ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆಯುತ್ತಿದ್ದರಷ್ಟೇ ಬದುಕು...

Last Updated 12 ಜುಲೈ 2017, 19:30 IST
ಅಕ್ಷರ ಗಾತ್ರ

ಇದೀಗ ದೇಶದಾದ್ಯಂತ ಜಿಎಸ್‌ಟಿ ಪರಿಣಾಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಯಾವ ಸರಕಿನ ಬೆಲೆ ಕಡಿಮೆಯಾಗಿದೆ, ಯಾವುದು ದುಬಾರಿಯಾಗಿದೆ ಎಂಬ ಚರ್ಚೆಗಳೂ ಸಾಗಿವೆ. ವಸ್ತುಗಳ ಬೆಲೆ ಹೆಚ್ಚಾಗಿದ್ದಕ್ಕೆ ಕೆಲವರು ‘ಇದು ಕುರುಡು ಸರ್ಕಾರ’ ಎಂದೂ ಟೀಕಿಸಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಅಂಧರು ಮತ್ತು ಅಂಗವಿಕಲರು ಬಳಸುವ ವಿಶೇಷ ಸಾಧನ ಮತ್ತು ಉಪಕರಣಗಳ ಮೇಲೆ ಶೇ.12 ರಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಇದನ್ನು ವಿರೋಧಿಸಿ ಚಂದನಾ ಚಂದ್ರಶೇಖರ್ ಎಂಬ ಅಂಧ ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ವೊಂದನ್ನು ಪ್ರಕಟಿಸಿದ್ದಾರೆ.

ವಿಶೇಷವಾಗಿ ಅಂಧರು ಬಳಸುವ ಬ್ರೈಲ್ ಉಪಕರಣಗಳಾದ ಬ್ರೈಲ್ ಲ್ಯಾಪ್‌ಟಾಪ್‌, ಬ್ರೈಲ್ ಪುಸ್ತಕಗಳು, ವಾಚ್‌ಗಳು ಹಾಗೂ  ಗಾಲಿಕುರ್ಚಿಗಳ ಮೇಲೂ ತೆರಿಗೆ ಹಾಕಲಾಗಿದೆ. ಇದರಿಂದ ಅಂಗವಿಕಲರಿಗೆ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದ್ದು ಜಿಎಸ್‌ಟಿ ರದ್ದುಪಡಿಸಬೇಕು ಎಂದು ಚಂದನಾ, ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಹಿಂದೆ, ವಿದೇಶಗಳಿಂದ ಆಮದು ಮಾಡಿಕೊಳ್ಳುವ ಸಾಧನ ಸಲಕರಣೆಗಳು, ಶೈಕ್ಷಣಿಕ ಮತ್ತು ವೈದ್ಯಕೀಯ ಉಪಕರಣಗಳ ಮೇಲೆ ಶೇ. 40ರಷ್ಟು ತೆರಿಗೆ ಹಾಕಲಾಗುತ್ತಿತ್ತು. ಈ  ವಿಷಯವನ್ನು ಚಂದನಾ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಬಳಿ ಹೇಳಿದ್ದರು. ಲೋಕಸಭೆಯಲ್ಲಿ ರಾಹುಲ್ ಗಾಂಧಿ ಇದರ ಬಗ್ಗೆ ಚರ್ಚೆ ಮಾಡಿದ್ದರು! ನಂತರ ಸರ್ಕಾರ ಬಜೆಟ್‌ನಲ್ಲಿ ಆ ತೆರಿಗೆಯನ್ನು ರದ್ದುಪಡಿಸಿತ್ತು. ಬೆಂಗಳೂರಿನವರಾದ ಚಂದನಾ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಅಂಗವಿಕಲರು ಬಳಸುವ ಸಾಧನಗಳ ಮೇಲಿನ ಜಿಎಸ್‌ಟಿ ತೆಗೆದು ಹಾಕುವಂತೆ ಮೋದಿ ಅವರಿಗೆ ಟ್ವೀಟ್‌ ಮಾಡುವ ಮೂಲಕ ಚಂದನಾ ದೇಶದ ಗಮನ ಸೆಳೆದಿದ್ದಾರೆ.

⇒twitter.com/ChandanaC8

**

ಗೌತಮ್ ಸುರಾನ
ದೇಶದಲ್ಲಿ ಶೇ 80ರಷ್ಟು ಜನರಿಗೆ ನೀರಿನ ಬಗ್ಗೆ ಅರಿವಿನ ಕೊರತೆ ಇದೆ. ಶೇ . 20ರಷ್ಟು ನೀರನ್ನು ಬಳಸುವುದಕ್ಕೆ ಶೇ. 40ರಷ್ಟು ನೀರನ್ನು ವ್ಯಯಮಾಡುತ್ತಾರೆ ಎಂದು ಕೇಂದ್ರ ಸರ್ಕಾರ ಇತ್ತೀಚಿನ ಪರಿಸರ ವರದಿಯಲ್ಲಿ ಹೇಳಿದೆ. ನೀರನ್ನು ಅನವಶ್ಯಕವಾಗಿ ವ್ಯಯ ಮಾಡುವುದನ್ನು ತಡೆಗಟ್ಟಲು ಹಲವು ಉಪಕರಣಗಳನ್ನು ಕಂಡು ಹಿಡಿದಿರುವ ಯುವಕನೊಬ್ಬನ ಸಾಧನೆಯ ಕಥೆ ಇದು.

