ಶುಕ್ರವಾರ, ಡಿಸೆಂಬರ್ 13, 2019
16 °C

ಎಟಿಎಂ ಅಸ್ತಿತ್ವಕ್ಕೆ ಬಂದು ಐವತ್ತು; ಸುರಕ್ಷತೆ ಎಷ್ಟು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಟಿಎಂ ಅಸ್ತಿತ್ವಕ್ಕೆ ಬಂದು ಐವತ್ತು; ಸುರಕ್ಷತೆ ಎಷ್ಟು?

ವಿಶ್ವದ ಮೊದಲ ಎಟಿಎಂ ಯಂತ್ರಕ್ಕೀಗ ಸ್ವರ್ಣಮಹೋತ್ಸವದ ಸಂಭ್ರಮ. ಜನರು ನಗದನ್ನು ಬಳಸುವ ವಿಧಾನಕ್ಕೆ ಹೊಸ ರೂಪ ಕೊಡುವ ಕ್ರಾಂತಿಯ ರಾಯಭಾರತ್ವ ವಹಿಸಿದ್ದು ಎಟಿಎಂ ಯಂತ್ರ. ಅದು ಈಚೆಗೆ ತನ್ನ 50ನೇ ಹುಟ್ಟುಹಬ್ಬವನ್ನು ಆಚರಿಸಿದೆ. ಸ್ಕಾಟ್ಲೆಂಡ್‌ನ ಸಂಶೋಧಕ ಶೆಫರ್ಡ್‌ ಬಾರನ್‌ ಆವಿಷ್ಕರಿಸಿದ ಈ ಎಟಿಎಂ (ಅಟೊಮೇಟೆಡ್‌ ಟೆಲ್ಲರ್‌ ಮಷೀನ್‌) ಮೊದಲಬಾರಿ ಉದ್ಘಾಟನೆ ಕಂಡದ್ದು 1967ರ ಜೂನ್‌ 27ರಂದು. ಉತ್ತರ ಲಂಡನ್‌ನ ಎನ್‌ಫೀಲ್ಡ್‌ನಲ್ಲಿರುವ ಬಾರ್ಕ್ಲೇಸ್‌ ಬ್ಯಾಂಕ್‌ ಶಾಖೆಯಲ್ಲಿ ಮೊದಲ ಎಟಿಎಂ ಆರಂಭವಾಗಿತ್ತು.

ಆ ಕಾಲದ ಜನಪ್ರಿಯ ಟಿ.ವಿ. ಹಾಸ್ಯ ಧಾರಾವಾಹಿಯ ನಟ ರೆಗ್‌ ವಾರ್ನೆ ಈ ಎಟಿಎಂನಿಂದ ಹಣ ಪಡೆದ ಮೊದಲ ವ್ಯಕ್ತಿ. ಈಗ ವಿಶ್ವದಾದ್ಯಂತ ಸುಮಾರು 30 ಲಕ್ಷ ಎಟಿಎಂಗಳಿವೆ ಎಂದು ಅಂದಾಜಿಸಲಾಗಿದೆ.ವಿಶ್ವದ ದಕ್ಷಿಣ ತುದಿ ಅಂಟಾರ್ಕ್ಟಿಕಾದ ಮೆಕ್‌ಮರ್ಡೊ ಸ್ಟೇಷನ್‌ನಿಂದ ಹಿಡಿದು ಪಾಕಿಸ್ತಾನದ ಖುಂಜೆರ್ಬ್‌ ಪಾಸ್‌ (ಪಾಕ್‌–ಚೀನಾ ಗಡಿ ಪ್ರದೇಶ – 4,693 ಅಡಿ ಎತ್ತರ) ವರೆಗೆ ಎಟಿಎಂಗಳು ಹಬ್ಬಿವೆ.ಎಟಿಎಂ ವ್ಯಾಪ್ತಿ ಇಷ್ಟಕ್ಕೇ ಮುಗಿಯುವುದಿಲ್ಲ. ಚೀನಾದ ಬೀಜಿಂಗ್‌ನಲ್ಲಿ ಹಲವೆಡೆ ಟ್ರಕ್‌ಗಳಲ್ಲಿ, ಅಮೆರಿಕದಲ್ಲಿ ಗಾಲ್ಫ್‌ ಆಟಗಾರರು ತಮ್ಮ ಆಟದ ಸಾಮಗ್ರಿ ಸಾಗಿಸುವ ಸಣ್ಣ ವಾಹನದಲ್ಲೂ ಎಟಿಎಂ ಸ್ಥಾನ ಪಡೆದುಕೊಂಡಿದೆ. ದುಬೈನ ಹೋಟೆಲೊಂದರಲ್ಲಿ ಚಿನ್ನದ ಬಿಸ್ಕೆಟ್‌ಗಳನ್ನು ವಿತರಿಸಲು ಸಹ ಎಟಿಎಂ ಬಳಕೆಯಾಗುತ್ತಿದೆ.

