ಭಾನುವಾರ, ಡಿಸೆಂಬರ್ 8, 2019
21 °C

‘ದಲಿತರ ಬೆಂಬಲ ಸಿ.ಎಂಗೆ ಸಹಿಸಲಾಗುತ್ತಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ದಲಿತರ ಬೆಂಬಲ ಸಿ.ಎಂಗೆ ಸಹಿಸಲಾಗುತ್ತಿಲ್ಲ’

ಬಾಗಲಕೋಟೆ: ‘ನಾಲ್ಕು ವರ್ಷ ಕಾಲ ಅಧಿಕಾರದಲ್ಲಿ ಇದ್ದರೂ ಒಮ್ಮೆಯೂ ದಲಿತರ ಮನೆ ಬಾಗಿಲಿಗೆ ಹೋಗದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗ ನಮಗೆ ದಲಿತ ಕೇರಿಗಳಲ್ಲಿ ಸಿಗುತ್ತಿರುವ ಜನಬೆಂಬಲ ಸಹಿಸಲಾಗದೇ ತಲೆ ತಿರುಗಿ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

‘ಬಿಜೆಪಿ ನಾಯಕರು ದಲಿತರ ಮನೆಯಲ್ಲಿ ಊಟ ಮಾಡುವ ಬದಲು ಅವರೊಂದಿಗೆ ವೈವಾಹಿಕ ಸಂಬಂಧ ಬೆಳೆಸಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ದಲಿತರ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಅವರಿಗೆ ಯಾವುದೇ ನೈತಿಕತೆ ಇಲ್ಲ’ ಎಂದು ಹೇಳಿದರು.

ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ ₹ 10 ಸಾವಿರ ಕೋಟಿ ಖರ್ಚು ಮಾಡುವುದಾಗಿ ಕೂಡಲಸಂಗಮದಲ್ಲಿ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಪಕ್ಷ ಕಳೆದ ನಾಲ್ಕು ವರ್ಷಗಳಲ್ಲಿ ಕೇವಲ ₹5300 ಕೋಟಿ ಮಾತ್ರ ಖರ್ಚು ಮಾಡಿದೆ. ಈ ಕಾಮಗಾರಿಗಳಲ್ಲೂ ಹಗಲು ದರೋಡೆ ಹಾಗೂ ಲೂಟಿ ನಡೆದಿದೆ ಎಂದು ಟೀಕಿಸಿದರು.

ಕೇಂದ್ರ ಸರ್ಕಾರ 14ನೇ ಹಣಕಾಸು ಆಯೋಗದ ಅವಧಿಯಲ್ಲಿ ರಾಜ್ಯಕ್ಕೆ ₹76,400 ಕೋಟಿ ಬಿಡುಗಡೆ ಮಾಡಿದೆ. ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಗಳಿಂದ ₹28,250 ಕೋಟಿ ಅನುದಾನ ನೀಡಲಾಗಿದೆ.

ಹೊರಗುತ್ತಿಗೆಯಿಂದ ₹4618 ಕೋಟಿ, ಬರಪರಿಹಾರಕ್ಕೆ ₹4,201 ಕೋಟಿ, 2014ರಿಂದ 17ರ ಅವಧಿಯಲ್ಲಿ ನೀತಿ ಆಯೋಗದಿಂದ ₹ 1.13.478 ಕೋಟಿ, ಪ್ರಧಾನಮಂತ್ರಿ ಕೃಷಿ ಸಂಚಯ ಯೋಜನೆಯಿಂದ ₹ 229 ಕೋಟಿ ಹಾಗೂ ಜನಧನ ಯೋಜನೆಯಡಿ ₹28 ಕೋಟಿ ನೀಡಲಾಗಿದೆ ಎಂದು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಬಿಡುಗಡೆಯಾದ ಅನುದಾನ ಹಾಗೂ ಬೇರೆ ಬೇರೆ ಸಹಾಯಧನಗಳ ವಿವರವನ್ನು ಪತ್ರಿಕಾಗೋಷ್ಠಿಯಲ್ಲಿ ಯಡಿಯೂರಪ್ಪ ಬಿಚ್ಚಿಟ್ಟರು.

