ಶನಿವಾರ, ಡಿಸೆಂಬರ್ 7, 2019
16 °C

ಸೌಟು ಹಿಡಿದ ಎಂಜಿನಿಯರ್, ಪಿಎಚ್‌ಡಿ ಪದವೀಧರರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೌಟು ಹಿಡಿದ ಎಂಜಿನಿಯರ್, ಪಿಎಚ್‌ಡಿ ಪದವೀಧರರು!

ತುಮಕೂರು: ಯಂತ್ರಗಳನ್ನು ದುರಸ್ತಿ ಮಾಡಬೇಕಾದವರು, ಶಿಕ್ಷಕರಾಗಿ ಪಾಠ ಮಾಡಬೇಕಾದವರು, ತಂತ್ರಾಂಶ ಅಭಿವೃದ್ಧಿಪಡಿಸಬೇಕಾದ ಎಂಜಿನಿಯರ್‌ಗಳು, ಪಿಎಚ್.ಡಿ ಪದವೀಧರರು ಬುಧವಾರ ಸೌಟು ಹಿಡಿದು ತರಹೇವಾರಿ ರುಚಿ ರುಚಿ ಅಡುಗೆ ಮಾಡಿದರು.

ಇವರು ಅಡುಗೆ ಮಾಡಿದ್ದು ಯಾವುದೋ ಅಡುಗೆ ಸ್ಪರ್ಧೆಯಲ್ಲಿ ಅಲ್ಲ; ಅಡುಗೆ ಸಹಾಯಕ ಹುದ್ದೆ ನೇಮಕಾತಿಗಾಗಿ ಸಮಾಜ ಕಲ್ಯಾಣ ಇಲಾಖೆ ನಡೆಸಿದ ಪ್ರಾಯೋಗಿಕ ಪರೀಕ್ಷೆಯಲ್ಲಿ ಇವರು ಸೌಟು ಹಿಡಿದಿದ್ದರು.

ಜಿಲ್ಲೆಯಲ್ಲಿ ಇಲಾಖೆಯಿಂದ ನಡೆಸುವ 92 ವಿದ್ಯಾರ್ಥಿ ನಿಲಯಗಳಲ್ಲಿ  51 ಅಡುಗೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಬುಧವಾರ ನಡೆಸಿದ ಪ್ರಾಯೋಗಿಕ ಪರೀಕ್ಷೆಯಲ್ಲಿ ಕಂಡುಬಂದ ನೋಟವಿದು. ಅಡುಗೆ ಸಹಾಯಕರ ಹುದ್ದೆ ತುಂಬಲು ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು 3,313 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 66 ಮಂದಿಯನ್ನು ಪ್ರಾಯೋಗಿಕ ಪರೀಕ್ಷೆಗೆ ಆಯ್ಕೆ ಮಾಡಿ ಬುಧವಾರ ಪರೀಕ್ಷೆ ನಡೆಸಲಾಯಿತು.

ಈ ಹುದ್ದೆಗೆ ನಿಗದಿ ಪಡಿಸಿದ್ದ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ. ಎಂಜಿನಿಯರ್, ಪಿಎಚ್‌ಡಿ, ಐಟಿಐ ಪದವಿ ಪಡೆದವರಿಗಲ್ಲ ಎಂದು ಅಧಿಕಾರಿಗಳು ಹೇಳಿದರೂ ಪರವಾಗಿಲ್ಲ, ಇದು ಸರ್ಕಾರಿ ನೌಕರಿ. ಅದಕ್ಕೆ ಬಂದಿದ್ದೇವೆ ಎಂದು ಆಕಾಂಕ್ಷಿಗಳು ಉತ್ತರಿಸಿದರು.

ಯಾವುದೇ ಪದವಿ ಪಡೆದರೂ, ಸ್ಪರ್ಧಾತ್ಮಕ ಪರೀಕ್ಷೆ ಬರೆದರೂ ಬೇಗ ನೌಕರಿ ಸಿಗುತ್ತಿಲ್ಲ. ಅಡುಗೆ ಸಹಾಯಕ ಹುದ್ದೆ ಸರ್ಕಾರಿ ನೌಕರಿ. ನೌಕರಿ ಸೇರಿದ ತಕ್ಷಣ ಮೂಲವೇತನ ₹ 9 ಸಾವಿರ ಇದೆ. ಭತ್ಯೆ ಎಲ್ಲ ಸೇರಿ ಕನಿಷ್ಠ ₹ 20 ಸಾವಿರ ಸಿಗುತ್ತದೆ. ಸರ್ಕಾರಿ ನೌಕರಿ ಎಂಬ ಭದ್ರತೆಯೂ ಇರುತ್ತದೆ ಎಂಬ ಕಾರಣಕ್ಕೆ ಬಂದಿದ್ದಾಗಿ ಆಕಾಂಕ್ಷಿಗಳು  ಅಧಿಕಾರಿಗಳೆದುರು ಹೇಳಿಕೊಂಡರು.

