ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

64 ಗ್ರಾಂ ತೂಕದ ‘ಕಲಾಂ ಸ್ಯಾಟ್‌’ ಉಪಗ್ರಹ ನಿರ್ಮಿಸಿದ್ದ ವಿದ್ಯಾರ್ಥಿ ತಂಡಕ್ಕೆ ₹10 ಲಕ್ಷ ಬಹುಮಾನ

Last Updated 12 ಜುಲೈ 2017, 16:32 IST
ಅಕ್ಷರ ಗಾತ್ರ

ಚೆನ್ನೈ: ಜಗತ್ತಿನ ಅತಿ ಹಗುರ ಉಪಗ್ರಹ ನಿರ್ಮಿಸಿದ ವಿದ್ಯಾರ್ಥಿ ರಿಫತ್‌ ಷರೂಕ್‌ ಹಾಗೂ ಆತನ ತಂಡಕ್ಕೆ ₹10 ಲಕ್ಷ ನಗದು ಬಹುಮಾನ ನೀಡಿ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಪ್ರಶಂಸಿದ್ದಾರೆ.

ತಮಿಳುನಾಡಿನ 18 ವರ್ಷದ ವಿದ್ಯಾರ್ಥಿ ರಿಫತ್‌ ಷರೂಕ್‌  ಹಾಗೂ ಆತನ ತಂಡ ವಿನ್ಯಾಸಗೊಳಿಸಿ ಸಿದ್ಧಪಡಿಸಿದ್ದ 64 ಗ್ರಾಂ ತೂಕದ ಪುಟ್ಟ ಉಪಗ್ರಹವನ್ನು ನಾಸಾ ತನ್ನ ಇತರೆ ಉಪಗ್ರಹಗಳೊಂದಿಗೆ ಜೂನ್‌ 22ರಂದು ಉಡಾವಣೆ ಮಾಡಿತ್ತು.

ನಾಸಾ ಮತ್ತು ಐ ಡೂಡಲ್‌ ಲರ್ನಿಂಗ್‌ ಸಂಸ್ಥೆಗಳ ‘ಕ್ಯೂಬ್ಸ್‌ ಇನ್‌ ಸ್ಪೇಸ್‌’ ಸ್ಪರ್ಧೆಯಲ್ಲಿದ್ದ 80 ಸಾವಿರ ಮಾದರಿಗಳ ಪೈಕಿ ರಿಫತ್‌ ಅವರ ‘ಕಲಾಂ ಸ್ಯಾಟ್‌’ ಮೊದಲ ಸ್ಥಾನ ಪಡೆದಿತ್ತು.

ರಿಫತ್‌ ಮತ್ತು ಆತನ ತಂಡ ಸಿದ್ಧಪಡಿಸಿದ್ದ 3.8 ಸೆಂ.ಮೀ. ಘನಾಕೃತಿಯ ‘ಕಲಾಂಸ್ಯಾಟ್‌’ ಉಡಾವಣೆಗೊಂಡಿರುವ ಜಗತ್ತಿನ ಅತಿ ಹಗುರ ಉಪಗ್ರಹವೆನಿಸಿದೆ. ತಮಿಳುನಾಡು ಸರ್ಕಾರ ತಂಡವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಗದು ಬಹುಮಾನ ನೀಡಿದೆ.

ಕಲಾಂಸ್ಯಾಟ್‌: 64 ಗ್ರಾಂ ತೂಕದ ಉಪಗ್ರಹವು ನಾಸಾ ಸಂಸ್ಥೆಯ ರಾಕೆಟ್‌ ಮೂಲಕ ಯಶಸ್ವಿಯಾಗಿ ಕಕ್ಷೆ ಸೇರಿತ್ತು. ಕಲಾಂಸ್ಯಾಟ್‌ ಮಿಷನ್‌ ಒಟ್ಟು ಅವಧಿ 240 ನಿಮಿಷಗಳದ್ದಾಗಿತ್ತು. ಉಪಗ್ರಹವು ಅತಿ ಕಡಿಮೆ ಗುರುತ್ವ ವಾತಾವರಣದ ಉಪ–ಕಕ್ಷೆಯಲ್ಲಿ 12 ನಿಮಿಷಗಳ ವರೆಗೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿತ್ತು. ಕಾರ್ಬನ್‌ ಫೈಬರ್‌ 3ಡಿ ಪ್ರಿಂಟ್‌ ಮೂಲಕ ರೂಪಿಸಲಾದ ಉಪಗ್ರಹದ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಪರೀಕ್ಷಿಸುವುದು ಇದರ ಮುಖ್ಯ ಉದ್ದೇಶ ಎಂದು ಪಲ್ಲಪಟ್ಟಿಯ ರಿಫತ್‌ ವಿವರಿಸಿರುವುದಾಗಿ ಟೈಮ್ಸ್‌ ಆಫ್‌ ಇಂಡಿಯಾ ಈ ಹಿಂದೆ ವರದಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT