ಶನಿವಾರ, ಡಿಸೆಂಬರ್ 7, 2019
24 °C
ಆಧುನಿಕತೆಗೆ ತೆರೆದುಕೊಂಡ ಅಂಚೆ ಇಲಾಖೆ: ವಿವಿಧ ಸೇವೆ ಲಭ್ಯ

ಕಲಬುರ್ಗಿಗೆ ಅಂಚೆ ಪಾವತಿ ಬ್ಯಾಂಕ್‌ ಶೀಘ್ರ

ಚಂದ್ರಶೇಖರ ಆರ್‌. Updated:

ಅಕ್ಷರ ಗಾತ್ರ : | |

ಕಲಬುರ್ಗಿಗೆ ಅಂಚೆ ಪಾವತಿ ಬ್ಯಾಂಕ್‌ ಶೀಘ್ರ

ಕಲಬುರ್ಗಿ: ಆಧುನಿಕ ತಂತ್ರಜ್ಞಾನಗಳಿಗೆ ತೆರೆದುಕೊಂಡಿರುವ ಅಂಚೆ ಕಚೇರಿಯು ಈಗ ಹೊಸ ಸ್ವರೂಪ ಪಡೆಯುತ್ತಿದೆ. ಮೊಬೈಲ್‌, ಇಂಟರ್‌ನೆಟ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಆ್ಯಪ್‌ಗಳ ಮಧ್ಯೆಯೂ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಅಂಚೆ ಇಲಾಖೆ ಯಶಸ್ವಿಯಾಗಿದೆ.

ಹೊಸ ಯೋಜನೆಗಳು, ವಿಭಿನ್ನ ಅನುಕೂಲಕರ ಸೇವೆಗಳನ್ನು ಒದಗಿಸಲು ಮುಂದಾಗಿರುವ ಇಲಾಖೆ ಮತ್ತಷ್ಟು ಗ್ರಾಹಕ ಸ್ನೇಹಿಯಾಗುವತ್ತ ದಾಪುಗಾಲಿಟ್ಟಿದೆ. ಎಟಿಎಂ, ಅಂಚೆವಿಮೆ ಪರಿಚಯಿಸಿ ಯಶಸ್ವಿಯಾಗಿರುವ ಅಂಚೆ ಇಲಾಖೆ ಇದೀಗ ಪಾಸ್‌ಪೋರ್ಟ್‌ ಸೇವೆ, ಭಾರತೀಯ ಅಂಚೆ ಪಾವತಿ ಬ್ಯಾಂಕ್‌ (ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌-ಐಪಿಪಿಬಿ) ಪರಿಚಯಿಸಿದೆ.

ಐಪಿಪಿಬಿ ಮೂಲಕ ಪೂರ್ಣ ಪ್ರಮಾಣದ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಯೋಜನೆ ರೂಪಿಸಿದೆ. ಈಗಾಗಲೇ ರಾಂಚಿ ಮತ್ತು ರಾಯ್‌ಪುರಗಳಲ್ಲಿ ಈ ಸೇವೆ ಪರಿಚಯಿಸಿರುವ ಇಲಾಖೆ ಈ ವರ್ಷದೊಳಗೆ ದೇಶದ ಎಲ್ಲ ನಗರಗಳಲ್ಲಿ ಈ ಸೇವೆ ಒದಗಿಸಲಿದೆ. ಕಲಬುರ್ಗಿ ನಗರದಲ್ಲಿ ಶೀಘ್ರ ಅಂಚೆ ಪಾವತಿ ಬ್ಯಾಂಕ್‌ ಸೇವೆ ಲಭ್ಯವಾಗಲಿದೆ. ಇದಕ್ಕಾಗಿ ಸಿದ್ಧತೆ ಪ್ರಗತಿಯಲ್ಲಿದೆ.

ಇಲ್ಲಿ ಬ್ಯಾಂಕ್‌ ಸಂಬಂಧಿತ ಎಲ್ಲ ಸೇವೆಗಳು ಲಭ್ಯವಾಗಲಿವೆ. ಇದಕ್ಕಾಗಿ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ನೇಮಕಾತಿ ಪ್ರಕ್ರಿಯೆಗಳು ಭಾರತೀಯ ಅಂಚೆ ಇಲಾಖೆ ದೆಹಲಿ ಮುಖ್ಯ ಕಚೇರಿಯಿಂದ ನಡೆಯಲಿವೆ. ಬ್ಯಾಂಕಿಂಗ್ ಸೇವೆಯ ಮೊದಲ ಭಾಗವಾಗಿ ಸಂಧ್ಯಾ ಸುರಕ್ಷಾ ಮತ್ತಿತರ ವಿಮೆ ಯೋಜನೆ ಹಣವನ್ನು ಖಾತೆದಾರರ ಖಾತೆಗೆ ಜಮಾ ಮಾಡುವ ಸೇವೆ ಲಭ್ಯವಾಗಲಿವೆ.