ಮೊಬೈಲ್‌ ಬ್ಯಾಂಕಿಂಗ್‌, ಆನ್‌ಲೈನ್‌ ಬ್ಯಾಂಕಿಂಗ್‌ನಂತಹ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಈಚೆಗೆ ಜನಪ್ರಿಯವಾಗುತ್ತಿದ್ದರೂ, ಎಟಿಎಂಗಳ ಸಂಖ್ಯೆ ಇನ್ನೂ ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿದೆ. ಚೀನಾ ಹಾಗೂ ಭಾರತದಂಥ ರಾಷ್ಟ್ರಗಳಲ್ಲಿ ಇದರ ವಿಸ್ತರಣೆ ಆಗುತ್ತಲೇ ಇದೆ. ಬ್ರಿಟನ್‌ನ ವರ್ತಕರ ಸಂಘಟನೆಯೊಂದರ ಅಂದಾಜಿನ ಪ್ರಕಾರ, ಮುಂದಿನ ವರ್ಷಾಂತ್ಯದ ವೇಳೆಗೆ ಬ್ರಿಟನ್‌ನಲ್ಲಿ ಡಿಜಿಟಲ್‌ ವಹಿವಾಟು ಪ್ರಮಾಣ ನಗದು ವಹಿವಾಟಿನ ಪ್ರಮಾಣವನ್ನು ಮೀರಿಸಲಿದೆ. ಮುಂದಿನ 10 ವರ್ಷಗಳಲ್ಲಿ ಅದು ಇನ್ನಷ್ಟು ಹೆಚ್ಚಲಿದ್ದು,ಒಟ್ಟಾರೆ ವಹಿವಾಟಿನ ಐದನೇ ಒಂದರಷ್ಟಾಗಲಿದೆ. ‘ಈಚಿನ ದಿನಗಳಲ್ಲಿ ಡಿಜಿಟಲ್‌ ಬ್ಯಾಂಕಿಂಗ್‌ ಭಾರಿ ಜನಪ್ರಿಯತೆ ಗಳಿಸಿದ್ದರೂ, ನಗದು ಹಣ ಜನರ ನಿತ್ಯದ ವಹಿವಾಟಿನ ಪ್ರಮುಖ ಅಂಶವಾಗಿ ಉಳಿದಿದೆ’ ಎಂದು ಬಾರ್ಕ್ಲೇಸ್‌ ಬ್ಯಾಂಕ್‌ನ ಗ್ರಾಹಕ ಸೇವಾ ವಿಭಾಗದ ಮುಖ್ಯಸ್ಥ ರಹೀಲ್‌ ಅಹ್ಮದ್‌ ಹೇಳುತ್ತಾರೆ. 2016ರ ಡಿಸೆಂಬರ್‌ನಲ್ಲಿ ಬ್ರಿಟನ್‌ನಲ್ಲಿ ಒಂದೇ ದಿನ ವಿವಿಧ ಎಟಿಎಂಗಳ ಮೂಲಕ ಜನರು 73ಕೋಟಿ ಪೌಂಡ್‌ (ಅಂದಾಜು ₹ 6060 ಕೋಟಿ) ನಗದು ಪಡೆದಿರುವುದು ಒಂದು ದಾಖಲೆ. ಹೆಚ್ಚಾಗಿ ಕ್ರಿಸ್‌ಮಸ್‌ ಖರೀದಿದಾರರು ಈ ರೀತಿ ಹಣ ಪಡೆದವರು.

ಭವಿಷ್ಯ ಮಸುಕಾಗಿಲ್ಲ

ಭಾರತದಲ್ಲಿ ಈಗಲೂ ನಗದು ಹಣವೇ ‘ರಾಜ’ನಾಗಿರುವುದರಿಂದ ಎಟಿಎಂಗಳು ಬೇಗನೆ ಕಾಣೆಯಾಗುವ ಸಾಧ್ಯತೆ ಇಲ್ಲ.

