ಭಾನುವಾರ, ಡಿಸೆಂಬರ್ 8, 2019
21 °C

ಅಮರನಾಥ ಯಾತ್ರೆ ಅಬಾಧಿತ ಉಗ್ರರಿಗೆ ತೀವ್ರ ಮುಖಭಂಗ

Published:
Updated:
ಅಮರನಾಥ ಯಾತ್ರೆ ಅಬಾಧಿತ ಉಗ್ರರಿಗೆ ತೀವ್ರ ಮುಖಭಂಗ

ಅಮರನಾಥ ದರ್ಶನ ಮುಗಿಸಿ ಬಸ್‌ನಲ್ಲಿ ಬರುತ್ತಿದ್ದ ಯಾತ್ರಿಗಳ ಮೇಲೆ ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ಖನ್ನಬಲ್‌ ಬಳಿ ಉಗ್ರಗಾಮಿಗಳು ನಡೆಸಿದ ದಾಳಿ ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯ ಪ್ರಕ್ರಿಯೆಗೆ ಅಡ್ಡಿಪಡಿಸುವ ಇನ್ನೊಂದು ಹತಾಶ ಪ್ರಯತ್ನ. ದಾಳಿ ನಡೆಸಿದ್ದು ಪಾಕಿಸ್ತಾನ ಬೆಂಬಲಿತ ಲಷ್ಕರ್‌ ಎ ತಯಬಾ ಎಂಬ ಅನುಮಾನವಿದೆ. ಇದರಲ್ಲಿ ಏಳು ಯಾತ್ರಿಗಳು ಮೃತರಾಗಿದ್ದಾರೆ, 32 ಜನ ಗಾಯಗೊಂಡಿದ್ದಾರೆ. ಬಸ್‌ನ ಚಾಲಕ ಸಲೀಂ ಶೇಖ್ ಗಫೂರ್‌ ತೋರಿಸಿದ ಅಸಾಧಾರಣ ಸಮಯಪ್ರಜ್ಞೆಯಿಂದ 40ಕ್ಕೂ ಹೆಚ್ಚು ಯಾತ್ರಾರ್ಥಿಗಳ ಜೀವ ಉಳಿದಿದೆ. ಇಲ್ಲದೇ ಹೋಗಿದ್ದರೆ ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚುತ್ತಿತ್ತು. ಆದರೆ ದಾಳಿಯ ಮುನ್ಸೂಚನೆ ಮತ್ತು ಬಿಗಿ ಭದ್ರತೆಯ ನಡುವೆಯೂ ಉಗ್ರರು ಅಟ್ಟಹಾಸ ಮೆರೆದಿರುವುದು ಆತಂಕಕಾರಿ. ಅಲ್ಲಿ ಶಾಂತಿ ನೆಲೆಸಿದರೆ ತಮ್ಮ ಬೇಳೆ ಬೇಯುವುದಿಲ್ಲ ಎಂಬ ಕಾರಣಕ್ಕೆ  ಸದಾ ಒಂದಿಲ್ಲೊಂದು ದುಷ್ಕೃತ್ಯ, ಹಿಂಸಾಕೃತ್ಯ ನಡೆಸುವ ಅನೇಕ ಗುಂಪುಗಳು ಕಾಶ್ಮೀರದ ಒಳಗೆ ಮತ್ತು ಹೊರಗೆ ಸಕ್ರಿಯವಾಗಿವೆ.

