ಶುಕ್ರವಾರ, ಡಿಸೆಂಬರ್ 6, 2019
19 °C

ಫಿಫಾ: 96ನೇ ಸ್ಥಾನಕ್ಕೆ ಭಾರತ

Published:
Updated:
ಫಿಫಾ: 96ನೇ ಸ್ಥಾನಕ್ಕೆ ಭಾರತ

ನವದೆಹಲಿ: ಭಾರತ ಫುಟ್‌ಬಾಲ್‌ ತಂಡ ಗುರುವಾರ ಪ್ರಕಟವಾಗಿರುವ ನೂತನ ಫಿಫಾ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 96ನೇ ಸ್ಥಾನಕ್ಕೇರಿದೆ. ಹಿಂದಿನ ಎರಡು ದಶಕ ಗಳಿಗೆ ಹೋಲಿಸಿದರೆ ಇದು ತಂಡದ ಉತ್ತಮ ಸಾಧನೆ ಎನಿಸಿದೆ.

ವಿಶ್ವ ರ್‍ಯಾಂಕಿಂಗ್‌ನಲ್ಲಿ 94ನೇ ಸ್ಥಾನ ಗಳಿಸಿದ್ದು ಭಾರತದ ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ. 1996ರ ಫೆಬ್ರುವರಿಯಲ್ಲಿ ತಂಡ ಈ ಮೈಲುಗಲ್ಲು ನೆಟ್ಟಿತ್ತು. 1993ರ ನವೆಂಬರ್‌ನಲ್ಲಿ ತಂಡ 99ನೇ ಸ್ಥಾನದಲ್ಲಿ ಕಾಣಿಸಿಕೊಂಡಿತ್ತು.

ಭಾರತ ತಂಡ ತಾನಾಡಿರುವ ಹಿಂದಿನ 15 ಪಂದ್ಯಗಳ ಪೈಕಿ 13ರಲ್ಲಿ ಗೆದ್ದಿದೆ. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 341ಕ್ಕೆ ಹೆಚ್ಚಿಸಿಕೊಂಡಿದೆ.

ಫೆಬ್ರುವರಿ 2015ರಲ್ಲಿ ಸ್ಟೀಫನ್‌ ಕಾನ್‌ಸ್ಟೆಂಟೈನ್‌ ಅವರು ತಂಡದ ಮುಖ್ಯ ಕೋಚ್‌ ಆಗಿ ನೇಮಕವಾಗಿದ್ದರು. ಅವರು ಕೋಚ್‌ ಹುದ್ದೆಗೇರಿದ ಒಂದು ತಿಂಗಳಲ್ಲಿ  173ನೇ ಸ್ಥಾನಕ್ಕೆ ಕುಸಿದಿದ್ದ ತಂಡ ಬಳಿಕ ಆಡಿದ ಎಲ್ಲಾ ಪಂದ್ಯಗಳಲ್ಲೂ ಗುಣ ಮಟ್ಟದ ಸಾಮರ್ಥ್ಯ ತೋರಿತ್ತು. ಈ ಮೂಲಕ ಎರಡು ವರ್ಷಗಳಲ್ಲಿ 77 ಸ್ಥಾನಗಳ ಪ್ರಗತಿ ಕಂಡಿದೆ.

ಜರ್ಮನಿಗೆ ಅಗ್ರಸ್ಥಾನ: ವಿಶ್ವ ಚಾಂಪಿಯನ್‌ ಜರ್ಮನಿ ತಂಡ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.  ಕಾನ್ಫೆಡರೇಷನ್‌ ಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ಜರ್ಮನಿ ತಂಡ ಒಟ್ಟು ಪಾಯಿಂಟ್ಸ್‌ ಅನ್ನು 1609ಕ್ಕೆ ಹೆಚ್ಚಿಸಿಕೊಂಡಿದ್ದು ಬ್ರೆಜಿಲ್‌ ತಂಡವನ್ನು ಹಿಂದಿಕ್ಕಿದೆ. ಬ್ರೆಜಿಲ್‌ ಖಾತೆಯಲ್ಲಿ 1603 ಪಾಯಿಂಟ್ಸ್‌ ಇವೆ. ಅರ್ಜೆಂಟೀನಾ (1413  ಪಾಯಿಂಟ್ಸ್‌) ತಂಡ ಮೂರನೇ ಸ್ಥಾನದಲ್ಲಿದ್ದು, ಪೋರ್ಚುಗಲ್‌  (1332) ಮತ್ತು ಸ್ವಿಟ್ಜರ್‌ಲೆಂಡ್‌  (1329) ತಂಡಗಳು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿವೆ. ಪೋಲೆಂಡ್‌, ಚಿಲಿ, ಕೊಲಂಬಿಯಾ, ಫ್ರಾನ್ಸ್‌ ಮತ್ತು ಬೆಲ್ಜಿಯಂ ತಂಡಗಳು ಕ್ರಮವಾಗಿ ಆರರಿಂದ ಹತ್ತನೇ ಸ್ಥಾನಗಳಲ್ಲಿವೆ.

‘ಇದು ಭಾರತದ ಫುಟ್‌ಬಾಲ್‌ ಲೋಕ  ಹೆಮ್ಮೆಪಡುವಂತಹ ಸಾಧನೆ. ಎರಡು ವರ್ಷಗಳ ಹಿಂದೆ 173ನೇ ಸ್ಥಾನದಲ್ಲಿದ್ದ ನಮ್ಮ ತಂಡ ಈಗ 96ನೇ ಸ್ಥಾನಕ್ಕೇರಿರುವುದು ನಿಜಕ್ಕೂ ಮೆಚ್ಚು ವಂತಹದ್ದು. ಕೋಚ್‌ ಹಾಗೂ ಆಟಗಾರರ ಪರಿಶ್ರಮದಿಂದ ಇದು ಸಾಧ್ಯವಾಗಿದೆ. ಇದಕ್ಕಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸು ತ್ತೇನೆ’ ಎಂದು ಅಖಿಲ ಭಾರತ ಫುಟ್‌ ಬಾಲ್‌ ಫೆಡರೇಷನ್‌ನ (ಎಐಎಫ್‌ಎಫ್‌) ಅಧ್ಯಕ್ಷ ಪ್ರಫುಲ್‌ ಪಟೇಲ್‌ ಹೇಳಿದ್ದಾರೆ.

‘ಸೆಪ್ಟೆಂಬರ್‌ 5ರಂದು ನಡೆಯುವ ಎಎಫ್‌ಸಿ ಕಪ್‌ ಅರ್ಹತಾ ಸುತ್ತಿನ ಪಂದ್ಯ ದಲ್ಲಿ ನಮ್ಮ ತಂಡದವರು ಮಕಾವ್‌ ಸವಾಲು ಎದುರಿಸಲಿದ್ದಾರೆ.  ತಂಡ ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಕಂಡಿರುವುದ ರಿಂದ ಈ ಪಂದ್ಯಕ್ಕೂ ಮುನ್ನ ಆಟಗಾರರ ಮನೋಬಲ ಹೆಚ್ಚಿದಂತಾಗಿದೆ’ ಎಂದು ಎಐಎಫ್‌ಎಫ್‌  ಮಹಾ ಕಾರ್ಯದರ್ಶಿ ಕುಶಾಲ್‌ ದಾಸ್‌ ಖುಷಿ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)