ಗುರುವಾರ , ಡಿಸೆಂಬರ್ 12, 2019
17 °C

ಕಳಪೆ ಸೈಕಲ್‌: ವಿದ್ಯಾರ್ಥಿಗಳ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಪೆ ಸೈಕಲ್‌: ವಿದ್ಯಾರ್ಥಿಗಳ ಆಕ್ರೋಶ

ಮೂಡಿಗೆರೆ: ತಾಲ್ಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಉಚಿತವಾಗಿ ನೀಡುತ್ತಿರುವ ಸೈಕಲ್‌ಗಳು ವಿತರಣೆಯಾದ ದಿನವೇ ದುರಸ್ತಿಗಾಗಿ ಸೈಕಲ್‌ಶಾಪ್‌ ಸೇರುತ್ತಿವೆ! ತಾಲ್ಲೂಕಿನ 8ನೇ ತರಗತಿ ವಿದ್ಯಾರ್ಥಿ ಗಳಿಗೆ ಜೂನ್‌ 3ನೇ ವಾರದಿಂದ ಉಚಿತ ಸೈಕಲ್‌ಗಳನ್ನು ವಿತರಣೆ ಮಾಡುತ್ತಿದ್ದು, ಈ ಬಾರಿ ವಿತರಣೆಯಾಗುತ್ತಿರುವ ಸೈಕಲ್‌ ಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಬಳಕೆಯೋಗ್ಯವಾಗಿಲ್ಲ ಎಂದು ವಿದ್ಯಾರ್ಥಿ ಗಳು ಅಳಲು ತೋಡಿಕೊಂಡಿದ್ದಾರೆ.

ತಾಲ್ಲೂಕಿನಲ್ಲಿ 18 ಸರ್ಕಾರಿ ಪ್ರೌಢ ಶಾಲೆಗಳು ಹಾಗೂ 5 ಅನುದಾನಿತ ಶಾಲೆಗಳಿದ್ದು, ಈ ಎಲ್ಲ ಶಾಲೆಗಳಲ್ಲಿ 1,731 ವಿದ್ಯಾರ್ಥಿಗಳು 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಅವರಲ್ಲಿ 1,554 ಮಂದಿಗೆ ಸೈಕಲ್‌ ವಿತರಣೆಯಾಗುತ್ತಿದೆ.

‘ವಿದ್ಯಾರ್ಥಿಗಳಿಗೆ ಸೈಕಲ್‌ ಪೂರೈಕೆ ಮಾಡಲು ರಾಜ್ಯಮಟ್ಟದಲ್ಲಿ ಟೆಂಡರ್‌ ಕರೆಯಲಾಗಿತ್ತು. ಗುತ್ತಿಗೆದಾರರು ಸೈಕಲ್‌ ಬಿಡಿಭಾಗಗಳನ್ನು ತಂದು, ಪಟ್ಟಣದ ಸೈಂಟ್‌ಮಾರ್ಥಸ್‌ ಶಾಲಾ ಆವರಣದಲ್ಲಿ ಸಿದ್ಧಪಡಿಸಿ ತಾಲ್ಲೂಕಿನ ಎಲ್ಲ ಶಾಲೆಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಸೈಕಲ್‌ ಪೂರೈಕೆ ಯಾಗುವಾಗಲೇ ಚಕ್ರ ಬೆಂಡಾಗಿರುವ, ಬೆಲ್‌ ಬಾಗಿರುವ, ಹ್ಯಾಂಡಲ್‌ ಅಲುಗಾಡುವ ಹಾಗೂ ಚಕ್ರಗಳು ಚೈನ್‌ಕವರ್‌ಗೆ ಉಜ್ಜಿ ಶಬ್ದಮಾಡುವ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

ಜತೆಗೆ ಚಕ್ರಗಳು ಕಳಪೆಗುಣ ಮಟ್ಟದಿಂದ ಕೂಡಿದೆ. ಈ ಬಗ್ಗೆ ಪೂರೈಕೆದಾರರನ್ನು ಪ್ರಶ್ನಿಸಿದರೆ ಯಾವುದೇ ಉತ್ತರ ನೀಡುವುದಿಲ್ಲ. ಅಲ್ಲದೆ, ಗ್ರಾಮೀಣ ರಸ್ತೆ ಯಲ್ಲಿ ಸಂಚರಿಸಿದೊಡನೆ ಚಕ್ರಗಳು ಬೆಂಡಾಗುತ್ತಿವೆ. ಈ ಬಾರಿಯ ಸೈಕಲ್‌ ಗಳು ಕಳೆದ ಬಾರಿಯ ಸೈಕಲ್‌ಗಳಿಗಿಂತ ಕಡಿಮೆ ತೂಕವನ್ನು ಹೊಂದಿದ್ದು, ಬ್ಯಾಲೆನ್ಸ್‌ ಸಿಗುವುದಿಲ್ಲ’ ಎಂಬುದು ವಿದ್ಯಾರ್ಥಿಗಳ ಅಳಲಾಗಿದೆ.