ಅಸ್ಸಾಂ ರಾಜ್ಯದ ಗೌತಮ್ ಸುರಾನ ಎಂಬ ಯುವಕನೇ ಆ ಸಾಧಕ. ಗೌತಮ್ ಸುರಾನ ಚಿಕ್ಕ ವಯಸ್ಸಿನಲ್ಲಿ ಹಳ್ಳಕೊಳ್ಳಗಳು, ನದಿ ತೊರೆಗಳನ್ನು ನೋಡುತ್ತ ಬೆಳೆದವರು. ಎಂದೂ ನೀರಿನ ಸಮಸ್ಯೆಯನ್ನು ಎದುರಿಸಿದವರಲ್ಲ! ಉನ್ನತ ವ್ಯಾಸಂಗ ಹಾಗೂ ಉದ್ಯೋಗಕ್ಕಾಗಿ ಬೆಂಗಳೂರು, ದೆಹಲಿ, ಚೆನ್ನೈ ನಗರಗಳಲ್ಲಿ ವಾಸ ಮಾಡುವಾಗ ನೀರಿನ ಸಮಸ್ಯೆ ಎದುರಿಸಿದವರು. ಎಂಜಿನಿಯರಿಂಗ್ ಪದವಿ ಪಡೆದಿದ್ದ ಗೌತಮ್ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದರು. ಅದ್ಯಾಕೋ ಅವರಿಗೆ ಖಾಸಗಿ ಕಂಪೆನಿಗಳಲ್ಲಿ ದುಡಿಯುವುದು ಇಷ್ಟವಾಗಲಿಲ್ಲ.

ಮತ್ತೆ ಅಸ್ಸಾಂಗೆ ಮರಳಿದ ಗೌತಮ್ ದಕ್ಷಿಣ ರಾಜ್ಯಗಳ ಮಹಾನಗರಗಳಲ್ಲಿನ ನೀರಿನ ಸಮಸ್ಯೆ ಬಗ್ಗೆ ಯೋಚಿಸತೊಡಗಿದರು. ಈ ಹಂತದಲ್ಲಿ ಹೊಳೆದ ಆಲೋಚನೆಯೇ ನೀರಿನ ಮಿತವ್ಯಯ ಬಳಕೆ. ಅರ್ಥಾತ್‌ ನೀರನ್ನು ಪೋಲಾಗದಂತೆ ತಡೆಯುವ ಉಪಕರಣಗಳನ್ನು ತಯಾರಿಸುವುದು!

ಈ ಆಲೋಚನೆ ಹೊಳೆದಾಗ ಗೌತಮ್ ಕೈಯಲ್ಲಿ ಹಣವಿರಲಿಲ್ಲ. ಗೆಳೆಯರು ಮತ್ತು ಬ್ಯಾಂಕ್‌ಗಳ ನೆರವಿನಿಂದ ಸಾಲ ಪಡೆದು 2010ರಲ್ಲಿ ನೀರು ಪೋಲಾಗದಂತೆ ತಡೆಯುವ ಉಪಕರಣಗಳನ್ನು ತಯಾರಿಸುವ ‘ಎಕೋ 365’ ಎಂಬ ಕಂಪೆನಿಯನ್ನು ಆರಂಭಿಸಿದರು. ಶೇವರ್‌, ವಾಶ್‌ ಬೇಸಿನ್‌, ಮತ್ತು ನಲ್ಲಿಗಳಿಗೆ ನೀರು ಸೋರಿಕೆಯಾಗದಂತಹ ಉಪಕರಣಗಳನ್ನು ತಯಾರಿಸಲಾಗುತ್ತದೆ. ಈ ಉಪಕರಣಗಳು ಶೇ. 90 ರಷ್ಟು ನೀರು ಸೋರಿಕೆಯನ್ನು ತಡೆಯುತ್ತವೆ.