ಸಿಇಓ ವೀಕ್ಷಣೆ: ಪ್ರಾಯೋಗಿಕ ಪರೀಕ್ಷೆ ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಶಾಂತಾರಾಮ್, ಅಡುಗೆ ಸಹಾಯಕ ಹುದ್ದೆ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿದೆ ಎಂದರು.

41 ಕಾವಲುಗಾರರ ಹುದ್ದೆಗೆ ಗುರುವಾರ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯಲಿದೆ. ಈ ಹುದ್ದೆಗೆ 1,879 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 99 ಮಂದಿ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಹೇಳಿದರು.

ಏನೇನು ಅಡುಗೆ ಮಾಡಿದರು?

ರವೆ ಉಪ್ಪಿಟ್ಟು, ಚಪಾತಿ, ತರಕಾರಿ ಸಾಂಬಾರು, ರಾಗಿ ಮುದ್ದೆ, ಚಿತ್ರಾನ್ನ, ಪುಳಿಯೋಗರೆ, ಕೇಸರಿಬಾತ್, ಪಲಾವ್, ತರಕಾರಿ ಪಲ್ಯ, ಅವಲಕ್ಕಿ ಉಪ್ಪಿಟ್ಟು– ಒಟ್ಟು 10 ಬಗೆಯ ಉಪಾಹಾರ ಮತ್ತು ಊಟದ ಐಟಂಗಳನ್ನು ಹುದ್ದೆ ಆಕಾಂಕ್ಷಿಗಳು ಪ್ರಾಯೋಗಿಕ ಪರೀಕ್ಷೆ ವೇಳೆ ತಯಾರಿಸಿದರು.

ಸ್ವಲ್ಪ ಎಣ್ಣೆ ಜಾಸ್ತಿಯಾಯ್ತು.. ಬೇಳೆ ಹೊತ್ತಿಬಿಟ್ತು, ಕೇಸರಿಬಾತ್‌ಗೆ  ಸಕ್ಕರೆ ಜಾಸ್ತಿಯಾಯ್ತು, ನಾನು ತಯಾರಿಸಿದ್ದ ಅವಲಕ್ಕಿ ಸೂಪರ್ ಎಂದು ಆಕಾಂಕ್ಷಿಗಳು ತಮ್ಮ ತಮ್ಮಲ್ಲಿಯೇ ಮಾತನಾಡಿಕೊಂಡರು.

ಪ್ರತಿ ಅಡುಗೆ ತಯಾರಿಗೆ 30 ನಿಮಿಷ

ಅಡುಗೆ ತಯಾರಿಗೆ ಬೇಕಾದ ಪಾತ್ರೆ, ಆಹಾರ ಪದಾರ್ಥ, ಪರಿಕರಗಳನ್ನು ಇಲಾಖೆಯಿಂದ ಒದಗಿಸಲಾಗಿತ್ತು. 10 ಬಗೆಯ ಅಡುಗೆಗೆ 10 ಕೌಂಟರ್‌ ಮಾಡಲಾಗಿದೆ. ಪ್ರತಿ ಅಡುಗೆ ತಯಾರಿಗೆ 30 ನಿಮಿಷ ನಿಗದಿಪಡಿಸಲಾಗಿತ್ತು.  ಪ್ರತಿ ಕೌಂಟರ್‌ನಲ್ಲಿ 4 ಮಂದಿ ತೀರ್ಪುಗಾರರನ್ನು ನಿಯೋಜಿಸಲಾಗಿತ್ತು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ದೇವರಾಜ್ ಹೇಳಿದರು.

ಅಂಕಿ -ಅಂಶ

51 ಖಾಲಿ ಇರುವ ಅಡುಗೆ ಸಹಾಯಕರ ಹುದ್ದೆ

3313 ಅರ್ಜಿ ಸಲ್ಲಿಸಿದ್ದವರು

41 ಕಾವಲುಗಾರ ಹುದ್ದೆ

* * 

ನಾನು ಪಿಯುಸಿ ಮತ್ತು ಐಟಿಐ ಶಿಕ್ಷಣ ಪಡೆದಿದ್ದೇನೆ. ಎಲ್ಲ ತರಹದ ಅಡುಗೆಯನ್ನು ಚೆನ್ನಾಗಿ ಮಾಡುತ್ತೇನೆ. ಜೀವನಕ್ಕೆ ಉದ್ಯೋಗ ಅವಶ್ಯ

ಚೇತನ್‌ಕುಮಾರ್, ಹೊಸಕೆರೆ, ಗುಬ್ಬಿ ತಾಲ್ಲೂಕು

 

ಪ್ರತಿಕ್ರಿಯಿಸಿ (+)