ಬ್ಯಾಂಕ್‌ ಒಂದು ಯಾವುದೇ ಸಿಬ್ಬಂದಿಯ ಸಹಾಯವಿಲ್ಲದೆಯೇ ಹಣ ಕೊಡುವಂಥ ವ್ಯವಸ್ಥೆಯನ್ನು 50 ವರ್ಷಗಳ ಹಿಂದೆ ಜಾರಿ ಮಾಡಿದ್ದಾಗ ಜನರಲ್ಲಿ ಅಚ್ಚರಿ ಮೂಡಿತ್ತು. ಇಂದು ವಿಶ್ವದಾದ್ಯಂತ ನೂರಾರು ಬ್ಯಾಂಕ್‌ಗಳು, ನಗರ ಹಳ್ಳಿಗಳೆನ್ನದೆ ಎಲ್ಲ ಕಡೆಗಳಲ್ಲೂ ಇಂಥ ಯಂತ್ರಗಳನ್ನು ಅಳವಡಿಸಿವೆ. ಈ ಯಂತ್ರಗಳು ಬೇರೆಬೇರೆ ರಾಷ್ಟ್ರಗಳ ನೋಟುಗಳನ್ನು ಜನರಿಗೆ ಒದಗಿಸುತ್ತಿವೆ. ಯಂತ್ರಗಳ ತಯಾರಿಕೆ, ಅಳವಡಿಕೆ, ನಿರ್ವಹಣೆ, ನಗದು ಸಾಗಿಸುವುದು... ಹೀಗೆ ಎಟಿಎಂ ವ್ಯವಸ್ಥೆಯ ಸುತ್ತಲೇ ಒಂದು ಉದ್ದಿಮೆ ಬೆಳೆದಿದೆ. ಇದರಿಂದ ಬದುಕು ಸಹ ಸ್ವಲ್ಪ ಸರಳವಾಗಿದೆ.

ಅದೇನೇ ಇರಲಿ, ಮುಂದಿನ ಹತ್ತು ವರ್ಷಗಳಲ್ಲಿ ನಗದು ಹಾಗೂ ಎಟಿಎಂ ಯಂತ್ರಗಳ ಅಸ್ತಿತ್ವ ಇಲ್ಲದಂತೆ ಮಾಡಬೇಕು ಎಂಬ ಚರ್ಚೆಯೂ ಹಲವು ರಾಷ್ಟ್ರಗಳಲ್ಲಿ ಆರಂಭವಾಗಿದೆ. ‘2020ರ ವೇಳೆಗೆ ಭಾರತದಲ್ಲೂ ಡಿಜಿಟಲ್‌ ಪಾವತಿ ವ್ಯವಸ್ಥೆ ಜನಪ್ರಿಯಗೊಳ್ಳಲಿದೆ, ಎಟಿಎಂ ಉದ್ದಿಮೆಗೆ ಇನ್ನು ಭವಿಷ್ಯ ಇಲ್ಲ’ ಎಂದು ಇಲ್ಲಿಯೂ ಕೆಲವು ತಂತ್ರಜ್ಞರು ಹೇಳಲು ಆರಂಭಿಸಿದ್ದಾರೆ.

ಆದರೆ, ಎಟಿಎಂ ಉದ್ದಿಮೆಗಳ ಸಂಘಟನೆ (ಎಟಿಎಂಎಐ) ಪ್ರಕಾರ, ಭಾರತದಲ್ಲಿ ಎಟಿಎಂ ಬಳಕೆ ಪ್ರಮಾಣ ಹೆಚ್ಚುತ್ತಲೇ ಇದೆ ಮತ್ತು ಯಂತ್ರಗಳ ಅಳವಡಿಕೆ ಪ್ರಮಾಣ ಇಳಿಕೆ ಆಗುತ್ತಿಲ್ಲ. ಭಾರತವೊಂದರಲ್ಲೇ ಒಂದು ತಿಂಗಳಲ್ಲಿ ಒಟ್ಟಾರೆ 900 ಕೋಟಿ ಬಾರಿ ಎಟಿಎಂ ಬಳಕೆಯಾಗುತ್ತವೆ. ಈ ಪ್ರಮಾಣ ಪ್ರತಿ ವರ್ಷವೂ ಏರಿಕೆಯಾಗುತ್ತಿದೆ ಎಂಬುದನ್ನು ಅಂಕಿ ಅಂಶಗಳು ತೋರಿಸುತ್ತವೆ. ಅನೇಕ ರಾಷ್ಟ್ರಗಳಲ್ಲಿ ಈಗ ಬ್ಯಾಂಕಿಂಗ್‌ ವ್ಯವಸ್ಥೆಯ ವಿಸ್ತರಣೆ ಆಗುತ್ತಿದ್ದು, ಎಟಿಎಂ ಯಂತ್ರ ಅಳವಡಿಕೆ ಇದರ ಭಾಗವಾಗಿದೆ. ಕೆಲವು ರಾಷ್ಟ್ರಗಳಲ್ಲಿ ಎಟಿಎಂಅನ್ನು ಕ್ಯಾಷ್‌ ಪಾಯಿಂಟ್‌ ಅಥವಾ ಕ್ಯಾಷ್‌ ಮಷೀನ್‌ ಎಂದೋ, ಅಟೊಮೇಟೆಡ್‌ ಬ್ಯಾಂಕಿಂಗ್‌ ಮಷೀನ್‌ (ಎಬಿಎಂ) ಅಥವಾ ಕ್ಯಾಷ್‌ ಡಿಸ್ಪೆನ್ಸರ್‌ ಎಂದೋ ಕರೆಯಲಾಗುತ್ತದೆ.

