ಸೋಮವಾರ, ಡಿಸೆಂಬರ್ 16, 2019
25 °C

‘ರೇರಾ’ ವ್ಯಾಪ್ತಿಗೆ ಬಿಡಿಎ: ಮುಂದುವರಿದ ಗೊಂದಲ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

‘ರೇರಾ’ ವ್ಯಾಪ್ತಿಗೆ ಬಿಡಿಎ: ಮುಂದುವರಿದ ಗೊಂದಲ

ಬೆಂಗಳೂರು: ರಿಯಲ್‌ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ (ರೆರಾ) ಸೋಮವಾರದಿಂದ ರಾಜ್ಯದಾದ್ಯಂತ ಜಾರಿಯಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೂ (ಬಿಡಿಎ) ಈ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತದೋ ಇಲ್ಲವೋ ಎಂಬ ಗೊಂದಲ  ಹಾಗೆಯೇ ಮುಂದುವರಿದಿದೆ. ಕೇಂದ್ರದ ಕಾಯ್ದೆಯನ್ನು ಆಧರಿಸಿ ರಾಜ್ಯ ಸರ್ಕಾರ ಪ್ರಕಟಿಸಿರುವ ನಿಯಮಗಳಲ್ಲಿ ಬಿಡಿಎ ಬಗ್ಗೆ ಎಲ್ಲೂ ನಿರ್ದಿಷ್ಟ ಉಲ್ಲೇಖ ಇಲ್ಲ.

‘ರೇರಾ ಕಾಯ್ದೆಯ ನಿಯಮಗಳನ್ನು ಸೋಮವಾರವಷ್ಟೇ ಪ್ರಕಟಿಸಲಾಗಿದೆ. ಅದನ್ನು ಇನ್ನೂ ಸರಿಯಾಗಿ ಅಧ್ಯಯನ ಮಾಡಿಲ್ಲ. ಬಿಡಿಎ ಕೂಡಾ ಕಾಯ್ದೆಯ ವ್ಯಾಪ್ತಿಯಲ್ಲಿ ಬರುತ್ತದೋ ಇಲ್ಲವೋ ಎಂಬ ಬಗ್ಗೆ ನಾಳೆ ತಿಳಿಸುತ್ತೇನೆ’ ಎಂದು ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಡಾವಣೆಗಳನ್ನು ಅಭಿವೃದ್ಧಿಪಡಿಸುವ ಹಾಗೂ ವಸತಿ ಸಮುಚ್ಚಯಗಳನ್ನು ನಿರ್ಮಿಸುವ ಕಾರ್ಯವನ್ನು ನಾವು  ಲಾಭ ಗಳಿಸುವ ಉದ್ದೇಶದಿಂದ ಮಾಡುತ್ತಿಲ್ಲ. ಹಾಗಾಗಿ   ರಿಯಲ್‌ ಎಸ್ಟೇಟ್‌ ಸಂಸ್ಥೆಗಳನ್ನು ಹಾಗೂ ನಮ್ಮನ್ನು ಒಂದೇ ತಕ್ಕಡಿಯಲ್ಲಿ ತೂಗಬಾರದು. ನಮಗೆ ಈ ಕಾಯ್ದೆಯಿಂದ ವಿನಾಯಿತಿ ನೀಡಬೇಕು’ ಎಂಬುದು ಬಿಡಿಎ ವಾದ.