ಸ್ವಾಮೀಜಿ ಸ್ಪರ್ಧೆ ಗಮನಕ್ಕಿಲ್ಲ:  ‘ಬೀಳಗಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ರಾಮಾರೂಢ ಮಠದ ಪರಮರಾಮಾರೂಢ ಶ್ರೀಗಳು ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಟಿಕೆಟ್ ಕೇಳಿ ನಿಮಗೆ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಮನವಿ ಮಾಡಿರುವುದಾಗಿ ಶ್ರೀಗಳು ಹೇಳಿಕೆ ನೀಡಿದ್ದಾರೆ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಪಕ್ಷದ ಮುಂದೆ ಅಂತಹ ಯೋಚನೆಯೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಜಮಖಂಡಿ ಕ್ಷೇತ್ರದಲ್ಲಿ ಶ್ರೀಕಾಂತ ಕುಲಕರ್ಣಿ ಈ ಬಾರಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಅದನ್ನು ಸಹಿಸಲಾಗದೇ ನಮ್ಮವರೇ ಯಾರೊ ಅಪಸ್ವರ ಎತ್ತಿರಬಹುದು. ಅದಕ್ಕೆಲ್ಲಾ ಸೊಪ್ಪು ಹಾಕುವ ಅಗತ್ಯವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸೈಕಲ್ ಯಾತ್ರೆಗೆ ಚಾಲನೆ: ಮುಂಜಾನೆ ಬಿಜೆಪಿ ನಗರ ಘಟಕದಿಂದ ಬಾಗಲಕೋಟೆಯ ಹೊಳೆ ಆಂಜನೇಯ ದೇವಸ್ಥಾನದ ಆವರಣದಿಂದ ಆಯೋಜಿಸಿದ್ದ ಸೈಕಲ್ ರ್‍ಯಾಲಿಗೆ ಯಡಿಯೂರಪ್ಪ ಚಾಲನೆ ನೀಡಿದರು. ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿ ಕಾಂಗ್ರೆಸ್ ಸರ್ಕಾರ ಈ ಭಾಗದ ಜನತೆಗೆ ಮೋಸ ಮಾಡಿದೆ. ಮುಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಯೋಜನೆಯನ್ನು ಪೂರ್ಣಗೊಳಿಸು ವುದಾಗಿ ಇದೇ ವೇಳೆ ಸಾರ್ವಜನಿಕರಿಗೆ ಭರವಸೆ ನೀಡಿದರು.

ಈ ವೇಳೆ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಗೋವಿಂದ ಕಾರಜೋಳ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದು ಸವದಿ,ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ಶ್ರೀಕಾಂತ ಕುಲಕರ್ಣಿ, ದೊಡ್ಡನಗೌಡ ಪಾಟೀಲ, ಎಂ.ಕೆ.ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತರ, ಜಿ.ಎಸ್.ನ್ಯಾಮಗೌಡ, ಮುಖಂಡರಾದ ಮಹಾಂತೇಶ ಮಮದಾಪುರ, ಮಹಾಂತೇಶ ಕೋಲಕಾರ, ಸಂಗಮೇಶ ಹಿತ್ತಲಮನಿ ಹಾಜರಿದ್ದರು.

ಮುಖಂಡರ ಅಸಮಾಧಾನ ಬಹಿರಂಗ

ಬಾಗಲಕೋಟೆ:  ಪಂಡಿತ ದೀನದಯಾಳ ಉಪಾಧ್ಯಾಯರ  ಜನ್ಮದಿನೋತ್ಸವ ನಿಮಿತ್ತ ಇಲ್ಲಿನ ಹೊಳೆ ಆಂಜನೇಯ ದೇಗುಲದ ಎದುರು ನಡೆದ ಸೈಕಲ್ ಜಾಥಾ ಹುನಗುಂದದ ಬಿಜೆಪಿ ನಾಯಕರ ನಡುವಿನ ಬಹಿರಂಗ ಕಿತ್ತಾಟಕ್ಕೆ ವೇದಿಕೆಯಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಯಡಿಯೂರಪ್ಪ ಹಾಗೂ ಪಕ್ಷದ ಉಳಿದ ನಾಯಕರು ಲೋಕಾಪುರಕ್ಕೆ ತೆರಳುತ್ತಿದ್ದಂತೆಯೇ ಹುನಗುಂದ ಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಬಿಜೆಪಿ ಸ್ಲಂ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಮಾರುತೇಶ ನಡುವೆ ವಾಗ್ವಾದ ನಡೆಯಿತು.

ಮಾರುತೇಶ ಪರ ಅವರ ಬೆಂಬಲಿಗರು ಘೋಷಣೆ ಕೂಗಿದ್ದು, ಅದಕ್ಕೆ ದೊಡ್ಡನಗೌಡರು ಆಕ್ಷೇಪ ವ್ಯಕ್ತಪಡಿಸಿದರು. ಈ ರೀತಿ ಫೋಸ್ ನೀಡುವುದು ಸರಿಯಲ್ಲ ಎಂದರು. ಅದಕ್ಕೆ ತಿರುಗೇಟು ನೀಡಿದ ಮಾರುತೇಶ ನಾವು ಕಾರ್ಯಕರ್ತರು. ಪಕ್ಷದ ಸಂಘಟನೆಗೆ ಕೆಲಸ ಮಾಡುತ್ತಿದ್ದೇವೆ ಎಂದರು. ಇದರಿಂದ ರಸ್ತೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಪಕ್ಷದ ಮುಖಂಡರು ದೊಡ್ಡನಗೌಡ ಅವರನ್ನು ಕಾರು ಹತ್ತಿಸಿ ಲೋಕಾಪುರಕ್ಕೆ ಕಳುಹಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ದಲಿತರ ಮನೆಯಲ್ಲಿ ಉಪಾಹಾರ..

