ಬುಧವಾರ, ಡಿಸೆಂಬರ್ 11, 2019
20 °C
ಜೆಐಟಿ ಅಂತಿಮ ವರದಿ ‘ಸುಪ್ರೀಂ’ಗೆ ಸಲ್ಲಿಕೆ

ಷರೀಫ್‌ ಸಂಪತ್ತಿನಲ್ಲಿ ಭಾರಿ ವ್ಯತ್ಯಾಸ

ಪಿಟಿಐ Updated:

ಅಕ್ಷರ ಗಾತ್ರ : | |

ಷರೀಫ್‌ ಸಂಪತ್ತಿನಲ್ಲಿ ಭಾರಿ ವ್ಯತ್ಯಾಸ

ಇಸ್ಲಾಮಾಬಾದ್‌: ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಕುಟುಂಬದ ಅಧಿಕೃತ ಆದಾಯದ ಮೂಲ ಹಾಗೂ ಅವರ ಸಂಪತ್ತಿನ ನಡುವೆ ಭಾರಿ ವ್ಯತ್ಯಾಸ ಇದೆ ಎನ್ನುವ ಅಂಶವನ್ನು ಜಂಟಿ ತನಿಖಾ ಸಮಿತಿ ಪತ್ತೆ ಮಾಡಿದೆ.

ಷರೀಫ್‌ ಕುಟುಂಬದ ವಿರುದ್ಧದ ಪನಾಮ ಪೇಪರ್ಸ್‌ ಪ್ರಕರಣದ ತನಿಖೆ ನಡೆಸುತ್ತಿರುವ ಜಂಟಿ ತನಿಖಾ ಸಮಿತಿ (ಜೆಐಟಿ) ಸೋಮವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಂತಿಮ ವರದಿ ಯಲ್ಲಿ ಈ ಅಂಶ ಉಲ್ಲೇಖವಾಗಿದೆ.

ನ್ಸಾಯಮೂರ್ತಿಗಳಾದ ಏಜಾಜ್‌ ಅಫ್ಜಲ್‌, ಅಜ್ಮತ್‌ ಸಯೀದ್‌ ಹಾಗೂ ಐಜಾಜುಲ್‌ ಅಹಸಾನ್‌ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್‌ನ ವಿಶೇಷ ನ್ಯಾಯಪೀಠಕ್ಕೆ ಜೆಐಟಿ ಮುಖ್ಯಸ್ಥ ವಾಜಿದ್‌ ಜಿಯಾ ಅವರು ಸಾಕ್ಷ್ಯಗಳ ಸಹಿತ ವರದಿ ಸಲ್ಲಿಸಿದ್ದಾರೆ.

ಷರೀಫ್‌, ಅವರ ಪುತ್ರರಾದ ಹಸನ್‌ ನವಾಜ್‌, ಹುಸೇನ್‌ ನವಾಜ್‌್ ಹಾಗೂ ಪುತ್ರಿ ಮರಯಮ್‌ ನವಾಜ್‌ ವಿರುದ್ಧ ರಾಷ್ಟ್ರೀಯ ಹೊಣೆಗಾರಿಕೆ ಬ್ಯೂರೊ (ಎನ್‌ಎಬಿ) 1999ರ ಸುಗ್ರೀವಾಜ್ಞೆಯ ಸೆಕ್ಷನ್‌ 9ರ ಅಡಿ ಭ್ರಷ್ಟಾಚಾರ ಪ್ರಕರಣ ದಾಖಲಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ನಾಲ್ಕೂ ಜನರ ಸ್ವತ್ತುಗಳು ಅವರ ಆದಾಯಕ್ಕಿಂತ ಹೆಚ್ಚಿದೆ ಎನ್ನುವುದು ತಿಳಿದುಬಂದಿದೆ.

ಷರೀಫ್‌ ಕುಟುಂಬದ ಒಡೆತನದ ಕಂಪೆನಿಗಳು ವಿದೇಶಿ ಕಂಪೆನಿಗಳೊಂದಿಗೆ ಸಂಪರ್ಕ ಹೊಂದಿವೆ. ಆದ್ದರಿಂದ ಈ ಪ್ರಕರಣದಲ್ಲಿ ಆ ಕಂಪೆನಿಗಳ ಪಾತ್ರ ಇರುವುದನ್ನೂ ತಳ್ಳಿಹಾಕುವಂತಿಲ್ಲ ಎಂದು ವರದಿ ಹೇಳಿದೆ.

ಪ್ರಧಾನಿ ಷರೀಫ್‌, ಅವರ ಮಕ್ಕಳಾದ ಹುಸೇನ್‌, ಹಸನ್‌, ಮರಯಮ್‌ ನವಾಜ್‌ ಹಾಗೂ ಅವರ ಅಳಿಯ ನಿವೃತ್ತ ಕ್ಯಾಪ್ಟನ್‌ ಸಫ್ದರ್, ಪಂಜಾಬ್‌ ಮುಖ್ಯಮಂತ್ರಿ ಆಗಿರುವ ಷರೀಫ್‌ ಸಹೋದರ ಶಹ್ಬಾಜ್‌ ಷರೀಫ್‌ ಅವರು ನೀಡಿರುವ ಹೇಳಿಕೆಗಳು ವರದಿಯಲ್ಲಿವೆ.

1990ರಲ್ಲಿ ಲಂಡನ್‌ನಲ್ಲಿ ಆಸ್ತಿ ಖರೀದಿಸಿದ ಆರ್ಥಿಕ ಮೂಲದ ಮಾಹಿತಿ ನೀಡಲು ಷರೀಫ್‌ ಕುಟುಂಬ ವಿಫಲವಾಗಿದ್ದಕ್ಕೆ ಸುಪ್ರೀಂ ಕೋರ್ಟ್‌ ಮೇ ತಿಂಗಳಲ್ಲಿ ಈ ತನಿಖಾ ಸಮಿತಿ ರಚಿಸಿತ್ತು.

ಪ್ರತಿಕ್ರಿಯಿಸಿ (+)