ಆರಂಭದ ದಿನಗಳಲ್ಲಿ ಯಾವುದೇ ಬ್ಯಾಂಕ್‌ನ ಎಟಿಎಂ ಅನ್ನು ಆ ಬ್ಯಾಂಕ್‌ ಗ್ರಾಹಕರು ಮಾತ್ರ ಬಳಸಲು ಸಾಧ್ಯವಾಗುತ್ತಿತ್ತು. ಕಾಲಾಂತರದಲ್ಲಿ ಕಾರ್ಡ್‌ ನೆಟ್‌ವರ್ಕ್‌ ವ್ಯವಸ್ಥೆ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಲು ಆರಂಭಿಸಿತು. ಇದರಿಂದ ಬೇರೆ ಬ್ಯಾಂಕ್‌ ಗ್ರಾಹಕರೂ ಒಂದು ಎಟಿಎಂನಿಂದ ಹಣ ಪಡೆಯುವುದು ಸಾಧ್ಯವಾಯಿತು. ಜೊತೆಗೆ ಹಣ ವರ್ಗಾವಣೆ, ಖಾತೆಯಲ್ಲಿರುವ ಹಣದ ಮಾಹಿತಿ ಪಡೆಯುವುದು, ಬಿಲ್‌ ಪಾವತಿ ಮುಂತಾದ ಮೌಲ್ಯವರ್ಧಿತ ಸೇವೆಗಳೂ ಲಭ್ಯವಾದವು. ಪ್ರತಿ ರಾಷ್ಟ್ರದಲ್ಲೂ ಜನಸಂಖ್ಯೆಗೆ ಅನುಗುಣವಾಗಿ ಎಟಿಎಂಗಳ ಸಂಖ್ಯ ಹೆಚ್ಚಲು ಆರಂಭವಾಯಿತು. ರಷ್ಯಾ, ದಕ್ಷಿಣ ಕೊರಿಯಾ, ಅಮೆರಿಕ, ಬ್ರಿಟನ್‌, ಕೆನಡಾ ಹಾಗೂ ಆಸ್ಟ್ರೇಲಿಯಾಗಳಲ್ಲಿ 10ಲಕ್ಷ ಜನಸಂಖ್ಯೆಗೆ 450 ಎಟಿಎಂಗಳಿವೆ. ಭಾರತದಲ್ಲಿ ಇದರ ಸಂಖ್ಯೆ 185.

