ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಗೊರೆ ಮಾಹಿತಿ ನೀಡಲು ಹುಡ್ಕೊಗೆ ಸೂಚನೆ

Last Updated 9 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಹಿಂದಿನ ಮೂರು ವರ್ಷಗಳಲ್ಲಿ ಗೃಹ ಮತ್ತು ನಗರಾಭಿವೃದ್ಧಿ ನಿಗಮದ (ಹುಡ್ಕೊ) ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರವಿಕಾಂತ್ ಅವರಿಂದ ಮೌಂಟ್ ಬ್ಲಾಂಕ್ ಪೆನ್, ಐ ಫೋನ್, ಐ ಪ್ಯಾಡ್‌ಗಳನ್ನು ಉಡುಗೊರೆ ರೂಪದಲ್ಲಿ ಪಡೆದವರ ಮಾಹಿತಿ ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗವು ಸಂಸ್ಥೆಗೆ ಸೂಚಿಸಿದೆ.

ಜುಲೈ 15ರ ಒಳಗಾಗಿ ಸೂಕ್ತ ದಾಖಲೆಗಳೊಂದಿಗೆ ಸಮಗ್ರ ಮಾಹಿತಿ ನೀಡುವಂತೆ ರವಿಕಾಂತ್ ಮತ್ತು ಸಂಸ್ಥೆಯ ಮಾಹಿತಿ ಅಧಿಕಾರಿಗೆ ಮಾಹಿತಿ ಆಯುಕ್ತ ಶ್ರೀಧರ್ ಆಚಾರ್ಯುಲು  ಆದೇಶಿಸಿದ್ದಾರೆ.

ರವಿಕಾಂತ್ ಅವರಿಂದ ಈ ಬಗೆಯ ಉಡುಗೊರೆಗಳಿಗೆ ಹಾಗೂ ಅವರ ಮನೆ ಮತ್ತು ಅದಕ್ಕೆ ಹವಾನಿಯಂತ್ರಣ ವ್ಯವಸ್ಥೆ ಅಳವಡಿಕೆಗೆ ಆದ ಖರ್ಚಿನ ಮಾಹಿತಿ ಕೇಳಿ ಮಾಹಿತಿ ಹಕ್ಕು (ಆರ್‌ಟಿಐ) ಕಾರ್ಯಕರ್ತ ವಿಶ್ವಾಸ್ ಭಂಬುರ್ಕರ್ ಎನ್ನುವವರು ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ಸ್ವೀಕರಿಸಿದ ಹುಡ್ಕೊದ ಕೇಂದ್ರ ಸಾರ್ವಜನಿಕ ಮಾಹಿತಿ ಕಚೇರಿ ಅಧಿಕಾರಿ, ‘ಮಾಹಿತಿ ಹಕ್ಕು ಕಾಯ್ದೆ ಅಡಿ ಈ ಮಾಹಿತಿ ಒದಗಿಸಲು ಅವಕಾಶವಿಲ್ಲ. ಈ ಮಾಹಿತಿ ತಮಗೆ ವೈಯಕ್ತಿಕವಾಗಿ, ಸಾಮಾಜಿಕ ಅಥವಾ ರಾಷ್ಟ್ರೀಯವಾಗಿ ಉಪಯೋಗವಾಗುತ್ತದೆಯೇ’ ಎಂದು ಅರ್ಜಿದಾರರನ್ನು ಪ್ರಶ್ನಿಸಿದೆ.
ಈ ಬೆಳವಣಿಗೆಯನ್ನು ಗಮನಿಸಿದ ಮಾಹಿತಿ ಆಯುಕ್ತರು, ‘ಈ ಪ್ರಕರಣದಲ್ಲಿ ಹುಡ್ಕೊ ಅಧಿಕಾರಿಯ ಆರ್‌ಟಿಐ ವಿರೋಧಿ ಮನಸ್ಥಿತಿಯನ್ನು ನೋಡಿದರೆ ಉಡುಗೊರೆ ಖರೀದಿ ಮತ್ತು ಮನೆ–ಕಚೇರಿಗಾಗಿ ಸಾರ್ವಜನಿಕ ಹಣವನ್ನು ದೊಡ್ಡ ಪ್ರಮಾಣದಲ್ಲಿ ವ್ಯಯಿಸಿದ ಹಗರಣವೇ ನಡೆದಿದೆ ಎಂಬ ಅನುಮಾನ ಉಂಟಾಗುತ್ತಿದೆ. ಆದ್ದರಿಂದ ಮಾಹಿತಿ ಕೊಡುವುದಕ್ಕೆ ಕುಂಟು ನೆಪ ಹೇಳಿ ಸಮಯ ದೂಡಲಾಗುತ್ತಿದೆ’ ಎಂದಿದ್ದಾರೆ. ಈ ಸಂಬಂಧ ಹುಡ್ಕೊದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಆಯುಕ್ತರು ಷೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ತಮ್ಮ ಆದೇಶದ ಪ್ರತಿಯನ್ನು ನಗರಾಭಿವೃದ್ಧಿ ಸಚಿವ ರಾವ್ ಇಂದ್ರಜಿತ್ ಸಿಂಗ್,  ಕಾರ್ಯದರ್ಶಿ ನಂದಿತಾ ಚಟರ್ಜಿಗೂ  ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT