ಶುಕ್ರವಾರ, ಡಿಸೆಂಬರ್ 6, 2019
19 °C

ಪಾಳು ಆಲೆಮನೆಯಲ್ಲಿ ಆರು ಕುಟುಂಬಗಳು..!

ಎಂ.ಎನ್.ಯೋಗೇಶ್‌ Updated:

ಅಕ್ಷರ ಗಾತ್ರ : | |

ಪಾಳು ಆಲೆಮನೆಯಲ್ಲಿ ಆರು ಕುಟುಂಬಗಳು..!

ಮಂಡ್ಯ: ಪಾಳು ಬಿದ್ದಿರುವ ಆಲೆಮನೆಯೊಂದರಲ್ಲಿ ಆರು ಅಲೆಮಾರಿ ಕುಟುಂಬಗಳು 15 ವರ್ಷದಿಂದ ವಾಸ ಮಾಡುತ್ತಿವೆ. ಸರ್ಕಾರ ನೂರಾರು ವಸತಿ ಯೋಜನೆ ಜಾರಿಗೊಳಿಸಿದ್ದರೂ ಈ ಕುಟುಂಬಗಳಿಗೆ ಮಾತ್ರ ಶೂನ್ಯ ಸೌಲಭ್ಯ.

ನಗರದ ಹೊರವಲಯದಲ್ಲಿರುವ ಬೇವಿನಹಳ್ಳಿ ಗ್ರಾಮದ ಪಾಳು ಆಲೆಮನೆಯಲ್ಲಿ ಈ ಕುಟುಂಬ ಸದಸ್ಯರು ವಾಸ ಮಾಡುತ್ತಿದ್ದಾರೆ. ವಿದ್ಯುತ್‌ ಇಲ್ಲ, ಕುಡಿಯುವ ನೀರಿಲ್ಲ, ಶೌಚಾಲಯ ಇಲ್ಲ. ಒಂದು ದೊಡ್ಡ ಹಜಾರದಂತಿರುವ ಆಲೆಮನೆಯ ಮೂಲೆಗಳಲ್ಲಿ ಈ ಕುಟುಂಬಗಳು ಜೀವನ ದೂಡುತ್ತಿವೆ.

ಇವರು ಮೈಸೂರು ಜಿಲ್ಲೆಯ ಹುಣಸೂರು ಕಡೆಯಿಂದ ಬಂದವರು. ಮುಂದೆ ಹೋಗಲು ಸಾಧ್ಯವಾಗದೇ ಬೇವಿನಹಳ್ಳಿಯಲ್ಲಿ ನೆಲೆಸಿದ್ದಾರೆ. ಮಹಿಳೆಯರು ತಲೆಕೂದಲು, ಸೂಜಿ, ಬಟ್ಟೆ ಪಿನ್‌, ಬಾಚಣಿಗೆ ಮುಂತಾದ ವಸ್ತುಗಳ ವ್ಯಾಪಾರ ಮಾಡಿದರೆ, ಪುರುಷರು ಗಾರೆ ಕೆಲಸ, ಹೊಲಗೆಲಸ ಮಾಡುತ್ತಾರೆ.

ಹಳ್ಳಿ, ಪಟ್ಟಣ, ನಗರದ ಜನರಿಗೆ ಸರ್ಕಸ್‌ ತೋರಿಸುತ್ತಾ ಊರೂರು ಅಲೆಯುತ್ತಿದ್ದ ಇವರೀಗ ಅಲೆಮಾರಿಗಳಾಗಿ ಉಳಿದಿಲ್ಲ. ಇವರೆಲ್ಲ ಸರ್ಕಸ್‌ ಕಲಾವಿದರಾಗಿ ಬದುಕು ಕಟ್ಟಿಕೊಂಡಿದ್ದವರು. ತಂತಿಯ ಮೇಲೆ ನಡೆದು ಜೀವನ ನಡೆಸುತ್ತಿದ್ದವರು.

ಪೆಟ್ಟಿಗೆಯಲ್ಲಿ ಸಿನಿಮಾ ತೋರಿಸಿ ಬದುಕು ಕಟ್ಟಿಕೊಂಡಿದ್ದವರು. ಕೋತಿ, ಹಾವು ಆಡಿಸಿ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದವರು. ಆದರೆ ಈಗ ಇವರು ತೋರಿಸುವ ಸರ್ಕಸ್‌ ನೋಡುವವರು ಯಾರೂ ಇಲ್ಲ. ಕೋತಿ, ಹಾವು ಆಡಿಸಿದರೆ ಪ್ರಾಣಿ ದಯಾ ಸಂಘದವರು ಪ್ರಕರಣ ದಾಖಲಿಸುತ್ತಾರೆ.

