ಶುಕ್ರವಾರ, ಡಿಸೆಂಬರ್ 13, 2019
20 °C
ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಅಧ್ಯಯನದ ಉದ್ದೇಶ; ಪ್ರತಿ ಕಾರ್ಮಿಕರಿಗೆ ₹80 ಸಾವಿರ ವೆಚ್ಚ

ಪೌರ ಕಾರ್ಮಿಕರಿಗೆ ಸಿಂಗಪುರ ಪ್ರವಾಸ ಭಾಗ್ಯ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

ಪೌರ ಕಾರ್ಮಿಕರಿಗೆ ಸಿಂಗಪುರ ಪ್ರವಾಸ ಭಾಗ್ಯ

ಕೋಲಾರ: ಯೋಜನೆ ಅನುಷ್ಠಾನ ಅಥವಾ ಅಧ್ಯಯನಕ್ಕಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿದೇಶಕ್ಕೆ ಪ್ರವಾಸ ಹೋಗುವುದು ಸಾಮಾನ್ಯ. ಅವರಂತೆಯೇ ಪೌರ ಕಾರ್ಮಿಕರಿಗೂ ಈಗ ವಿದೇಶ ಪ್ರವಾಸ ಭಾಗ್ಯ ಲಭಿಸಿದೆ.

ರಾಜ್ಯ ಸರ್ಕಾರವು ಸ್ವಚ್ಛತೆಗೆ ಹೆಸರಾಗಿರುವ ಮಲೇಷ್ಯಾದ ಸಿಂಗಪುರದಲ್ಲಿ ಅಳವಡಿಸಿಕೊಂಡಿರುವ ಸ್ವಚ್ಛತಾ ಕ್ರಮಗಳು, ಘನ ತ್ಯಾಜ್ಯ, ಯುಜಿಡಿ ಮತ್ತು ಮ್ಯಾನ್‌ಹೋಲ್‌ಗಳ ನಿರ್ವಹಣೆ ಕುರಿತು ಅಧ್ಯಯನ ನಡೆಸಲು ವಿವಿಧ ಜಿಲ್ಲೆಗಳ 1,000 ಪೌರ ಕಾರ್ಮಿಕರು ಹಾಗೂ 40 ಮಂದಿ ಅಧಿಕಾರಿಗಳನ್ನು ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಮತ್ತು ಗಿರಿಜನ ಉಪ ಯೋಜನೆಯಡಿ (ಟಿಎಸ್‌ಪಿ) ಪ್ರವಾಸಕ್ಕೆ ಕಳುಹಿಸಲು ಮುಂದಾಗಿದೆ.

ಕರ್ನಾಟಕ ನಗರ ವ್ಯವಸ್ಥಾಪಕರ ಸಂಘವು (ಸಿ–ಮ್ಯಾಕ್‌) ಪ್ರವಾಸ ನಿರ್ವಹಣೆಯ ಹೊಣೆ ಹೊತ್ತಿದ್ದು, ವಿವಿಧ ಜಿಲ್ಲೆಗಳ 40 ಪೌರ ಕಾರ್ಮಿಕರ ತಂಡವು ಈಗಾಗಲೇ ಜುಲೈ ಮೊದಲ ವಾರದಲ್ಲಿ ಸಿಂಗಪುರ ಪ್ರವಾಸಕ್ಕೆ ತೆರಳಿದೆ. ಅದೇ ರೀತಿ ಜಿಲ್ಲೆಯ ಮೂರು ನಗರಸಭೆ ಹಾಗೂ ಮೂರು ಪುರಸಭೆಗಳಿಂದ 21 ಮಂದಿ ಪೌರ ಕಾರ್ಮಿಕರು ಮತ್ತು ಬಂಗಾರಪೇಟೆ ಪುರಸಭೆಯ ಆರೋಗ್ಯ ನಿರೀಕ್ಷಕರೊಬ್ಬರನ್ನು ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ.

ಪೌರಾಡಳಿತ ನಿರ್ದೇಶನಾಲಯದ ಸೂಚನೆಯಂತೆ 10 ವರ್ಷಗಳ ಸೇವಾವಧಿ ಪೂರೈಸಿದ, ಕಲಿಕೆಗೆ ಹೆಚ್ಚಿನ ಆಸಕ್ತಿ ಇರುವ ಹಾಗೂ 30 ವರ್ಷದಿಂದ 50 ವರ್ಷ ವಯೋಮಾನದೊಳಗಿನ ಕಾಯಂ ಪೌರ ಕಾರ್ಮಿಕರನ್ನು ಪ್ರವಾಸಕ್ಕೆ ಪರಿಗಣಿಸಲಾಗಿದೆ.