ಭಾರತದಲ್ಲಿ 30ವರ್ಷ

ಭಾರತಕ್ಕೆ ಎಟಿಎಂಪ್ರವೇಶ ಪಡೆದು 30 ವರ್ಷಗಳಾಗಿವೆ. 1987ರಲ್ಲಿ ಸಿಟಿ ಬ್ಯಾಂಕ್‌ ಹಾಗೂ ಎಚ್‌ಎಸ್‌ಬಿಸಿ ಬ್ಯಾಂಕ್‌ಗಳು ಇಲ್ಲಿ ಎಟಿಎಂ ಆರಂಭಿಸಿದ್ದವು. ಭಾರತದ ಸರ್ಕಾರಿ ಕ್ಷೇತ್ರದ ಬ್ಯಾಂಕ್‌ಗಳಲ್ಲಿ ಮೊದಲ ಎಟಿಎಂ ಸ್ಥಾಪಿಸಿದ ಬ್ಯಾಂಕ್‌ ಎಂದರೆ ಬ್ಯಾಂಕ್‌ ಆಫ್‌ ಇಂಡಿಯಾ. ಇದು ಮುಂಬೈನ ಮಹಾಲಕ್ಷ್ಮಿಯಲ್ಲಿರುವ ಶಾಖೆಯಲ್ಲಿ ಮೊದಲ ಎಟಿಎಂ ಸ್ಥಾಪಿಸಿತ್ತು.ಖಾಸಗಿ ಸಂಸ್ಥೆಗಳ ಪ್ರವೇಶದಿಂದ ದೇಶದಲ್ಲಿ ಅಂತರ್‌ಬ್ಯಾಂಕ್‌ ಎಟಿಎಂ ವಹಿವಾಟು ಸಾಧ್ಯವಾಯಿತಾದರೂ, ಈ ವಹಿವಾಟು ವೀಸಾ ಅಥವಾ ಮಾಸ್ಟರ್‌ ಕಾರ್ಡ್‌ ಮೂಲಕವೇ ನಡೆಯಬೇಕಾಗಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಗೆ ಬ್ಯಾಂಕ್‌ಗಳು ತನ್ನ ಗ್ರಾಹಕರಿಗೆ ಮಾತ್ರ ಸೇವೆ ಕೊಡಲು ಆಸಕ್ತಿ ತೋರಿದವು.

ಕೊನೆಗೆ 2004ರಲ್ಲಿ ಸ್ವತಃ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತನ್ನ ತಾಂತ್ರಿಕ ವಿಸ್ತರಣೆ ಐಡಿಆರ್‌ಬಿಟಿ ಮೂಲಕ ರಾಷ್ಟ್ರದಾದ್ಯಂತ ‘ನ್ಯಾಷನಲ್‌ ಫೈನಾನ್ಷಿಯಲ್‌ ಸ್ವಿಚ್‌’ (ಎನ್‌ಎಫ್‌ಎಸ್‌) ಎಂಬ ಎಟಿಎಂಗಳ ಜಾಲ ಆರಂಭಿಸಲು ಮುಂದಾಯಿತು. ಈ ಪ್ರಯೋಗ ಭಾರಿ ಯಶಸ್ಸು ಗಳಿಸಿತು. ಈ ವ್ಯವಸ್ಥೆಯನ್ನು 2010ರಲ್ಲಿ ಭಾರತೀಯ ನ್ಯಾಷನಲ್‌ ಪೇಮೆಂಟ್‌ ಕಾರ್ಪೊರೇಷನ್‌ (ಎನ್‌ಸಿಪಿಐ)ಗೆ ಹಸ್ತಾಂತರಿಸಲಾಯಿತು.ನಂತರದ ಏಳು ವರ್ಷಗಳಲ್ಲಿ ಎಲ್ಲ ಎಟಿಎಂಗಳಲ್ಲೂ ಅಂತರ್‌ಬ್ಯಾಂಕ್‌ ವಹಿವಾಟು ಸಾಧ್ಯವಾಗುವಂತೆ ಎನ್‌ಪಿಸಿಐ ವ್ಯವಸ್ಥೆ ಮಾಡಿತು. ದೇಶದ 101 ಸದಸ್ಯ ಬ್ಯಾಂಕ್‌ಗಳು ತಮ್ಮ ಎಲ್ಲ ಎಟಿಎಂಗಳನ್ನು ‘ರೂಪೇ’ ಕಾರ್ಡ್‌ ಮೂಲಕ ಎನ್‌ಸಿಪಿಐ ಜಾಲಕ್ಕೆ ಸೇರ್ಪಡೆ ಮಾಡಿವೆ. ಪ್ರತಿದಿನ ಸರಾಸರಿ 1.20ಕೋಟಿ ವಹಿವಾಟುಗಳು ನಡೆಯುತ್ತವೆ.