ಚಾರಿಟಬಲ್‌ ಸಂಸ್ಥೆ ಮಾನ್ಯತೆ ಸಿಕ್ಕರೆ ರೇರಾ ವ್ಯಾಪ್ತಿಗೆ ಬರದು: ‘ಬಿಡಿಎ ಈ ಹಿಂದೆ ಚಾರಿಟಬಲ್‌ ಸಂಸ್ಥೆ ಎಂಬ ಮಾನ್ಯತೆಯನ್ನು ಹೊಂದಿತ್ತು. ಆದರೆ 2009–10ರ ಬಳಿಕ ಈ ಮಾನ್ಯತೆಯನ್ನು ಹಿಂದಕ್ಕೆ ಪಡೆಯಲಾಗಿದೆ.    ಇದನ್ನು ಪ್ರಶ್ನಿಸಿ ಬಿಡಿಎ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ ಮೊರೆ ಹೋಗಿದೆ. ನ್ಯಾಯಮಂಡಳಿಯಲ್ಲಿ ಈ ಪ್ರಕರಣದ ವಿಚಾರಣೆ ಬಾಕಿ ಇದೆ. ಚಾರಿಟಬಲ್‌ ಸಂಸ್ಥೆ ಎಂಬ ಮಾನ್ಯತೆ ಮರಳಿ ಸಿಕ್ಕರೆ  ಬಿಡಿಎ  ರೇರಾ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಬಿಡಿಎ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜೂನ್‌ ಮೊದಲ ವಾರದಲ್ಲಿ ಈ ಪ್ರಕರಣದ ವಿಚಾರಣೆಗೆ ದಿನ ನಿಗದಿಯಾಗಿತ್ತು.  ವಿಚಾರಣೆಯನ್ನು ಮುಂದೂಡಲಾಗಿದೆ. ಅದರ ಅಂತಿಮ ಆದೇಶ ಹೊರಗೆ ಬರುವವರೆಗೆ ನಾವು ಕಾಯಬೇಕು. ಒಂದು ವೇಳೆ ಬಿಡಿಎ ಚಾರಿಟಬಲ್‌ ಸಂಸ್ಥೆ ಸಿಗದೆ ಹೋದರೆ ಬಿಡಿಎಗೂ ರೇರಾ ಅನ್ವಯವಾಗಲಿದೆ’ ಎಂದು ಅವರು ತಿಳಿಸಿದರು.

ಚಾರಿಟಬಲ್‌ ಸಂಸ್ಥೆ ಹೇಗಾಗುತ್ತದೆ? ‘ಒಂದು ಕಾಲದಲ್ಲಿ ಬಿಡಿಎ ನಿವೇಶನಗಳನ್ನು ಅಭಿವೃದ್ಧಿಪಡಿಸಿ  ಜನರಿಗೆ ಕೈಗೆಟಕುವ ದರದಲ್ಲಿ ಹಂಚಿಕೆ ಮಾಡುತ್ತಿದ್ದುದು ನಿಜ. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆ ಮಾಡಿದ ನಿವೇಶನಗಳಿಗೆ ಮಾರುಕಟ್ಟೆ ದರಕ್ಕಿಂತಲೂ ಹೆಚ್ಚು ಶುಲ್ಕವನ್ನು ಬಿಡಿಎ ವಸೂಲಿ ಮಾಡಿದೆ. ಹಾಗಾಗಿ ಇದನ್ನು ಚಾರಿಟಬಲ್‌ ಸಂಸ್ಥೆ ಎಂದು ಹೇಗೆ ಪರಿಗಣಿಸಲು ಸಾಧ್ಯ’ ಎಂದು ಪ್ರಶ್ನಿಸುತ್ತಾರೆ ಅರ್ಕಾವತಿ ಬಡಾವಣೆ ನಿವೇಶನದಾರರ ಸಂಘದ ಅಧ್ಯಕ್ಷ ಜಿ.ಶಿವಪ್ರಕಾಶ್‌.

‘ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಿದ 13 ವರ್ಷಗಳ ಬಳಿಕವೂ ಗೊಂದಲ ಬಗೆಹರಿಸಲು ಬಿಡಿಎಗೆ ಸಾಧ್ಯವಾಗಿಲ್ಲ. ಶುಲ್ಕ ಪಾವತಿಸಿ 10 ವರ್ಷ ಕಳೆದ ಬಳಿಕವೂ ಕೆಲವರಿಗೆ ನಿವೇಶನ ನೀಡಿಲ್ಲ. ಈ ಬಡಾವಣೆಗೆ ಮೂಲಸೌಕರ್ಯವನ್ನೂ ಕಲ್ಪಿಸಿಲ್ಲ. ಬಿಡಿಎ ಅಧಿಕಾರಿಗಳು ಮಾಡಿದ್ದೇ ಕಾನೂನು, ಅವರು ಹೇಳಿದ್ದೇ ನ್ಯಾಯ ಎಂಬ ಪರಿಸ್ಥಿತಿ ಇದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಬಿಡಿಎಯನ್ನೂ ರೇರಾ ವ್ಯಾಪ್ತಿಗೆ ತರಬೇಕು’ ಎಂದು ಅವರು ಒತ್ತಾಯಿಸಿದರು.

