ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ದರಕ್ಕೆ ವ್ಯಾಪಕ ಅಸಮಾಧಾನ

Last Updated 11 ಜುಲೈ 2017, 18:57 IST
ಅಕ್ಷರ ಗಾತ್ರ

ಬೆಂಗಳೂರು: ‘ಹನುಮಪ್ಪನ ಮಾಡಾಕ ಹೋಗಿ ಮಂಗ್ಯಾನ ಮಾಡೀವಿ’ ಅನ್ನೋ ಪರಿಸ್ಥಿತಿ ನಮ್ದು. ನಾವೇನು ಗುಲಾಮರಾ? ಮನ್ಸಿಗೆ ಬಂದ್ಹಂಗೆ ತೆರಿಗೆ ಹಾಕಕೆ... ಕರ ನಿರಾಕರಣೆ  ಚಳವಳಿ ಮಾಡ್ಬೇಕು ಅನ್ನಿಸ್ತಾ ಇದೆ’ ಇದು ಜಿಎಸ್‌ಟಿ ಬಗ್ಗೆ ಜನರು ವ್ಯಕ್ತಪಡಿಸಿರುವ  ಒಟ್ಟಾರೆ ಅಭಿಪ್ರಾಯದ ಸಾರವಾಗಿದೆ.

ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬಂದು ವಾರ ಕಳೆಯುತ್ತಿರುವಂತೆಯೇ ಜನರಿಗೆ ತಾವು ಕಟ್ಟುತ್ತಿರುವ ತೆರಿಗೆ ಹೊರೆ ಬಗ್ಗೆ ಅರಿವು ಮೂಡಲಾರಂಭಿಸಿದೆ. ಅದರ ಜತೆ ಜತೆಗೇ ವ್ಯವಸ್ಥೆ ಬಗ್ಗೆ ಅಸಮಾಧಾನ, ಹತಾಶೆಯೂ ಹೊರಬರಲಾಂಭಿಸಿದೆ.

‘ಜಿಎಸ್‌ಟಿ ಬಗ್ಗೆ ಎಲ್ಲರೂ ಗೊಂದಲದಲ್ಲಿದ್ದಾರೆ. ಮುಂದೆ ಏನಾಗಲಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಅದರಲ್ಲೂ ಬಡವರ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ’ ಎಂದು ಹೆಸರು ಹೇಳಲು ಇಚ್ಛಿಸದ ವರ್ತಕರೊಬ್ಬರು ಹೇಳಿದ್ದಾರೆ.

‘ಕುಕ್ಕರ್‌, ಮಿಕ್ಸಿ, ಫ್ಯಾನ್‌, ಇಸ್ತ್ರಿ ಪೆಟ್ಟಿಗೆಯಂತಹ ವಸ್ತುಗಳನ್ನು ಎಲ್ಲಾ ವರ್ಗದವರೂ ಬಳಸುತ್ತಾರೆ. ಹೀಗಿರು ವಾಗ ಬೆಲೆಯಲ್ಲಿ ವ್ಯತ್ಯಾಸವಿಲ್ಲದೇ  ಶೇ 12 ಮತ್ತು ಶೇ 28ರ ಗರಿಷ್ಠ ತೆರಿಗೆ ವ್ಯಾಪ್ತಿಗೆ ತಂದಿದ್ದು ಸರಿಯಲ್ಲ’ ಎಂದು ಚಿಕ್ಕಪೇಟೆಯ  ಅಂಗಡಿಯೊಂದರ ಮಾಲೀಕ ರಮೇಶ್‌ ಹೇಳಿದ್ದಾರೆ.
₹500ಕ್ಕಿಂತ ಕಡಿಮೆ ಬೆಲೆಯ ಪಾದರಕ್ಷೆಗಳಿಗೆ ಶೇ 5 ಮತ್ತು ₹500ಕ್ಕಿಂತ ಹೆಚ್ಚಿನ ಬೆಲೆಯ ಪಾದರಕ್ಷೆಗೆ ಶೇ 18ರಷ್ಟು ತೆರಿಗೆ ನಿಗದಿ ಮಾಡಲಾಗಿದೆ. ಇದೇ ರೀತಿ ಅಗತ್ಯ ವಸ್ತುಗಳಿಗೂ  ತೆರಿಗೆ ದರ ನಿಗದಿ ಮಾಡಬೇಕಿತ್ತು. ಕುಕ್ಕರ್‌ ಬಾಳಿಕೆ ಬರಬೇಕು ಎಂದರೆ ಎರಡು ಅಥವಾ ಮೂರು ತಿಂಗಳಿಗೊಮ್ಮೆ ಗ್ಯಾಸ್ಕೇಟ್‌ ಬದಲಿಸಬೇಕು. ಒಂದರ ಬೆಲೆ ₹70. ಅದಕ್ಕೆ ಈಗ ಶೇ 28 ರಷ್ಟು ತೆರಿಗೆ ಸೇರಿಸಿ ಖರೀದಿಸಬೇಕಾಗಿದೆ. ಹಾಗೆಯೇ ₹500 ಬೆಲೆಯ ಇಸ್ತ್ರಿ ಪೆಟ್ಟಿಗೆಗೆ  ₹150 ರಷ್ಟು ತೆರಿಗೆ ಕೊಡಬೇಕು.  ಇವೆಲ್ಲವೂ ಜನರ ಪಾಲಿಗೆ ಹೊರೆಯಾಗಿ ಪರಿಣಮಿಸಲಿವೆ. ವ್ಯಾಪಾರಕ್ಕೂ ಹೊಡೆತ ಬೀಳಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲ:  ಜನಸಾಮಾನ್ಯರ  ಕಾಳಜಿ ಇಲ್ಲದೆಯೇ  ತೆರಿಗೆ ದರ ನಿಗದಿ ಮಾಡಲಾಗಿದೆ. ಎನ್ನುವ ಮಾತೇ ಹೆಚ್ಚಾಗಿ ಕೇಳಿಬರುತ್ತಿದೆ.

