ಗುರುವಾರ , ಡಿಸೆಂಬರ್ 12, 2019
17 °C
ಚಿಕನ್‌ ಪ್ರಿಯರ ಜೇಬಿಗೆ ಹೊರೆ; ಬ್ರಾಂಡೆಡ್‌ ಚಿಕನ್‌ಗೆ ಶೇ 12 ಜಿಎಸ್‌ಟಿ

ದುಬಾರಿಯಾದ ಕೋಳಿ ಮಾಂಸ!

ಡಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ದುಬಾರಿಯಾದ ಕೋಳಿ ಮಾಂಸ!

ವಿಜಯಪುರ: ಆಷಾಢದಲ್ಲಿ ಕೋಳಿ ಮಾಂಸ ದುಬಾರಿಯಾಗಿದ್ದು, ಚಿಕನ್‌ ಪ್ರಿಯರ ಜೇಬಿಗೆ ಹೊರೆ ಹೆಚ್ಚಿದೆ. ಬ್ರಾಂಡೆಡ್‌ ಚಿಕನ್‌ ಉತ್ಪನ್ನಗಳಿಗೆ ಸರಕು ಮತ್ತು ಸೇವಾ ತೆರಿಗೆಯಡಿ(ಜಿಎಸ್‌ಟಿ) ಶೇ 12 ರಷ್ಟು ತೆರಿಗೆ ನಿಗದಿಯಾಗಿದ್ದು ಕೂಡ ಬೆಲೆ ಹೆಚ್ಚಳದ ಕಾರಣಗಳಲ್ಲೊಂದಾಗಿದೆ.ವಾರದ ಹಿಂದಷ್ಟೇ ಚಿಲ್ಲರೆ ಮಾರುಕಟ್ಟೆಯಲ್ಲಿ, ಒಂದು ಕೆ.ಜಿ.ಗೆ ₹ 120 ರಿಂದ ₹ 140ರ ಆಸು–ಪಾಸು ಮಾರಾಟವಾಗುತ್ತಿದ್ದ ಕೋಳಿ ಮಾಂಸ, ಇದೀಗ ಕೆ.ಜಿ.ಗೆ ₹ 204 (ವಿತ್ ಸ್ಕಿನ್‌), ₹ 233ಕ್ಕೆ (ವಿತ್‌ಔಟ್‌ ಸ್ಕಿನ್) ಏರಿದೆ.‘ಬ್ರಾಂಡೆಡ್‌, ಪ್ಯಾಕಿಂಗ್‌ ಚಿಕನ್‌ ಉತ್ಪನ್ನಗಳಿಗೆ ಜಿಎಸ್‌ಟಿ ಅನ್ವಯವಾಗಿದ್ದು, ಅಂಥ ಮಾಂಸ ಖರೀದಿಸುವವರು ಇನ್ನು ಮುಂದೆ ಹೆಚ್ಚಿನ ಬೆಲೆ ತೆರಬೇಕಿದೆ. ಆಯಾ ಕಂಪೆನಿಗಳೇ ದರ ನಿಗದಿ ಮಾಡಲಿವೆ’ ಎಂದು ರಾಜ್ಯ ಪೌಲ್ಟ್ರಿ ಫಾರ್ಮರ್ಸ್‌ ಅಂಡ್‌ ಬ್ರೀಡರ್ಸ್‌ ಅಸೋಸಿಯೇಷನ್‌ನ ಕಾರ್ಯದರ್ಶಿ ಡಾ.ನಾಗಭೂಷಣ್‌  ತಿಳಿಸಿದರು.ಬೆಲೆ ಹೆಚ್ಚಳಕ್ಕೆ ಕಾರಣ: ‘ಉತ್ಪಾದನೆಗಿಂತ ಬೇಡಿಕೆ ಪ್ರಮಾಣ ಹೆಚ್ಚಿರುವುದು ಹಾಗೂ ಕೇಂದ್ರ ಸರ್ಕಾರವು ‘ಕಸಾಯಿಖಾನೆಗೆ ಜಾನುವಾರುಗಳ ಮಾರಾಟ ನಿಷೇಧ’ ಕಾಯ್ದೆ ಜಾರಿ ಮಾಡಿರುವುದರಿಂದ ಕೋಳಿ ಮಾಂಸದ ದರ ಹೆಚ್ಚಿದೆ.  ಕಾಯ್ದೆ ಜಾರಿಗೊಳ್ಳುವ ಮುನ್ನ ಗೋಮಾಂಸ ತಿನ್ನುತ್ತಿದ್ದವರು ಇದೀಗ  ಕೋಳಿ ಮಾಂಸ ತಿನ್ನುತ್ತಿದ್ದಾರೆ. ಜತೆಗೆ ಜಿಎಸ್‌ಟಿ ಅನ್ವಯವಾದ ಮೇಲೆ ಕೋಳಿ ಆಹಾರ ದರದಲ್ಲಿಯೂ ಶೇ 6ರಿಂದ 7 ರಷ್ಟು ಹೆಚ್ಚಳವಾಗಿದೆ. ಉತ್ಪಾದನಾ ವೆಚ್ಚ ಹೆಚ್ಚಿರುವುದರಿಂದ ಅನಿವಾರ್ಯವಾಗಿ ಮಾರಾಟ ದರವೂ ಹೆಚ್ಚಾಗಿದೆ’ ಎನ್ನುತ್ತಾರೆ ಉದ್ಯಮಿಗಳು.‘ಶ್ರಾವಣ ಮಾಸದಲ್ಲಿ ಕೆಲವರು ಮಾಂಸಾಹಾರ ಸೇವಿಸುವುದಿಲ್ಲ. ಅಂತಹವರು ಆಷಾಢದಲ್ಲಿಯೇ ಹೆಚ್ಚಿನ ಬಳಕೆ ಮಾಡುವುದರಿಂದ ಬೆಲೆ ಹೆಚ್ಚಳಗೊಂಡಿದೆ’ ಎಂದು ಹೊಸಪೇಟೆ ವಲಯದ ಎನ್‌ಇಸಿಸಿ ಉಪಾಧ್ಯಕ್ಷ ಡಾ.ಎಂ.ಎಸ್‌. ಮಲ್ಲಿಕಾರ್ಜುನ ಮಾಹಿತಿ ನೀಡಿದರು. ವಾರದ ಹಿಂದೆ ಕೆ.ಜಿ.ಗೆ ₹ 400ರಂತೆ ಮಾರಾಟವಾಗುತ್ತಿದ್ದ ಕುರಿ, ಮೇಕೆಯ ಮಾಂಸವು ಈಗ ₹ 425ಕ್ಕೆ ಹೆಚ್ಚಿದೆ ಎಂದು ಗ್ರಾಹಕ ಎಸ್‌.ಕೆ. ಕೊಣ್ಣೂರಕರ ತಿಳಿಸಿದರು.ಹುಂಜಕ್ಕೆ ಭಾರಿ ಬೇಡಿಕೆ!: ನಾಟಿ ಕೋಳಿಯ ಬೆಲೆ ಕೆ.ಜಿ.ಗೆ ₹ 400 ಇದ್ದರೆ, ಹುಂಜದ ಬೆಲೆ ₹ 500 ರಿಂದ 800 ಇದೆ ಎಂದು ವಿಜಯಪುರದ ನಾಟಿ ಕೋಳಿ ವ್ಯಾಪಾರಿ ಮೈನುದ್ದೀನ್‌ ಜಮಾದಾರ ತಿಳಿಸಿದರು.

