ಶನಿವಾರ, ಡಿಸೆಂಬರ್ 14, 2019
20 °C

ಬದರಿನಾಥ್‌ಗೆ ಆತ್ಮವಿಶ್ವಾಸವೇ ಗೆಲುವಿನ ಮೆಟ್ಟಿಲು

ವಿದ್ಯಾಶ್ರೀ ಎಸ್‌. Updated:

ಅಕ್ಷರ ಗಾತ್ರ : | |

ಬದರಿನಾಥ್‌ಗೆ ಆತ್ಮವಿಶ್ವಾಸವೇ ಗೆಲುವಿನ ಮೆಟ್ಟಿಲು

ಮಾಡೆಲಿಂಗ್‌ ಜಗತ್ತನ್ನು ಈಗಷ್ಟೇ ಪ್ರವೇಶಿಸಿರುವ ಬದರಿನಾಥ್‌ ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದವರು. ಬಿಕಾಂ ಓದಿರುವ ಅವರು ಆರು ತಿಂಗಳ ಹಿಂದಷ್ಟೇ ಫ್ಯಾಷನ್‌ ಲೋಕಕ್ಕೆ ಅಡಿಯಿರಿಸಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ಭರವಸೆ ಮೂಡಿಸುತ್ತಿದ್ದಾರೆ.

ಸದೃಢ ಮೈಕಟ್ಟು, ಕಿರುನಗೆ ಸೂಸುವ ಮುಖಾರವಿಂದ, ಎತ್ತರದ ನಿಲುವು, ಕಣ್ಣಲ್ಲಿ ಭವಿಷ್ಯದ ಕನವರಿಕೆ ಇದು ಒಂದೇ ನೋಟಕ್ಕೆ ನಿಲುಕುವ ಭದ್ರಿನಾಥ್‌ ಅವರ ಚಹರೆ.

ನಟನಾ ರಂಗಕ್ಕೆ ಜಿಗಿಯುವ ಹಂಬಲದಿಂದ ಫ್ಯಾಷನ್‌ ಜಗತ್ತನ್ನು ಪ್ರವೇಶಿಸಿದವರು ಇವರು. ಮಾಡೆಲಿಂಗ್‌ ಕ್ಷೇತ್ರ ಪ್ರವೇಶಿಸಿದ ಆರೇ ತಿಂಗಳಿನಲ್ಲಿ ಹಲವು ಅವಕಾಶಗಳು ಇವರನ್ನು ಅರಸಿ ಬಂದಿವೆ. ಈಗ ನಟನಾ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷಿಸಲು ತಯಾರಿ ನಡೆಸುತ್ತಿದ್ದಾರೆ.

ಮಾಡೆಲಿಂಗ್‌ ಅನ್ನು ಊರುಗೋಲಾಗಿಸಿಕೊಂಡು ಸಿನಿಮಾರಂಗಕ್ಕೆ ಜಿಗಿಯುವ ಕನಸೂ ಇವರಿಗಿದೆ. ಆದರೆ ಕನಸನ್ನು ಈಗಲೇ ನನಸಾಗಿಸಿಕೊಳ್ಳಬೇಕು ಎಂಬ ತರಾತುರಿಯೇನೂ ಇವರಿಗಿಲ್ಲ. ಅದಕ್ಕಾಗಿ ಸಾಕಷ್ಟು ಪೂರ್ವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಆದರ್ಶ ಫಿಲ್ಮ್‌ ಇನ್‌ಸ್ಟಿಟ್ಯೂಷನ್‌ನಲ್ಲಿ ನಟನೆಯ ತರಬೇತಿ ಪಡೆಯುವ ಜೊತೆಗೆ ನಾಟಕ ತಂಡವನ್ನು ಸೇರುವ ಇರಾದೆ ಇವರಿಗಿದೆ. ‘ಫನ್‌ ಪಂಚ್‌’ ಎಂಬ ಹಾಸ್ಯ ಧಾರಾವಾಹಿಯ ನಿರ್ದೇಶನಕ್ಕೂ ಸಿದ್ಧತೆ ನಡೆಸುತ್ತಿದ್ದಾರೆ.

‘ಬಾಲ್ಯದಿಂದಲೂ ಟಿ.ವಿ ನೋಡುವುದೆಂದರೆ ವಿಪರೀತ ಇಷ್ಟ. ಪರದೆಯ ಮೇಲೆ ನಟರನ್ನು ಕಂಡಾಗಲೆಲ್ಲ ನಾನು ಅವರಂತೆ ಆಗಬೇಕು ಎಂಬ ಕನಸು ಮೂಡುತ್ತಿತ್ತು. ಮನೆಯವರ ಬೆಂಬಲವೂ ಇರುವುದರಿಂದ ಬಣ್ಣದ ಜಗತ್ತನ್ನು ಪ್ರವೇಶಿಸುವುದು ಕಷ್ಟವಾಗಲಿಲ್ಲ’ ಎನ್ನುತ್ತಾರೆ ಇವರು.