ಅಂದು ಹೊಳೆದ ಒಂದು ಸಣ್ಣ ಐಡಿಯಾ ಇಂದು ಗೌತಮ್ ಸುರಾನ ಅವರ ಬದುಕನ್ನು ಬದಲಿಸಿದೆ. ಆ ಮೂಲಕ ನೀರಿನ ಮಿತವ್ಯಯ ಬಳಕೆಗೂ ಬುನಾದಿಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ! www.eco365.co.in

*

ಮನ್‌ಅಸ್ಪಲ್‌ ಗ್ರಾಮದ ಯುವಕರು
2015ರಲ್ಲಿ ಪಂಜಾಬ್ ರಾಜ್ಯದ ಮನ್ಸಾ ಜಿಲ್ಲೆಯಲ್ಲಿರುವ ಮನ್ಅಸ್ಪಲ್ ಗ್ರಾಮದ ಚಿತ್ರಣ ಹೀಗಿತ್ತು. ಸುಮಾರು 100 ಮನೆಗಳಿರುವ ಚಿಕ್ಕ ಗ್ರಾಮ ಅದು. ಗ್ರಾಮಕ್ಕೆ ಹೊಂದಿಕೊಂಡಿರುವಂತೆ ಪಕ್ಕದಲ್ಲೇ ಹೂತು ಹೋಗಿರುವ ಒಂದು ಕೆರೆ. ಇಲ್ಲಿನ ನಿವಾಸಿಗಳಿಗೆ ಜಮೀನು ಇದ್ದರೂ ಅದನ್ನು ಬೀಳು ಬಿಟ್ಟು ಪಟ್ಟಣಗಳಿಗೆ ಹೋಗಿ ಕೂಲಿ ಮಾಡುತ್ತ ಕನಿಷ್ಠ ಮಟ್ಟದ ಜೀವನ ನಡೆಸುತ್ತಿದ್ದರು.

ಇಂದು, ಯಾರಾದರೂ ಆ ಗ್ರಾಮಕ್ಕೆ ಹೋಗಿ ನೋಡಿದರೆ ಇದು ಮನ್ಅಸ್ಪಲ್ ಗ್ರಾಮವೇ ಎಂದು ಉದ್ಗಾರ ತೆಗೆಯುತ್ತಾರೆ. ಕೇವಲ ಎರಡು ವರ್ಷಗಳಲ್ಲಿ ಆ ಹಳ್ಳಿಯ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಅಂದು ಮರುಭೂಮಿಯಂತೆ ಇದ್ದ ಆ ಹಳ್ಳಿ ಇಂದು ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಇದೆಲ್ಲ ಸಾಧ್ಯವಾಗಿದ್ದು ಆ ಗ್ರಾಮದ ಯುವಕರ ಪರಿಶ್ರಮದಿಂದ!

2015ರಲ್ಲಿ ಮನ್ಅಸ್ಪಲ್ ಗ್ರಾಮದಲ್ಲಿ ನರೇಗಾ ಯೋಜನೆ ಅನುಷ್ಠಾನಗೊಂಡಿತು. ಕೂಲಿ ಕೆಲಸಕ್ಕೆ ಗುಡ್ ಬೈ ಹೇಳಿದ ಯುವಕರು ಊರಿನ ಕೆರೆಯ ಹೂಳು ತೆಗೆದು ಹಸನು ಮಾಡಿದರು. ಊರಿನಲ್ಲಿ ಬಿದ್ದ ಮಳೆಯ ನೀರನ್ನು ನೇರವಾಗಿ ಕೆರೆಗೆ ಹೋಗುವಂತೆ ಕಾಲುವೆ ನಿರ್ಮಾಣ ಮಾಡಿದರು. ತಮ್ಮ ಜಮೀನುಗಳನ್ನು ಉಳುಮೆ ಮಾಡಿಕೊಂಡರು. 2016ರಲ್ಲಿ ಉತ್ತಮ ಮಳೆಯಾಗಿದ್ದರಿಂದ ಆ ಕೆರೆ ಭರ್ತಿಯಾಯಿತು. ಕೆರೆ ನೀರು ಉಪಯೋಗಿಸಿಕೊಂಡು ಕೃಷಿ ಮಾಡಿದೆವು ಎನ್ನುತ್ತಾರೆ ಆ ಗ್ರಾಮದ ಯುವಕ ಮನ್‌ಬೀರ್‌ ಸಿಂಗ್. ಎರಡು ವರ್ಷಗಳ ಹಿಂದೆ ಕೂಲಿಗಳಾಗಿದ್ದ ನಾವು ಇಂದು ರೈತರಾಗಿರುವುದಕ್ಕೆ ಹೆಮ್ಮೆ ಎನಿಸುತ್ತದೆ ಎನ್ನುತ್ತಾರೆ ಅವರು.

ತರಕಾರಿ, ಹಣ್ಣು, ಹೂ ಸೇರಿದಂತೆ ಆಹಾರ ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿರುವ ಇಲ್ಲಿನ ನಿವಾಸಿಗಳು ಇಂದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ಮನ್ಸಾ ಜಿಲ್ಲೆಯ ಜಿಲ್ಲಾಧಿಕಾರಿ ಸಿ. ಸಿಬನ್ ಹೇಳುತ್ತಾರೆ. ಈ ಗ್ರಾಮಕ್ಕೆ 2016ನೇ ಸಾಲಿನ ‘ಶ್ರೇಷ್ಠ ಮಾದರಿ ಗ್ರಾಮ’ ಪ್ರಶಸ್ತಿ ಸಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT