ಬುಧವಾರ, ಡಿಸೆಂಬರ್ 11, 2019
24 °C
ಪಾಲಿಕೆ ಆಯುಕ್ತರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ

ಮಡಿವಾಳ ಮಾರುಕಟ್ಟೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿವಾಳ ಮಾರುಕಟ್ಟೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

ಬೆಂಗಳೂರು: ಮಡಿವಾಳ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಳಿಗೆಗಳ ನಿರ್ಮಾಣ ಕಾಮಗಾರಿಯನ್ನು ಪ್ರಸಕ್ತ ಸಾಲಿನಲ್ಲೇ ಪೂರ್ಣಗೊಳಿಸಿ, ನಾಗರಿಕ ಬಳಕೆಗೆ ಮುಕ್ತಗೊಳಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬಿಬಿಎಂಪಿ ಆಯುಕ್ತರಿಗೆ ತಾಕೀತು ಮಾಡಿದರು.

ಮೇಯರ್‌ ಮತ್ತು ಪಾಲಿಕೆ ಅಧಿಕಾರಿಗಳೊಂದಿಗೆ ಸೋಮವಾರ ಬೆಳಿಗ್ಗೆ ಮಡಿವಾಳದ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.

ಮಂಜುನಾಥ್‌ ರೆಡ್ಡಿ ಅವರು ಮೇಯರ್‌ ಆಗಿದ್ದಾಗ ಮಡಿವಾಳ ಮಾರುಕಟ್ಟೆ ವಾಣಿಜ್ಯ ಸಂಕೀರ್ಣದಿಂದ ಸೆಂಟ್‌ ಜಾನ್ಸ್‌ ಆಸ್ಪತ್ರೆವರೆಗಿನ ರಸ್ತೆವರೆಗೂ ರಸ್ತೆ ಪಕ್ಕದ ಜಾಗದಲ್ಲಿ ಸುಮಾರು 400 ಮಳಿಗೆ ನಿರ್ಮಿಸಲು ₹14 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿತ್ತು.

ಎರಡು ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರ ಈ ಯೋಜನೆಗೆ ಮೊದಲ ಹಂತದಲ್ಲಿ ₹7 ಕೋಟಿ ಹಣ ಬಿಡುಗಡೆ ಮಾಡಿತ್ತು. ಈಗಾಗಲೇ 68 ಮಳಿಗೆಗಳ ನಿರ್ಮಾಣ ಪೂರ್ಣವಾಗಿದ್ದು, 38 ಮಳಿಗೆಗಳಿಗೆ ಅಡಿಪಾಯ ಹಾಕಲಾಗಿದೆ. 3ರಿಂದ 4 ತಿಂಗಳುಗಳಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣವಾಗಲಿದೆ ಎಂದು ಬಿಬಿಎಂಪಿ ಆಯುಕ್ತರು, ಸಚಿವರ ಗಮನಕ್ಕೆ ತಂದರು.ಮಳಿಗೆಗಳ ನಿರ್ಮಾಣದ ಅಂದಾಜು ವೆಚ್ಚವನ್ನು ಬಿಬಿಎಂಪಿ ಪರಿಷ್ಕರಿಸಿದೆ. ಪರಿಷ್ಕೃತ ಅಂದಾಜು ₹22 ಕೋಟಿ ವೆಚ್ಚದ ಯೋಜನೆ ಪ್ರಸ್ತಾವವನ್ನು ಮೇಯರ್‌ ಜಿ.ಪದ್ಮಾವತಿ ಮತ್ತು ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಇದೇ ಸಂದರ್ಭದಲ್ಲಿ ಸಚಿವರಿಗೆ ಸಲ್ಲಿಸಿದರು.

‘ಪ್ರಸಕ್ತ ಹಣಕಾಸು ಸಾಲಿನಲ್ಲೇ ಅನುದಾನ ಹೊಂದಿಸಿ, ಕಾಮಗಾರಿ ಪೂರ್ಣಗೊಳಿಸಬೇಕು. ಸಂತೆ ಮಾರುಕಟ್ಟೆಯಲ್ಲಿ ಹಿಂದಿನಿಂದಲೂ ತರಕಾರಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳಿಗೆ ಶೀಘ್ರ ಸೌಲಭ್ಯ ಕಲ್ಪಿಸಬೇಕು’ ಎಂದು ಸಚಿವರು ಆಯುಕ್ತರಿಗೆ ಸೂಚನೆ ನೀಡಿದರು.

ಪಾಲಿಕೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ವ್ಯಾಪಾರಿಗಳ ಸಂಘಟನೆಗಳ ಪ್ರತಿನಿಧಿಗಳು, ‘ಎರಡು ವರ್ಷಗಳಿಂದ ಕಾಮಗಾರಿ ಕುಂಟುತ್ತಾ ಸಾಗಿದೆ.  ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿರುವ ಶೆಡ್‌ಗಳು ಸುರಕ್ಷಿತವಾಗಿಲ್ಲ. ಮಳೆ, ಗಾಳಿ, ಬಿಸಿಲಿನಲ್ಲೇ ವ್ಯಾಪಾರ ನಡೆಸಬೇಕಾಗಿದೆ. ಕಾಮಗಾರಿ ಚುರುಕುಗೊಳಿಸಲು ಪಾಲಿಕೆಗೆ ಸೂಚನೆ ಕೊಡಬೇಕು’  ಸಚಿವರಿಗೆ ಮನವಿ ಮಾಡಿದರು.

ಮಡಿವಾಳ ಮಾರುಕಟ್ಟೆ ಅಭಿವೃದ್ಧಿ ಯೋಜನೆಯ ಪರಿಷ್ಕೃತ ಅಂದಾಜು ವೆಚ್ಚದ ಕಾಮಗಾರಿಯಲ್ಲಿ ಸಾರ್ವಜನಿಕ ಶೌಚಾಲಯ, ವಾಹನ ಪಾರ್ಕಿಂಗ್‌ ಸೌಲಭ್ಯ, ವಾಣಿಜ್ಯ ಸಂಕೀರ್ಣದ ಕಚೇರಿ, ಕಂದಾಯ ಸ್ವೀಕೃತಿ ಕಚೇರಿ ನಿರ್ಮಾಣ  ಸೇರಿದೆ.

ಪ್ರತಿಕ್ರಿಯಿಸಿ (+)