*

ರಾಜ್ಯದಲ್ಲಿ ನಿತ್ಯ 160ರಿಂದ 170 ಲಕ್ಷ ಟನ್‌ ಕೋಳಿ ಮಾಂಸ ಉತ್ಪಾದನೆಯಾಗುತ್ತಿದೆ. ಉತ್ಪಾದನೆಗಿಂತಲೂ ಹೆಚ್ಚಿನ ಬೇಡಿಕೆ  ಇರುವುದರಿಂದ ಬೆಲೆ ಹೆಚ್ಚಳವಾಗಿದೆ.

ಡಾ.ನಾಗಭೂಷಣ್‌,

ಕಾರ್ಯದರ್ಶಿ, ರಾಜ್ಯ ಪೌಲ್ಟ್ರಿ ಫಾರ್ಮರ್ಸ್‌ ಅಸೋಸಿಯೇಷನ್‌

*

ವಾರದ ಅವಧಿಯಲ್ಲಿ ಒಂದು ಕೆ.ಜಿ. ಕೋಳಿ ಮಾಂಸದ ದರ ₹100 ಹೆಚ್ಚಾಗಿರುವುದು ಚಿಕನ್‌ ಪ್ರಿಯರಲ್ಲಿ ಭಾರಿ ನಿರಾಸೆ ಮೂಡಿಸಿದೆ.

ವಿನುತಾ,

ಗ್ರಾಹಕಿ

ಪ್ರತಿಕ್ರಿಯಿಸಿ (+)