ಮುಧೋಳ ತಾಲ್ಲೂಕು ಲೋಕಾಪುರದಲ್ಲಿ ಗುರುವಾರ ಯಡಿಯೂರಪ್ಪ ಪಾದಯಾತ್ರೆ ನಡೆಸಿದರು. ಅಲ್ಲಿನ ಬಸವೇಶ್ವರ ವೃತ್ತದಿಂದ ಜ್ಞಾನೇಶ್ವರ ಮಠದವರೆಗೆ ತೆರಳಿದ ಅವರನ್ನು ಶಾಸಕ ಗೋವಿಂದ ಕಾರಜೋಳ ನೇತೃತ್ವದಲ್ಲಿ ಸಾವಿರಾರು ಬೆಂಬಲಿಗರು ಹಾಗೂ ಸ್ಥಳೀಯರು ಹಿಂಬಾಲಿಸಿದರು. ಮನೆಮನೆಗೆ ತೆರಳಿದ ಯಡಿಯೂರಪ್ಪ ಕುಶಲೋಪರಿ ವಿಚಾರಿಸಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾರ್ಯಕ್ರಮಗಳ ಕುರಿತಾದ ಮಾಹಿತಿ ಪತ್ರಗಳನ್ನು ವಿತರಿಸಿದರು.

ನಂತರ ಅಲ್ಲಿನ ಸಾನಿಕೇರಿಯ ಸುರೇಶ ಹುಗ್ಗಿ ಅವರ ನಿವಾಸಕ್ಕೆ ತೆರಳಿದ ಯಡಿಯೂರಪ್ಪ ಅಲ್ಲಿ ಉಪ್ಪಿಟ್ಟು–ಚಹಾ ಸೇವಿಸಿದರು.ಕಿತ್ತಳೆ, ಖರ್ಜೂರದ ಹಣ್ಣ ನೆಂಚಿಕೊಂಡರು. ಅವರಿಗೆ ಗೋವಿಂದ ಕಾರಜೋಳ, ಪಿ.ಸಿ.ಗದ್ದಿಗೌಡರ, ವೀರಣ್ಣ ಚರಂತಿಮಠ, ಮುರುಗೇಶ ನಿರಾಣಿ ಸಾಥ್ ನೀಡಿದರು. ನಂತರ ಸುರೇಶ ಹುಗ್ಗಿ ಹಾಗೂ ಮೀನಾಕ್ಷಿ ದಂಪತಿ ಸೇರಿ ಯಡಿಯೂರಪ್ಪ ಅವರನ್ನು ಸನ್ಮಾನಿಸಿದರು. ಸಾನಿಕೇರಿಗೆ ಬಂದ ನಾಯಕರನ್ನು ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಪ್ರತಿ ಆರತಿ ತಟ್ಟೆಗೂ ಯಡಿಯೂರಪ್ಪ ₹100 ಹಾಕಿದರು.

ಮುನಿಸಿಕೊಂಡವರಿಗೆ ಸಮಾಧಾನ: ಯಡಿಯೂರಪ್ಪ ಮನೆಗೆ ಬರಲಿಲ್ಲ ಎಂದು ಭೋವಿ ಕೇರಿಯ ನಿವಾಸಿಗಳು ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು. ಪಾದಯಾತ್ರೆ ಅರುಣ್‌ ಬೋವಿ ಅವರ ಮನೆ ಬಳಿ ಪೂರ್ಣಗೊಳ್ಳಬೇಕಿತ್ತು. ಸಮಯದ ಅಭಾವದ ಕಾರಣ ಬೋಳಿಶೆಟ್ಟರ ನಿವಾಸದಿಂದ ಸಾನಿಕೇರಿಗೆ ತೆರಳಿದರು. ಈ ವಿಚಾರ ತಿಳಿದ ಬೋವಿ ಕೇರಿಯ ನಿವಾಸಿಗಳು ಪ್ರತಿಭಟನೆಗೆ ಮುಂದಾದರು. ಸುದ್ದಿ ತಿಳಿದ ಯಡಿಯೂರಪ್ಪ ಸಾನಿಕೇರಿಯಲ್ಲಿ ಉಪಾಹಾರ ಮುಗಿಸಿ ಮತ್ತೆ ಅರುಣ್ ಅವರ ಮನೆಗೆ ಮರಳಿ ಸನ್ಮಾನ ಸ್ವೀಕರಿಸಿದರು.

ಪ್ರತಿಕ್ರಿಯಿಸಿ (+)