ಶನಿವಾರ, ಡಿಸೆಂಬರ್ 7, 2019
24 °C

ಶನಿವಾರ, 8–7–1967

Published:
Updated:
ಶನಿವಾರ, 8–7–1967

‘ಆಹಾರ ಧಾನ್ಯ ಸಬ್ಸಿಡಿ ರದ್ದತಿಯಿಂದ ಸಮಸ್ಯೆ ಆಗದು’

ನವದೆಹಲಿ, ಜುಲೈ 7–
  ಆಮದು ಮಾಡಿದ ಆಹಾರ ಧಾನ್ಯಗಳ ಮೇಲಿನ ಸಬ್ಸಿಡಿ ಮೊತ್ತ ವಾರ್ಷಿಕ 119 ಕೋಟಿ ರೂಪಾಯಿ ಆಗುತ್ತಿದ್ದು, ಅದನ್ನು ರದ್ದು ಮಾಡಿದರೆ ದೊಡ್ಡ ಪ್ರಮಾಣದಲ್ಲಿ ಬೆಲೆ ಏರಿಕೆ ಆಗಲಾರದು ಎಂದು ಹಣಕಾಸು ಇಲಾಖೆ ಅಭಿಪ್ರಾಯಪಟ್ಟಿದೆ. ಹಣಕಾಸು ಇಲಾಖೆಯ ವಕ್ತಾರ ಇಂದು ಇಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಹಾರ ಧಾನ್ಯಗಳ ಮೇಲಿನ ಸಬ್ಸಿಡಿಯನ್ನು ರದ್ದು ಮಾಡುವಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರವನ್ನು ಒತ್ತಾಯಿಸಿದ್ದಾರೆ. ಈ ಬಗ್ಗೆ ಇಲಾಖೆ ಪರಿಶೀಲನೆ ನಡೆಸಿದ್ದು, ಸಬ್ಸಿಡಿ ರದ್ದು ಮಾಡಿದರೆ ಧಾನ್ಯಗಳ ಬೆಲೆ ಭಾರಿ ಹೆಚ್ಚಳ ಆಗಲಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

300 ಕೋಟಿ ರೂಪಾಯಿ ಕೃಷಿ ಸಾಲಕ್ಕೆ ಬೇಡಿಕೆ

ನವದೆಹಲಿ, ಜುಲೈ 7–
ಎಲ್ಲ ಕೃಷಿ ಯೋಜನೆಗಳನ್ನು ಜಾರಿಗೊಳಿಸಿ, ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ರಾಜ್ಯಕ್ಕೆ 300 ಕೋಟಿ ರೂಪಾಯಿ ಸಾಲ ಒದಗಿಸುವಂತೆ ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪ ಅವರು ಕೇಂದ್ರ ಸರ್ಕಾರವನ್ನು ವಿನಂತಿಸಿದ್ದಾರೆ. ಇಲ್ಲಿ ನಿನ್ನೆ ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಯೋಜನೆಗಳು ಪೂರ್ಣಗೊಂಡ ಬಳಿಕ   ಶೇ 2 ರಿಂದ ಶೇ 3ರಷ್ಟು ಬಡ್ಡಿಯೊಂದಿಗೆ ಸಾಲವನ್ನು ಮರುಪಾವತಿ ಮಾಡಲಾಗುವುದು’ ಎಂದು ಹೇಳಿದ್ದಾರೆ.

ಈ ತಿಂಗಳು ರಾಜ್ಯಗಳಿಗೆ ಅಕ್ಕಿ ಪೂರೈಕೆಯಲ್ಲಿ ಕಡಿತ

ನವದೆಹಲಿ, ಜುಲೈ 7–
ವಿವಿಧ ರಾಜ್ಯಗಳಿಗೆ ಪೂರೈಕೆ ಮಾಡುವ ಅಕ್ಕಿಯ ಪ್ರಮಾಣವನ್ನು ಈ ತಿಂಗಳಿನಲ್ಲಿ ಕಡಿತ ಮಾಡಲಾಗುವುದು, ಇದರಿಂದ ಉಂಟಾಗುವ ಧಾನ್ಯದ ಕೊರತೆಯನ್ನು ಗೋಧಿ ವಿತರಿಸುವ ಮೂಲಕ ತುಂಬಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ದೆಹಲಿಯಲ್ಲಿ ಇಂದು ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ ಈ ಬಗ್ಗೆ ಸುಮಾರು ಎರಡು ಗಂಟೆ ಕಾಲ ಚರ್ಚೆ ನಡೆದು, ಅಂತಿಮವಾಗಿ ಈ ತೀರ್ಮಾನಕ್ಕೆ ಬರಲಾಯಿತು.

ಪ್ರತಿಕ್ರಿಯಿಸಿ (+)