‘ಈ ಬಾರಿ ಸೈಕಲ್‌ಗಳು ಕಳಪೆ ಯಿಂದ ಕೂಡಿದ್ದು, ಪೂರೈಕೆದಾರರು ಕೂಡ ಬೇಕಾಬಿಟ್ಟಿಯಾಗಿ ಸೈಕಲ್‌ಗಳನ್ನು ಶಾಲೆಗಳಿಗೆ ತಂದಿಳಿಸಿ ಕೈ ತೊಳೆದು ಕೊಳ್ಳುತ್ತಿದ್ದಾರೆ. ಮಕ್ಕಳಿಗೆ ನೀಡಿದ ಸೈಕಲ್‌ಗಳು ನೇರವಾಗಿ ಸೈಕಲ್‌ಶಾಪ್‌ಗೆ ಕೊಂಡೊಯ್ದು ಕನಿಷ್ಠ ₹400 ವೆಚ್ಚ ಮಾಡಿ ದುರಸ್ತಿ ಮಾಡಿಸಬೇಕಾಗಿದೆ. ಇಂಥ ಸೈಕಲ್‌ಗಳನ್ನು ನೀಡುವ ಬದಲು ಯೋಜನೆಯನ್ನೇ ಸ್ಥಗಿತಗೊಳಿಸಿದರೆ ಒಳಿತು’ ಎನ್ನುತ್ತಾರೆ ಪೋಷಕ ರಾಮ ಚಂದ್ರಚಾರ್‌.

‘ಸೈಕಲ್‌ ವಿತರಣೆ ಸರ್ಕಾರಿ ಯೋಜನೆಯಾಗಿದ್ದು, ಪೂರೈಕೆದಾರರು ಶಾಲೆಯಲ್ಲಿ ನೀಡಬೇಕಾದ ಸಂಖ್ಯೆಯಷ್ಟು ಸೈಕಲ್‌ಗಳನ್ನು ತಂದಿಳಿಸುತ್ತಾರೆ. ಸೈಕಲ್‌ ಗಳಿಗೆ ಹಾನಿಯಾಗಿರುವ ಬಗ್ಗೆ ಪ್ರಶ್ನಿಸಿದರೆ ‘ಗುತ್ತಿಗೆದಾರರ ಬಳಿ ಮಾತನಾಡಿ’ ಎಂಬ ಉತ್ತರ ನೀಡುತ್ತಾರೆ. ಇದರಿಂದ ಮುಖ್ಯ ಶಿಕ್ಷಕರು ಅಸಹಾಯಕರಾಗಿ ಹಾನಿ ಯಾಗಿರುವ ಸೈಕಲ್‌ಗಳನ್ನೇ ಇಳಿಸಿಕೊಳ್ಳು ವಂತಾಗಿದೆ’ ಎನ್ನುತ್ತಾರೆ ಹೆಸರನ್ನು ಹೇಳ ಬಯಸದ ಶಿಕ್ಷಕರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್‌ ನೀಡುವುದು ಉತ್ತಮ ಯೋಜನೆಯಾಗಿದ್ದು, ಜನರ ತೆರಿಗೆಯಿಂದ ನೀಡುವ ಈ ಸೈಕಲ್‌ಗಳು ಕಳಪೆಯಾದಾಗ ಪ್ರಶ್ನಿಸಬೇಕಾದದ್ದು ಜನ ಪ್ರತಿನಿಧಿಗಳ ಕರ್ತವ್ಯ. ಈಗಾಗಲೇ ವಿತರಿಸಿರುವ ಸೈಕಲ್‌ಗಳನ್ನು ವಾಪಸು ಪಡೆದು, ಗುಣ ಮಟ್ಟದ ಸೈಕಲ್‌ ವಿತರಣೆ ಮಾಡಿ ಸುವ ಮೂಲಕ ವಿದ್ಯಾರ್ಥಿಗಳಿಗಾದ ಸಮಸ್ಯೆ ಸರಿಪಡಿಸಬೇಕು ಎಂಬುದು ಶಿಕ್ಷಣಪ್ರೇಮಿಗಳ ಒತ್ತಾಯವಾಗಿದೆ.

* * 

ಸರ್ಕಾರದಿಂದ ವಿದ್ಯಾರ್ಥಿಗಳಿಗೆ ನೀಡಿದ ಸೈಕಲ್‌ಗಳು ಕಳಪೆ ಗುಣಮಟ್ಟದ್ದಾಗಿದ್ದು, ಪ್ರತಿದಿನ ಹತ್ತಾರು ಸೈಕಲ್‌ ದುರಸ್ತಿ ಮಾಡುವುದೇ ಕಷ್ಟವಾಗಿದೆ.

ರಮೇಶ್‌

ಸೈಕಲ್‌ ಮೆಕಾನಿಕ್‌

 

ಪ್ರತಿಕ್ರಿಯಿಸಿ (+)