ಸಿನಿಝೋನ್‌ ಇಂಟರ್‌ನ್ಯಾಷನಲ್ ಮಾಡೆಲಿಂಗ್‌ ಸಂಸ್ಥೆಯಲ್ಲಿ ರೂಪದರ್ಶಿಯರ ಶಿಸ್ತುಗಳನ್ನು ಕಲಿಯುತ್ತಿದ್ದಾರೆ. ‘ಮಿಸ್ಟರ್‌ ಅಂಡ್‌ ಮಿಸ್‌ ಸೌತ್‌ ಇಂಡಿಯಾ ಮೆಗಾ ಮಾಡೆಲ್‌’ ಸ್ಪರ್ಧೆಯಲ್ಲಿ ಮಿಸ್ಟರ್‌ ಆಂಧ್ರಪ್ರದೇಶ ಪಟ್ಟವೂ ಇವರಿಗೆ ದೊರಕಿದೆ. ರಿಲಯನ್ಸ್‌ ಕಂಪೆನಿಯವರು ನಡೆಸುವ ‘ಮಿಸ್ಟರ್‌ ಅಂಡ್‌ ಮಿಸ್‌ ಇಂಡಿಯಾ’ ಸ್ಪರ್ಧೆಯ ಅಂತಿಮ ಸರಣಿಗೂ ಇವರು ಆಯ್ಕೆಯಾಗಿದ್ದಾರೆ.

ಯಶ್‌ ಮತ್ತು ಸುದೀಪ್‌ ಎಂದರೆ ಕಣ್ಣರಳಿಸುವ ಬದರಿನಾಥ್‌ ಅವರಿಗೆ,‌ ‘ಇಂಥದ್ದೇ ಪಾತ್ರದಲ್ಲಿ ನಟಿಸಬೇಕು ಎಂಬ ಕನಸೇನೂ ಅವರಿಗಿಲ್ಲ. ಕಥೆ ಚೆನ್ನಾಗಿರಬೇಕು. ನನ್ನ ಪಾತ್ರಕ್ಕೆ ಮಹತ್ವ ಇರಬೇಕು. ಜನ ಮೆಚ್ಚಿಕೊಳ್ಳುವಂತಿದ್ದರೆ’ ಸಾಕು ಎನ್ನುತ್ತಾರೆ.

ಮಾಡೆಲಿಂಗ್‌ಗೆ ಬಂದಮೇಲೆ ದೇಹಾಕಾರದ ಬಗ್ಗೆಯೂ ಕಾಳಜಿ ವಹಿಸುತ್ತಿದ್ದಾರೆ ಇವರು. ಪ್ರತಿದಿನ ಎರಡೂವರೆ ಗಂಟೆ ಜಿಮ್‌ನಲ್ಲಿ ಕಳೆಯುತ್ತಾರೆ. ಫಿಟ್‌ನೆಸ್‌ ಕಾಪಾಡಿಕೊಳ್ಳುವ ಸಲುವಾಗಿ ಜಂಕ್‌ ಫುಡ್‌ಗಳನ್ನು ತಿನ್ನುವುದನ್ನು ಬಿಟ್ಟಿದ್ದಾರೆ. ತರಕಾರಿ, ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸುತ್ತಾರೆ.

ಮಾಡೆಲಿಂಗ್‌ ಮತ್ತು ನಟನಾ ರಂಗದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಅಲ್ಲಿ ಬಾಹ್ಯ ಸೌಂದರ್ಯದ ಪ್ರದರ್ಶನದ ಜೊತೆಗೆ ನಾವು ನಾವಾಗಿಯೇ ವರ್ತಿಸುತ್ತೇವೆ. ಆದರೆ ನಟನೆ ಪ್ರತಿಭೆಯ ಅನಾವರಣ, ಇಲ್ಲಿ ಹಲವು ಪಾತ್ರಗಳಿಗೆ ಜೀವನ ತುಂಬುತ್ತೇವೆ ಎಂದು ಎರಡು ಕ್ಷೇತ್ರದ ಭಿನ್ನತೆಯನ್ನು ವ್ಯಾಖ್ಯಾನಿಸುತ್ತಾರೆ.

‘ಫ್ಯಾಷನ್‌ ಜಗತ್ತಿನಲ್ಲಿ ಆತ್ಮವಿಶ್ವಾಸವೇ ಎಲ್ಲಕ್ಕಿಂತ ಮುಖ್ಯ. ರೂಪದರ್ಶಿಗಳ ಮನಸಲ್ಲಿ ಇರುವ ಆತ್ಮವಿಶ್ವಾಸ ಅವರ ಮುಖದಲ್ಲಿ ವ್ಯಕ್ತವಾಗಬೇಕು. ಈ ಕ್ಷೇತ್ರಕ್ಕೆ ಬಂದ ನಂತರ ನಾನು ಸಾಕಷ್ಟು ಕಲಿತಿದ್ದೇನೆ. ಮೊದಲು ವೇದಿಕೆ ಏರಲು ಭಯವಾಗುತ್ತಿತ್ತು. ಆದರೆ ಈಗ ಹಿಂಜರಿಕೆ ಇಲ್ಲದೇ ವೇದಿಕೆ ಏರುವುದರ ಜೊತೆಗೆ ಕ್ಯಾಮೆರಾವನ್ನು ಎದುರಿಸಬಲ್ಲೆ’ ಎಂದು ಫ್ಯಾಷನ್‌ ಜಗತ್ತಿನ ಕಾಣಿಕೆಯನ್ನು ನೆನೆಯುತ್ತಾರೆ.

ಪ್ರತಿಕ್ರಿಯಿಸಿ (+)