ಅಂತರ್‌ ಬ್ಯಾಂಕ್‌ ಎಟಿಎಂ ಸೇವೆ ಭಾರತದ ಪಾವತಿ ವ್ಯವಸ್ಥೆಯ ವಿಶೇಷ ಸೇವೆಯಾಗಿದೆ. ಬೆರಳೆಣಿಕೆಯಷ್ಟು ರಾಷ್ಟ್ರಗಳಲ್ಲಿ ಮಾತ್ರ ಇಷ್ಟೊಂದು ವಿಸ್ತಾರವಾದ ಅಂತರ್‌ ಬ್ಯಾಂಕ್ ಎಟಿಎಂ ವ್ಯವಸ್ಥೆ ಇದೆ. ಇಲ್ಲಿ ಒಬ್ಬ ಗ್ರಾಹಕ ಯಾವುದೇ ಬ್ಯಾಂಕ್‌ನ ಎಟಿಎಂಗೆ ಹೋಗಿ ಹೆಚ್ಚುವರಿ ಶುಲ್ಕ ಕೊಡದೆಯೇ ಮೂರರಿಂದ ಐದು ಬಾರಿ ವಹಿವಾಟು ನಡೆಸಬಹುದು.

ದೇಶದಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿಯ ಬಳಿಕ ಡಿಜಿಟಲ್‌ ಪಾವತಿ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ‘ನಗದು ರಹಿತ’ ವಹಿವಾಟನ್ನು ಜನಪ್ರಿಯಗೊಳಿಸಲು ಸಹಕಾರಿಯಾಗುವಂತೆ ಗ್ರಾಹಕರನ್ನು ಪ್ರೋತ್ಸಾಹಿಸಬೇಕು ಎಂದು ಆರ್‌ಬಿಐ ಹಾಗೂ ಸರ್ಕಾರ ಬ್ಯಾಂಕ್‌ಗಳನ್ನು ಒತ್ತಾಯಿಸುತ್ತಿದೆ. ಆದರೂ ಭಾರತದಲ್ಲಿ ಯಾವಾಗ ಎಟಿಎಂಗಳು ಅಸ್ತಿತ್ವ ಕಳೆದುಕೊಳ್ಳಲಿವೆ ಎಂದು ಹೇಳುವುದು ಕಷ್ಟ. 2015–16ಕ್ಕೆ ಹೋಲಿಸಿದರೆ 2016–17ರಲ್ಲಿ ಭಾರತದಲ್ಲಿ ಎಟಿಎಂಗಳಿಂದ ನಗದು ಪಡೆಯುವ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ ಎಂಬುದು ನಿಜ. ಆದರೆ ಎಟಿಎಂಬಳಕೆಯ ಪ್ರಮಾಣ ಮಾತ್ರ ಹೆಚ್ಚುತ್ತಲೇ ಇದೆ. ನೋಟು ರದ್ದತಿ ನಂತರ ನಿಷ್ಕ್ರಿಯವಾಗಿದ್ದ ‘ಜನಧನ್‌’ ಖಾತೆಗಳೂ ಜೀವ ಪಡೆದುಕೊಂಡವು. ಆ ಗ್ರಾಹಕರೂ ‘ರೂಪೇ’ ಕಾರ್ಡ್‌ಗಳನ್ನು ಬಳಸಲು ಆರಂಭಿಸಿದ್ದರಿಂದ ಎಟಿಎಂಗಳ ಬಳಕೆ ಹೆಚ್ಚಾಗಿದೆ. ಭಾರತದಲ್ಲಿ ಇನ್ನೂ ಲಕ್ಷಾಂತರ ಜನರು ಎಟಿಎಂ ಸೇವೆಯಿಂದ ವಂಚಿತರಾಗಿದ್ದಾರೆ. ಆದ್ದರಿಂದ ಇಷ್ಟು ದೊಡ್ಡ ರಾಷ್ಟ್ರದಲ್ಲಿ ಸದ್ಯದಲ್ಲಿ ಎಟಿಎಂಗಳು ಅಸ್ತಿತ್ವ ಕಳೆದುಕೊಳ್ಳಲಿವೆ ಎಂದು ಹೇಳುವುದು ಕಷ್ಟ.

ಭಾರತದ ಮಟ್ಟಿಗೆ ಹೇಳುವುದಾದರೆ ಎಟಿಎಂ ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆ. ಇಲ್ಲಿ ಬ್ಯಾಂಕ್‌ನ ಕೌಂಟರ್‌ಗಳಲ್ಲಿ ಕಾಣುವಂತೆ, ಉಳ್ಳವ–ಬಡವ ಎಂಬ ಭೇದಭಾವ ಕಾಣುವುದಿಲ್ಲ. ಬ್ಯಾಂಕ್‌ನ ಮುಖ್ಯ.

ಪ್ರತಿಕ್ರಿಯಿಸಿ (+)