ಶುಕ್ರವಾರ, ಡಿಸೆಂಬರ್ 6, 2019
17 °C
ಮೇಲ್ಮನವಿಗೆ ಆಕ್ರೋಶ: ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಹೈಕೋರ್ಟ್‌ ಕಿಡಿ

ಅಧಿಕಾರಿಗಳಿಗೆ ₹ 25 ಸಾವಿರ ದಂಡ

ಬಿ.ಎಸ್.ಷಣ್ಮುಖಪ್ಪ Updated:

ಅಕ್ಷರ ಗಾತ್ರ : | |

ಅಧಿಕಾರಿಗಳಿಗೆ ₹ 25 ಸಾವಿರ ದಂಡ

ಬೆಂಗಳೂರು: ರೈತನೊಬ್ಬನ ನಿವೇಶನವನ್ನು ಸ್ವಾಧೀನಪಡಿಸಿಕೊಂಡಿದ್ದಕ್ಕೆ ಪರಿಹಾರ ನೀಡುವ ವಿಷಯದಲ್ಲಿ ತಕರಾರು ತೆಗೆದು ಮೇಲ್ಮನವಿ ಸಲ್ಲಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಹೈಕೋರ್ಟ್‌ ಕಿಡಿ ಕಾರಿದೆ.‘ಭದ್ರಾ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಚಿಕ್ಕಮಗಳೂರು ಉಪ ವಿಭಾಗಾಧಿಕಾರಿಯೂ ಆದ ಭೂ ಸ್ವಾಧೀನ ಅಧಿಕಾರಿ, ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸಂತ್ರಸ್ತ ರೈತನಿಗೆ ₹ 25 ಸಾವಿರವನ್ನು ಒಂದು ತಿಂಗಳಿನಲ್ಲಿ ಪಾವತಿ ಮಾಡಬೇಕು’ ಎಂದು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಆದೇಶಿಸಿದೆ.ಕಳೆದ ತಿಂಗಳ 21ರಂದು ಈ ಆದೇಶ ನೀಡಿದ್ದು, ‘ಅಧಿಕಾರಿಗಳು ನ್ಯಾಯಾಲಯಗಳ ಮೇಲೆ ನಿರ್ಭಿಡೆಯ ಸವಾರಿ ಮಾಡುತ್ತಿದ್ದಾರೆ. ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು’ ಎಂದು ನ್ಯಾಯಪೀಠ ಸೂಚಿಸಿದೆ.‘ರಾಜ್ಯ ಸರ್ಕಾರ ಪ್ರತಿಯೊಬ್ಬರ ಹಿತ ಕಾಯಬೇಕು. ಆದರೆ, ಈ ಪ್ರಕರಣದಲ್ಲಿ ಸಾರ್ವಜನಿಕರ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಕಂಡು ಬಂದಿದೆ. ಅಧಿಕಾರಿಗಳು ಸಣ್ಣ ಪುಟ್ಟ ವಿಷಯಗಳಿಗೆ ಜನರ ಜೊತೆ ತಕರಾರು ತೆಗೆದು ಕೋರ್ಟ್‌ನಿಂದ ಕೋರ್ಟ್‌ಗಳಿಗೆ ಅಲೆಯುತ್ತಾ ಕಾನೂನಿಗೆ ಅಪಚಾರ ಎಸಗುತ್ತಿದ್ದಾರೆ’ ಎಂದು ಅತೃಪ್ತಿ  ವ್ಯಕ್ತಪಡಿಸಲಾಗಿದೆ.‘ಅಧಿಕಾರಿಗಳ ಈ ನಡವಳಿಕೆ ಸಂವಿಧಾನದ 21 ಮತ್ತು 300–ಎ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದೂ ಆದೇಶದಲ್ಲಿ ಹೇಳಲಾಗಿದೆ.

*

ಸರ್ಕಾರಿ ಅಧಿಕಾರಿಗಳು ಜುಜುಬಿ ಪ್ರಕರಣಗಳಿಗೆ ಕ್ಯಾತೆ ತೆಗೆಯುತ್ತಾ ಅಮೂಲ್ಯ ಸಮಯ, ಶ್ರಮ  ಹಾಗೂ ಜನರ ತೆರಿಗೆ ಹಣ ಪೋಲು ಮಾಡುತ್ತಿದ್ದಾರೆ.

–ಬಿ.ವೀರಪ್ಪ,

ನ್ಯಾಯಮೂರ್ತಿ

*

ಅಧೀನ ನ್ಯಾಯಾಲಯದ ಆದೇಶ ಎತ್ತಿಹಿಡಿದ ಪೀಠ

ಚಿಕ್ಕಮಗಳೂರು ಜಿಲ್ಲೆಯ ಮಾಡ್ಲಾ ಗ್ರಾಮದ ವಡ್ಡಿಹಟ್ಟಿಯಲ್ಲಿ ವೆಂಕಟೇಶ ಎಂಬ ರೈತನಿಗೆ ಸೇರಿದ 30 X 40 ಅಳತೆಯ ನಿವೇಶವನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡಿತ್ತು.  ಈ ನಿವೇಶನದ ಪರಿಹಾರಕ್ಕೆ ಸಂಬಂಧಿಸಿದಂತೆ ತಕರಾರು ಉದ್ಭವಿಸಿತ್ತು. ಇದನ್ನು ವಿಲೇವಾರಿ ಮಾಡಿದ್ದ ತ್ವರಿತಗತಿ ನ್ಯಾಯಾಲಯ ‘ಸರ್ಕಾರಕ್ಕೆ ನಿವೇಶನ ಬಿಟ್ಟುಕೊಟ್ಟಿರುವ ರೈತ ವೆಂಕಟೇಶ ಅವರು ಸೂಕ್ತ ಪರಿಹಾರ ಪಡೆಯಲು ಅರ್ಹರಿದ್ದಾರೆ’ ಎಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಧಿಕಾರಿಗಳು ಹೈಕೋರ್ಟ್‌ನಲ್ಲಿ ಎಂಎಫ್‌ಎ (ಮಿಸಲೇನಿಯಸ್‌ ಫಸ್ಟ್‌ ಅಪೀಲ್‌) ಸಲ್ಲಿಸಿದ್ದರು.

ಪ್ರತಿಕ್ರಿಯಿಸಿ (+)