ಕಳ್ಳರು ಎಂಬ ಅನುಮಾನ: ‘ನಮ್ಮ ಕಲೆಯನ್ನು ಹಳ್ಳಿಗಳಲ್ಲಿ ಯಾರೂ ನೋಡುವುದಿಲ್ಲ. ಟಿ.ವಿ. ಬಿಟ್ಟು ಜನ ಹೊರಬರುವುದಿಲ್ಲ. ನಮ್ಮ ಬದುಕು ನಿಂತ ನೀರಾಗಿದೆ. ನಾವು ಹಳ್ಳಿಗಳಿಗೆ ಹೋದರೆ ಜನರು ನಮ್ಮನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಾರೆ. ಕೆಲವೆಡೆ ನಮ್ಮನ್ನು ಮಕ್ಕಳ ಕಳ್ಳರು ಎಂದು ಹೊಡೆದಿದ್ದಾರೆ. ಹೀಗಾಗಿ ನಾವು ಎಲ್ಲೂ ಹೋಗದೆ ಈ ಆಲೆಮನೆಯಲ್ಲಿ ಜೀವನ ನಡೆಸುತ್ತಿದ್ದೇವೆ’ ಎಂದು ನಿವಾಸಿ ಧರ್ಮಣ್ಣ ಹೇಳಿದರು.

ಈ ಆಲೆಮನೆ ಕೊತ್ತತ್ತಿ ಗ್ರಾಮದ ಜಯರಾಂ ಎಂಬ ಮಾಲೀಕರಿಗೆ ಸೇರಿದೆ. ಯಾರೂ ಇಲ್ಲದಿದ್ದರೆ ಕಟ್ಟಡ ಹಾಳಾಗುತ್ತದೆ ಎಂಬ ಕಾರಣದಿಂದ ಜಯರಾಂ ಈ ಕುಟುಂಬಗಳಿಗೆ ಉಚಿತವಾಗಿ ಬಿಟ್ಟುಕೊಟ್ಟಿದ್ದಾರೆ. ಕಟ್ಟಡದಲ್ಲಿ ಎರಡು ಕೊಠಡಿಗಳಿದ್ದು ಅಲ್ಲಿ ಆಲೆಮನೆ ಪರಿಕರಗಳನ್ನು ತುಂಬಿಟ್ಟಿದ್ದಾರೆ. ಈ ಕುಟುಂಬಗಳು ವಸ್ತುಗಳನ್ನು ಕಾಯುವುದರಿಂದ ಮಾಲೀಕರಿಗೆ ಅನುಕೂಲವೇ ಆಗಿದೆ.

ಸೂರಿಗಾಗಿ ಮನವಿ: ಈ ಆರು ಕುಟುಂಬಗಳಲ್ಲಿ ಒಟ್ಟು 35 ಮಂದಿ ಸದಸ್ಯರಿದ್ದಾರೆ. ಯಾರ ಬಳಿಯೂ ವಿಳಾಸ, ಆಧಾರ್‌ ಕಾರ್ಡ್‌, ಚುನಾವಣೆ ಗುರುತಿನ ಚೀಟಿ ಇಲ್ಲ. ಕಳೆದ 15 ವರ್ಷಗಳಿಂದಲೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನೆ ನೀಡುವಂತೆ ನಿವಾಸಿಗಳು ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ.

ಹಲವು ಬಾರಿ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಸತಿ ಯೋಜನೆ ಅಡಿ ಶೀಘ್ರ ಮನೆ ಕಟ್ಟಿಕೊಡುವುದಾಗಿ ಭರವಸೆಯನ್ನೂ ಕೊಟ್ಟಿದ್ದಾರೆ. ಆದರೆ ಸೌಲಭ್ಯ ಮರೀಚಿಕೆಯಾಗಿಯೇ ಉಳಿದಿದೆ.‘ಅಧಿಕಾರಿಗಳು ಬರುತ್ತಾರೆ, ನಮ್ಮ ಸ್ಥಿತಿ ನೋಡಿ ಹೋಗುತ್ತಾರೆ. ಇನ್ನೂ ಮನೆ ಕಟ್ಟಿಸಿಕೊಟ್ಟಿಲ್ಲ. ನಮಗೂ ಭರವಸೆಗಳನ್ನು ಕೇಳಿ ಸಾಕಾಗಿ ಹೋಗಿದೆ’ ಎಂದು ನಿವಾಸಿ ಕುಮಾರ ಹೇಳಿದರು.