ಆದಾಗ್ಯೂ ಅಮರನಾಥ ಯಾತ್ರೆ ಮೇಲೆ ದಾಳಿ ಬಹಳ ಅಪರೂಪ. ಅದಕ್ಕೆ ಕಾರಣ, ಹಿಂದೂಗಳ ಪಾಲಿಗೆ ಅಮರನಾಥ ಗುಹಾ ಮಂದಿರ ಶ್ರದ್ಧಾಭಕ್ತಿಯ ಕೇಂದ್ರವಾಗಿದ್ದರೂ,  ಹಿಂದೂ– ಮುಸ್ಲಿಂ ಭಾವೈಕ್ಯದ ಸಂಕೇತವೂ ಹೌದು. ಏಕೆಂದರೆ ಈ ಗುಹೆ ಮೊದಲು ಕಣ್ಣಿಗೆ ಬಿದ್ದದ್ದು ಮುಸ್ಲಿಂ ಕುರಿಗಾಹಿಗೆ. ಅಲ್ಲದೆ ಈ ಯಾತ್ರೆ ಕಾಶ್ಮೀರ ಕಣಿವೆಯ ಸಹಸ್ರಾರು ಮುಸ್ಲಿಂ ಕುಟುಂಬಗಳಿಗೆ ಬದುಕು ಕೊಟ್ಟಿದೆ. ಯಾತ್ರಿಗಳಿಗೆ ಬೇಕಾದ ಅನುಕೂಲ, ಸೇವೆಗಳನ್ನು  ಒದಗಿಸಿ ಅವರು ಜೀವನೋಪಾಯ ಕಂಡುಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕಾಗಿ ಸ್ಥಳೀಯ ಉಗ್ರಗಾಮಿಗಳು ಕೂಡ ಅಮರನಾಥ ಯಾತ್ರೆಯ ಉಸಾಬರಿಗೆ ಹೋಗುತ್ತಿರಲಿಲ್ಲ. 17 ವರ್ಷಗಳ ಹಿಂದೆ ಒಮ್ಮೆ ದಾಳಿ ಆಗಿತ್ತು. ಆ  ನಂತರ ಶಾಂತಿಯುತವಾಗಿಯೇ  ನಡೆಯುತ್ತ ಬಂದಿತ್ತು. ಈಗ ಏಕಾಏಕಿ ದಾಳಿ ಸ್ಥಳೀಯರನ್ನೂ ಕಂಗೆಡಿಸಿದೆ. ಅವರಲ್ಲೂ ಕೋಪ ಉಕ್ಕೇರುವಂತೆ ಮಾಡಿದೆ. 

ಶ್ರೀನಗರದಲ್ಲಿ ಮಹಿಳಾ ಸಂಘಟನೆ, ಟ್ಯಾಕ್ಸಿ ಮತ್ತು ಪ್ರವಾಸೋದ್ಯಮ ಸಂಘಟಕರು, ನಾಗರಿಕರು ಪ್ರತಿಭಟನೆ ನಡೆಸಿದ್ದಾರೆ.  ಪ್ರತ್ಯೇಕತಾವಾದಿ ಹುರಿಯತ್‌ ನಾಯಕರಿಂದಲೂ ಖಂಡನೆ ವ್ಯಕ್ತವಾಗಿದೆ.  ‘ಈ ಯಾತ್ರೆ ಶತಶತಮಾನಗಳಿಂದ ಶಾಂತಿಯುತವಾಗಿ ನಡೆದುಕೊಂಡು ಬಂದಿದೆ. ಅದು ವಾರ್ಷಿಕ ಆಚರಣೆ. ಮುಂದೆಯೂ ಹಾಗೇ ಉಳಿಯಲಿದೆ. ಯಾತ್ರಿಗಳು ಸದಾ ನಮ್ಮ ಗೌರವಾನ್ವಿತ ಅತಿಥಿಗಳು’ ಎಂಬ ಅವರ ಹೇಳಿಕೆಯೇ ಇದಕ್ಕೆ ಸಾಕ್ಷಿ. ‘ಈ ದಾಳಿಯಿಂದಾಗಿ ಪ್ರತಿಯೊಬ್ಬ ಕಾಶ್ಮೀರಿ ತಲೆತಗ್ಗಿಸುವಂತಾಗಿದೆ’ ಎಂದು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೋವು ತೋಡಿಕೊಂಡಿದ್ದಾರೆ. ಅವರೆಲ್ಲರ ಮಾತು, ಆಕ್ರೋಶದ ಹಿಂದೆ  ‘ಕಾಶ್ಮೀರಿ ಪರಂಪರೆಗೆ ಮತ್ತು ಭಾವೈಕ್ಯಕ್ಕೆ ಉಗ್ರರ ಕೃತ್ಯ ಮಸಿ ಬಳಿದಿದೆ’ ಎಂಬ ಭಾವನೆಯನ್ನು, ಅಂತಃಸಾಕ್ಷಿಗೆ ಆಗಿರುವ ಗಾಯವನ್ನು ಗುರುತಿಸಬಹುದು. ಇದು  ಬದಲಾವಣೆಯ ಸಂಕೇತ.

