ಭಾನುವಾರ, ಡಿಸೆಂಬರ್ 15, 2019
18 °C

ಮುಂದುವರಿದ ತುಂತುರು ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂದುವರಿದ ತುಂತುರು ಮಳೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗುರುವಾರ ತುಂತುರು ಮಳೆ ಸುರಿಯಿತು. ಶನಿವಾರಸಂತೆ, ನಾಪೋಕ್ಲು, ಭಾಗಮಂಡಲದಲ್ಲಿ ಮಾತ್ರ ಅರ್ಧ ಗಂಟೆ ಉತ್ತಮ ಮಳೆಯಾಗಿದೆ. ಗುರುವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ ಸರಾಸರಿ 16.14 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 12.81 ಮಿ.ಮೀ ಮಳೆ ಸುರಿದಿತ್ತು.

ಜನವರಿಯಿಂದ ಇದುವರೆಗೂ 782 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 831 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ 28.4 ಮಿ.ಮೀ, ವಿರಾಜಪೇಟೆ ತಾಲ್ಲೂಕಿನಲ್ಲಿ 6.08, ಸೋಮವಾರಪೇಟೆ ತಾಲ್ಲೂಕಿನಲ್ಲಿ 13.95 ಮಿ.ಮೀ ಮಳೆಯಾಗಿತ್ತು.

ಹೋಬಳಿವಾರು ಮಳೆ: ಮಡಿಕೇರಿ ಕಸಬಾ 25.6, ನಾಪೋಕ್ಲು 9, ಸಂಪಾಜೆ 50, ಭಾಗಮಂಡಲ 29, ವಿರಾಜಪೇಟೆ ಕಸಬಾ 4, ಹುದಿಕೇರಿ 10, ಶ್ರೀಮಂಗಲ 10, ಪೊನ್ನಂಪೇಟೆ 3, ಅಮ್ಮತ್ತಿ 4.5, ಬಾಳೆಲೆ 5, ಸೋಮವಾರಪೇಟೆ ಕಸಬಾ 16.6, ಶನಿವಾರಸಂತೆ 25, ಶಾಂತಳ್ಳಿ 26, ಕೊಡ್ಲಿಪೇಟೆ 9, ಕುಶಾಲನಗರ 1, ಸುಂಟಿಕೊಪ್ಪ 12 ಮಿ.ಮೀ ಮಳೆಯಾಗಿದೆ.

ಹಾರಂಗಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಕುಸಿದಿದ್ದು, 2,859 ಅಡಿಗಳಾಗಿದ್ದು, ಗುರುವಾರ 2,827.92 ಅಡಿ ನೀರು ಸಂಗ್ರಹಗೊಂಡಿದೆ. ಕಳೆದ ವರ್ಷ ಇದೇ ದಿನ 2,848.88 ಅಡಿ ನೀರಿತ್ತು. ಒಳ ಹರಿವು 680 ಕ್ಯುಸೆಕ್‌ ಆಗಿದೆ.

ಮನೆ ಕುಸಿತ: ಮಳೆಗೆ ನಗರದ ಅಂಬೇಡ್ಕರ್ ಬಡಾವಣೆ ನಿವಾಸಿ ಹನುಮಂತ ಅವರ ಮನೆ ಕುಸಿದಿದೆ. ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ನಗರಸಭಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರಸಭೆ ಸೂಕ್ತ ಪರಿಹಾರ ನೀಡಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಸಾಧಾರಣ ಮಳೆ

ಸುಂಟಿಕೊಪ್ಪ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನಲ್ಲಿ ಗುರುವಾರ ಸಾಧಾರಣ ಮಳೆ ಸುರಿಯಿತು.ಬೆಳಿಗ್ಗೆ ಮೋಡ ಕವಿದ ವಾತಾವರಣದಿಂದ ಕೂಡಿತ್ತು. ಸಂಜೆ ಮಳೆ ಬಿರುಸುಗೊಂಡಿತು. ಕೆದಕಲ್, ಏಳನೇ ಹೊಸಕೋಟೆ, ಮತ್ತಿಕಾಡು, ಮಳೂರು, ಕಂಬಿಬಾಣೆ, ಹರದೂರು, ಮಾದಾಪುರಗಳಲ್ಲೂ ಸಾಧಾರಣ ಮಳೆಯಾಗಿದೆ.

ಸಂಜೆ ಬಿರುಸು

ಕುಶಾಲನಗರ: ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಗುರುವಾರ ಸಂಜೆ  ಸಾಧಾರಣ ಮಳೆ ಸುರಿಯಿತು. ಬೆಳಿಗ್ಗೆಯಿಂದಲೇ ಮೋಡಕವಿದ ವಾತಾವರಣವಿದ್ದು, ಆಗಾಗ್ಗೆ ತುಂತುರು ಮಳೆ ಬರುತ್ತಿತ್ತು. ಮಧ್ಯಾಹ್ನ 3 ಗಂಟೆ ವೇಳೆಯಲ್ಲಿ   ಅರ್ಧತಾಸಿಗೂ ಹೆಚ್ಚುಕಾಲ ಬಿರುಸಾಗಿ ಮಳೆ ಸುರಿಯಿತು. ಹೆಬ್ಬಾಲೆ, ತೊರೆನುರು, ಶಿರಂಗಾಲ ಭಾಗದಲ್ಲಿಯೂ ಸಾಧಾರಣ ಮಳೆಯಾಗಿದೆ.

25 ಮಿ.ಮೀ ಮಳೆ

ಶನಿವಾರಸಂತೆ: ಹೋಬಳಿಯಾದ್ಯಂತ ಗುರುವಾರ ಸರಾಸರಿ 25 ಮಿ.ಮೀ ಮಳೆಯಾಗಿದೆ. ಬೆಳಿಗ್ಗೆಯಿಂದಲೇ ಆರಂಭವಾದ ಮಳೆ ಕೆಲವ ಸಮಯ ಬಿಡುವು ನೀಡಿ ಮತ್ತೆ ಸುರಿಯುತಿತ್ತು. ಬುಧವಾರ ರಾತ್ರಿಯೂ ಉತ್ತಮ ಮಳೆಯಾಗಿದೆ. ಪುನರ್ವಸು ಮಳೆ ಆರಂಭದಲ್ಲೇ ಚೆನ್ನಾಗಿ ಸುರಿಯುವ ಸೂಚನೆ ನೀಡಿದ್ದು, ಉತ್ತಮ ಮಳೆಯ ನಿರೀಕ್ಷೆಯಲ್ಲಿ ರೈತರು ಇದ್ದಾರೆ. ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೊಳತ್ತೂರು, ಕೂಜಗೇರಿ, ಮಾದ್ರೆ, ಬಿಳಾಹ ಗ್ರಾಮಗಳ ಗದ್ದೆಗಳಲ್ಲಿ ಭತ್ತದ ನಾಟಿಗೆ ಸಿದ್ಧತೆಗಳು ನಡೆಯುತ್ತಿವೆ.

ಪ್ರತಿಕ್ರಿಯಿಸಿ (+)