ಶನಿವಾರ, ಡಿಸೆಂಬರ್ 7, 2019
16 °C

ಚಾಮುಂಡೇಶ್ವರಿಯಿಂದ ಸಿ.ಎಂ ಸ್ಪರ್ಧಿಸಲಿ: ಎಚ್‌.ಡಿ.ಕೆ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮುಂಡೇಶ್ವರಿಯಿಂದ ಸಿ.ಎಂ ಸ್ಪರ್ಧಿಸಲಿ: ಎಚ್‌.ಡಿ.ಕೆ ಸವಾಲು

ಮೈಸೂರು: ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಲಿ ನೋಡೋಣ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸೋಮವಾರ ಇಲ್ಲಿ ಸವಾಲು ಹಾಕಿದರು.

ಪಕ್ಷ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ‘ಚಾಮುಂಡೇಶ್ವರಿ ಕ್ಷೇತ್ರಕ್ಕೆ ಅವರೇನು ಕೊಡುಗೆ ನೀಡಿದ್ದಾರೆ? ಹಲವಾರು ವರ್ಷ ಈ ಕ್ಷೇತ್ರ ಪ್ರತಿನಿಧಿಸಿದ್ದರೂ, ಸರಿಯಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಲ್ಲ. ಈ ಕ್ಷೇತ್ರದಲ್ಲಿ ಸ್ಪರ್ಧಿಸಲಿರುವ ನಮ್ಮ ಪಕ್ಷದ ಜಿ.ಟಿ.ದೇವೇಗೌಡ ಇದನ್ನು ಸವಾಲಾಗಿ ಸ್ವೀಕರಿಸಿ ಸೋಲಿಸಬೇಕು’ ಎಂದರು.

‘ಸಿದ್ದರಾಮಯ್ಯ, ಸಚಿವ ಮಹದೇವಪ್ಪ ಅವರ ಪುತ್ರರನ್ನು ಕ್ರಮವಾಗಿ ವರುಣಾ ಹಾಗೂ ತಿ.ನರಸೀಪುರ ಕ್ಷೇತ್ರಗಳ ವಸತಿ ಜಾಗೃತಿ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ರಾಜ್ಯವೇನು ಅವರ ಆಸ್ತಿಯೇ? ಹೀಗೆ ಮಾಡಲು ಸಂವಿಧಾನದಲ್ಲಿ ಅವಕಾಶ ಇದೆಯೇ’ ಎಂದು ಪ್ರಶ್ನಿಸಿದರು.

‘ಪ್ರಜ್ವಲ್‌ ರೇವಣ್ಣ ಹೇಳಿಕೆಯಿಂದ ನನಗೇಗೂ ಅಸಮಾಧಾನವಾಗಿಲ್ಲ. ಆದರೆ, ನಮ್ಮನ್ನು ದಾರಿ ತಪ್ಪಿಸುವವರು ಇರುತ್ತಾರೆ. ನಾನೂ ದಾರಿ ತಪ್ಪಿದ್ದೇನೆ, ಅದನ್ನು ಸರಿಪಡಿಸಿಕೊಂಡಿದ್ದೇನೆ. ನಮ್ಮ ಮನೆಯ ಹುಡುಗನೂ ಸರಿ ಮಾಡಿಕೊಳ್ಳುತ್ತಾನೆ. ಅದನ್ನೆ ದೊಡ್ಡದು ಮಾಡಬೇಡಿ’ ಎಂದು ಕೋರಿದರು.

ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ವಿಚಾರವಾದಿ ಪ್ರೊ.ಎಚ್‌.ಗೋವಿಂದಯ್ಯ ಜೆಡಿಎಸ್ ಸೇರ್ಪಡೆಯಾದರು.

ಪ್ರತಿಕ್ರಿಯಿಸಿ (+)