ಭಾನುವಾರ, ಡಿಸೆಂಬರ್ 8, 2019
23 °C

ವಿಂಬಲ್ಡನ್‌ : ಸಾನಿಯಾ ಜೋಡಿ ಶುಭಾರಂಭ

Published:
Updated:
ವಿಂಬಲ್ಡನ್‌ : ಸಾನಿಯಾ ಜೋಡಿ ಶುಭಾರಂಭ

ಲಂಡನ್‌ : ಭಾರತದ ಸಾನಿಯಾ ಮಿರ್ಜಾ ಮತ್ತು ಬೆಲ್ಜಿಯಂನ ಕರ್ಸ್ಟೆನ್‌ ಫ್ಲಿಪ್‌ಕೆನ್ಸ್‌ ಅವರು ವಿಂಬಲ್ಡನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಶುಭಾರಂಭ ಮಾಡಿದ್ದಾರೆ.

ಮೊದಲ ಸುತ್ತಿನ ಹಣಾಹಣಿಯಲ್ಲಿ ಸಾನಿಯಾ ಮತ್ತು ಫ್ಲಿಪ್‌ಕೆನ್ಸ್‌ 6–4, 6–3ರ ನೇರ ಸೆಟ್‌ಗಳಿಂದ ನವೊಮಿ ಒಸಾಕ ಮತ್ತು ಶುಯಿ ಜಾಂಗ್‌ ಅವರ ಸವಾಲು ಮೀರಿ ನಿಂತರು.

ಟೂರ್ನಿಯಲ್ಲಿ 13ನೇ ಶ್ರೇಯಾಂಕ ಹೊಂದಿರುವ ಸಾನಿಯಾ ಮತ್ತು ಕರ್ಸ್ಟೆನ್‌ ಜೋಡಿ ಎರಡೂ ಸೆಟ್‌ಗಳಲ್ಲೂ ಆಧಿಪತ್ಯ ಸಾಧಿಸಿ ಎದುರಾಳಿಗಳ ಸವಾಲು ಮೀರಿ ನಿಂತರು.

ಪುರವ–ದಿವಿಜ್‌ ಜೋಡಿಗೆ ಜಯ: ಪುರುಷರ ಡಬಲ್ಸ್‌ ವಿಭಾಗದ ಹಣಾಹಣಿಯಲ್ಲಿ ಪುರವ ರಾಜಾ ಮತ್ತು ದಿವಿಜ್‌ ಶರಣ್‌ ಅವರು ಗೆಲುವಿನ ಸಿಹಿ ಸವಿದರು. ಆರಂಭಿಕ ಸುತ್ತಿನ ಹೋರಾಟದಲ್ಲಿ ಪುರವ ಮತ್ತು ದಿವಿಜ್‌ 7–6, 3–6, 6–4, 7–6ರಲ್ಲಿ ಬ್ರಿಟನ್‌ನ ಕೈಲ್‌ ಎಡ್ಮಂಡ್‌ ಮತ್ತು ಪೋರ್ಚುಗಲ್‌ನ ಜಾವೊ ಸೌಸಾ ಅವರನ್ನು ಸೋಲಿಸಿದರು.

ಸುಮಾರು ಮೂರು ಗಂಟೆಗಳ ಕಾಲ ನಡೆದ ಹೋರಾಟದಲ್ಲಿ ಶ್ರೇಯಾಂಕ ರಹಿತ ಭಾರತದ ಆಟಗಾರರು ಶ್ರೇಷ್ಠ ಸಾಮರ್ಥ್ಯ ತೋರಿ ಎದುರಾಳಿಗಳ ಜಯದ ಕನಸಿಗೆ ತಣ್ಣೀರು ಸುರಿದರು.

ಜೀವನ್‌ ಜೋಡಿಗೆ ನಿರಾಸೆ: ಪುರುಷರ ಡಬಲ್ಸ್‌ ವಿಭಾಗದಲ್ಲಿ ಕಣಕ್ಕಿಳಿದಿದ್ದ ಭಾರತದ ಜೀವನ್‌ ನೆಡುಂಚೆಳಿಯನ್‌ ಮತ್ತು ಅಮೆರಿಕಾದ ಜೇರೆಡ್‌  ಡೊನಾಲ್ಡ್‌ಸನ್‌ ಅವರು ಮೊದಲ ಸುತ್ತಿನಲ್ಲಿ ನಿರಾಸೆ ಕಂಡರು. ಜೀವನ್‌ ಮತ್ತು ಜೇರೆಡ್‌ 7–6, 7–5, 6–7, 0–6, 3–6ರಲ್ಲಿ ಮಾರ್ಕಸ್‌ ವಿಲ್ಲಿಸ್‌ ಮತ್ತು ಜೇ ಕ್ಲಾರ್ಕ್‌ ವಿರುದ್ಧ ಶರಣಾದರು.

3 ಗಂಟೆ 15 ನಿಮಿಷಗಳ ಕಾಲ ನಡೆದ ಮ್ಯಾರಥಾನ್‌ ಹೋರಾಟದಲ್ಲಿ ಜೀವನ್‌ ಮತ್ತು ಜೇರೆಡ್‌ ಅವರು ಮೊದಲ ಎರಡು ಸೆಟ್‌ಗಳಲ್ಲಿ ಗೆದ್ದು ಭರವಸೆ ಮೂಡಿಸಿ ದ್ದರು. ಆದರೆ ನಂತರದ ಮೂರೂ ಸೆಟ್‌ಗಳಲ್ಲೂ ಪಾರಮ್ಯ ಮೆರೆದ ಮಾರ್ಕಸ್್ ಮತ್ತು ಕ್ಲಾರ್ಕ್‌ ಅವರು ಗೆಲುವಿನ ತೋರಣ ಕಟ್ಟಿದರು.

ಪ್ರತಿಕ್ರಿಯಿಸಿ (+)