‘ಗಾಮನಹಳ್ಳಿ, ಮಹದೇವಪುರಗಳಲ್ಲೂ ಇದೇ ರೀತಿ ಹಲವು ಕುಟುಂಬಗಳು ಆಲೆಮನೆಯಲ್ಲಿ ವಾಸ ಮಾಡುತ್ತಿದ್ದವು. ಅವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಮನೆ ಕಟ್ಟಿ ವಿವಿಧ ಸೌಲಭ್ಯ ಒದಗಿಸಿದ್ದಾರೆ. ಆದರೆ ಇಲ್ಲಿ ಯಾವುದೇ ಸೌಲಭ್ಯ ನೀಡಿಲ್ಲ’ ಎಂದು ಬೇವಿನಹಳ್ಳಿ ಗ್ರಾಮಸ್ಥ ವೆಂಕಟೇಶ್‌ ತಿಳಿಸಿದರು.

‘ಬೇವಿನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಿವೇಶನ ಇಲ್ಲ. ಹೀಗಾಗಿ ಅವರಿಗೆ ಸೂರು ಕಲ್ಪಿಸಲು ಸಮಸ್ಯೆಯಾಗಿದೆ. ಈ ಕುರಿತು ಗ್ರಾಮಸಭೆಯಲ್ಲಿ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಚ್‌.ಎಸ್‌.ರೇಖಾ ತಿಳಿಸಿದರು.

‘ಅವರಿಗೆ ವಿಳಾಸ ಇಲ್ಲ, ಆಧಾರ್‌, ಚುನಾವಣೆ ಗುರುತಿನ ಚೀಟಿ ಇಲ್ಲ. ಹೀಗಾಗಿ ಅವರಿಗೆ ಸರ್ಕಾರದ ಸೌಲಭ್ಯ ಸಿಕ್ಕಿಲ್ಲ. ಆದರೂ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಬಿ.ಮಾಲತಿ ಹೇಳಿದರು.

ಉರಗ ತಜ್ಞ, ಪಿಟೀಲು ಕಲಾವಿದ!

ಆಲೆಮನೆ ನಿವಾಸಿಯಲ್ಲೊಬ್ಬರಾದ ರಾಜಣ್ಣ ಹಾವು ಹಿಡಿಯುವುದರಲ್ಲಿ ಪರಿಣತಿ ಪಡೆದಿದ್ದಾರೆ. ತೆಂಗಿನಕಾಯಿ ಚಿಪ್ಪಿನಿಂದ ತಯಾರಿಸಿದ ಪಿಟೀಲು ನುಡಿಸಾಣಿಕೆ ಅವರಿಗೆ ಗೊತ್ತು. ಹಾರ್ಮೋನಿಯಂ ಕೂಡ ನುಡಿಸಬಲ್ಲರು.

ಡಾ.ರಾಜ್‌ಕುಮಾರ್ ಶೈಲಿಯಲ್ಲಿ ಹಾಡು ಹೇಳುವ ಇವರು ಹಳ್ಳಿಗಳಲ್ಲಿ ರಾಜ್‌ಕುಮಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ‘ಮೂರು ವರ್ಷದ ಹುಡುಗನಿದ್ದಾಗಿನಿಂದಲೂ ನಾನು ಹಾವು ಹಿಡಿಯುತ್ತಿದ್ದೇನೆ. ಈವರೆಗೆ ಸಾವಿರಾರು ಹಾವು ಹಿಡಿದಿದ್ದೇನೆ. ಅವು ಸ್ನೇಹಿತ ಇದ್ದಂತೆ. ಎಲ್ಲೇ ಹಾವು ಇದ್ದರೂ ಜನರು ನನ್ನನ್ನು ಕರೆದುಕೊಂಡು ಹೋಗುತ್ತಾರೆ’ ಎಂದು ರಾಜಣ್ಣ ಹೇಳಿದರು.

ಪ್ರತಿಕ್ರಿಯಿಸಿ (+)