ಆದರೆ ಇಲ್ಲಿ ಇನ್ನೂ ಒಂದು ಸಂಗತಿಯನ್ನು ಮರೆಯುವಂತಿಲ್ಲ. ಸೋಮವಾರ ರಾತ್ರಿ ನಡೆದ ಉಗ್ರರ ದಾಳಿ ಯಾತ್ರಿಗಳನ್ನು ಎಳ್ಳಷ್ಟೂ ವಿಚಲಿತಗೊಳಿಸಿಲ್ಲ. ಏಕೆಂದರೆ ಮಂಗಳವಾರ ಯಾತ್ರೆ ಮುಂದುವರಿಸಿದ ಭಕ್ತರ ಸಂಖ್ಯೆ 22 ಸಾವಿರಕ್ಕೂ ಹೆಚ್ಚು. ಬುಧವಾರವೂ ಈ ಉತ್ಸಾಹಕ್ಕೆ ಧಕ್ಕೆ ಬಂದಿಲ್ಲ. ದಿಢೀರ್‌ ದಾಳಿ ಮಾಡಿ, ಒಂದಿಷ್ಟು ಜನರನ್ನು ಕೊಂದು ಉಳಿದವರನ್ನೆಲ್ಲ ಹೆದರಿಸಬಹುದು ಎಂಬ  ಭ್ರಮೆಯಲ್ಲಿ ಇರುವ ಉಗ್ರಗಾಮಿಗಳ ಮುಖಕ್ಕೆ ಹೊಡೆದಂತೆ ತಿರುಗೇಟು ಕೊಡುವುದು ಎಂದರೆ ಹೀಗಿರಬೇಕು. ‘ನಿಮ್ಮ ಹಿಂಸಾಕೃತ್ಯಗಳಿಗೆ ಹೆದರುವವರು ನಾವಲ್ಲ’ ಎಂದು ತೋರಿಸಲು ಬಹಳಷ್ಟು ಧೈರ್ಯ ಬೇಕು. ಅಮರನಾಥ ಯಾತ್ರಿಗಳು ಮತ್ತು ಭದ್ರತಾ ಪಡೆಯವರು ಆ ಕೆಚ್ಚು ಪ್ರದರ್ಶಿಸಿದ್ದಾರೆ. ಇದು ಅನುಕರಣೀಯ.

ದಾಳಿಗೊಳಗಾದ ಬಸ್‌ ಮತ್ತು ಯಾತ್ರಿಗಳು ಗುಜರಾತ್‌ನವರು. ಇವರು ಯಾರೂ ನೋಂದಣಿ ಮಾಡಿಕೊಂಡಿರಲಿಲ್ಲ; ಭದ್ರತೆ ಇಲ್ಲದೆ ಹೋಗಿ ಬರುತ್ತಿದ್ದರು ಎನ್ನುವುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೂಲ ಶಿಬಿರದಿಂದ ಗುಹಾ ದೇವಾಲಯದವರೆಗೆ ಉದ್ದಕ್ಕೂ ನಿಯೋಜಿತರಾಗಿದ್ದ 40 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯ ಮತ್ತು ಕಟ್ಟುನಿಟ್ಟಿನ ನೋಂದಣಿ ಪ್ರಕ್ರಿಯೆಯ ಕಣ್ಣುತಪ್ಪಿಸಲು ಇವರಿಗೆ ಸಾಧ್ಯವಾಯಿತು ಎನ್ನುವುದೇ ದೊಡ್ಡ ಭದ್ರತಾ ಲೋಪ. ಈ ಬಗ್ಗೆ ತನಿಖೆ ನಡೆಯಬೇಕು. ಇಂತಹ ಲೋಪದೋಷಗಳನ್ನು ಸರಿಪಡಿಸಬೇಕು.

ಪ್ರತಿಕ್ರಿಯಿಸಿ (+)