ಈ ಪೌರ ಕಾರ್ಮಿಕರ ವೈಯಕ್ತಿಕ ವಿವರವನ್ನು ನಿಗದಿತ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ, ಆಧಾರ್‌ ಕಾರ್ಡ್, ಪಾನ್‌ಕಾರ್ಡ್, ಮತದಾರರ ಗುರುತಿನ ಚೀಟಿ, ಸೇವಾ ದೃಢೀಕರಣದ ದಾಖಲೆಪತ್ರಗಳನ್ನು ಪೌರಾಡಳಿತ ನಿರ್ದೇಶನಾಲಯಕ್ಕೆ ಕಳುಹಿಸಲಾಗಿದೆ.

₹ 80 ಸಾವಿರ: ಪೌರ ಕಾರ್ಮಿಕರಿಗೆ ಈ ಪ್ರವಾಸ ಸಂಪೂರ್ಣ ಉಚಿತವಾಗಿದ್ದು, ಅವರ ವಸತಿ, ಊಟ ಹಾಗೂ ವಿಮಾನಯಾನ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ. ಜತೆಗೆ ಸರ್ಕಾರವೇ ಇವರ ಪಾಸ್‌ಪೋರ್ಟ್‌ ಮಾಡಿಸುತ್ತಿದೆ. ಪೌರಾಡಳಿತ ನಿರ್ದೇಶನಾಲಯವು ಪ್ರವಾಸಕ್ಕೆ ಪ್ರತಿ ಪೌರ ಕಾರ್ಮಿಕರಿಗೆ ಸುಮಾರು ₹ 80 ಸಾವಿರ ಅನುದಾನ ಮೀಸಲಿಟ್ಟಿದೆ.

ಜಿಲ್ಲಾಡಳಿತವು ಪ್ರವಾಸಕ್ಕೆ ಆಯ್ಕೆಯಾಗಿರುವ ಜಿಲ್ಲೆಯ ಪೌರ ಕಾರ್ಮಿಕರು ಹಾಗೂ ಅಧಿಕಾರಿಯ ಪಾಸ್‌ಪೋರ್ಟ್‌ ಮಾಡಿಸುವ ಪ್ರಯತ್ನದಲ್ಲಿದೆ. ಪಾಸ್‌ಪೋರ್ಟ್‌ ಸಿದ್ಧವಾದ ನಂತರ ಪ್ರವಾಸದ ದಿನಾಂಕ ನಿಗದಿಯಾಗಲಿದೆ.

ಕಾರ್ಮಿಕರು ಸಂತಸ: ಸದಾ ಊರು ಕೇರಿಯ ಸ್ವಚ್ಛತಾ ಕಾರ್ಯದಲ್ಲೇ ನಿರತರಾಗಿರುತ್ತಿದ್ದ ಪೌರ ಕಾರ್ಮಿಕರು ಸಿಂಗಪುರ ಪ್ರವಾಸ ಭಾಗ್ಯ ಒದಗಿ ಬಂದಿರುವುದಕ್ಕೆ ಸಂತಸಗೊಂಡಿದ್ದಾರೆ. ಒಟ್ಟಾರೆ ಐದು ದಿನದ ಪ್ರವಾಸದಲ್ಲಿ ಪೌರ ಕಾರ್ಮಿಕರಿಗೆ ಸಿಂಗಪುರ ಹಾಗೂ ಅಕ್ಕಪಕ್ಕದ ಪ್ರದೇಶಗಳ ಸ್ವಚ್ಛತೆಯ ದರ್ಶನವಾಗಲಿದೆ.

ಜತೆಗೆ ಅಲ್ಲಿನ ಪೌರ ಕಾರ್ಮಿಕರು ಘನತ್ಯಾಜ್ಯ ನಿರ್ವಹಣೆಗೆ ಬಳಸುವ ಅತ್ಯಾಧುನಿಕ ಸಲಕರಣೆಗಳು, ಸುರಕ್ಷತಾ ಸಾಮಗ್ರಿಗಳು ಹಾಗೂ ಅವರ ಆರೋಗ್ಯ ಕಾಳಜಿ ಕುರಿತು ಖುದ್ದು ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಲಿದ್ದಾರೆ.

***

ಜಿಲ್ಲೆಯಿಂದ 21 ಪೌರ ಕಾರ್ಮಿಕರನ್ನು ಪ್ರವಾಸಕ್ಕೆ ಆಯ್ಕೆ ಮಾಡಲಾಗಿದ್ದು, ಅವರ ಪಾಸ್‌ಪೋರ್ಟ್‌ ಮಾಡಿಸುವ ಕಾರ್ಯ ಪ್ರಗತಿಯಲ್ಲಿದೆ

ರೇಣುಕಾ, ಯೋಜನಾ ನಿರ್ದೇಶಕಿ, ಜಿಲ್ಲಾ ನಗರಾಭಿವೃದ್ಧಿ ಕೋಶ

ಪ್ರತಿಕ್ರಿಯಿಸಿ (+)