‘ಸದ್ಯ ಸಬ್ಸಿಡಿ, ಪಿಂಚಣಿ ಹಣವನ್ನು ಖಾತೆದಾರರ ಖಾತೆಗೆ ಜಮಾ ಮಾಡುವ ಸೌಲಭ್ಯ ಇರಲಿದೆ. ಬಳಿಕ ಹಂತ ಹಂತವಾಗಿ ಬ್ಯಾಂಕಿಂಗ್‌ ಕ್ಷೇತ್ರದಂತೆ ಎಲ್ಲ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುವ ಗುರಿ ಯೋಜನೆಯಲ್ಲಿದೆ. ಕಲಬುರ್ಗಿಯಲ್ಲಿ ಶೀಘ್ರ ಆರಂಭವಾಗಲಿದೆ. ಇದಕ್ಕಾಗಿ ಈಗಾಗಲೇ ಜಗತ್‌ ವೃತ್ತದ ಅಂಚೆ ಕಚೇರಿ ಗುರುತಿಸಲಾಗಿದೆ’ ಎನ್ನುತ್ತಾರೆ ಕಲಬುರ್ಗಿ ಮುಖ್ಯ ಕಚೇರಿಯ ಸಹಾಯಕ ಅಂಚೆ ಅಧೀಕ್ಷಕ ಶಿವಾನಂದ ಅವರು.

ಗ್ರಾಹಕರಿಗೆ ಅನುಕೂಲ:  ‘ಪಿಂಚಣಿ, ಉಳಿತಾಯ ಖಾತೆ ಮತ್ತಿತರ ಸೇವೆಗಳಿಗಾಗಿ ಅಂಚೆ ಕಚೇರಿಗಳಲ್ಲಿ ಸದಾ ಸರದಿ ಹೆಚ್ಚಿರುತ್ತದೆ. ಎಲ್ಲ ಸೇವೆಗಳಿಗೆ ಒಂದೇ ಕೌಂಟರ್‌

ಇರುವ ಕಾರಣ ಗಂಟೆಗಳ ಕಾಲ ಪಾಳಿಯಲ್ಲಿ ನಿಲ್ಲುವ ಸ್ಥಿತಿ ಇದೆ. ಅಂಚೆ ಪಾವತಿ ಬ್ಯಾಂಕ್‌ ಆರಂಭವಾದರೆ ಹೆಚ್ಚು ಅನುಕೂಲವಾಗಲಿದೆ’ ಎಂದು ರಮೇಶ ಮಲ್ವಾಡಕರ ಹೇಳಿದರು.

***

ಐಪಿಪಿಬಿನಲ್ಲಿ ಏನೇನು ಸೇವೆ?

ಭಾರತೀಯ ಅಂಚೆ ಪಾವತಿ ಬ್ಯಾಂಕ್‌ ಸೇವೆಯಲ್ಲಿ ಖಾತೆಗೆ ಹಣ ಜಮಾ ಮಾಡುವುದು ಮತ್ತು ಹಿಂಪಡೆಯುವುದು. ಆಧಾರ್‌ನಿಂದ ಆಧಾರ್‌ ವರ್ಗಾವಣೆ ಸೇರಿದಂತೆ ಇತರೆ ಬ್ಯಾಂಕಿಂಗ್‌ ಸೌಕರ್ಯಗಳು ಲಭ್ಯ ಇರಲಿವೆ.

ಇದು ಪೂರ್ಣ ಪ್ರಮಾಣದ ಬ್ಯಾಂಕ್‌ನಂತೆಯೇ ಕಾರ್ಯನಿರ್ವಹಿಸಲಿದೆ. ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಒದಗಿಸುವುದು. ದೇಶದ ವಿವಿಧ ಪ್ರದೇಶಗಳಲ್ಲಿನ ಸಾಮಾನ್ಯ ಜನರಿಗೆ ಬ್ಯಾಂಕಿಂಗ್‌ ಸೇವೆ ತಲುಪಿಸುವುದು ಭಾರತೀಯ ಅಂಚೆ ಪಾವತಿ ಬ್ಯಾಂಕ್‌ನ ಮುಖ್ಯ ಉದ್ದೇಶ ಎಂದು ಅಂಚೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

***

650 ದೇಶದಲ್ಲಿ ಆರಂಭವಾಗಲಿರುವ ಅಂಚೆ ಪಾವತಿ ಬ್ಯಾಂಕ್‌ ಶಾಖೆಗಳು

ಸ್ವಚ್ಛ ಅಭಿಯಾನ ಅಂಚೆ ಇಲಾಖೆಯಿಂದ ಜುಲೈ 1ರಿಂದ 15ರವರೆಗೆ ಸ್ವಚ್ಛ ಭಾರತ ಅಭಿಯಾನ ನಡೆಯಲಿದೆ.

1 ಪ್ರತಿ ಜಿಲ್ಲಾ ಕೇಂದ್ರದಲ್ಲಿ ಇರಲಿರುವ ಶಾಖೆ

ಪ್ರತಿಕ್ರಿಯಿಸಿ (+)