್ರಾಮಗಳಿಗೆ ಸಂದೇಶ ನೀಡಿ ಎರಡೇ ನಿಮಿಷದಲ್ಲಿ 12 ಸಾವಿರ ಸಸಿಗಳನ್ನು   ನೆಡಲಾಗುವುದು’ ಎಂದರು.

‘ಅಂದು ಸಂಜೆ 4ಕ್ಕೆ ವಿವಿಧ ಕಲಾ ತಂಡಗಳೊಂದಿಗೆ ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಸಾಲುಮರದ ತಿಮ್ಮಕ್ಕನವರನ್ನು ಮೆರವಣಿಗೆ ಮೂಲಕ ಕರೆದುಕೊಂಡು       ಬರಲಾಗುವುದು. ತಾಲ್ಲೂಕಿನ 33 ಗ್ರಾಮಗಳಲ್ಲಿ ‘ಬಸವ ಸಸಿ’ಗಳನ್ನು ನೆಟ್ಟ ಕಾರ್ಯಕರ್ತರು ಆ ಬಳಿಕ ‘ಬಸವ ಸಸಿ’ ಚಿತ್ರದ ಸಮವಸ್ತ್ರ ಧರಿಸಿಕೊಂಡು ಕಾರ್ಯಕ್ರಮಕ್ಕೆ ಬರುವರು’ ಎಂದರು.

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಬಸವ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಅರವಿಂದ ಜತ್ತಿ, ಚಲನಚಿತ್ರ ನಟ ಚೇತನ್, ಕಿರುತೆರೆ ನಟರಾದ ಸಿದ್ದಾರ್ಥ ಹಾಗೂ ಸಾನ್ವಿ, ಚಲನಚಿತ್ರ ಹಿನ್ನೆಲೆ ಗಾಯಕ ರಾಜೇಶ ಕೃಷ್ಣನ್, ಸಾಹಿತಿ ರಂಜಾನ್ ದರ್ಗಾ, ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ಸಂಸದ ಶಿವಕುಮಾರ ಉದಾಸಿ, ಶಾಸಕ ಬಸವರಾಜ ಶಿವಣ್ಣನವರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಹಾಗೂ ಉದ್ಯಮಿ ಪವನ ದೇಸಾಯಿ ಪಾಲ್ಗೊಳ್ಳುವರು.

ಸಭಾ ಕಾರ್ಯಕ್ರಮದ ನಂತರ ವಿವಿಧ ಕಲಾ ತಂಡ ಹಾಗೂ ಹಾಸ್ಯ ಕಲಾವಿದರಿಂದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿವೆ’ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ಮಹೇಶ ಚಿನ್ನಿಕಟ್ಟಿ, ಶಿವರಾಜ ಅಂಗಡಿ, ಶಿವರಾಜ ಒಳಸಂಗದ, ಅಗಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಫಕ್ಕೀರೇಶ ನಿರ್ವಾಣಿಮಠ ಹಾಗೂ ಸಿ.ಬಿ.ಕುರುವತ್ತಿಗೌಡ್ರ ಇದ್ದರು.

* * 

ಸತತ ಬರಗಾಲದಿಂದ ಬಳಲಿದ ಜನರಿಗೆ ಈ ಬಾರಿಯೂ ಬರಗಾಲದ ಭೀತಿ ಕಾಡುತ್ತಿದೆ. ಪರಿಸರ ರಕ್ಷಣೆಯೊಂದೇ ನಮ್ಮ ಉಳಿವಿನ ದಾರಿಯಾಗಿದೆ

ಗುರುಲಿಂಗ ಸ್ವಾಮೀಜಿ

ಅಕ್ಕಿಮಠ, ಅಗಡಿ

ಪ್ರತಿಕ್ರಿಯಿಸಿ (+)