‘ರೇರಾ ಜಾರಿಗೆ ತಂದಿರುವುದು ರಿಯಲ್‌ ಎಸ್ಟೇಟ್‌ ಹೆಸರಿನಲ್ಲಿ ನಡೆಯುವ ಅವ್ಯವಹಾರಗಳನ್ನು ತಡೆಯುವ ಸಲುವಾಗಿ.  ನಾವು ನಿರ್ಮಿಸುವ ವಸತಿ ಸಮುಚ್ಚಯಗಳಲ್ಲಿನ  ಮನೆಗಳನ್ನು ಹಂಚಿಕೆ ಮಾಡುವಾಗ ಹಾಗೂ ಬಡಾವಣೆಗಳಲ್ಲಿ ನಿವೇಶನ ಹಂಚಿಕೆ ಮಾಡುವಾಗ ಬಿಡಿಎ ಕಾಯ್ದೆಯ ಪ್ರಕಾರವೇ ಕಾರ್ಯನಿರ್ವಹಿಸುತ್ತಿದ್ದೇವೆ.  ಬಿಡಿಎ ರೇರಾ ವ್ಯಾಪ್ತಿಗೆ ಬಂದರೂ ನಮಗೆ ಯಾವುದೇ ಸಮಸ್ಯೆ ಇಲ್ಲ’ ಎಂದು  ಬಿಡಿಎ ಎಂಜಿನಿಯರಿಂಗ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಫ್ಲ್ಯಾಟ್‌  ಹಸ್ತಾಂತರ  ವಿಳಂಬ ತಪ್ಪಿಸಲು ರೇರಾ ಬೇಕು’

ಗುಂಜೂರಿನಲ್ಲಿ ಬಿಡಿಎ ಒಂದು ಕೊಠಡಿಯ 300, ಎರಡು ಕೊಠಡಿಯ 160 ಹಾಗೂ ಮೂರು ಕೊಠಡಿಯ 84 ಫ್ಲ್ಯಾಟ್‌ಗಳನ್ನು ನಿರ್ಮಿಸಿದೆ.  ಇವುಗಳನ್ನು ಹಂಚಿಕೆ ಮಾಡಿ ಎರಡು ವರ್ಷಗಳು ಕಳೆದಿದ್ದರೂ ಇನ್ನೂ ಮಾಲೀಕರಿಗೆ ಹಸ್ತಾಂತರವಾಗಿಲ್ಲ.

‘ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕಿದ್ದರೆ ಬಿಡಿಎಯನ್ನು ರೇರಾ ವ್ಯಾಪ್ತಿಗೆ ತರಬೇಕು’ ಎಂದು ಇಲ್ಲಿ ಫ್ಲ್ಯಾಟ್‌ ಖರೀದಿಸಿದವರೊಬ್ಬರು ಒತ್ತಾಯಿಸಿದರು.

‘ಗುಂಜೂರಿನ ಅಪಾರ್ಟ್‌ಮೆಂಟ್‌ ಸಮುಚ್ಚಯದ ಕಾಮಗಾರಿಯ ಗುತ್ತಿಗೆ ಪಡೆದ ಕಂಪೆನಿ ಸಕಾಲದಲ್ಲಿ ಕೆಲಸ ಮುಗಿಸಿಲ್ಲ. ಹಾಗಾಗಿ ಅವರಿಗೆ ನೀಡಿದ್ದ ಟೆಂಡರ್‌ ರದ್ದುಪಡಿಸಿ,  ಬೇರೆಯವರಿಗೆ  ನೀಡಿದ್ದೇವೆ. ಮೂರು ತಿಂಗಳ ಒಳಗೆ ಫ್ಲ್ಯಾಟ್‌ಗಳನ್ನು ಮಾಲೀಕರಿಗೆ ಹಸ್ತಾಂತರಿಸುತ್ತೇವೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

‘ಫ್ಲ್ಯಾಟ್‌ ಹಂಚಿಕೆ ಮಾಡುವಾಗ ಅದರ ಕೆಲಸ ಪೂರ್ಣವಾಗಿರುವುದಿಲ್ಲ. ಹಂಚಿಕೆಯ ಬಳಿಕವೂ ಗ್ರಾಹಕರು ಹಣ ಪಾವತಿಗೆ ನಾಲ್ಕು ತಿಂಗಳು ಕಾಲಾವಕಾಶ ಇರುತ್ತದೆ. ಸಾಮಾನ್ಯವಾಗಿ, ಅಷ್ಟರೊಳಗೆ ಕಾಮಗಾರಿ ಪೂರ್ಣಗೊಳಿಸಿ ಫ್ಲ್ಯಾಟ್ ಹಸ್ತಾಂತರ ಮಾಡುತ್ತೇವೆ’ ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)