‘ತೆರಿಗೆ ದರ ನಿಗದಿ ಮಾಡುವಾಗ ಜನಸಾಮಾನ್ಯರನ್ನು ಗಮನದಲ್ಲಿ ಇಟ್ಟುಕೊಂಡಿಲ್ಲ. ಇಷ್ಟು ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸಬೇಕು ಎನ್ನುವ ಏಕೈಕ ಗುರಿಯೊಂದೇ ಇದ್ದಂತಿದೆ. ಅತಿ ಅಗತ್ಯ ಎನ್ನುವ ವಸ್ತುಗಳಿಗೆ ಗರಿಷ್ಠ ತೆರಿಗೆ ದರ ನಿಗದಿ ಮಾಡಿರುವುದೇ ಇದನ್ನು ಸೂಚಿಸುತ್ತದೆ’ ಎಂದು ಕೃಷ್ಣರಾಜಪುರದ ನಿವಾಸಿ ರಾಜಶೇಖರ್‌ ಗೌಡ  ಅಸಮಾಧಾನ ಹೊರಹಾಕಿದ್ದಾರೆ.

‘ಏ.ಸಿ. ರೆಸ್ಟೋರೆಂಟ್‌ಗಳಲ್ಲಿ ಈ ಮುಂಚೆ ಇದ್ದ ತೆರಿಗೆ ದರವನ್ನು ಶೇ 20.5 ರಿಂದ ಶೇ 18ಕ್ಕೆ ಇಳಿಕೆ ಮಾಡಲಾಗಿದೆ. ಇಂತಹ ಏ.ಸಿ. ರೆಸ್ಟೋರೆಂಟ್‌ಗಳಿಗೆ ಹೋಗುವವರು ಯಾರಾದರೂ  ತೆರಿಗೆ ದರ ತಗ್ಗಿಸುವಂತೆ ಮನವರಿಕೆ ಮಾಡಿದ್ದಾರಾ? ಹಾಗಿಲ್ಲದೇ ಇರುವಾಗ ಜನರಿಗೆ ಅತ್ಯವಶ್ಯಕ ಆಗಿರುವ ವಸ್ತುಗಳಿಗೆ ಹೆಚ್ಚು ತೆರಿಗೆ ನಿಗದಿ ಮಾಡಿ.  ‘ಸರಿಯಾಗಿ ಮನವರಿಕೆ ಮಾಡಿಕೊಡಿ, ಪರಿಶೀಲನೆ ನಡೆಸಲಾಗುವುದು’ ಎಂದು
ಹೇಳುವ ಮೂಲಕ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಬೇಡಿ’ ಎಂದೂ ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಅಲ್ಯುಮಿನಿಯಂಗೇಕೆ ಗರಿಷ್ಠ ತೆರಿಗೆ?
ರಾಜ್ಯದಲ್ಲಿ ಅಲ್ಯುಮಿನಿಯಂಗೆ ಯಾವುದೇ ತೆರಿಗೆ ಇರಲಿಲ್ಲ. ಆದರೆ, ಜಿಎಸ್‌ಟಿಯಲ್ಲಿ ಶೇ 18 ರಷ್ಟು ತೆರಿಗೆ ವಿಧಿಸಲಾಗಿದೆ. ಅಲ್ಯುಮಿನಿಯಂನಿಂದ ತಯಾರಿಸಿದ ಉತ್ಪನ್ನಗಳನ್ನು ಬಡವರ್ಗದವರೇ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಿದ್ದಾರೆ. ಹೀಗಿರುವಾಗ ಗರಿಷ್ಠ ತೆರಿಗೆ ವಿಧಿಸಿದರೆ ಜನರಿಗೆ ಕಷ್ಟವಾಗುವುದಲ್ಲದೆ, ಉದ್ಯಮದ ಪ್ರಗತಿಯೂ ಆಗುವುದಿಲ್ಲ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಮನವರಿಕೆ ಮಾಡಿಕೊಟ್ಟರೆ ಅಗತ್ಯ ವಸ್ತುಗಳ ತೆರಿಗೆ ದರ ಪರಿಷ್ಕರಣೆ ಸಾಧ್ಯವಿದೆ ಎಂದು ತೆರಿಗೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಜನರು ನಿತ್ಯವೂ ಬಳಸುವ ಅತ್ಯಗತ್ಯ ವಸ್ತುಗಳು ಯಾವುದು ಎನ್ನುವುದನ್ನೂ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕೆ.  ಇದೆಂತಹ ವಿಪರ್ಯಾಸ ಎಂದೂ ಗ್ರಾಹಕರು ಅಲವತ್ತುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT